ಮಂಡ್ಯ ನಗರ ವ್ಯಾಪ್ತಿಯಲ್ಲಿ ಶೇ.೪೦ರಷ್ಟು ತೆರಿಗೆ ಪಾವತಿಯಾಗಿಲ್ಲ: ನಾಗೇಶ್

| Published : Jan 21 2025, 12:30 AM IST

ಸಾರಾಂಶ

ಪ್ರಸಕ್ತ ಸಾಲಿನಲ್ಲಿ ಮಂಡ್ಯ ನಗರ ವ್ಯಾಪ್ತಿಯೊಳಗೆ ಶೇ.೪೦ರಷ್ಟು ತೆರಿಗೆ ಪಾವತಿಯಾಗದೆ ಹಣಕಾಸಿನ ಕೊರತೆ ತೀವ್ರವಾಗಿ ಕಾಡುತ್ತಿದ್ದು, ನಗರದ ಅಭಿವೃದ್ಧಿ ಕಾರ್ಯಗಳಿಗೆ ಹಿನ್ನಡೆ ಉಂಟುಮಾಡಿದೆ. ಆಸ್ತಿ ತೆರಿಗೆ ಪಾವತಿಸದವರಿಗೆ ಫೆಬ್ರವರಿಯಿಂದ ನೋಟಿಸ್ ಜಾರಿಗೊಳಿಸಲಾಗುತ್ತಿದೆ. ಸಕಾಲದಲ್ಲಿ ಜನರು ಆಸ್ತಿ ತೆರಿಗೆ ಪಾವತಿಸಿದರೆ ಅಭಿವೃದ್ಧಿಗೆ ವೇಗ ನೀಡುವುದಕ್ಕೆ ಸಾಧ್ಯವಾಗುತ್ತದೆ.

ಕನ್ನಡಪ್ರಭ ವಾರ್ತೆ ಮಂಡ್ಯ

ಪ್ರಸಕ್ತ ಸಾಲಿನಲ್ಲಿ ನಗರ ವ್ಯಾಪ್ತಿಯೊಳಗೆ ಶೇ.೪೦ರಷ್ಟು ತೆರಿಗೆ ಪಾವತಿಯಾಗದೆ ಹಣಕಾಸಿನ ಕೊರತೆ ತೀವ್ರವಾಗಿ ಕಾಡುತ್ತಿದ್ದು, ನಗರದ ಅಭಿವೃದ್ಧಿ ಕಾರ್ಯಗಳಿಗೆ ಹಿನ್ನಡೆ ಉಂಟುಮಾಡಿದೆ ಎಂದು ನಗರಸಭೆ ಅಧ್ಯಕ್ಷ ಎಂ.ವಿ.ಪ್ರಕಾಶ್ (ನಾಗೇಶ್) ಬೇಸರದಿಂದ ನುಡಿದರು.

ನಗರಸಭೆ ಆಯವ್ಯಯ ಸಂಬಂಧ ನಡೆದ ಪೂರ್ವಭಾವಿ ಸಭೆಯಲ್ಲಿ ಸಾರ್ವಜನಿಕರಿಂದ ಅಭಿಪ್ರಾಯ, ದೂರುಗಳು, ಅಹವಾಲು ಸ್ವೀಕರಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.

ಈ ಸಾಲಿನಲ್ಲಿ ಕೇವಲ ಶೇ.೬೦ರಷ್ಟು ತೆರಿಗೆ ಸಂಗ್ರಹ ಮಾತ್ರ ಆಗಿದೆ. ವಾಣಿಜ್ಯ ತೆರಿಗೆ ಪಾವತಿಯಲ್ಲಿ ಸಮಸ್ಯೆ ಉಂಟಾಗಿಲ್ಲ. ವಸತಿ, ನಿವೇಶನಗಳನ್ನು ಹೊಂದಿರುವವರು ತೆರಿಗೆ ಪಾವತಿಗೆ ಹಿಂದೇಟು ಹಾಕುತ್ತಿದ್ದಾರೆ. ಸಾರ್ವಜನಿಕರ ತೆರಿಗೆ ಪಾವತಿಗೆ ಅನುಕೂಲವಾಗುವಂತೆ ಏಪ್ರಿಲ್ ತಿಂಗಳಲ್ಲಿ ತೆರಿಗೆ ಪಾವತಿಸುವವರಿಗೆ ಶೇ.೫ರಷ್ಟು ರಿಯಾಯ್ತಿ ಮಾಡಿಕೊಡಲಾಗುತ್ತಿದೆ. ಆದರೂ ಇನ್ನೂ ಶೇ.೪೦ರಷ್ಟು ತೆರಿಗೆ ಬಾಕಿ ಉಳಿದಿದೆ. ಇದರಿಂದ ನಗರ ವ್ಯಾಪ್ತಿಯಲ್ಲಿ ಅಭಿವೃದ್ಧಿ ಚಟುವಟಿಕೆ ಕೈಗೊಳ್ಳಲು, ರಸ್ತೆ, ಚರಂಡಿ, ಉದ್ಯಾನವನ ಸೇರಿದಂತೆ ಇನ್ನಿತರ ಕಾಮಗಾರಿಗಳಿಗೆ ಹಣಕಾಸಿನ ಕೊರತೆ ಎದುರಾಗಿದೆ ಎಂದರು.

