ದ.ಕ.ದಲ್ಲಿ ಬಿಜೆಪಿಗೆ 4 ಲಕ್ಷ ಸದಸ್ಯತ್ವ ನೋಂದಣಿ ಗುರಿ: ಸತೀಶ್‌ ಕುಂಪಲ

| Published : Sep 05 2024, 12:40 AM IST

ದ.ಕ.ದಲ್ಲಿ ಬಿಜೆಪಿಗೆ 4 ಲಕ್ಷ ಸದಸ್ಯತ್ವ ನೋಂದಣಿ ಗುರಿ: ಸತೀಶ್‌ ಕುಂಪಲ
Share this Article
  • FB
  • TW
  • Linkdin
  • Email

ಸಾರಾಂಶ

ಸೆ.17ರಂದು ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮದಿನ ಅಂಗವಾಗಿ ಸೆ.11ರಿಂದ 17ರವರೆಗೆ ಮಹಾ ಅಭಿಯಾನ ನಡೆಯಲಿದೆ. ಪ್ರತಿ ಬೂತ್‌ನಲ್ಲಿ 250 ಸದಸ್ಯರ ನೋಂದಣಿ ಗುರಿ ಇದೆ. ಈಗಾಗಲೇ ಸದಸ್ಯರಾದವರು, 18 ವರ್ಷ ಮೇಲ್ಪಟ್ಟವರು ಬಿಜೆಪಿ ಕಚೇರಿಯಲ್ಲೂ ನೋಂದಣಿ ಮಾಡಿಸಬಹುದು ಎಂದು ಹೇಳಿದರು.

ಕನ್ನಡಪ್ರಭ ವಾರ್ತೆ ಮಂಗಳೂರು

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಿಜೆಪಿಗೆ ಈ ವರ್ಷ ನಾಲ್ಕು ಲಕ್ಷ ಸದಸ್ಯರ ನೋಂದಣಿ ಗುರಿ ಹೊಂದಿರುವುದಾಗಿ ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್‌ ಕುಂಪಲ ಹೇಳಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಬುಧವಾರ ಮಾತನಾಡಿದ ಅವರು, ಕಳೆದ ಬಾರಿ ಜಿಲ್ಲೆಯಲ್ಲಿ 2.5 ಲಕ್ಷ ಸದಸ್ಯರ ನೋಂದಣಿ ಮಾಡಲಾಗಿತ್ತು. ಈ ಬಾರಿ ಅದಕ್ಕೂ ಹೆಚ್ಚಿನ ಗುರಿ ಹಾಕಿಕೊಳ್ಳಲಾಗಿದೆ ಎಂದರು.

ಪಕ್ಷಕ್ಕೆ ಸೇರ್ಪಡೆಯಾಗುವವರು ಟೋಲ್‌ ಫ್ರೀ ಸಂಖ್ಯೆ 8800002024 ಗೆ ಮಿಸ್ಡ್‌ ಕಾಲ್‌ ನೀಡಿದರೆ ಲಿಂಕ್‌ ಬರುತ್ತದೆ. ಅದರ ಮೂಲಕ ಹೆಸರು, ವಿವರ ಕೊಟ್ಟು ಸದಸ್ಯರಾಗಬಹುದು. ಸೆ.17ರಂದು ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮದಿನ ಅಂಗವಾಗಿ ಸೆ.11ರಿಂದ 17ರವರೆಗೆ ಮಹಾ ಅಭಿಯಾನ ನಡೆಯಲಿದೆ. ಪ್ರತಿ ಬೂತ್‌ನಲ್ಲಿ 250 ಸದಸ್ಯರ ನೋಂದಣಿ ಗುರಿ ಇದೆ. ಈಗಾಗಲೇ ಸದಸ್ಯರಾದವರು, 18 ವರ್ಷ ಮೇಲ್ಪಟ್ಟವರು ಬಿಜೆಪಿ ಕಚೇರಿಯಲ್ಲೂ ನೋಂದಣಿ ಮಾಡಿಸಬಹುದು ಎಂದು ಹೇಳಿದರು.

ಜಿಲ್ಲೆಯ 10 ನಗರ ಸ್ಥಳೀಯ ಸಂಸ್ಥೆಗಳಲ್ಲಿ ಎಂಟು ಕಡೆ ಬಿಜೆಪಿ ಅಧ್ಯಕ್ಷ- ಉಪಾಧ್ಯಕ್ಷರ ಆಯ್ಕೆ ನಡೆದಿದೆ. ಬಂಟ್ವಾಳ ಮತ್ತು ಉಳ್ಳಾಲದಲ್ಲಿ ಎಸ್‌ಡಿಪಿಐ ಜತೆ ಹೊಂದಾಣಿಕೆ ಮಾಡಿಕೊಂಡು ಕಾಂಗ್ರೆಸ್‌ ಅ​ಧಿಕಾರ ಪಡೆದಿದೆ ಎಂದು ಸತೀಶ್‌ ಕುಂಪಲ ಹೇಳಿದರು.

ಬಿಜೆಪಿ ಮುಖಂಡರಾದ ಪ್ರೇಮಾನಂದ ಶೆಟ್ಟಿ, ರವೀಂದ್ರ ಶೆಟ್ಟಿ ಉಳಿದೊಟ್ಟು, ಕಸ್ತೂರಿ ಪಂಜ, ಪೂಜಾ ಪೈ, ದೇವದಾಸ ಶೆಟ್ಟಿ, ನಿತೀಶ್‌ ಶಾಂತಿವನ, ವಿಕಾಸ್‌ ಪುತ್ತೂರು, ಡಾ.ಮಂಜುಳಾ ರಾವ್‌ ಇದ್ದರು.