ಆ್ಯಸಿಡ್‌ ಸಂತ್ರಸ್ತ ವಿದ್ಯಾರ್ಥಿನಿಯರಿಗೆ ತಲಾ 4 ಲಕ್ಷ ರು. ಪರಿಹಾರ, ಸರ್ಕಾರದಿಂದ ಸಂಪೂರ್ಣ ಚಿಕಿತ್ಸಾ ವೆಚ್ಚ

| Published : Mar 06 2024, 02:19 AM IST

ಆ್ಯಸಿಡ್‌ ಸಂತ್ರಸ್ತ ವಿದ್ಯಾರ್ಥಿನಿಯರಿಗೆ ತಲಾ 4 ಲಕ್ಷ ರು. ಪರಿಹಾರ, ಸರ್ಕಾರದಿಂದ ಸಂಪೂರ್ಣ ಚಿಕಿತ್ಸಾ ವೆಚ್ಚ
Share this Article
  • FB
  • TW
  • Linkdin
  • Email

ಸಾರಾಂಶ

ಕಡಬದಲ್ಲಿ ಆ್ಯಸಿಡ್‌ ದಾಳಿಗೆ ಒಳಗಾದ ಸಂತ್ರಸ್ತ ವಿದ್ಯಾರ್ಥಿನಿಯರು ಆಯುಷ್ಮಾನ್‌ ಆರೋಗ್ಯ ಕಾರ್ಡ್‌ಗೆ ಒಳಪಡದ ಕಾರಣ, ಆ ವಿದ್ಯಾರ್ಥಿನಿಯರ ಕುಟುಂಬವೂ ಬಡವರಾಗಿರುವ ಕಾರಣ ಖಾಸಗಿ ಆಸ್ಪತ್ರೆಯವರು ಅವರಿಗೆ ಉಚಿತ ಚಿಕಿತ್ಸೆ ನೀಡಲು ಮುಂದಾಗಿದ್ದಾರೆ ಎಂದು ಡಾ. ನಾಗಲಕ್ಷ್ಮಿ ಚೌಧರಿ ಹೇಳಿದರು.

ಕನ್ನಡಪ್ರಭ ವಾರ್ತೆ ಮಂಗಳೂರುದ.ಕ. ಜಿಲ್ಲೆಯ ಕಡಬದ ಸರ್ಕಾರಿ ಕಾಲೇಜಿನಲ್ಲಿ ಆ್ಯಸಿಡ್‌ ದಾಳಿಗೆ ಒಳಗಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿರುವ ಮೂವರು ವಿದ್ಯಾರ್ಥಿನಿಯರನ್ನು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮೀ ಚೌಧರಿ ಮಂಗಳವಾರ ಭೇಟಿಯಾಗಿದ್ದಾರೆ. ವಿದ್ಯಾರ್ಥಿನಿಯರ ಕುಟುಂಬಕ್ಕೆ ತಕ್ಷಣದ ಪರಿಹಾರವಾಗಿ ತಲಾ ನಾಲ್ಕು ಲಕ್ಷ ರುಪಾಯಿ ನೀಡಲಾಗುವುದು. ಅಲ್ಲದೆ ವಿದ್ಯಾರ್ಥಿನಿಯರ ಸಂಪೂರ್ಣ ಚಿಕಿತ್ಸಾ ವೆಚ್ಚವನ್ನು ಸರ್ಕಾರದಿಂದ ಭರಿಸಲಾಗುವುದು ಎಂದು ಅವರು ಭರವಸೆ ನೀಡಿದ್ದಾರೆ.