ಆಸ್ತಿ ತೆರಿಗೆ ಪಾವತಿಸದವರಿಗೆ ಫೆಬ್ರವರಿಯಿಂದ ನೋಟಿಸ್ ಜಾರಿಗೊಳಿಸಲಾಗುತ್ತಿದೆ. ಸಕಾಲದಲ್ಲಿ ಜನರು ಆಸ್ತಿ ತೆರಿಗೆ ಪಾವತಿಸಿದರೆ ಜನರ ಸಮಸ್ಯೆಗಳಿಗೆ ಶೀಘ್ರ ಸ್ಪಂದಿಸಲು ಹಾಗೂ ನಗರದ ಅಭಿವೃದ್ಧಿಗೆ ವೇಗ ನೀಡುವುದಕ್ಕೆ ಸಾಧ್ಯವಾಗುತ್ತದೆ ಎಂದರು.

ಬೀದಿ ನಾಯಿಗಳ ಹಾವಳಿ:

ನಗರದಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿರುವ ಬಗ್ಗೆ ಸಾರ್ವಜನಿಕರಿಂದ ದೂರುಗಳು ಕೇಳಿಬಂದಿದ್ದು, ಈಗಾಗಲೇ ಹೆಚ್ಚುತ್ತಿರುವ ಬೀದಿ ನಾಯಿಗಳ ನಿಯಂತ್ರಣಕ್ಕೆ ಸಂತಾನ ಶಕ್ತಿ ಹರಣ ಶಸ್ತ್ರಚಿಕಿತ್ಸೆ ನಡೆಸಲಾಗಿದೆ. ಆದರೂ ಬೀದಿ ನಾಯಿಗಳ ನಿಯಂತ್ರಣ ಸಾಧ್ಯವಾಗಿಲ್ಲ. ಸಂತಾನ ಶಕ್ತಿ ಹರಣ ಶಸ್ತ್ರಚಿಕಿತ್ಸೆಯನ್ನು ಹೊರತುಪಡಿಸಿದರೆ ಬೇರಾವುದೇ ಕ್ರಮ ಅನುಸರಿಸಿದರೂ ಕಾನೂನಿನ ಸಂಕಷ್ಟಕ್ಕೆ ಗುರಿಯಾಗಬೇಕಾಗುತ್ತದೆ. ಆ ವ್ಯವಸ್ಥೆಯಡಿಯಲ್ಲೇ ನಾಯಿಗಳನ್ನು ನಿಯಂತ್ರಣದಲ್ಲಿಡುವುದು ಅನಿವಾರ್ಯವಾಗಿದೆ ಎಂದರು.

೧೯ ಸ್ಲಂಗಳಿಗೆ ಹಕ್ಕುಪತ್ರ ಕುರಿತು ಚರ್ಚೆ:

ನಗರದಲ್ಲಿರುವ ೨೪ ಸ್ಲಂಗಳ ಪೈಕಿ ೫ ಸ್ಲಂ ನಿವಾಸಿಗಳಿಗೆ ಈಗಾಗಲೇ ಹಕ್ಕುಪತ್ರ ವಿತರಿಸಲಾಗಿದೆ. ಉಳಿದ ೧೯ ಸ್ಲಂಗಳಿಗೆ ಹಕ್ಕುಪತ್ರ ನೀಡುವ ಕುರಿತಂತೆ ಕೊಳಚೆ ನಿರ್ಮೂಲನಾ ಮಂಡಳಿ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಲಾಗುವುದು. ಹಲವು ಸ್ಲಂ ನಿವಾಸಿಗಳು ಸಭೆಗೆ ಹಾಜರಾಗಿ ಹಕ್ಕುಪತ್ರ ನೀಡಬೇಕೆಂಬ ಮನವಿಯನ್ನು ನಗರಸಭೆ ಮುಂದಿಟ್ಟಿದ್ದಾರೆ. ಅದನ್ನು ಪರಿಶೀಲಿಸಿ ಹಕ್ಕುಪತ್ರ ನೀಡುವುದಕ್ಕೆ ಅಡ್ಡಿಯಾಗಿರುವ ಸಮಸ್ಯೆಗಳನ್ನು ನಿವಾರಿಸಿ ನಿವಾಸಿಗಳಿಗೆ ಹಕ್ಕುಪತ್ರ ಕೊಡಲಾಗುವುದು ಎಂದು ನಾಗೇಶ್ ಸ್ಪಷ್ಟಪಡಿಸಿದರು.

