ಸಾರಾಂಶ
ಪಟ್ಟಣದ ಭದ್ರಾನದಿಗೆ ಮೀನುಗಾರಿಕಾ ಇಲಾಖೆಯಿಂದ ಮೀನು ಮರಿಗಳನ್ನು ಬಿಡುವ ಕಾರ್ಯಕ್ಕೆ ಚಾಲನೆ
ಕನ್ನಡಪ್ರಭ ವಾರ್ತೆ, ಬಾಳೆಹೊನ್ನೂರುಮೀನುಗಾರಿಕಾ ಸಚಿವರ ಆದೇಶದಂತೆ ಇದೇ ಮೊದಲ ಬಾರಿಗೆ ಭದ್ರಾ ಮತ್ತು ತುಂಗಾ ನದಿಗೆ ತಲಾ 2 ಲಕ್ಷದಂತೆ ಒಟ್ಟು 4 ಲಕ್ಷ ಮೀನು ಮರಿಗಳನ್ನು ಬಿಡಲಾಗುತ್ತಿದೆ ಎಂದು ಶಾಸಕ ಟಿ.ಡಿ.ರಾಜೇಗೌಡ ಹೇಳಿದರು. ಪಟ್ಟಣದ ಭದ್ರಾನದಿಗೆ ಮೀನುಗಾರಿಕಾ ಇಲಾಖೆಯಿಂದ ಶುಕ್ರವಾರ 2 ಲಕ್ಷ ಮೀನು ಮರಿಗಳನ್ನು ಬಿಡುವ ಕಾರ್ಯಕ್ಕೆ ಚಾಲನೆ ನೀಡಿ ಮಾತನಾಡಿದರು. ಭದ್ರಾ ಡ್ಯಾಮ್‌ನ ಹಿನ್ನೀರಿಗೆ ಈಗಾಗಲೇ 1.10 ಕೋಟಿ ಮರಿ ಬಿಡಲಾಗಿದೆ. ಇದೇ ಪ್ರಥಮ ಬಾರಿಗೆ ನದಿ ಭಾಗದಲ್ಲಿ ಮೀನು ಬಿಡಬೇಕು ಎಂಬ ಯೋಚನೆ ಮಾಡಿ ಸಚಿವ ಮಂಕಾಳ ವೈದ್ಯ ಹಾಗೂ ಅಧಿಕಾರಿಗಳೊಂದಿಗೆ ಚರ್ಚಿಸಿ ಸಚಿವರ ಆದೇಶದಂತೆ ಬಾಳೆಹೊನ್ನೂರಿನಲ್ಲಿ ಭದ್ರಾ ನದಿಗೆ 2 ಲಕ್ಷ, ಕೊಪ್ಪದ ನಾರ್ವೆ ಬಳಿ ತುಂಗಾ ನದಿಗೆ 2 ಲಕ್ಷ ಮೀನು ಮರಿಗಳನ್ನು ಬಿಡಲಾಗುತ್ತಿದೆ. ಭಾಷಣದಿಂದ ಮೀನುಗಾರಿಕೆ ಅಭಿವೃದ್ಧಿಯಾಗಲ್ಲ. ನದಿ ಮೂಲಗಳಿಗೆ ಮೀನುಗಳನ್ನು ಬಿಡುವ ಕೆಲಸ ವಾಗಬೇಕು. ಡ್ಯಾಮ್ ಗಳಿಗೆ ಮಾತ್ರ ಮರಿಗಳನ್ನು ಬಿಟ್ಟರೆ ಆ ಭಾಗದಲ್ಲಿ ಮಾತ್ರ ಮೀನುಗಾರಿಕೆ ಅಭಿವೃದ್ಧಿಯಾಗಲಿದೆ. ಆದರೆ ನದಿ ಪ್ರದೇಶದ ಎಲ್ಲೆಡೆ ಮರಿಗಳನ್ನು ಬಿಟ್ಟರೆ ಮೀನುಗಳ ಸಂತಾನೋತ್ಪತ್ತಿ ಹೆಚ್ಚಲಿದೆ. ಮೀನುಗಾರರಿಗೆ ಶಾಶ್ವತ ವಾಗಿ ನದಿಪಾತ್ರದಲ್ಲಿ ಮೀನು ಲಭಿಸಲಿವೆ. ಮೂರ್ನಾಲ್ಕು ವರ್ಷಗಳ ಹಿಂದೆ ಭದ್ರಾ ನದಿಗಳಲ್ಲಿ ಮೀನುಗಳಿರಲಿಲ್ಲ. ಆದರೆ ಇದೀಗ ಆ ಕೊರತೆ ನೀಗಿದೆ.