ಸಂತ್ರಸ್ತ ವಿದ್ಯಾರ್ಥಿನಿಯರನ್ನು ಭೇಟಿ ಮಾಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿದ್ಯಾರ್ಥಿನಿಯರು ಆರೋಗ್ಯವಾಗಿದ್ದಾರೆ. ಅವರಿಗೆ ಪಿಯುಸಿ ಪರೀಕ್ಷೆ ಬಗ್ಗೆ ಚಿಂತೆಯಿದೆ. ಕನ್ನಡ ಪರೀಕ್ಷೆ ಮತ್ತೆ ಬರೆಯಬೇಕಾ ಎಂದು ಒಬ್ಬಳು ಕೇಳುತ್ತಿದ್ದಾಳೆ. ಮಕ್ಕಳ ಚಿಂತೆ ಮನಸ್ಥಿತಿ ನನಗೆ ಅರ್ಥವಾಗುತ್ತದೆ. ನನಗೂ ಒಬ್ಬ ಪಿಯುಸಿ ಓದುವ ಮಗನಿದ್ದಾನೆ. ಶಿಕ್ಷಣ ಸಚಿವರನ್ನು ಭೇಟಿಯಾಗುತ್ತೇನೆ. ಶಿಕ್ಷಣದಲ್ಲಿ ಯಾವ ರೀತಿಯ ಸಹಕಾರ ಕೊಡಬೇಕು, ಸಿಇಟಿ ಪರೀಕ್ಷೆ ಬರೆಯಲು ಯಾವ ವ್ಯವಸ್ಥೆ ಮಾಡಬೇಕು ಎಂಬ ಬಗ್ಗೆ ಚರ್ಚಿಸುತ್ತೇನೆ ಎಂದರು.ವಿದ್ಯಾರ್ಥಿನಿಯರಿಗೆ ವೈದ್ಯರು ಪ್ರಾಥಮಿಕ ಚಿಕಿತ್ಸೆ ನೀಡಿದ್ದಾರೆ. ಪ್ರಸ್ತುತ ಡಾ. ದಿನೇಶ್ ಚಿಕಿತ್ಸೆ ನೀಡುತ್ತಿದ್ದಾರೆ. ಘಟನೆಯಲ್ಲಿ ಒಬ್ಬಾಕೆಗೆ ಶೇ.20, ಇನ್ನೊಬ್ಬಾಕೆಗೆ ಶೇ.10ರಿಂದ 12, ಮತ್ತೊಬ್ಬಳಿಗೆ ಶೇ.10ಕ್ಕಿಂತ ಕಡಿಮೆ ಗಾಯವಾಗಿದೆ. ಇಬ್ಬರಿಗೆ ಪ್ಲಾಸ್ಟಿಕ್‌ ಸರ್ಜರಿಯ ಅಗತ್ಯದ ಬಗ್ಗೆ ವೈದ್ಯರು ಹೇಳಿದ್ದಾರೆ. ಎರಡು ವಾರಗಳ ಬಳಿಕ ಮುಂದಿನ ಚಿಕಿತ್ಸೆ ಬಗ್ಗೆ ನಿರ್ಧಾರ ಮಾಡಲಿದ್ದಾರೆ. ಪ್ಲಾಸ್ಟಿಕ್‌ ಸರ್ಜರಿಗೆ 20 ಲಕ್ಷ ರು. ವರೆಗೂ ಚಿಕಿತ್ಸಾ ಪರಿಹಾರ ನೀಡುತ್ತೇವೆ. ಮಕ್ಕಳು, ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆಯೊಂದಿಗೆ ಸೇತುವೆಯಾಗಿ ಕೆಲಸ ಮಾಡಲು ನಾನು ಬಂದಿದ್ದೇನೆ. ಮಕ್ಕಳಿಗೆ ಧೈರ್ಯ ತುಂಬುವ ಕೆಲಸ ಮಾಡುತ್ತೇನೆ ಎಂದರು.ಆರೋಪಿ ಪ್ಲಾಸ್ಟಿಕ್ ಬಾಟಲಿನಲ್ಲಿ ಆ್ಯಸಿಡ್‌ ಎರಚಿದ್ದರಿಂದ ಯುವತಿಯರು ಬಚಾವ್‌ ಆಗಿದ್ದಾರೆ. ಗಾಜಿನ ಬಾಟಲಿನಲ್ಲಾಗುತ್ತಿದ್ದರೆ ಅದರಿಂದಾಗುವ ಗಾಯ ತುಂಬ ಆಳ ಇರುತ್ತಿತ್ತು. ಆದರೆ ಮಕ್ಕಳ ಮನೋಸ್ಥೈರ್ಯ ಚೆನ್ನಾಗಿದೆ. ಪರೀಕ್ಷೆ ಬಗ್ಗೆ ಚಿಂತೆ ಮಾಡಬೇಡಿ ಎಂದಿದ್ದೇನೆ. ಮಧ್ಯಾಹ್ನ ಪೊಲೀಸ್‌ ಅಧಿಕಾರಿಗಳ ಜೊತೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಭೆ ನಡೆಸಿ ಆರೋಪಿ ಯಾವ ರೀತಿಯ ಆ್ಯಸಿಡ್‌ ಬಳಸಿದ್ದಾನೆ ಎನ್ನುವುದರ ಮಾಹಿತಿ ಪಡೆದುಕೊಳ್ಳುತ್ತೇನೆ ಎಂದವರು ಹೇಳಿದರು.

