ಚಿರತೆ ನುಗ್ಗಿದ್ದ ಮನೆಯಲ್ಲಿ ಸುರೇಶ್, ಅವರ ಪತ್ನಿ ಸುಜಾತ ಹಾಗೂ ತಾಯಿ ಶೈಲಜಾ ರುದ್ರಪ್ಪ ವಾಸವಿದ್ದರು

ಕನ್ನಡಪ್ರಭ ವಾರ್ತೆ ಮೈಸೂರು

ಯಾವುದೇ ಸದ್ದು ಗದ್ದಲ ಇಲ್ಲದೇ ಮನೆ ನುಗ್ಗಿ, ಮಂಚದ ಕೆಳಗೆ ಎರಡು ಗಂಟೆಗೂ ಹೆಚ್ಚು ಕಾಲ ಮಲಗಿದ್ದ 4 ವರ್ಷದ ಗಂಡು ಚಿರತೆಯನ್ನು ಅರಣ್ಯ ಇಲಾಖೆ ಸಿಬ್ಬಂದಿ ಅರವಳಿಕೆ ಮದ್ದು ನೀಡಿ ಸೆರೆ ಹಿಡಿದಿರುವ ಘಟನೆ ಮೈಸೂರಿನ ಸಿದ್ಧಾರ್ಥನಗರದಲ್ಲಿ ಶುಕ್ರವಾರ ನಡೆದಿದೆ.

ಸಿದ್ದಾರ್ಥನಗರ ವಿನಯಮಾರ್ಗದಲ್ಲಿರುವ ನಗರ ಪಾಲಿಕೆ ನಿವೃತ್ತ ಎಂಜಿನಿಯರ್ ಸುರೇಶ್ ಎಂಬವರ ಮನೆಗೆ ನುಗ್ಗಿದ ಚಿರತೆಯು ರೂಮಿನಲ್ಲಿ ಮಂಚದ ಕೆಳಗೆ 2 ಗಂಟೆಗೂ ಹೆಚ್ಚು ಕಾಲ ಮಲಗಿತ್ತು. ಈ ವಿಚಾರ ಸ್ಥಳಕ್ಕೆ ಧಾವಿಸಿದ ಅರಣ್ಯ ಇಲಾಖೆಯ ಸಿಬ್ಬಂದಿ, ಅವರಳಿಕೆ ಮದ್ದು ನೀಡಿ ಸುರಕ್ಷಿತವಾಗಿ ಸೆರೆ ಹಿಡಿದು, ಕೂರ್ಗಳ್ಳಿಯಲ್ಲಿರುವ ಮೃಗಾಲಯದ ಪುನರ್ವಸತಿ ಕೇಂದ್ರಕ್ಕೆ ಸ್ಥಳಾಂತರಿಸಿದ್ದಾರೆ.

ಚಿರತೆ ನುಗ್ಗಿದ್ದ ಮನೆಯಲ್ಲಿ ಸುರೇಶ್, ಅವರ ಪತ್ನಿ ಸುಜಾತ ಹಾಗೂ ತಾಯಿ ಶೈಲಜಾ ರುದ್ರಪ್ಪ ವಾಸವಿದ್ದರು. ಶೈಲಜಾ ಅವರು ವಯೋಸಹಜ ಸಮಸ್ಯೆಯಿಂದಾಗಿ ಹಾಸಿಗೆ ಹಿಡಿದಿದ್ದು, ವೀಲ್ ಚೇರ್ ಸಹಾಯದಿಂದ ಓಡಾಡುತ್ತಿದ್ದರು. ಎಂದಿನಂತೆ ಬೆಳಗ್ಗೆ ಉಪಾಹಾರ ಸೇವಿಸಿ ಶೈಲಜಾ ಅವರು ರೂಮಿನಲ್ಲಿ ಮಂಚದ ಮೇಲೆ ಮಲಗಿದ್ದಾರೆ.

