ಬಾರ್ ಆ್ಯಂಡ್ ರೆಸ್ಟೋರೆಂಟ್‌ಗೆ ಪರವಾನಗಿ ನೀಡುವುದಕ್ಕೆ 40 ಲಕ್ಷ ರು. ಲಂಚಕ್ಕೆ ಬೇಡಿಕೆ

| Published : Nov 29 2024, 01:04 AM IST / Updated: Nov 29 2024, 11:50 AM IST

ಬಾರ್ ಆ್ಯಂಡ್ ರೆಸ್ಟೋರೆಂಟ್‌ಗೆ ಪರವಾನಗಿ ನೀಡುವುದಕ್ಕೆ 40 ಲಕ್ಷ ರು. ಲಂಚಕ್ಕೆ ಬೇಡಿಕೆ
Share this Article
  • FB
  • TW
  • Linkdin
  • Email

ಸಾರಾಂಶ

ಮಂಡ್ಯ ಅಬಕಾರಿ ಇಲಾಖೆ ಜಿಲ್ಲಾ ಅಧಿಕಾರಿ ರವಿಶಂಕರ್ ಹಾಗೂ ಇನ್ಸ್‌ಪೆಕ್ಟರ್ ಶಿವಶಂಕರ್ ವಿರುದ್ಧ ದೂರು ಸಲ್ಲಿಸಿರುವ ಪುನೀತ್ ಅವರು ದೂರಿನ ಜೊತೆಗೆ ಲಂಚಕ್ಕೆ ಬೇಡಿಕೆ ಇಟ್ಟಿದ್ದಾರೆನ್ನಲಾದ ಆಡಿಯೋ ಮತ್ತು ವಿಡಿಯೋ ಸಾಕ್ಷ್ಯವನ್ನು ನೀಡಿದ್ದಾರೆ. 

 ಮಂಡ್ಯ : ಬಾರ್ ಆ್ಯಂಡ್ ರೆಸ್ಟೋರೆಂಟ್‌ಗೆ ಪರವಾನಗಿ ನೀಡುವುದಕ್ಕೆ ಜಿಲ್ಲೆಯ ಅಬಕಾರಿ ಅಧಿಕಾರಿಗಳು ಲಂಚಕ್ಕೆ ಬೇಡಿಕೆ ಇಟ್ಟಿದ್ದಾರೆಂದು ಆರೋಪಿಸಿ ಕಾಂಗ್ರೆಸ್ ಕಾರ್ಯಕರ್ತ ಪುನೀತ್ ಎಂಬುವರು ಮಂಡ್ಯ ಲೋಕಾಯುಕ್ತರಿಗೆ ಸಾಕ್ಷಿ ಸಹಿತ ದೂರು ನೀಡಿರುವುದು ಕುತೂಹಲ ಕೆರಳಿಸಿದೆ.

ಮಂಡ್ಯ ಅಬಕಾರಿ ಇಲಾಖೆ ಜಿಲ್ಲಾ ಅಧಿಕಾರಿ ರವಿಶಂಕರ್ ಹಾಗೂ ಇನ್ಸ್‌ಪೆಕ್ಟರ್ ಶಿವಶಂಕರ್ ವಿರುದ್ಧ ದೂರು ಸಲ್ಲಿಸಿರುವ ಪುನೀತ್ ಅವರು ದೂರಿನ ಜೊತೆಗೆ ಲಂಚಕ್ಕೆ ಬೇಡಿಕೆ ಇಟ್ಟಿದ್ದಾರೆನ್ನಲಾದ ಆಡಿಯೋ ಮತ್ತು ವಿಡಿಯೋ ಸಾಕ್ಷ್ಯವನ್ನು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಲೋಕಾಯುಕ್ತ ಅಧಿಕಾರಿಗಳು ತನಿಖೆ ಕೈಗೊಂಡಿದ್ದಾರೆ.

ಅಷ್ಟಕ್ಕೂ ನಡೆದಿದ್ದೇನು?:

ಮದ್ದೂರು ತಾಲೂಕು ಚಂದೂಪುರ ಗ್ರಾಮದಲ್ಲಿ ಕಾಂಗ್ರೆಸ್ ಕಾರ್ಯಕರ್ತ ಪುನೀತ್ ಸಿಎಲ್-  7 ಪರವಾನಗಿ ಪಡೆದು ಬಾರ್ ಆ್ಯಂಡ್ ರೆಸ್ಟೋರೆಂಟ್ ತೆರೆಯಲು ತಮ್ಮ ತಾಯಿ ಲಕ್ಷ್ಮಮ್ಮ ಅವರ ಹೆಸರಿನಲ್ಲಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಿದ್ದರು. ಆದರೆ, ಅಬಕಾರಿ ಇಲಾಖೆ ಅಧಿಕಾರಿಗಳು ಅರ್ಜಿಯನ್ನು ತಿರಸ್ಕರಿಸಿದ್ದರು. ಅನಂತರ ಖುದ್ದಾಗಿ ಇಲಾಖೆಗೆ ತೆರಳಿ ಅರ್ಜಿ ಸಲ್ಲಿಕೆ ಮಾಡಿದ ವೇಳೆ 40 ಲಕ್ಷ ರು. ಲಂಚ ನೀಡುವಂತೆ ಅಧಿಕಾರಿಗಳು ಬೇಡಿಕೆ ಇಟ್ಟರು. ಆನಂತರ 20  ಲಕ್ಷ ರು. ಹಣವನ್ನಾದರೂ ನೀಡಬೇಕು ಎಂದು ಅಧಿಕಾರಿಗಳು ಒತ್ತಡ ಹಾಕಿದರು. ಇದರಿಂದ ಬೇಸತ್ತು ಲೋಕಾಯುಕ್ತಕ್ಕೆ ದೂರು ನೀಡಿದ್ದೇನೆ ನನ್ನ ದೂರಿನ ಬಗ್ಗೆ ತನಿಖೆ ನಡೆಸಿ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಪುನೀತ್ ಒತ್ತಾಯಿಸಿದ್ದಾರೆ.

ಡಿ.2 ರವರೆಗೆ ಅಬಕಾರಿ ಡೀಸಿ ರಜೆ

ಲೋಕಾಯುಕ್ತದಲ್ಲಿ ದೂರು ದಾಖಲಾಗುತ್ತಿದ್ದಂತೆ ಅಬಕಾರಿ ಜಿಲ್ಲಾ ಅಧಿಕಾರಿ ರವಿಶಂಕರ್ ಡಿಸೆಂಬರ್ 2 ನೇ ತಾರೀಖಿನವರೆಗೆ ರಜೆ ಹಾಕಿ ತೆರಳಿದ್ದಾರೆ. ಲಂಚಕ್ಕೆ ಬೇಡಿಕೆ ಇಟ್ಟಿರುವ ಕುರಿತಂತೆ ಪ್ರತಿಕ್ರಿಯೆ ನೀಡುವುದಕ್ಕೂ ರವಿಶಂಕರ್ ಫೋನ್ ಕರೆ ಸ್ವೀಕರಿಸುತ್ತಿಲ್ಲ. ದೂರಿಗೆ ಹೆದರಿ ಭಯದಿಂದ ರಜೆ ಹಾಕಿ ತೆರಳಿರಬಹುದೆಂಬ ಅನುಮಾನಕ್ಕೆ ರವಿಶಂಕರ್ ನಡೆ ಕಾರಣವಾಗಿದೆ.