ಓಮನ್‌ನಿಂದ ಮಲ್ಪೆಗೆ ಬೋಟ್‌ನಲ್ಲಿ 4 ಸಾವಿರ ಕಿ,ಮೀ. ಕ್ರಮಿಸಿ ಬಂದ ಮೀನುಗಾರರು!

| Published : Feb 26 2025, 01:02 AM IST

ಓಮನ್‌ನಿಂದ ಮಲ್ಪೆಗೆ ಬೋಟ್‌ನಲ್ಲಿ 4 ಸಾವಿರ ಕಿ,ಮೀ. ಕ್ರಮಿಸಿ ಬಂದ ಮೀನುಗಾರರು!
Share this Article
  • FB
  • TW
  • Linkdin
  • Email

ಸಾರಾಂಶ

ಇಲ್ಲಿನ ಸೈಂಟ್ ಮೇರಿಸ್ ದ್ವೀಪದ ಬಳಿ ಸಂಶಯಾಸ್ಪದವಾಗಿ ಸಂಚರಿಸುತ್ತಿದ್ದ ಓಮನ್ ದೇಶದ ಮೀನುಗಾರಿಕಾ ದೋಣಿಯೊಂದನ್ನು ಕರಾವಳಿ ಕಾವಲು ಪಡೆ ವಶಕ್ಕೆ ಪಡೆದಿದ್ದು, ಅದರಲ್ಲಿದ್ದ ಮೂವರು ತಮಿಳುನಾಡು ಮೂಲ ಮೀನುಗಾರರನ್ನು ಬಂಧಿಸಲಾಗಿದೆ.

ಕನ್ನಡಪ್ರಭ ವಾರ್ತೆ ಮಲ್ಪೆ

ಇಲ್ಲಿನ ಸೈಂಟ್ ಮೇರಿಸ್ ದ್ವೀಪದ ಬಳಿ ಸಂಶಯಾಸ್ಪದವಾಗಿ ಸಂಚರಿಸುತ್ತಿದ್ದ ಓಮನ್ ದೇಶದ ಮೀನುಗಾರಿಕಾ ದೋಣಿಯೊಂದನ್ನು ಕರಾವಳಿ ಕಾವಲು ಪಡೆ ವಶಕ್ಕೆ ಪಡೆದಿದ್ದು, ಅದರಲ್ಲಿದ್ದ ಮೂವರು ತಮಿಳುನಾಡು ಮೂಲ ಮೀನುಗಾರರನ್ನು ಬಂಧಿಸಲಾಗಿದೆ.ಸೋಮವಾರ ಸಂಜೆ 4.30ರ ಸುಮಾರಿಗೆ ಈ ಬೋಟು ಪತ್ತೆಯಾಗಿದೆ. ಈ ಬೋಟ್‌ನಲ್ಲಿದ್ದ ಮೀನುಗಾರರನ್ನು ಜೇಮ್ಸ್‌ ಫ್ರಾನ್ಸಿಸ್ ಮೊಸೆಸ್ (50), ರಾಬಿನ್‌ ಸ್ಟನ್ (50) ಮತ್ತು ಡೊರೇಸ್ ಅಲ್ಫಾನ್ಸೊ (36) ಎಂದು ಗುರುತಿಸಲಾಗಿದೆ.

ಅವರು ತಮಿಳುನಾಡಿನ ತಿರುನಲ್ವೆಲಿಯ ನಿವಾಸಿಗಳಾಗಿದ್ದು, ಓಮನ್‌ ದೇಶದ ಬಂದರಿನಲ್ಲಿ ಮೀನುಗಾರಿಕೆ ನಡೆಸುವ ಕಾರ್ಮಿಕರಾಗಿದ್ದಾರೆ. ಅವರು ಓಮನ್‌ ದೇಶದ ಮಾಲಕನ ಕಿರುಕುಳದಿಂದ ತಪ್ಪಿಸಿಕೊಳ್ಳಲು ಸಮುದ್ರ ಮಾರ್ಗದಲ್ಲಿ ಭಾರತಕ್ಕೆ ಪಲಾಯನ ಮಾಡಿ ಬಂದಿರುವುದಾಗಿ ತಿಳಿಸಿದ್ದಾರೆ.

