ಶರಣಾದ 4 ನಕ್ಸಲೀಯರು ಕಾರ್ಕಳ ಪೊಲೀಸರ ವಶಕ್ಕೆ

| Published : Feb 26 2025, 01:02 AM IST

ಸಾರಾಂಶ

ಉಡುಪಿ ಜಿಲ್ಲೆಯ ಕಾರ್ಕಳ ಮತ್ತು ಹೆಬ್ರಿ ತಾಲೂಕಿನಲ್ಲಿ ನಡೆದ ಸುಮಾರು 15ಕ್ಕೂ ಹೆಚ್ಚು ನಕ್ಸಲೀಯ ಪ್ರಕರಣಗಳಿಗೆ ಸಂಬಂಧಿಸಿದಂತೆ ಉಡುಪಿ ಜಿಲ್ಲೆಯ ಪೊಲೀಸರಿಗೆ ಬೇಕಾಗಿದ್ದರು. ಈ ಹಿನ್ನೆಲೆಯಲ್ಲಿ ಅವರ ವಿಚಾರಣೆಗಾಗಿ ಕಾರ್ಕಳ ಪೊಲೀಸರು ತಮ್ಮ ವಶಕ್ಕೆ ಕೇಳಿದ್ದರು. ಅದರಂತೆ ಈ 4 ಮಂದಿ ನಕ್ಸಲೀಯರನ್ನು ಕಾರ್ಕಳ ತಾಲೂಕು ನ್ಯಾಯಾಲಯವು 5 ದಿನಗಳ ಅವಧಿಗೆ ಕಾರ್ಕಳ ಪೊಲೀಸರಿಗೆ ಒಪ್ಪಿಸಿದೆ.

ಕನ್ನಡಪ್ರಭ ವಾರ್ತೆ ಉಡುಪಿ/ಕಾರ್ಕಳಕಳೆದ ತಿಂಗಳು ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಸಮ್ಮುಖದಲ್ಲಿ ಶಸ್ತ್ರಾಸ್ತ್ರ ಕೆಳಗಿಟ್ಟು ಶರಣಾಗಿದ್ದ 6 ಮಂದಿ ನಕ್ಸಲರ ಪೈಕಿ, ನಾಲ್ವರನ್ನು ಉಡುಪಿ ಜಿಲ್ಲಾ ಪೊಲೀಸರು ವಿಚಾರಣೆಗಾಗಿ ತಮ್ಮ ವಶಕ್ಕೆ ಪಡೆದುಕೊಂಡಿದ್ದಾರೆ.ಪೊಲೀಸರ ವಶವಾಗಿರುವ ನಕ್ಸಲರು ಮಾರಪ್ಪ ಯಾನೆ ಜಯಣ್ಣ, ಮುಂಡಗಾರು ಲತಾ, ವನಜಾಕ್ಷಿ ಯಾನೆ ಜ್ಯೋತಿ, ಸುಂದರಿ ಯಾನೆ ಗೀತಾ ಯಾನೆ ಜೆನ್ನಿ.

ಅವರು ಉಡುಪಿ ಜಿಲ್ಲೆಯ ಕಾರ್ಕಳ ಮತ್ತು ಹೆಬ್ರಿ ತಾಲೂಕಿನಲ್ಲಿ ನಡೆದ ಸುಮಾರು 15ಕ್ಕೂ ಹೆಚ್ಚು ನಕ್ಸಲೀಯ ಪ್ರಕರಣಗಳಿಗೆ ಸಂಬಂಧಿಸಿದಂತೆ ಉಡುಪಿ ಜಿಲ್ಲೆಯ ಪೊಲೀಸರಿಗೆ ಬೇಕಾಗಿದ್ದರು. ಈ ಹಿನ್ನೆಲೆಯಲ್ಲಿ ಅವರ ವಿಚಾರಣೆಗಾಗಿ ಕಾರ್ಕಳ ಪೊಲೀಸರು ತಮ್ಮ ವಶಕ್ಕೆ ಕೇಳಿದ್ದರು. ಅದರಂತೆ ಈ 4 ಮಂದಿ ನಕ್ಸಲೀಯರನ್ನು ಕಾರ್ಕಳ ತಾಲೂಕು ನ್ಯಾಯಾಲಯವು 5 ದಿನಗಳ ಅವಧಿಗೆ ಕಾರ್ಕಳ ಪೊಲೀಸರಿಗೆ ಒಪ್ಪಿಸಿದೆ.

ಶರಣಾಗತರಾದ ನಕ್ಸಲರನ್ನು ಕಾರ್ಕಳ ನ್ಯಾಯಾಲಯಕ್ಕೆ ಹಾಜರು ಪಡಿಸುವ ಎಲ್ಲ ಜವಾಬ್ದಾರಿಗಳನ್ನು ಎಎಸ್ಪಿ ಡಾ. ಹರ್ಷ ಪ್ರಿಯಂವದ ವಹಿಸಿಕೊಂಡಿದ್ದಾರೆ.ನವೆಂಬರ್‌ನಲ್ಲಿ ನಕ್ಸಲ್ ಕಬಿನಿ ದಳಂ ನಾಯಕ ವಿಕ್ರಮ್ ಗೌಡನ ಎನ್‌ಕೌಂಟರ್‌ ಬಳಿಕ ನಕ್ಸಲ್ ಚಟುವಟಿಕೆ ಕ್ಷೀಣಿಸಿದ್ದು, ನಕ್ಸಲರು ಶರಣಾಗತರಾಗಿದ್ದರು.ಮಹಜರು ಸಾಧ್ಯತೆ:ನಾಡ್ಪಾಲು ಗ್ರಾಮದ ಭೋಜಗೌಡ ಕೊಲೆ ಪ್ರಕರಣ, ತೆಂಗುಮಾರ್ ಸದಾಶಿವ ಗೌಡ, ಮತ್ತಾವು ಬಾಂಬ್ ಸ್ಫೋಟ ಸೇರಿದಂತೆ ಹಲವಾರು ಪ್ರಕರಣಗಳಲ್ಲಿ ವಿಚಾರಣೆ ನಡೆಸುವ ಸಾಧ್ಯತೆ ಇದೆ. ಹೆಬ್ರಿ ತಾಲೂಕಿನ ಕಬ್ಬಿನಾಲೆ, ತೆಂಗುಮಾರ್, ನಾಡ್ಪಾಲು, ಮುಟ್ಲುಪಾಡಿ, ಪೀತಬೈಲ್, ಕಾರ್ಕಳ ತಾಲೂಕಿನ ಈದು, ಬೊಳ್ಳೆಟ್ಟು ಸೇರಿದಂತೆ ಅನೇಕ ಸ್ಥಳಗಳಲ್ಲಿ ಸ್ಥಳ ಮಹಜರು ನಡೆಸಲಾಗುತ್ತದೆ.ಸೋಮವಾರ ರಾತ್ರಿ ಭದ್ರತೆಯ ಮೇಲ್ವಿಚಾರಣೆಯನ್ನು ನಗರ ಠಾಣಾ ಎಸ್ ಐ ಸಂದೀಪ್ ಶೆಟ್ಟಿ ವಹಿಸಿದ್ದರು.