ಮಾಲೂರು ಆಸ್ಪತ್ರೆ ನವೀಕರಣಕ್ಕೆ ₹40 ಕೋಟಿ ಅನುದಾನ

| Published : Mar 11 2025, 12:50 AM IST

ಸಾರಾಂಶ

ಅತಿ ಹೆಚ್ಚು ಕೈಗಾರಿಕೆಗಳನ್ನು ಹೊಂದಿರುವ ಮಾಲೂರಿನಲ್ಲಿ ಜನಸಂಖ್ಯೆ ಹೆಚ್ಚಾಗಿದ್ದು, ಈಗಿರುವ ಆಸ್ಪತ್ರೆಗೆ ಭೇಟಿ ನೀಡುವ ರೋಗಿಗಳಿಗೆ ಅವಶ್ಯಕತೆಗೆ ಅನುಗುಣವಾಗಿ ಸೌಲಭ್ಯ ಕಲ್ಪಿಸಲು ಸಾಧ್ಯವಾಗುತ್ತಿಲ್ಲ. ಈ ಬಗ್ಗೆ ಮಾಲೂರಿಗೆ ಆರೋಗ್ಯ ಸಚಿವರು ಭೇಟಿ ಮಾಡಿದಾಗ ಶಾಸಕ ನಂಜೇಗೌಡ ಅ‍ವರು ಆಸ್ಪತ್ರೆ ಮೇಲ್ದರ್ಜೆಗೇರುವ ಅಗತ್ಯ ಕುರಿತು ಸಚಿವರಿಗೆ ಮನವರಿಕೆ ಮಾಡಿದ್ದರು

ಕನ್ನಡಪ್ರಭ ವಾರ್ತೆ ಮಾಲೂರು

ಮಾಲೂರಿಗೆ ನೂತನ ಆಸ್ಪತ್ರೆಯ ಅವಶ್ಯಕತೆ ಕುರಿತ ನಮ್ಮ ಮನವಿಗೆ ಪುರಸ್ಕರಿಸಿ ಈ ಬಾರಿ ಬಜೆಟ್‌ನಲ್ಲಿ ಮಾಲೂರು ಆಸ್ಪತ್ರೆಯ ನವೀಕರಣಕ್ಕಾಗಿ 40 ಕೋಟಿ ರು.ಗಳನ್ನು ಮಂಜೂರು ಮಾಡಿ ಘೋಷಣೆ ಮಾಡಿಸಿದ ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌ ಅವರನ್ನು ವಿಧಾನ ಸೌಧದ ಅವರ ಕಚೇರಿಯಲ್ಲಿ ಭೇಟಿ ಮಾಡಿ ಅಭಿನಂದಿಸಿದ್ದಾಗಿ ಶಾಸಕ ಕೆ.ವೈ.ನಂಜೇಗೌಡ ತಿಳಿಸಿದರು. ಅತಿ ಹೆಚ್ಚು ಕೈಗಾರಿಕೆಗಳನ್ನು ಹೊಂದಿರುವ ಮಾಲೂರಿನಲ್ಲಿ ಜನಸಂಖ್ಯೆ ಹೆಚ್ಚಾಗಿದ್ದು, ಈಗಿರುವ ಆಸ್ಪತ್ರೆಗೆ ಭೇಟಿ ನೀಡುವ ರೋಗಿಗಳಿಗೆ ಅವಶ್ಯಕತೆಗೆ ಅನುಗುಣವಾಗಿ ಸೌಲಭ್ಯ ಕಲ್ಪಿಸಲು ಸಾಧ್ಯವಾಗುತ್ತಿಲ್ಲ. ಈ ಬಗ್ಗೆ ಮಾಲೂರಿಗೆ ಆರೋಗ್ಯ ಸಚಿವರು ಭೇಟಿ ಮಾಡಿದಾಗ ಇಲ್ಲಿಯ ಆಸ್ಪತ್ರೆಯ ಪರಿಸ್ಥಿತಿ ಬಗ್ಗೆ ತಾವು ವಿವರಿಸಿದ್ದಾಗಿ ಹೇಳಿದರು.

ಆಸ್ಪತ್ರೆ ನವೀಕರಣಕ್ಕೆ ₹40 ಕೋಟಿ

ನಮ್ಮ ಮನವಿಗೆ ಸ್ಪಂದಿಸಿ ಸ್ಥಳ ಪರಿಶೀಲನೆ ನಡೆಸಿದ ಆರೋಗ್ಯ ಸಚಿವರು, ಈ ಬಾರಿ ಬಜೆಟ್‌ನಲ್ಲಿ ಪ್ರಸ್ತಾಪಿಸುವುದಾಗಿ ಭರವಸೆ ನೀಡಿದ್ದರು. ಅದರಂತೆ ಬಜೆಟ್‌ ನಲ್ಲಿ ಆಸ್ಪತ್ರೆ ನವೀಕರಣಕ್ಕೆ 40 ಕೋಟಿ ನೀಡಿರುವುದು ಸಂತಸ ತಂದಿದೆ. ಅವರನ್ನು ಕೃತಜ್ಞೆತೆಯಿಂದ ಅಭಿನಂದಿಸಿದ್ದಾಗಿ ಶಾಸಕರು ಹೇಳಿದರು.

ಅಭಿನಂದನೆ ಸ್ವೀಕರಿಸಿ ಮಾತನಾಡಿದ ಆರೋಗ್ಯ ಸಚಿವರು, ಹಿಡಿದ ಪಟ್ಟನ್ನು ಬಿಡದೆ ಸಾಧಿಸುವ ನಂಜೇಗೌಡ ರಂತಹ ಶಾಸಕರು ಮಾಲೂರಿಗೆ ಸಿಕ್ಕಿರುವುದು ಕ್ಷೇತ್ರದ ಜನತೆ ಮಾಡಿರುವ ಪುಣ್ಯ.ಆದರೆ ಅವರ ಛಲ-ಪಟ್ಟು ಸಚಿವರಾದ ನಮಗೆ ಕಷ್ಟದ ಮಾತು ಎಂದಿದ್ದಾರೆ. ಈ ಸಂದರ್ಭದಲ್ಲಿ ಮಾಲೂರಿನ ಕಾಂಗ್ರೆಸ್‌ ಮುಖಂಡರಾದ ನಾಗರಾಜ್‌, ಹನುಮಂತಯ್ಯ ಇದ್ದರು.