ಸಾರಾಂಶ
ಕನ್ನಡಪ್ರಭ ವಾರ್ತೆ ಮಂಡ್ಯ
ಕಲಿಕೆಯಿಂದ ಬದಲಾವಣೆ ಸಾಕ್ಷರತಾ ಕಾರ್ಯಕ್ರಮದಡಿ ಅಕ್ಷರಾಭ್ಯಾಸ ಮಾಡಿದ್ದ ಜಿಲ್ಲಾ ಕಾರಾಗೃಹದ 40 ಕೈದಿಗಳು ಭಾನುವಾರ ಸಾಕ್ಷರತಾ ಪರೀಕ್ಷೆ ಬರೆದರು.ಕಾರಾಗೃಹ ಕೇಂದ್ರದಲ್ಲಿ ಒಟ್ಟು 40 ಮಂದಿ ಕೈದಿಗಳ ಪೈಕಿ ಒಟ್ಟು 37 ಪುರುಷರು ಹಾಗೂ 3 ಮಹಿಳೆಯರು ಪರೀಕ್ಷೆ ಬರೆದರು. ವಿವಿಧ ಕಾರಣಗಳಿಗಾಗಿ ಕಾರಾಗೃಹ ಸೇರಿರುವ ಅನಕ್ಷರಸ್ಥ ಕೈದಿಗಳು, ಕಾರಾಗೃಹದಲ್ಲೇ ಕಳೆದ ಒಂದು ವರ್ಷದಿಂದ ಅಕ್ಷರಾಭ್ಯಾಸ ಮಾಡಿದ್ದರು.ಕೈದಿಗಳು ಬರೆದ ಪರೀಕ್ಷೆಯನ್ನು ವೀಕ್ಷಿಸಿದ ಜಿಲ್ಲಾ ಪಂಚಾಯ್ತಿ ಸಿಇಒ ಕೆ.ಆರ್.ನಂದಿನಿ ಮಾತನಾಡಿ, ಕೈದಿಗಳಿಗೆ ಶಿಕ್ಷಣದ ಮಹತ್ವದ ಬಗ್ಗೆ ಅರಿವು ಮೂಡಿಸಬೇಕು. ಅಲ್ಲದೇ, ಕೌಶಲ್ಯಾಭಿವೃದ್ಧಿ ಚಟುವಟಿಕೆಗಳ ಕುರಿತು ತರಬೇತಿ ನೀಡಿ ಅವರಲ್ಲಿ ಕೌಶಲ್ಯವನ್ನು ಹೆಚ್ಚಿಸುವ ಮೂಲಕ ಸಮಾಜದ ಮುಖ್ಯವಾಹಿನಿಯಲ್ಲಿ ಗೌರವಯುತವಾಗಿ ಬದುಕಲು ಅವಕಾಶ ಕಲ್ಪಿಸಬೇಕು ಎಂದರು.
ಕಾರಾಗೃಹದಲ್ಲಿ ಮಹಿಳೆಯರಿಗೆ ಒದಗಿಸಿರುವ ಸೌಲಭ್ಯಗಳು ಹಾಗೂ ಕಾರ್ಖಾನೆ ವಿಭಾಗ, ಗ್ರಂಥಾಲಯ, ಕುಡಿಯುವ ನೀರು, ಶೌಚಾಲಯ ಸೇರಿದಂತೆ ಇನ್ನಿತರೆ ಮೂಲ ಸೌಕರ್ಯಗಳ ಬಗ್ಗೆ ಪರಿಶೀಲಿಸಿದರು.ಜಿಲ್ಲಾ ಕಾರಾಗೃಹದ ಅಧೀಕ್ಷಕ ಟಿ.ಕೆ.ಲೋಕೇಶ್ ಮಾತನಾಡಿ, ನಿತ್ಯ 2 ಗಂಟೆ ವಿದ್ಯಾಭ್ಯಾಸ ನಡೆಸಲು ಅವಕಾಶ ಕಲ್ಪಿಸಲಾಗಿತ್ತು. ವ್ಯಾಸಂಗಕ್ಕೆ ಅನುಕೂಲ ಆಗುವಂತೆ ಕಲಿಕಾ ಸಾಮಗ್ರಿ ವಿತರಿಸಲಾಗಿದೆ. ಬಾಳಿಗೆ ಬೆಳಕು ಪುಸ್ತಕದಲ್ಲಿ ಪಠ್ಯವನ್ನು ಬೋಧಿಸಲಾಗಿದೆ. ಬರವಣಿಗೆ, ಓದು ಮತ್ತು ಸಾಮಾನ್ಯ ಲೆಕ್ಕಾಚಾರ ಹಾಗೂ ಸಾಮಾನ್ಯ ಜ್ಞಾನ ಕಲಿಸುವ ಉದ್ದೇಶ ಈ ಕಾರ್ಯಕ್ರಮದ್ದಾಗಿದೆ ಎಂದು ಮಾಹಿತಿ ನೀಡಿದರು.
