ವಿದ್ಯಾರ್ಥಿಗಳಿಗೆ ಇನ್ನು ಮುಂದೆ ವಾರದಲ್ಲಿ 4 ದಿನಗಳ ಮೊಟ್ಟೆ ವಿತರಣೆ

| Published : Sep 27 2024, 01:27 AM IST

ಸಾರಾಂಶ

ವಿದ್ಯಾರ್ಥಿಗಳು ಅಪೌಷ್ಟಿಕತೆಯಿಂದ ಬಳಲಬಾರದು. ಭೌತಿಕವಾಗಿ ಮತ್ತು ಬೌದ್ಧಿಕವಾಗಿ ಬೆಳವಣಿಗೆ ಹೊಂದಲು ಈ ಯೋಜನೆ ಸಹಕಾರಿ ಎಂದು ಜಿಲ್ಲಾಧಿಕಾರಿ ಡಾ. ಕೆ. ವಿದ್ಯಾಕುಮಾರಿ ಹೇಳಿದರು.

ಕನ್ನಡಪ್ರಭ ವಾರ್ತೆ ಉಡುಪಿ

ಕೇಂದ್ರ ಸರ್ಕಾರ ಪುರಸ್ಕೃತ ಮಧ್ಯಾಹ್ನ ಬಿಸಿಯೂಟ ಯೋಜನೆಯಲ್ಲಿ ಕರ್ನಾಟಕ ರಾಜ್ಯ ಸರ್ಕಾರದ ಅನುದಾನದಿಂದ ವಾರಕ್ಕೆ ಎರಡು ದಿನ ಪೂರಕ ಪೌಷ್ಟಿಕ ಆಹಾರವಾಗಿ ಮೊಟ್ಟೆ ಅಥವಾ ಚಿಕ್ಕಿ, ಬಾಳೆಹಣ್ಣು ಇವುಗಳನ್ನು ವಿತರಿಸಲಾಗುತ್ತಿತ್ತು. ಇದೀಗ ಅಜೀಮ್ ಪ್ರೇಮ್ ಜಿ ಫೌಂಡೇಶನ್ ವತಿಯಿಂದ ವಾರದ ನಾಲ್ಕು ದಿನಗಳ ಕಾಲ ಹೆಚ್ಚುವರಿಯಾಗಿ ನೀಡುವ ಕಾರ್ಯಕ್ರಮಕ್ಕೆ ಬುಧವಾರ ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜಿನ (ಬೋರ್ಡ್ ಹೈ ಸ್ಕೂಲ್)ನಲ್ಲಿ ಜಿಲ್ಲಾಧಿಕಾರಿ ಡಾ. ಕೆ ವಿದ್ಯಾಕುಮಾರಿ ಚಾಲನೆ ನೀಡಿದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ವಿದ್ಯಾರ್ಥಿಗಳು ಅಪೌಷ್ಟಿಕತೆಯಿಂದ ಬಳಲಬಾರದು. ಭೌತಿಕವಾಗಿ ಮತ್ತು ಬೌದ್ಧಿಕವಾಗ ಬೆಳವಣಿಗೆ ಹೊಂದಲು ಈ ಯೋಜನೆಯು ಸಹಕಾರಿಯಾಗಿದ್ದು, ಸರ್ಕಾರ ದೊಂದಿಗೆ ಒಡಂಬಡಿಕೆಯನ್ನು ಮಾಡಿಕೊಂಡು ವಾರದ ಎಲ್ಲ ದಿನಗಳಲ್ಲೂ ಸರ್ಕಾರಿ, ಅನುದಾನಿತ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳ ವಿದ್ಯಾರ್ಥಿಗಳಿಗೆ ಪೂರಕ ಪೌಷ್ಟಿಕ ಆಹಾರವಾಗಿ ಬೇಯಿಸಿದ ಮೊಟ್ಟೆ ಅಥವಾ ಶೇಂಗಾ ಚಿಕ್ಕಿ ಅಥವಾ ಬಾಳೆಹಣ್ಣು ವಿತರಿಸಲು 1500 ಕೋಟಿ ರು. ಮಿಕ್ಕಿ ಅನುದಾನವನ್ನು ನೀಡಿರುವುದು ಶ್ಲಾಘನೀಯ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಶಾಲಾ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರಾದ ಗಣಪತಿ ಕೆ., ಕ್ಷೇತ್ರ ಶಿಕ್ಷಣಾಧಿಕಾರಿ ಡಾ. ಎಲ್ಲಮ್ಮ, ಪಿಎಂ ಪೋಷಣ್ - ಅಕ್ಷರ ದಾಸೋಹ ಜಿಲ್ಲಾ ಶಿಕ್ಷಣಾಧಿಕಾರಿ ಡಾ.ಅಶೋಕ ಕಾಮತ್, ಡಯಟ್‌ನ ಉಪನ್ಯಾಸಕ ಯೋಗ ನರಸಿಂಹಸ್ವಾಮಿ, ತಾಲೂಕು ಸಹಾಯಕ ನಿರ್ದೇಶಕರು ವಿವೇಕ ಗಾಂವ್ಕರ್, ಕಾಲೇಜಿನ ಪ್ರಾಂಶುಪಾಲ ಲೀಲಾಬಾಯಿ ಭಟ್, ಉಪ ಪ್ರಾಂಶುಪಾಲೆ ಭಾಗೀರಥಿ, ವಿದ್ಯಾರ್ಥಿಗಳು ಹಾಗೂ ಮತ್ತಿತರರು ಉಪಸ್ಥಿತರಿದ್ದರು.