ಸಾರಾಂಶ
ಕನ್ನಡಪ್ರಭ ವಾರ್ತೆ ಮೂಲ್ಕಿ
ಆಸ್ತಿಯ ಪಹಣಿಯಲ್ಲಿ ವಾರಸುದಾರರ ಹೆಸರು ಸೇರ್ಪಡೆಗೆ ಲಂಚಕ್ಕೆ ಬೇಡಿಕೆ ಇಟ್ಟಿದ್ದ ಮೂಲ್ಕಿ ತಾಲೂಕು ಕಂದಾಯ ನಿರೀಕ್ಷಕ ದಿನೇಶ್ ಅವರನ್ನು ಲೋಕಾಯುಕ್ತ ಪೊಲೀಸರು ಹಣ ಸಮೇತ ರೆಡ್ ಹ್ಯಾಂಡಾಗಿ ಹಿಡಿದಿರುವ ಘಟನೆ ಗುರುವಾರ ನಡೆದಿದೆ.ದೂರುದಾರರ ಅಜ್ಜಿ ಪದ್ಮಾವತಿ ಅವರು ಮೃತಪಟ್ಟ ಕಾರಣ ಅವರ ಹೆಸರಿನಲ್ಲಿದ್ದ ಆಸ್ತಿಯ ಪಹಣಿಯಲ್ಲಿ ವಾರಸುದಾರರ ಹೆಸರುಗಳನ್ನು ಸೇರ್ಪಡೆ ಮಾಡುವ ಸಲುವಾಗಿ ದೂರುದಾರರು ಕಳೆದ ವರ್ಷ ಮೂಲ್ಕಿ ತಾಲೂಕು ತಹಸೀಲ್ದಾರ್ ಕಚೇರಿಗೆ ಅರ್ಜಿ ಸಲ್ಲಿಸಿದ್ದರು. ಅರ್ಜಿಯನ್ನು ಕಂದಾಯ ನಿರೀಕ್ಷಕರ ಕಚೇರಿಗೆ ವಿಚಾರಣೆಗಾಗಿ ಕಳುಹಿಸಲಾಗಿತ್ತು. ಕಂದಾಯ ನಿರೀಕ್ಷಕ ಜಿ.ಎಸ್. ದಿನೇಶ್ ಒಂದು ವರ್ಷ ಕಳೆದರೂ ಯಾವುದೇ ಕ್ರಮ ಕೈಗೊಳ್ಳದೇ ಕಡತವನ್ನು ವಿಲೇವಾರಿ ಮಾಡದೆ ಹಾಗೇ ಇಟ್ಟಿದ್ದರು. ಈ ಬಗ್ಗೆ ದೂರುದಾರರು ಡಿ. 9ರಂದು ರಂದು ಅರ್ಜಿಯ ಬಗ್ಗೆ ಮೂಲ್ಕಿ ಕಂದಾಯ ನಿರೀಕ್ಷಕರ ಕಚೇರಿಗೆ ಹೋಗಿ ವಿಚಾರಿಸಿದಾಗ ಕಂದಾಯ ನಿರೀಕ್ಷಕ ಜಿ.ಎಸ್. ದಿನೇಶ್ 4 ಲಕ್ಷ ರು. ಲಂಚದ ಹಣಕ್ಕೆ ಬೇಡಿಕೆ ಇಟ್ಟಿದ್ದರು ಎಂದು ಆರೋಪಿಸಲಾಗಿದೆ.
ಈ ಬಗ್ಗೆ ದೂರುದಾರರು ಮಂಗಳೂರು ಲೋಕಾಯುಕ್ತ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಗುರುವಾರ ಬೆಳಗ್ಗೆ ಕಂದಾಯ ನಿರೀಕ್ಷಕ ಜಿ.ಎಸ್. ದಿನೇಶ್ ದೂರುದಾರರಿಂದ 4 ಲಕ್ಷ ರು. ಲಂಚದ ಹಣವನ್ನು ಸ್ವೀಕರಿಸುವಾಗ ಸುರತ್ಕಲ್ ಜಂಕ್ಷನ್ ಬಳಿ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾರೆ. ಕೂಡಲೇ ಲೋಕಾಯುಕ್ತರು ಅಧಿಕಾರಿಯನ್ನು ವಶಕ್ಕೆ ಪಡೆದಿದ್ದಾರೆ.ಕಾರ್ಯಾಚರಣೆಯಲ್ಲಿ ಮಂಗಳೂರು ವಿಭಾಗದ ಲೋಕಾಯುಕ್ತ ಪೊಲೀಸ್ ಅಧೀಕ್ಷಕ ಎಂ. ನಟರಾಜ್ ಮಾರ್ಗದರ್ಶನದಲ್ಲಿ, ಮಂಗಳೂರು ಲೋಕಾಯುಕ್ತ ಉಪಾಧೀಕ್ಷಕರಾದ ಡಾ. ಗಾನ ಪಿ. ಕುಮಾರ್, ಪೊಲೀಸ್ ನಿರೀಕ್ಷಕರಾದ ಅಮಾನುಲ್ಲಾ ಎ., ಸುರೇಶ್ ಕುಮಾರ್ ಪಿ., ಚಂದ್ರಶೇಖರ್ ಕೆ.ಎನ್. ಹಾಗೂ ಸಿಬ್ಬಂದಿ ಭಾಗವಹಿಸಿದ್ದರು.