ಅಲ್ಲದೇ, ಅಣಬೆ ಬೇಸಾಯ, ಆಹಾರ ಸಿದ್ಧಪಡಿಸುವಿಕೆ, ಪ್ಲಬಿಂಗ್, ಮೋಟಾರು ರಿಪೇರಿ ಸೇರಿದಂತೆ ಕೈದಿಗಳ ಆಸಕ್ತಿ ಆಧರಿಸಿ ತರಬೇತಿಯನ್ನೂ ನೀಡಲಾಗುತ್ತದೆ. ನಮ್ಮ ಗ್ರಂಥಾಲಯದಲ್ಲಿ 18 ಸಾವಿರ ಪುಸ್ತಕಗಳಿವೆ. ಪ್ರತಿ ದಿನ 13 ದಿನಪತ್ರಿಕೆಗಳು, 5 ವಾರ ಪತ್ರಿಕೆಗಳು ಹಾಗೂ ಮಾಸ ಪತ್ರಿಕೆಗಳನ್ನು ಕೈದಿಗಳ ಅನುಕೂಲಕ್ಕಾಗಿ ತರಿಸಲಾಗುತ್ತಿದೆ. ಗ್ರಂಥಾಲಯದಲ್ಲಿ ಟೇಬಲ್, ಕುರ್ಚಿ, ಫ್ಯಾನ್ ಸೇರಿದಂತೆ ಇತರೆ ಸವಲತ್ತುಗಳನ್ನು ಕಲ್ಪಿಸಲಾಗಿದೆ ಎಂದರು.ಸಾಕ್ಷರತಾ ಪರೀಕ್ಷೆಯ ಉತ್ತರ ಪತ್ರಿಕೆಗಳ ಮೌಲ್ಯಮಾಪನವನ್ನು ಮಂಡ್ಯ ದಕ್ಷಿಣ ವಲಯ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯಿಂದ ಮಾಡಿಸಲಾಗುವುದು. ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ನವ ಸಾಕ್ಷರ ಪ್ರಮಾಣಪತ್ರವನ್ನು ನೀಡಲಾಗುವುದು ಎಂದರು.
ನಾನು ಕಲಿಕೆ ಆರಂಭಿಸಿದಾಗ ನನ್ನ ಮಕ್ಕಳು, ಮೊಮ್ಮಕ್ಕಳು ಕಲಿಯುವ ವಯಸ್ಸಿನಲ್ಲಿ ಪೆನ್ನು, ಪುಸ್ತಕ ಹಿಡಿಯಬೇಕಾ, ಈ ವಯಸ್ಸಿನಲ್ಲಿ ನನಗೆ ಓದು ಒಲಿಯುತ್ತಾ, ಕಲಿತು ಏನ್ಮಾಡಬೇಕಿತ್ತು ಎನ್ನುವ ಮನೋಭಾವ ಇತ್ತು. ಆದರೆ, ಶಿವಲಿಂಗಯ್ಯ ಮೇಷ್ಟ್ರು ಓದು ಏಕೆ ಬೇಕು ಎನ್ನುವುದನ್ನು ಅರ್ಥ ಮಾಡಿಸಿದ್ರು. ನಂತರ ಕಲಿಕೆ ಆರಂಭವಾಗಿ ನಾನೀಗ ನಾಲ್ಕು ಅಕ್ಷರ ಕಲ್ತೀವ್ನಿ. ಓದ್ತೀನಿ ಎಂದು ಸಿಇಒ ಅವರಿಗೆ ಹೇಳುವಾಗ ಕೈದಿಯೊಬ್ಬರ ಮುಖದಲ್ಲಿ ಮಂದಹಾಸ, ಸಾರ್ಥಕ ಭಾವನೆ ಮೂಡಿತ್ತು.ನಮ್ಗೆ ಅಕ್ಷರ ಹೇಳ್ಕೊಟ್ಟಿರೋ ಶಿವಲಿಂಗಯ್ಯ ಮೇಷ್ಟ್ರುಗೆ ನಾವೆಲ್ಲಾ ಸೇರಿ ಶಿಕ್ಷಕರ ದಿನಾಚರಣೆ ಮಾಡುವ ಸೆ.5 ರಂದು ಸನ್ಮಾನಿಸಿ ಗೌರವಿಸುವಂತೆ ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಕೋರಲಾಗುವುದು ಎಂದು ಕೃತಜ್ಞತಾ ಭಾವದಿಂದ ಅಲ್ಲಿದ್ದ ಕೈದಿಗಳು ಹೇಳಿದರು.
ಜಿಲ್ಲಾ ಕಾರಾಗೃಹದಲ್ಲಿ ಶಿಕ್ಷಕ ಶಿವಲಿಂಗಯ್ಯ ಅವರ ಅವಿರತ ಪ್ರಯತ್ನದ ಫಲವಾಗಿ ಈವರೆವಿಗೂ ಸುಮಾರು 126 ಜನ ಕೈದಿಗಳು ಅಕ್ಷರ ಕಲಿತಿದ್ದಾರೆ. ಇಲ್ಲಿ ಕರ್ತವ್ಯಕ್ಕೆ ಹಾಜರಾಗುವಾಗ ಹಲವು ಸಹೋದ್ಯೋಗಿಗಳು ಕೈದಿಗಳಿಗೆ ಪಾಠ ಕಲಿಸಲು ಹೋಗುತ್ತಿದ್ದಾರೆ ಎಂದು ಹೀಯಾಳಿಸಿದ್ದರು. ಆದರೆ, ಇದೆಲ್ಲವನ್ನೂ ಸಕರಾತ್ಮಕವಾಗಿ ತೆಗೆದುಕೊಂಡು ಪಾಠ ಕಲಿಸಿದ ಶಿವಲಿಂಗಯ್ಯ ಅವರಿಗೂ ಸಾರ್ಥಕ ಭಾವನೆ ಕಂಡು ಬಂತು.