ಆದರೆ ಅವರು ಪರವಾನಗಿ ಇಲ್ಲದೇ ಭಾರತೀಯ ಮೀನುಗಾರಿಕಾ ಗಡಿಯೊಳಗೆ ಬಂದಿರುವುದು ಸಂಶಯಕ್ಕೆ ಕಾರಣವಾಗಿದೆ. ಅಲ್ಲದೇ ಅವರ ಬಳಿ ಪಾಸ್‌ಪೋರ್ಟ್‌ ಅಥವಾ ಬೇರೆ ಯಾವುದೇ ದಾಖಲೆಗಳಿರಲಿಲ್ಲ.ಅವರು ಕಾರವಾರ ದಾಟಿ ಮಲ್ಪೆ ಬಂದರಿನತ್ತ ಬರುತ್ತಿದ್ದಾಗ ಈ ವಿದೇಶಿ ಬೋಟನ್ನು ಸೈಂಟ್‌ ಮೇರಿಸ್‌ ದ್ವೀಪದ ಬಳಿ ಮಲ್ಪೆಯ ಮೀನುಗಾರರು ಗಮನಿಸಿ ಕರಾವಳಿ ಕಾವಲು ಪಡೆಯ ಪೊಲೀಸರಿಗೆ ಮಾಹಿತಿ ನೀಡಿದ್ದರು. ಅದರಂತೆ ಕರಾವಳಿ ಕಾವಲು ಪಡೆಯ ಪೊಲೀಸರು ಅವರನ್ನು ವಶಕ್ಕೆ ಪಡೆದಿದ್ದಾರೆ.

ವಿಚಾರಣೆ ನಡೆಸಿದಾಗ ತಾವು ಕೆಲಸ ಮಾಡುತ್ತಿದ್ದ ಮಾಲಕ ತಮಗೆ ಸರಿಯಾಗಿ ವೇತನ, ಆಹಾರ ನೀಡುತ್ತಿರಲಿಲ್ಲ. ತಮ್ಮ ಪಾಸ್‌ಪೋರ್ಟ್ ಮತ್ತ ಇತರ ದಾಖಲೆಗಳನ್ನು ಕೂಡ ತೆಗೆದಿಟ್ಟುಕೊಂಡಿದ್ದು, ತಾವು ಕೇಳಿದಾಗ ಕೊಡದೇ ಚಿತ್ರಹಿಂಸೆ ನೀಡುತ್ತಿದ್ದಾನೆ. ಆದ್ದರಿಂದ ತಾವು ಪ್ರಾಣಭಯದಿಂದ ಆತನಿಂದ ತಪ್ಪಿಸಿಕೊಳ್ಳಲು ಬೇರೆ ದಾರಿ ಇಲ್ಲದೇ ಮೀನುಗಾರಿಕೆ ನಡೆಸುವ ಬೋಟಿನಲ್ಲಿಯೇ ಓಮನ್‌ನಿಂದ ಸುಮಾರು 4000 ಕಿ.ಮೀ. ಪ್ರಯಾಣಿಸಿ ಬಂದಿದ್ದೇವೆ. ಈಗ ತಮ್ಮ ಬಳಿ ಈಗ ಡೀಸೆಲ್‌ಗಾಗಲಿ, ಊಟಕ್ಕಾಗಲಿ ಹಣ ಇಲ್ಲ ಎಂದು ಅವರು ಹೇಳಿದ್ದಾರೆ.ಆದರೆ ಅವರು ಅನಧಿಕೃತವಾಗಿ ಭಾರತೀಯ ಸೀಮೆಯನ್ನು ಪ್ರವೇಶಿಸಿರುವುದರಿಂದ ಪಾಸ್‌ಪೋರ್ಟ್ (ಭಾರತಕ್ಕೆ ಪ್ರವೇಶ) ಕಾಯ್ದೆ 1950 ಸೆಕ್ಷನ್ 3(ಎ) ಪ್ರಕಾರ ಅವರ ಮೇಲೆ ಪ್ರಕರಣ ದಾಖಲಿಸಿಕೊಂಡು ವಶಕ್ಕೆ ಪಡೆದಿದ್ದೇವೆ. ಹೆಚ್ಚಿನ ತನಿಖೆಯ ನಂತರ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಕರಾವಳಿ ಕಾವಲು ಪಡೆಯ ಪೊಲೀಸ್‌ ಅಧೀಕ್ಷಕರು ತಿಳಿಸಿದ್ದಾರೆ.