ಸಾರಾಂಶ
ಅಥಣಿ : ಪ್ರಸಕ್ತ ವರ್ಷದಲ್ಲಿ ತಾಲೂಕಿನ ದ್ರಾಕ್ಷಿ ಬೆಳೆಗಾರರಿಗೆ ₹40.10 ಕೋಟಿ ವಿಮೆಹಣವನ್ನು ಅವರ ಬ್ಯಾಂಕ್ ಖಾತೆಗಳಿಗೆ ಜಮಾ ಮಾಡಲಾಗಿದೆ ಎಂದು ಶಾಸಕ ಲಕ್ಷ್ಮಣ ಸವದಿ ಹೇಳಿದರು.
ತಾಲೂಕಿನ ಘಟನಟ್ಟಿ ಗ್ರಾಮದಲ್ಲಿ ಗ್ರಾಮ ಪಂಚಾಯತಿ ನಂದಗಾಂವ, ತಾಲೂಕು ಪಂಚಾಯತಿ ಅಥಣಿ ಹಾಗೂ ಕೋರಮಂಡಲ ಇಂಟರ್‌ನ್ಯಾಶನಲ್ ಲಿ. ಸಹಯೋಗದಲ್ಲಿ ಜರುಗಿದ ಶುದ್ಧ ಕುಡಿಯುವ ನೀರಿನ ಘಟಕದ ಉದ್ಘಾಟನೆ, ಶಾಲಾ ಕಾಂಪೌಂಡ್ ನಿರ್ಮಾಣ, ಅಡುಗೆ ಕೋಣೆ ನಿರ್ಮಾಣಕ್ಕೆ ಅಡಿಗಲ್ಲು, ಪ್ರಧಾನಮಂತ್ರಿ ಅವಾಸ್ ಯೋಜನೆಯ ಫಲಾನುಭವಿಗಳಿಗೆ ಹಕ್ಕುಪತ್ರ ವಿತರಣೆ ಹಾಗೂ ಗ್ರಂಥಾಲಯಕ್ಕೆ ಕಂಪ್ಯೂಟರ್ ವಿತರಣೆ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಕಳೆದ ಸಾಲಿನಲ್ಲಿ ದ್ರಾಕ್ಷಿ ಬೆಳೆಗಾರರಿಗೆ ₹36 ಕೋಟಿ ಬೆಳೆವಿಮೆ ಮಾಡಲಾಗಿತ್ತು, ಈ ವರ್ಷ ಎಕರೆಗೆ ₹50 ರಿಂದ 90 ಸಾವಿರದಂತೆ ತಾಲೂಕಿನಲ್ಲಿ ₹40.10 ಕೋಟಿ ಸರ್ಕಾರದಿಂದ ಪರಿಹಾರ ನೀಡಲಾಗಿದೆ. ಇದರಿಂದ ಕಷ್ಟ ಕಾಲದಲ್ಲಿ ರೈತರಿಗೆ ಅನುಕೂಲವಾಗಲಿದೆ ಎಂದ ಅವರು, ಕೃಷಿ ವಿಮೆ, ತಾಂತ್ರಿಕ ದೋಷ ಹಾಗೂ ಮಾಹಿತಿ ಕೊರತೆಯಿಂದ ರೈತರಿಗೆ ಸರಿಯಾದ ಸಮಯಕ್ಕೆ ವಿಮೆ ಹಣ ಬರುತ್ತಿಲ್ಲ. ಮುಂಬರುವ ದಿನಗಳಲ್ಲಿ ಈ ಸಮಸ್ಯೆ ಪರಿಹರಿಸುವ ನಿಟ್ಟಿನಲ್ಲಿ ಸರ್ಕಾರ ಚಿಂತನೆ ನಡೆಸಿದೆ. ಮೆಕ್ಕೆಜೋಳ, ಸೋಯಾಬಿನ್, ತೊಗರಿ ಸೇರಿದಂತೆ ಇನ್ನಿತರ ಬೆಳೆಹಾನಿಗೆ ವಿಮೆ ಹಣ ತಲುಪಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ಹೇಳಿದರು.
ಅಥಣಿ ಪೂರ್ವಭಾಗದ ರೈತರ ಬಹುದಿನಗಳ ಕನಸಾಗಿದ್ದ ಅಮ್ಮಾಜೇಶ್ವರಿ ಏತ ನೀರಾವರಿ ಯೋಜನೆಗೆ ಕೃಷ್ಣಾ ನದಿ ದಡದ ಝಂಜರವಾಡ ಗ್ರಾಮದ ರೈತರು ಭೂಮಿ ನೀಡಲು ಒಪ್ಪಿದ್ದು, ಶೀಘ್ರದಲ್ಲಿಯೇ ನೀರಾವರಿ ಕಾಮಗಾರಿ ಆರಂಭಿಸುವ ಮೂಲಕ ಬರುವ 20 ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳಿಸಿ ಆ ಭಾಗದ ರೈತರಿಗೆ ನೀರಾವರಿ ಸೌಲಭ್ಯ ಒದಗಿಸಲಾಗುವುದು ಎಂದು ಭರವಸೆ ನೀಡಿದರು.
ಕೆಎಂಎಫ್ ಮಾಜಿ ಜಿಲ್ಲಾ ಅಧ್ಯಕ್ಷ ಬಾಬು ಗಲಗಲಿ, ಗ್ರಾಪಂ ಅಧ್ಯಕ್ಷ ಶ್ರೀಶೈಲ ಕಾಂಬಳೆ, ರೈತ ಮುಖಂಡ ಸಿ.ಎಸ್. ನೇಮಗೌಡ, ತಾಪಂ ಅಧಿಕಾರಿ ಶಿವಾನಂದ ಕಲ್ಲಾಪುರ, ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಬಿ. ಮೋರಟಗಿ, ಕೋರಮಂಡಲ ಸಂಸ್ಥೆಯ ನಿಖಿಲಕುಮಾರ್, ಬಸವರಾಜ ದೊಡ್ಡವಾಡ, ಗೌಡಪ್ಪ ಕೋತ, ಮಲ್ಲಿಕಾರ್ಜುನ ನಾಮದಾರ, ಪಿಡಿಒ ಸುಭಾಸ ಹುಬ್ಬಳ್ಳಿ, ಆನಂದ ಗಲಗಲಿ, ಚಂದ್ರಕಾಂತ ಜಾಧವ ಸೇರಿದಂತೆ ಇತರರು ಇದ್ದರು.
;Resize=(128,128))
;Resize=(128,128))
;Resize=(128,128))
;Resize=(128,128))