ಸಾರಾಂಶ
ಧಾರವಾಡ:
ನಗರದ ಕೃಷಿ ವಿಶ್ವವಿದ್ಯಾಲಯದ ಆವರಣದಲ್ಲಿ ಹವಾಮಾನ ವೈಪರೀತ್ಯ ನಿರ್ವಹಣೆಗೆ ಕೃಷಿ ತಾಂತ್ರಿಕತೆಗಳು ಎಂಬ ಶೀರ್ಷಿಕೆಯಡಿ ಸೆ. 21ರಿಂದ 24ರ ವರೆಗೆ ಕೃಷಿ ಮೇಳ ಆಯೋಜಿಸಲಾಗಿದೆ ಎಂದು ಕುಲಪತಿ ಡಾ. ಪಿ.ಎಲ್. ಪಾಟೀಲ ತಿಳಿಸಿದರು.ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಮೇಳವನ್ನು ಸೆ. 22ರಂದು ಬೆಳಗ್ಗೆ 10.30ಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸಲಿದ್ದು ಡಿಸಿಎಂ ಡಿ.ಕೆ. ಶಿವಕುಮಾರ, ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಸಭಾಪತಿ ಬಸವರಾಜ ಹೊರಟ್ಟಿ, ವಿಪ ಮುಖ್ಯ ಸಚೇತಕ ಸಲೀಂಅಹ್ಮದ್ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಭಾಗವಹಿಸುವರು. ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ಕೃಷಿ ಪ್ರಕಟಣೆಗಳ ಬಿಡುಗಡೆ ಮಾಡುವರು. ಸಚಿವರಾದ ಎಚ್.ಕೆ. ಪಾಟೀಲ, ಎಂ.ಬಿ. ಪಾಟೀಲ, ಸತೀಶ ಜಾರಕಿಹೊಳಿ, ಶಿವಾನಂದ ಪಾಟೀಲ, ಆರ್.ಬಿ. ತಿಮ್ಮಾಪುರ, ಲಕ್ಷ್ಮೀ ಹೆಬ್ಬಾಳ್ಕರ್ ಹಾಗೂ ಮಂಕಾಳ ವೈದ್ಯ ಭಾಗವಹಿಸುವರು ಎಂದರು.
ಶಾಸಕ ವಿನಯ ಕುಲಕರ್ಣಿ ಅಧ್ಯಕ್ಷತೆ ವಹಿಸಲಿದ್ದು ಶಾಸಕ ಅಬ್ಬಯ್ಯ ಪ್ರಸಾದ, ಜಿಲ್ಲೆಯ ಜನಪ್ರತಿನಿಧಿಗಳು ಆಗಮಿಸಲಿದ್ದಾರೆ ಎಂದ ಅವರು, ಈ ಬಾರಿ ಕೃಷಿ ಮೇಳದ ಮೂಲಕ ಹೆಚ್ಚಿನ ಸಂಖ್ಯೆಯ ರೈತರಿಗೆ ಕೃಷಿ ತಂತ್ರಜ್ಞಾನ ತಲುಪಿಸುವ ಉದ್ದೇಶ ಹೊಂದಲಾಗಿದೆ. ಸುಮಾರು 14ರಿಂದ 16 ಲಕ್ಷ ರೈತರು ಭಾಗವಹಿಸುವ ನಿರೀಕ್ಷೆಯಿದ್ದು ಮೊದಲ ಬಾರಿಗೆ ಕ್ಯೂ ಆರ್ ಕೋಡ್ ಮೂಲಕ ನೋಂದಣಿ ವ್ಯವಸ್ಥೆಯನ್ನು ಮೇಳದಲ್ಲಿ ಕಲ್ಪಿಸಲಾಗಿದೆ ಎಂದು ಹೇಳಿದರು.ವಸ್ತು ಪ್ರದರ್ಶನ ಮಳಿಗೆ:
