ನೂತನ ತಾಲೂಕಾಡಳಿತ ಕಟ್ಟಡಕ್ಕೆ ₹ 40 ಕೋಟಿ

| Published : Apr 05 2024, 01:01 AM IST

ಸಾರಾಂಶ

ಶಾಸಕ ಹಾಗೂ ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ ಸುಮಾರು ₹40 ಕೋಟಿ ವೆಚ್ಚದ ಪ್ರಸ್ತಾವನೆಯನ್ನು ರಾಜ್ಯ ಸರ್ಕಾರಕ್ಕೆ ಸಲ್ಲಿಸಿದ್ದಾರೆ.

ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ

ಬುದ್ಧ, ಬಸವ, ಅಂಬೇಡ್ಕರ್ ಭವನ ನಿರ್ಮಾಣಕ್ಕೂ ಸಹ ₹15 ಕೋಟಿ ಪ್ರಸ್ತಾವನೆಕನ್ನಡಪ್ರಭ ವಾರ್ತೆ ಕುಕನೂರು

ನೂತನ ತಾಲೂಕು ಕುಕನೂರಿನಲ್ಲಿ ತಹಶೀಲ್ದಾರ್ ಕಾರ್ಯಾಲಯ, ಸಿವಿಲ್ ನ್ಯಾಯಾಧೀಶರ ಮತ್ತು ಪ್ರಥಮ ದರ್ಜೆ ನ್ಯಾಯಿಕ ದಂಡಾಧಿಕಾರಿಗಳ ನ್ಯಾಯಾಲಯಕ್ಕೆ ಕಟ್ಟಡ ನಿರ್ಮಾಣಕ್ಕಾಗಿ ಧಾರ್ಮಿಕ ದತ್ತಿ ಇಲಾಖೆಗೆ ಒಳಪಟ್ಟ 26.50 ಎಕರೆ ಜಮೀನು ಗುತ್ತಿಗೆ ಆಧಾರದ ಮೇಲೆ ಮಂಜೂರಾಗಿದೆ. ಈ ಜಾಗದಲ್ಲಿ ಕಟ್ಟಡ ನಿರ್ಮಿಸಲು ಶಾಸಕ ಹಾಗೂ ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ ಸುಮಾರು ₹40 ಕೋಟಿ ವೆಚ್ಚದ ಪ್ರಸ್ತಾವನೆಯನ್ನು ರಾಜ್ಯ ಸರ್ಕಾರಕ್ಕೆ ಸಲ್ಲಿಸಿದ್ದಾರೆ.

ಈ ಬಗ್ಗೆ ಮಾಹಿತಿ ನೀಡಿರುವ ಅವರು, ಜಿಲ್ಲಾಧಿಕಾರಿಗಳ ಪ್ರಸ್ತಾವನೆ ಅನ್ವಯ ಧಾರ್ಮಿಕ ಇಲಾಖೆಯ ಆಯುಕ್ತರು, ಕುಕನೂರು ಗ್ರಾಮದ ಶ್ರೀ ಗುದ್ನೇಶ್ವರ ದೇವಸ್ಥಾನಕ್ಕೆ ಸೇರಿದ 26.30 ಎಕರೆ ಜಮೀನನನ್ನು ಧಾರ್ಮಿಕ ದತ್ತಿ ಇಲಾಖೆಯಿಂದ ಮಾಸಿಕ ಸಾವಿರ ರು. ಬಾಡಿಗೆ ನಿಗದಿ ಪಡಿಸಿ 30 ವರ್ಷಗಳ ಗುತ್ತಿಗೆ ನೀಡಲು ಅನುಮತಿ ನೀಡಿದ್ದಾರೆ. ಈ ಹಿನ್ನೆಲೆ ನೂತನವಾಗಿ ತಾಲೂಕಾಡಳಿತ ಕಟ್ಟಡ ನಿರ್ಮಿಸಲು ಸರ್ಕಾರಕ್ಕೆ ಅನುದಾನಕ್ಕಾಗಿ ಪ್ರಸ್ತಾವನೆ ಸಲ್ಲಿಸಲಾಗಿದೆ. ಈಗಾಗಲೇ ಕಟ್ಟಡದ ಮಾದರಿ ನೀಲನಕ್ಷೆ ಸಹ ತಯಾರಿಸಲಾಗಿದೆ. ಒಂದೇ ಸೂರಿನಲ್ಲಿ ತಾಲೂಕಾಡಳಿತ ಸೇರಿ ಎಲ್ಲ ಇಲಾಖೆಯ ಕಚೇರಿಗಳನ್ನೊಳಗೊಂಡ ಕಟ್ಟಡ ನಿರ್ಮಿಸಲು ಸುಮಾರು ₹40 ಕೋಟಿ ಪ್ರಸ್ತಾವನೆ ಸರ್ಕಾರಕ್ಕೆ ಸಲ್ಲಿಸಲಾಗಿದೆ. ಲೋಕಸಭಾ ಚುನಾವಣೆ ನೀತಿ ಸಂಹಿತೆ ಮುಗಿದ ನಂತರ ಸರ್ಕಾರದಿಂದ 20 ಕೋಟಿ ಹಾಗೂ ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಯಿಂದ 20 ಕೋಟಿ ಅನುದಾನವನ್ನು ಸಹ ಮಂಜೂರು ಮಾಡಿಸಲಾಗುವುದು ಎಂದು ಬಸವರಾಜ ರಾಯರಡ್ಡಿ ತಿಳಿಸಿದ್ದಾರೆ.

ಇದಲ್ಲದೆ ಬುದ್ಧ, ಬಸವ, ಅಂಬೇಡ್ಕರ್ ಭವನ ನಿರ್ಮಾಣಕ್ಕೂ ಸಹ ಸುಮಾರು ₹15 ಕೋಟಿ ಪ್ರಸ್ತಾವನೆ ಸಲ್ಲಿಸಿದ್ದು, 9 ಕೋಟಿ ರಾಜ್ಯ ಸರ್ಕಾರದಿಂದ, 6 ಕೋಟಿ ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಯಿಂದ ಮಂಜೂರು ಮಾಡಿಸಲಾಗುವುದು ಎಂದು ಶಾಸಕರು ಮಾಹಿತಿ ನೀಡಿದ್ದಾರೆ.

ತಾಲೂಕಾಡಳಿತ ಸೌಧ, ಬುದ್ಧ, ಬಸವ, ಅಂಬೇಡ್ಕರ್ ಭವನಕ್ಕೆ ಗುದ್ನೇಪ್ಪನಮಠದ ಜಮೀನು ಗುತ್ತಿಗೆ ಆಧಾರದ ಮೇಲೆ ಮಂಜೂರಾಗಿದ್ದು, ನೂತನ ಕಟ್ಟಡಗಳ ನಿರ್ಮಾಣಕ್ಕೆ ಈಗಾಗಲೇ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದೇನೆ. ಜೂನ್, ಜುಲೈನಲ್ಲಿ ಅನುದಾನ ಬಿಡುಗಡೆ ಮಾಡಿಸಿ ಇಡೀ ರಾಜ್ಯದಲ್ಲಿಯೇ ಮಾದರಿ ತಾಲೂಕಾಡಳಿತ ಕಚೇರಿ ಕಟ್ಟಡ ನಿರ್ಮಿಸಲು ಶ್ರಮಿಸುತ್ತೇನೆ ಎಂದು ತಿಳಿಸಿದ್ದಾರೆ.