ರಸ್ತೆ, ಉದ್ಯಾನಗಳ ಅಭಿವೃದ್ಧಿ:

ನಗರ ವ್ಯಾಪ್ತಿಯ ಬನ್ನೂರು ರಸ್ತೆಯಲ್ಲಿರುವ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಿಂದ ಶ್ರೀಚಾಮುಂಡೇಶ್ವರಿ ದೇವಸ್ಥಾನದವರೆಗೆ ೨.೯೨ ಕೋಟಿ ರು. ವೆಚ್ಚದಲ್ಲಿ ರಸ್ತೆ ಅಭಿವೃದ್ಧಿ ಪಡಿಸಲಾಗುವುದು. ಅದಕ್ಕೆ ಮುಂದಿನ ತಿಂಗಳು ಗುದ್ದಲಿ ಪೂಜೆ ನೆರವೇರಿಸಲಾಗುತ್ತದೆ. ಜೊತೆಗೆ ಶ್ರೀಚಾಮುಂಡೇಶ್ವರಿ ದೇವಸ್ಥಾನದಿಂದ ಗೌರಿಶಂಕರ ಕಲ್ಯಾಣ ಮಂಟಪದವರೆಗೆ ಸಂಸದ ಎಚ್.ಡಿ.ಕುಮಾರಸ್ವಾಮಿ ಅವರು ಸಿಎಸ್‌ಆರ್ ನಿಧಿಯಡಿ ೩ ಕೋಟಿ ರು. ನೀಡುವ ಭರವಸೆ ಕೊಟ್ಟಿದ್ದು, ಆ ಹಣದಲ್ಲಿ ರಸ್ತೆ ಅಭಿವೃದ್ಧಿಪಡಿಸುವುದಾಗಿ ಸ್ಪಷ್ಟಪಡಿಸಿದರು.

ನಗರ ವ್ಯಾಪ್ತಿಯ ರಸ್ತೆಗಳ ಅಭಿವೃದ್ಧಿಗೆ ಸಂಬಂಧಿಸಿದಂತೆ ಅಂದಾಜ ಪಟ್ಟಿ ತಯಾರಿಸಿ ನೀಡುವಂತೆ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು ಸೂಚಿಸಿದ್ದು, ಅದರಂತೆ ಕ್ರಿಯಾಯೋಜನೆ ತಯಾರಿಸಲಾಗುತ್ತಿದೆ. ಕೇಂದ್ರದಿಂದ ೫೦ ಕೋಟಿ ರು. ಹಣವನ್ನು ದೊರಕಿಸಿಕೊಡುವ ಭರವಸೆ ಕೇಂದ್ರ ಸಚಿವರಿಂದ ದೊರಕಿರುವುದಾಗಿ ಹೇಳಿದರು.

ಉದ್ಯಾನವನಗಳ ಅಭಿವೃದ್ಧಿಗೂ ಹೆಚ್ಚಿನ ಮಹತ್ವ ನೀಡಲಾಗಿದ್ದು, ೫೦ ಲಕ್ಷ ರು. ವೆಚ್ಚದಲ್ಲಿ ಗಾಂಧಿ ಪಾರ್ಕ್ ಅಭಿವೃದ್ಧಿಪಡಿಸಲು ನಿರ್ಧರಿಸಲಾಗಿದೆ. ಸಿಲ್ವರ್ ಜ್ಯೂಬಿಲಿ ಉದ್ಯಾನ ಮತ್ತು ಕೆಂಪೇಗೌಡ ಉದ್ಯಾನವನ ಅಭಿವೃದ್ಧಿಗೆ ೫೦ ಲಕ್ಷ ರು. ನೀಡಲು ಚಿಂತನೆ ನಡೆಸಿದ್ದು, ಹಂತ ಹಂತವಾಗಿ ಹಣ ಬಿಡುಗಡೆಗೊಳಿಸಿ ಉದ್ಯಾನವನಗಳಿಗೆ ಹೊಸ ರೂಪ ನೀಡುವುದಾಗಿ ಸಾರ್ವಜನಿಕರಿಗೆ ಭರವಸೆ ನೀಡಿದರು.