ಕೃಷಿ ವಸ್ತು ಪ್ರದರ್ಶನದಲ್ಲಿ 150 ಹೈಟೆಕ್, 214 ಸಾಮಾನ್ಯ, 110 ಯಂತ್ರೋಪಕರಣ, 27 ಟ್ರ್ಯಾಕ್ಟರ್ ಇತ್ಯಾದಿ ಭಾರೀ ಯಂತ್ರೋಪಕರಣಗಳ ಹಾಗೂ 28 ಆಹಾರ ಮಳಿಗೆಗಳು ಈಗಾಗಲೇ ಬುಕ್ ಆಗಿವೆ ಎಂದು ಪಾಟೀಲ ತಿಳಿಸಿದರು.ಮೇಳದ ಆಕರ್ಷಣೆ:
ಹವಾಮಾನ ವೈಪರೀತ್ಯ ನಿರ್ವಹಣೆಯಲ್ಲಿ ಕೈಗೊಳ್ಳಬೇಕಾದ ಬೆಳೆ ಪದ್ಧತಿ ಹಾಗೂ ಕೃಷಿ ತಾಂತ್ರಿಕತೆ, ಸಮಗ್ರ ಬೆಳೆ ನಿರ್ವಹಣೆ, ಜೈವಿಕ ಗೊಬ್ಬರ ಹಾಗೂ ಪೀಡೆ ನಾಶಕಗಳು, ಎಣ್ಣೆಕಾಳು, ದ್ವಿದಳ ಧಾನ್ಯ ಮತ್ತು ಹಿಂಗಾರು ಬೆಳೆಗಳ ತಾಂತ್ರಿಕತೆ, ಮಳೆ ನೀರು ಕೊಯ್ಲು ಮತ್ತು ಅಂತರ್ಜಲ ಮರುಪೂರಣ, ನೈಸರ್ಗಿಕ ಕೃಷಿ, ಸಾವಯವ ಕೃಷಿ ಮತ್ತು ಮಣ್ಣಿನ ಫಲವತ್ತತೆ ಸಂರಕ್ಷಣೆಗಳಾಗಿವೆ. ಅದೇ ರೀತಿ ಹೈಟೆಕ್ ತೋಟಗಾರಿಕೆ. ಹಣ್ಣು-ಹೂವಿನ ಪ್ರದರ್ಶನ ಮತ್ತು ಕೀಟ ಪ್ರಪಂಚ, ಸುಧಾರಿತ ಕೃಷಿ ಯಂತ್ರೋಪಕರಣ ಹಾಗೂ ಕಿಸಾನ್ ಡ್ರೋಣ್ ಪ್ರದರ್ಶನ, ಕೃಷಿ ತಜ್ಞರೊಂದಿಗೆ ಸಮಾಲೋಚನೆ, ರೈತರ ಆವಿಷ್ಕಾರಗಳು, ವಿಶೇಷ ಸಾಧನೆಗೈದ ರೈತರೊಂದಿಗೆ ಸಂವಾದ, ಕೃಷಿ ಅರಣ್ಯ, ಮೇವಿನ ಬೆಳೆಗಳ ತಾಂತ್ರಿಕತೆ, ಪಶು ಸಂಗೋಪನೆ ಹಾಗೂ ಜಾನುವಾರುಗಳ ಪ್ರದರ್ಶನ, ಮೌಲ್ಯವರ್ಧನೆ, ದ್ವಿತೀಯ ಕೃಷಿ ಮತ್ತು ಸಮುದಾಯ ವಿಜ್ಞಾನ ತಾಂತ್ರಿಕತೆಗಳು ಆಕರ್ಷಣೆಗಳಾಗಿವೆ ಎಂದರು.ಮೊದಲ ದಿನದ ಕಾರ್ಯಕ್ರಮ:
ಮೇಳದ ಮೊದಲ ದಿನ ಬೆಳಗ್ಗೆ 10.30ಕ್ಕೆ ಕೃಷಿ ಮೇಳ ವೇದಿಕೆಯಲ್ಲಿ ಬೀಜ ಮೇಳ ಉದ್ಘಾಟನೆ, ಮಧ್ಯಾಹ್ನ 2.30ರಿಂದ ಆಧುನಿಕ ಕೃಷಿ ತಾಂತ್ರಿಕ ಅಳವಡಿಕೆಯಲ್ಲಿ ಯುವ ಪೀಳಿಗೆ ಮತ್ತು ನವೋದ್ಯಮಿಗಳ ಪಾತ್ರ ಕುರಿತ ವಿಚಾರಗೋಷ್ಠಿ, ಮಧ್ಯಾಹ್ನ 3.30ರಿಂದ ರೈತರಿಂದ ರೈತರಿಗಾಗಿ ಕಾರ್ಯಕ್ರಮ (ಪ್ರಗತಿಪರ ರೈತರ ಅನಿಸಿಕೆಗಳು) ಏರ್ಪಡಿಸಲಾಗಿದೆ. ಸೆ. 22ರಂದು ಕೃಷಿಮೇಳ ಮುಖ್ಯ ವೇದಿಕೆಯಲ್ಲಿ ಬೆಳಗ್ಗೆ 10.30ಕ್ಕೆ ಕೃಷಿ ಮೇಳ-2024 ಉದ್ಘಾಟನೆ ಮತ್ತು ಪ್ರಶಸ್ತಿ ಪ್ರದಾನವನ್ನು ಸಿಎಂ ಸಿದ್ದರಾಮಯ್ಯ ನೆರವೇರಿಸುವರು. ಮಧ್ಯಾಹ್ನ 2.30ಕ್ಕೆ ಹವಾಮಾನ ವೈಪರೀತ್ಯ ನಿರ್ವಹಣೆಯಲ್ಲಿ ಸಾವಯವ ಹಾಗೂ ನೈಸರ್ಗಿಕ ಕೃಷಿಯ ಪಾತ್ರ ಕುರಿತು ವಿಚಾರಗೋಷ್ಠಿ, ಮಧ್ಯಾಹ್ನ 3.30ಕ್ಕೆ ರೈತರಿಂದ ರೈತರಿಗಾಗಿ ಕಾರ್ಯಕ್ರಮ (ಪ್ರಗತಿಪರ ರೈತರ ಅನಿಸಿಕೆ ಏರ್ಪಡಿಸಲಾಗಿದೆ ಎಂದರು.