ಸ್ವ ಉದ್ಯೋಗಕ್ಕೆ 5 ಲಕ್ಷ ರು. ನೆರವು:

ಆ್ಯಸಿಡ್‌ ದಾಳಿಗೆ ಒಳಗಾಗುವ ಸಂತ್ರಸ್ತರು ಮುಂದೆ ಸ್ವ ಉದ್ಯೋಗ ಕೈಗೊಳ್ಳಲು ಮುಂದಾಗುವುದಿದ್ದರೆ ಅವರಿಗೆ ರಾಜ್ಯ ಸರ್ಕಾರದಿಂದ 5 ಲಕ್ಷ ರು.ಗಳ ನೆರವನ್ನು ಒದಗಿಸಲಾಗುತ್ತದೆ. ಕಡಬದಲ್ಲಿ ಆ್ಯಸಿಡ್‌ ದಾಳಿಗೆ ಒಳಗಾದ ಸಂತ್ರಸ್ತ ವಿದ್ಯಾರ್ಥಿನಿಯರು ಆಯುಷ್ಮಾನ್‌ ಆರೋಗ್ಯ ಕಾರ್ಡ್‌ಗೆ ಒಳಪಡದ ಕಾರಣ, ಆ ವಿದ್ಯಾರ್ಥಿನಿಯರ ಕುಟುಂಬವೂ ಬಡವರಾಗಿರುವ ಕಾರಣ ಖಾಸಗಿ ಆಸ್ಪತ್ರೆಯವರು ಅವರಿಗೆ ಉಚಿತ ಚಿಕಿತ್ಸೆ ನೀಡಲು ಮುಂದಾಗಿದ್ದಾರೆ ಎಂದು ಡಾ. ನಾಗಲಕ್ಷ್ಮಿ ಚೌಧರಿ ಹೇಳಿದರು.

ಮಕ್ಕಳು ದಾಳಿಯಿಂದ ಮಾನಸಿಕವಾಗಿ ತುಮುಲಕ್ಕೆ ತುತ್ತಾಗಿರುವ ಜತೆಯಲ್ಲೇ ತಮ್ಮ ಭವಿಷ್ಯದ ಬಗ್ಗೆಯೂ ಆತಂಕಕ್ಕೀಡಾಗಿದ್ದಾರೆ. ಸಂತ್ರಸ್ತ ವಿದ್ಯಾರ್ಥಿನಿಯೊಬ್ಬರು ಮತ್ತೆ ಕನ್ನಡ ಪರೀಕ್ಷೆ ಬರೆಯಬೇಕಾ? ಎಂದು ಪ್ರಶ್ನಿಸಿದ್ದಾರೆ. ನಾವು ಸಾಂತ್ವನ ಹೇಳಿದ್ದೇವೆ. ಈ ಬಗ್ಗೆ ಶಿಕ್ಷಣ ಸಚಿವರ ಜತೆಯೂ ಮತನಾಡುತ್ತೇನೆ. ಬಾಕಿ ಉಳಿದ ಪರೀಕ್ಷೆಗೂ ಸೂಕ್ತ ವ್ಯವಸ್ಥೆಯ ಭರವಸೆ ನೀಡಲಾಗಿದೆ ಎಂದು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮಿ ಹೇಳಿದ್ದಾರೆ.