ಬೀಗ ಹಾಕಿದ ಮನೆಗಳಿಗೆ ಕನ್ನಹಾಕುತ್ತಿದ್ದ 4 ಕದೀಮರ ಸೆರೆ

| Published : Aug 27 2025, 01:00 AM IST

ಸಾರಾಂಶ

ಬೀಗ ಹಾಕಿದ ಮನೆಗಳಿಗೆ ಕನ್ನ ಹಾಕುತ್ತಿದ್ದ ನಾಲ್ವರು ಖದೀಮರನ್ನು ಗೋವಿಂದರಾಜನಗರ ಠಾಣೆ ಪೊಲೀಸರು ಸೆರೆ ಹಿಡಿದಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಬೀಗ ಹಾಕಿದ ಮನೆಗಳಿಗೆ ಕನ್ನ ಹಾಕುತ್ತಿದ್ದ ನಾಲ್ವರು ಖದೀಮರನ್ನು ಗೋವಿಂದರಾಜನಗರ ಠಾಣೆ ಪೊಲೀಸರು ಸೆರೆ ಹಿಡಿದಿದ್ದಾರೆ.

ಮೈಸೂರು ಜಿಲ್ಲೆ ಎಚ್‌.ಡಿ.ಕೋಟೆ ತಾಲೂಕಿನ ಸಂತೆ ಸರಗೂರಿನ ಮಹಮ್ಮದ್ ಫಯಾಜ್‌, ಮೈಸೂರಿನ ಮಂಡಿ ಮೊಹಲ್ಲಾದ ಮಹಮ್ಮದ್ ಫರಾಜ್ ಅಲಿಯಾಸ್ ದೇವಿ, ಚಿಕ್ಕಮಗಳೂರು ಜಿಲ್ಲೆ ಭಕ್ತರಹಳ್ಳಿಯ ಭೂದೇಶ್ ಗೌಡ ಹಾಗೂ ಆರ್.ಟಿ.ನಗರದ ಚಾಮುಂಡಿ ನಗರದ ಪ್ರಸಾದ್ ಬಂಧಿತರಾಗಿದ್ದು, ಆರೋಪಿಗಳಿಂದ 475 ಗ್ರಾಂ ಚಿನ್ನಾಭರಣ ಹಾಗೂ 1 ಕಾರು ಸೇರಿದಂತೆ ₹44.24 ಲಕ್ಷ ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಲಾಗಿದೆ.

ಮೂಡಲಪಾಳ್ಯದ ಪಂಚಶೀಲ ನಗರದಲ್ಲಿ ನೆಲೆಸಿರುವ ಬಸವರಾಜು ಎಂಬುವರ ಮನೆಯಲ್ಲಿ ಕಳ್ಳತನವಾಗಿತ್ತು. ಈ ಬಗ್ಗೆ ತನಿಖೆಗಿಳಿದ ಪೊಲೀಸರು, ತಾಂತ್ರಿಕ ಮಾಹಿತಿ ಆಧರಿಸಿ ಆರೋಪಿಗಳನ್ನು ಬಂಧಿಸಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಈ ನಾಲ್ವರು ವೃತ್ತಿಪರ ಕ್ರಿಮಿನಲ್‌ಗಳಾಗಿದ್ದು, ವಸತಿ ಪ್ರದೇಶಗಳಲ್ಲಿ ಬೀಗದ ಹಾಕಿ ಮನೆಗಳನ್ನು ಗುರುತಿಸಿ ಬಳಿಕ ರಾತ್ರಿ ಮನೆಗಳಿಗೆ ಈ ಗ್ಯಾಂಗ್ ಕನ್ನ ಹಾಕುತ್ತಿತ್ತು. ಇವರ ಬಂಧನದಿಂದ ಗೋವಿಂದರಾಜನಗರ, ಬಸವೇಶ್ವರನಗರ, ಬ್ಯಾಡರಹಳ್ಳಿ, ಹಾಸನ ಜಿಲ್ಲೆಯ ಹೊಳನರಸೀಪುರ ಗ್ರಾಮಾಂತರ, ಅರಕಲಗೂಡು, ಬೀದರ್ ಜಿಲ್ಲೆಯ ನ್ಯೂ ಟೌನ್‌ , ಚಿತ್ರದುರ್ಗ ಜಿಲ್ಲೆಯ ಅಬ್ಬಿನಹೊಳೆ, ಹುಬ್ಬಳ್ಳಿ-ಧಾರವಾಡನಗರದ ಗೋಕುಲ್ ರಸ್ತೆ ಠಾಣಾ ವ್ಯಾಪ್ತಿಗಳಲ್ಲಿ ನಡೆದಿದ್ದ 9 ಪ್ರಕರಣಗಳು ಪತ್ತೆಯಾಗಿವೆ ಎಂದು ತಿಳಿದು ಬಂದಿದೆ.

ಕೋಲಾರದ ಮತ್ತೊಬ್ಬ ಸೆರೆ

ಬೇಗೂರು ಠಾಣೆ ಪೊಲೀಸರ ಗಾಳಕ್ಕೆ ಮತ್ತೊಬ್ಬ ಮನೆಗಳ್ಳ ಸಿಕ್ಕಿಬಿದ್ದಿದ್ದಾನೆ. ಕೋಲಾರ ಜಿಲ್ಲೆ ಕೆಜಿಎಫ್‌ ತಾಲೂಕಿನ ರಾಬರ್ಟ್‌ಸನ್‌ ಪೇಟೆಯ ಶಾಂತಕುಮಾರ್ ಬಂಧಿತನಾಗಿದ್ದು, ಆರೋಪಿಯಿಂದ ₹20.97 ಲಕ್ಷ ಮೌಲ್ಯದ 230 ಗ್ರಾಂ ಚಿನ್ನಾಭರಣ ಜಪ್ತಿಯಾಗಿದೆ. ಬೀಗ ಹಾಕಿದ ಮನೆಗಳನ್ನು ಗುರಿಯಾಗಿಸಿ ಶಾಂತಕುಮಾರ್ ಕೃತ್ಯ ಎಸಗುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.