ಸೆ. 23ರಂದು ಬೆಳಗ್ಗೆ 10ಕ್ಕೆ ಪರಿಕರಗಳ ಸಾಮರ್ಥ್ಯ ಹೆಚ್ಚಿಸಲು ಮತ್ತು ಉತ್ಪನ್ನಗಳ ಮೌಲ್ಯವರ್ಧನೆ ವೃದ್ಧಿಸಲು ದ್ವಿತೀಯ ಕೃಷಿ, ಬೆಳಗ್ಗೆ 11.30ಕ್ಕೆ ಬರ ನಿರ್ವಹಣೆಯಲ್ಲಿ ಮಣ್ಣು ಮತ್ತು ನೀರಿನ ಸಂರಕ್ಷಣಾ ಕ್ರಮಗಳು ಹಾಗೂ ಮಧ್ಯಾಹ್ನ 2.30ಕ್ಕೆ ಹವಾಮಾನ ವೈಪರೀತ್ಯ ನಿರ್ವಹಣೆಯಲ್ಲಿ ಕೈಗೊಳ್ಳಬೇಕಾದ ಬೆಳೆ ಪದ್ಧತಿಗಳು ಹಾಗೂ ಕೃಷಿ ತಾಂತ್ರಿಕತೆಗಳು ಕುರಿತು ವಿಚಾರಗೋಷ್ಠಿ ಕಾರ್ಯಕ್ರಮ ಏರ್ಪಡಿಸಲಾಗಿದೆ. ಮಧ್ಯಾಹ್ನ 3.30ಕ್ಕೆ ರೈತರಿಂದ ರೈತರಿಗಾಗಿ ಕಾರ್ಯಕ್ರಮ (ಪ್ರಗತಿಪರ ರೈತರ ಅನಿಸಿಕೆಗಳು) ಜರುಗುವುದು ಎಂದು ಕುಲಪತಿ ಮಾಹಿತಿ ನೀಡಿದರು.
ಸೆ. 24ರಂದು ಬೆಳಗ್ಗೆ 10.30ಕ್ಕೆ ಎಣ್ಣೆಕಾಳು ಹಾಗೂ ದ್ವಿದಳ ಧಾನ್ಯ ಉತ್ಪಾದನೆ ಹೆಚ್ಚಿಸಲು ಅಗತ್ಯ ಕೃಷಿ ತಾಂತ್ರಿಕತೆಗಳು ಚರ್ಚಾಗೋಷ್ಠಿ, 11.30ಕ್ಕೆ ಕನ್ನಡ ಕೃಷಿ ಗೋಷ್ಠಿ ಕಾರ್ಯಕ್ರಮ, ಮಧ್ಯಾಹ್ನ 2.30ಕ್ಕೆ ರೈತರಿಂದ ರೈತರಿಗಾಗಿ ಕಾರ್ಯಕ್ರಮ, ಸಂಜೆ 4.30ಕ್ಕೆ ಕೃಷಿಮೇಳ ಸಮಾರೋಪ ಸಮಾರಂಭ ನಡೆಯಲಿದೆ. ಇದಲ್ಲದೇ ಪ್ರಾಯೋಗಿಕ ತಾಕುಗಳ ವೀಕ್ಷಣೆ, ತಜ್ಞರಿಂದ ಕೃಷಿ ಸಮಸ್ಯೆಗಳ ಕುರಿತು ವಿಚಾರ ವಿನಿಮಯ, ಕೃಷಿ ಮತ್ತು ವಸ್ತು ಪ್ರದರ್ಶನ, ಫಲ-ಪುಷ್ಪ ಪ್ರದರ್ಶನ, ಗಡ್ಡೆ ಗೆಣಸು ಪ್ರದರ್ಶನ, ವಿಸ್ಮಯಕಾರಿ ಕೀಟ, ಪ್ರಪಂಚ, ಸಾವಯವ ಕೃಷಿ ವಸ್ತು ಪ್ರದರ್ಶನ, ಕೃಷಿ ಪರಿಕರಗಳ ಮಾರಾಟ, ಕೃಷಿ ಪ್ರಕಟಣೆಗಳ ಮಾರಾಟ ಇತ್ಯಾದಿ ಇರುತ್ತದೆ ಎಂದರು.ಸುದ್ದಿಗೋಷ್ಠಿಯಲ್ಲಿ ವಿಸ್ತರಣಾ ನಿರ್ದೇಶಕ ಹಾಗೂ ಕೃಷಿ ಮೇಳದ ಅಧ್ಯಕ್ಷ ಡಾ. ಎಸ್.ಎಸ್. ಅಂಗಡಿ, ವಿವಿಧ ವಿಭಾಗದ ಮುಖ್ಯಸ್ಥರು ಉಪಸ್ಥಿತರಿದ್ದರು.