ಉಪಾಧ್ಯಕ್ಷ ಎಂ.ಪಿ.ಅರುಣ್‌ಕುಮಾರ್, ಪೌರಾಯುಕ್ತೆ ಪಂಪಾಶ್ರೀ ಸಭೆಯಲ್ಲಿ ಪಾಲ್ಗೊಂಡಿದ್ದರು.

ಸಾಧಕ-ಬಾಧಕಗಳನ್ನು ಚರ್ಚಿಸದೆ ಕೆಎಚ್‌ಬಿ ಬಡಾವಣೆ ಹಸ್ತಾಂತರ

ಕನ್ನಡಪ್ರಭ ವಾರ್ತೆ ಮಂಡ್ಯ

೨೦೧೯ರಲ್ಲಿ ಪೂರ್ಣ ಪ್ರಮಾಣದಲ್ಲಿ ಪರಿಶೀಲನೆ ನಡೆಸದೆ, ಸಾಧಕ-ಬಾಧಕಗಳನ್ನು ಅರಿಯದೆ ಅಂದು ಶಾಸಕರಾಗಿದ್ದ ಎಂ.ಶ್ರೀನಿವಾಸ್ ಒತ್ತಡಕ್ಕೆ ಮಣಿದು ಕೆಎಚ್‌ಬಿ ಬಡಾವಣೆಯನ್ನು ನಗರಸಭೆಗೆ ಹಸ್ತಾಂತರ ಮಾಡಿಕೊಳ್ಳಲಾಯಿತು ಎಂದು ನಗರಸಭೆ ಅಧ್ಯಕ್ಷ ಎಂ.ವಿ.ಪ್ರಕಾಶ್ (ನಾಗೇಶ್) ಹೇಳಿದರು.

ಆ ಸಮಯದಲ್ಲಿ ಕೆಎಚ್‌ಬಿ ೫.೫೦ ಕೋಟಿ ರು. ಹಣವನ್ನು ನೀಡಿತ್ತು. ಆ ಹಣ ಯಾವುದಕ್ಕೂ ಸಾಲದಾಗಿದೆ. ಈ ಹಣದಲ್ಲಿ ಬಡಾವಣೆಯ ಏಳೆಂಟು ರಸ್ತೆಗಳ ಅಭಿವೃದ್ಧಿ ಮಾಡಬಹುದು. ಮುಖ್ಯವಾಗಿ ಕುಡಿಯುವ ನೀರು, ಚರಂಡಿ, ಒಳಚರಂಡಿ ವ್ಯವಸ್ಥೆಯನ್ನು ಸಮರ್ಪಕವಾಗಿ ಮಾಡಬೇಕಿದೆ. ಇದಕ್ಕೆ ಹಣಕಾಸಿನ ಕೊರತೆ ಕಾಡುತ್ತಿರುವುದಾಗಿ ತಿಳಿಸಿದರು.

ಮುಂದಿನ ದಿನಗಳಲ್ಲಿ ಬಡಾವಣೆಯ ಅಭಿವೃದ್ಧಿಗೆ ಸಂಬಂಧಿಸಿದಂತೆ ಅಂದಾಜುಪಟ್ಟಿ ತಯಾರಿಸಿ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯವರೊಂದಿಗೆ ಚರ್ಚಿಸಿ ಜಿಲ್ಲಾಧಿಕಾರಿಯವರ ಗಮನಕ್ಕೆ ತರಲಾಗುವುದು. ನಂತರ ಕೆಎಚ್‌ಬಿಯಿಂದ ಹೆಚ್ಚುವರಿ ಹಣ ಬಿಡುಗಡೆ ಮಾಡಿಸಿ ಅಭಿವೃದ್ಧಿ ಮಾಡಲಾಗುವುದು. ಇನ್ನೂ ಕೂಡ ಕರ್ನಾಟಕ ಗೃಹ ಮಂಡಳಿ ಸಂಪೂರ್ಣವಾಗಿ ಬಡಾವಣೆಯನ್ನು ನಗರಸಭೆಗೆ ಹಸ್ತಾಂತರ ಮಾಡಿಲ್ಲ ಎಂಬುದನ್ನೂ ಸ್ಪಷ್ಟಪಡಿಸಿದರು.