ಬೆಳಗ್ಗೆ 10.30ರಲ್ಲಿ ಸದ್ದಿಲ್ಲದೆ ಮನೆ ಪ್ರವೇಶಿಸಿರುವ ಚಿರತೆ ಗಾಬರಿಯಿಂದ ಮಂಚದ ಕೆಳಗೆ ಅವಿತುಕೊಂಡಿದೆ. ಚಿರತೆ ಮನೆಯೊಳಗೆ ನುಸುಳಿರುವುದು ಯಾರ ಗಮನಕ್ಕೂ ಬಂದಿಲ್ಲ. ಚಿರತೆ ರೂಮಿನಲ್ಲಿರುವಾಗಲೇ ಸುಜಾತ ಅವರು ಅತ್ತೆ ಶೈಲಜಾ ಅವರನ್ನು 2- 3 ಬಾರಿ ಬಂದು ಮಾತಾಡಿಸಿ ಹೋಗಿದ್ದಾರೆ. ಆದರೂ ಚಿರತೆ ಇರುವಿಕೆ ಯಾರಿಗೂ ಗೊತ್ತಾಗಿಲ್ಲ.

--- ಬಾಕ್ಸ್--

-- ಕಸ ಗುಡಿಸುವಾಗ ಚಿರತೆ ಕಂಡರು--

ಬೆಳಗ್ಗೆ 11.30ಕ್ಕೆ ಸುರೇಶ್ ಅವರ ಮನೆಗೆ ಬಂದ ಮನೆ ಕೆಲಸದಾಕೆ ಕಸ ಗುಡಿಸಲು ಶೈಲಜಾ ಅವರ ರೂಮಿಗೆ ಬಂದಿದ್ದಾರೆ. ಕಸ ಗುಡಿಸುತ್ತಿದ್ದಾಗ ಮಂಚದ ಕೆಳಗೆ ಗೋಡೆ ಮೂಲೆಗೆ ಮುಖ ಮಾಡಿಕೊಂಡು ಮಲಗಿದ್ದ ಚಿರತೆ ನೋಡಿದ್ದಾರೆ. ತಕ್ಷಣ ಕೊಠಡಿಯಿಂದ ಹೊರಗೆ ಬಂದು ಹಾಲ್‌ ನಲ್ಲಿದ್ದ ಸುಜಾತ ಅವರಿಗೆ ಮಂಚದ ಕೆಳಗೆ ಯಾವುದೋ ಪ್ರಾಣಿ ಇರುವುದಾಗಿ ಹೇಳಿದ್ದಾರೆ.

ಈ ವೇಳೆ ಮಂಚದ ಮೇಲೆ ಮಲಗಿದ್ದ ಶೈಲಜಾ ಅವರನ್ನು ತಬ್ಬಿ ಎತ್ತಿಕೊಂಡು ಹೊರಗೆ ಕರೆ ತಂದಿದ್ದಾರೆ. ಚಿರತೆ ನೋಡಿ ಗಾಬರಿಯಾಗಿದ್ದ ಸುಜಾತ ಅವರು ಅತ್ತೆಯೊಂದಿಗೆ ಹಾಲ್‌ ನಲ್ಲಿ ಎಡವಿ ಬಿದ್ದಿದ್ದಾರೆ. ನಂತರ ಕೆಲಸದಾಕೆ ಸಹಾಯದಿಂದ ಇಬ್ಬರು ಮೇಲೆದ್ದು ಸುರಕ್ಷಿತವಾಗಿ ಮನೆಯಿಂದ ಹೊರ ಬಂದಿದ್ದಾರೆ. ಕೂಡಲೆ ರೂಮ್ ಬಾಗಿಲು ಹಾಕಿ ಚಿರತೆಗೆ ದಿಗ್ಭಂದನ ಹೇರಿ ಸಮಯಪ್ರಜ್ಞೆ ಮೆರೆದಿದ್ದಾರೆ.