ಭದ್ರಾ, ತುಂಗಾ ನದಿ ಪಾತ್ರದಲ್ಲಿ ಮಾತ್ರವಲ್ಲದೇ ನದಿ ಪ್ರದೇಶದ ವಿವಿಧೆಡೆ ಹಾಗೂ ಸಣ್ಣಪುಟ್ಟ ನದಿ, ಹಳ್ಳ, ಕೊಳ್ಳಗಳಿಗೂ ಮೀನು ಮರಿ ಬಿಡುವ ಕೆಲಸವನ್ನು ಮುಂದಿನ ದಿನಗಳಲ್ಲಿ ಮಾಡಲಾಗುವುದು. ಇಂದು ಭದ್ರಾ, ತುಂಗಾ ನದಿಯ ಎರಡು ಕಡೆಗಳಲ್ಲಿ ತಲಾ ಎರಡು ಲಕ್ಷ ಮೀನು ಮರಿಗಳನ್ನು ಬಿಡಲಾಗುವುದು ಎಂದರು.ಭದ್ರಾ, ತುಂಗಾ ನದಿಗಳಿಗೆ ಗೌರಿ, ಕಾಟ್ಲಾ, ರೌಹು, ಗೊಜಲೆ, ಸುರಗಿ ಸೇರಿದಂತೆ ವಿವಿಧ ತಳಿಯ ಮೀನುಗಳನ್ನು ಬಿಡಲಾಗಿದೆ. ಇವು ಒಂದು ವರ್ಷದಲ್ಲಿ ದೊಡ್ಡದಾಗಿ ಒಂದೂವರೆಯಿಂದ ಎರಡು ಕೆಜಿ ವರೆಗೆ ಬೆಳೆಯಲಿದೆ. ರೈತರು ತಮ್ಮ ಜಮೀನುಗಳ ಕೃಷಿ ಹೊಂಡಗಳಲ್ಲಿ ಮೀನು ಸಾಕಾಣಿಕೆ ಮಾಡಲು ಅವಕಾಶವಿದ್ದು, ಇಲಾಖೆಯಿಂದ ಸೂಕ್ತ ನಿರ್ದೇಶನ ಪಡೆದು ಮೀನು ಸಾಕಾಣಿಕೆ ಮಾಡಬಹುದು. ಇದರಿಂದ ರೈತರ ಆದಾಯ ಹೆಚ್ಚಲಿದೆ. ಉತ್ತಮ ತಳಿ ಮೀನು ಸಾಕಾಣಿಕೆ ಯಿಂದ ರೈತರು ಆರ್ಥಿಕ ಅಭಿವೃದ್ಧಿ ಸಾಧಿಸಬಹುದು. ಇಂದು ನದಿಗೆ ಬಿಡುತ್ತಿರುವ ಮೀನುಗಳನ್ನು ರೈತರಿಂದಲೇ ಹಣ ನೀಡಿ ಖರೀದಿಸಲಾಗಿದೆ ಎಂದರು.ಮೀನುಗಾರಿಕೆ ಇಲಾಖೆ ಪ್ರಭಾರ ಸಹಾಯಕ ನಿರ್ದೇಶಕ ಪ್ರಕಾಶ್, ಬಿ.ಕಣಬೂರು ಗ್ರಾಪಂ ಅಧ್ಯಕ್ಷ ಸದಾಶಿವ, ಸದಸ್ಯರಾದ ಎಂ.ಎಸ್.ಅರುಣೇಶ್, ಶಿವಪ್ಪ, ಶೇಖರ್, ಜಿಪಂ ಮಾಜಿ ಸದಸ್ಯರಾದ ಮಹಮ್ಮದ್ ಇಫ್ತೆಖಾರ್ ಆದಿಲ್, ಕೆ.ಎಸ್.ರವೀಂದ್ರ ಕುಕ್ಕುಡಿಗೆ, ಹಿರಿಯಣ್ಣ, ಸುಕುಮಾರ್, ಪ್ರಶಾಂತ್, ರಿಚರ್ಡ್ ಮಥಾಯಿಸ್, ಸುಧಾಕರ್, ಜಾನ್ ಡಿಸೋಜಾ, ಕಾರ್ತಿಕ್ ಹುಣಸೇಕೊಪ್ಪ, ರವೀಶ ಮತ್ತಿತರರು ಹಾಜರಿದ್ದರು.೨೨ಬಿಹೆಚ್‌ಆರ್ ೧:
ಬಾಳೆಹೊನ್ನೂರಿನ ಭದ್ರಾ ನದಿ ಪಾತ್ರದಲ್ಲಿ ಮೀನುಗಾರಿಕೆ ಇಲಾಖೆಯಿಂದ ಮೀನು ಮರಿಗಳನ್ನು ಬಿಡುವ ಕಾರ್ಯಕ್ಕೆ ಶಾಸಕ ಟಿ.ಡಿ.ರಾಜೇಗೌಡ ಚಾಲನೆ ನೀಡಿದರು. ಸದಾಶಿವ, ಅರುಣೇಶ್, ಆದಿಲ್, ಕೆ.ಎಸ್.ರವೀಂದ್ರ, ಪ್ರಕಾಶ್ ಮತ್ತಿತರರು ಇದ್ದರು.