ಈ ವಿಚಾರ ತಿಳಿದು ಸ್ಥಳಕ್ಕೆ ಬಂದ ಅರಣ್ಯ ಇಲಾಖೆಯ ಸಿಬ್ಬಂದಿ, ಚಿರತೆ ಇರುವಿಕೆ ಖಚಿತವಾಗುತ್ತಿದ್ದಂತೆ ಮೃಗಾಲಯದ ಪಶುವೈದ್ಯ ಶಶಿಧರ್ ಅವರು ಚಿರತೆ ಅರವಳಿಕೆ ಚುಚ್ಚುಮದ್ದು ಡಾರ್ಟ್ ಮಾಡುವಲ್ಲಿ ಯಶಸ್ವಿಯಾದರು. ಕೆಲ ನಿಮಿಷದ ಬಳಿಕ ಚಿರತೆ ಮಂಪರಿಗೆ ಜಾರಿತು.

ಕೂಡಲೆ ಚಿರತೆ ಕಾರ್ಯಪಡೆ ಸಿಬ್ಬಂದಿ ರೂಮ್ ಪ್ರವೇಶಿಸಿ ಚಿರತೆಯನ್ನು ಹೊರಗೆ ತಂದು ಬಲೆಯಲ್ಲಿ ಸುತ್ತಿದರು. ನಂತರ ಮನೆ ಹೊರಗೆ ತಂದು ವಾಹನದಲ್ಲಿದ್ದ ಬೋನ್ ಒಳಗೆ ಇರಿಸಿ, ಕೂರ್ಗಳ್ಳಿಯಲ್ಲಿರುವ ಪುನರ್ವಸತಿ ಕೇಂದ್ರಕ್ಕೆ ಸ್ಥಳಾಂತರಿಸಿದರು.

ಈ ಚಿರತೆಯು ಸಮೀದ ಚಾಮುಂಡಿಬೆಟ್ಟದ ಅರಣ್ಯ ಪ್ರದೇಶದಿಂದ ಸಿದ್ದಾರ್ಥನಗರಕ್ಕೆ ಬಂದಿರುವ ಸಾಧ್ಯತೆ ಇದೆ.

-----

ಕೋಟ್...

ಬೆಳಗಿನ ಜಾವ ನಮ್ಮ ರಸ್ತೆಯಲ್ಲಿ ಚಿರತೆ ಓಡಾಟ ಮಾಡಿದೆ ಅಂತ ಅರಣ್ಯ ಇಲಾಖೆಯವರು ತಿಳಿಸಿದರು. ನಾವು ಕೂಡ ಮನೆ ಬಾಗಿಲು ಹಾಕಿಕೊಂಡು ಮನೆಯಲ್ಲಿ ಇದ್ದೆವು. ಕೇವಲ 5 ರಿಂದ 10 ನಿಮಿಷ ಮೇನ್ ಡೋರ್ ಓಪನ್ ಮಾಡಿದ್ವಿ. ಆ ಸಮಯದಲ್ಲಿ ಚಿರತೆ ಮನೆಯೊಳಗೆ ಬಂದು ರೂಮಿನಲ್ಲಿ ಕುಳಿತಿದೆ. ಕೆಲಸದವಳು ನೋಡಿದಾಗಲೇ ನಮಗೂ ಗೊತ್ತಾಗಿದ್ದು ಚಿರತೆ ಅಂತ. ನಮ್ಮ ಅತ್ತೆಯನ್ನ ಆಚೆ ಎತ್ತುಕೊಂಡು ಬಂದೆವು. ನಂತರ ರೂಮಿನ ಬಾಗಿಲು ಹಾಕಿ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ವಿ. 2 ಗಂಟೆಗಳ ಚಿರತೆ ಮನೆಯಲ್ಲಿದ್ದರೂ ನಮಗೇನು ತೊಂದರೆ ಕೊಟ್ಟಿಲ್ಲ. ದೇವರ ದಯೆ ನಮ್ಮೆಲ್ಲರ ಪ್ರಾಣ ಉಳಿದಿದೆ. ನಮಗೂ ಒಂದು ರೀತಿಯ ಆಶ್ಚರ್ಯ ಅನಿಸುತ್ತಿದೆ.

- ಸುಜಾತ ಸುರೇಶ್, ಮನೆ ಮಾಲೀಕರು