ಸಾರಾಂಶ
ಕನ್ನಡಪ್ರಭ ವಾರ್ತೆ ಉಡುಪಿ
ಮಳೆಗಾಲದಲ್ಲಿ ಸಂಭವಿಸುವ ಅವಘಡಗಳನ್ನು ತಪ್ಪಿಸಲು ಉಡುಪಿ ಜಿಲ್ಲೆಯ ಗ್ರಾಮೀಣ ಭಾಗಗಳಲ್ಲಿ ಅಗತ್ಯವಿರುವ ಕಾಲುಸಂಕಗಳನ್ನು ಮುಂದಿನ 3 ವರ್ಷಗಳಲ್ಲಿ ಆದ್ಯತೆಯಲ್ಲಿ ನಿರ್ಮಿಸಲಾಗುವುದು ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದರು.ಅವರು ಸೋಮವಾರ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಉಡುಪಿ ಜಿಲ್ಲೆಯಲ್ಲಿ 413 ಹೊಸಕಾಲು ಸಂಕಗಳ ನಿಮಾಣಕ್ಕೆ ಪ್ರಸ್ತಾಪ ಸಲ್ಲಿಸಲಾಗಿದ್ದು, ಅದಕ್ಕೆ ಒಟ್ಟು 51.77 ಕೋಟಿ ರು. ವೆಚ್ಚ ಅಂದಾಜಿಸಲಾಗಿದೆ. ಈ ಹಿಂದೆ 30 ಕೋಟಿ ರು. ಅನುದಾನ ಬಿಡುಗಡೆ ಮಾಡಲಾಗಿದ್ದು, ಉಳಿದ ಅನುದಾನವನ್ನು 3 ವರ್ಷಗಳಲ್ಲಿ ಹಂತಹಂತವಾಗಿ ಬಿಡುಗಡೆಗೊಳಿಸಿ ಎಲ್ಲಾ ಕಾಲುಸಂಕಗಳ ಕಾಮಗಾರಿ ಪೂರ್ಣಲಾಗುವುದು ಎಂದರು.ವಿಧಾನ ಪರಿಷತ್ ಸದಸ್ಯ ಮಂಜುನಾಥ್ ಭಂಡಾರಿ ಮಾತನಾಡಿ, ಕರಾವಳಿ ಭಾಗದಲ್ಲಿ ಮರಳು ಗಣಿಗಾರಿಕೆಯಿಂದ ಸೇತುವೆಗಳಿಗೆ ಅಪಾಯವುಂಟಾಗುತ್ತಿರುವ ಬಗ್ಗೆ, ಕಾರ್ಕಳ ಶಾಸಕ ಸುನಿಲ್ ಕುಮಾರ್, ಜಿಲ್ಲಾ ಹೆದ್ದಾರಿ ಅಕ್ಕಪಕ್ಕದಲ್ಲಿ 25 ಮೀ. ವ್ಯಾಪ್ತಿಯೊಳಗೆ ಕಟ್ಟಡ ನಿರ್ಮಾಣಕ್ಕೆ ನಿಷೇಧದಿಂದ ಜನರಿಗಾಗುತ್ತಿರುವ ತೊಂದರೆ ಬಗ್ಗೆ, ಬೈಂದೂರು ಶಾಸಕ ಗುರುರಾಜ್ ಶೆಟ್ಟಿ ಗಂಟಿಹೊಳೆ ಮಾತನಾಡಿ, ಬೈಂದೂರು ತಾಲೂಕಿನಲ್ಲಿ ಕೃಷಿ ಚಟುವಟಿಕೆಗಳಿಗೆ, ದ್ವಿಚಕ್ರ ವಾಹನ ಸವಾರರಿಗೆ, ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರ ಸಂಚಾರಕ್ಕೆ ಅನುಕೂಲವಾಗುವಂತೆ ತಕ್ಷಣ ಕಾಲುಸಂಕ ನಿರ್ಮಾಣ ಮಾಡುವಂತೆ ಗಮನ ಸೆಳೆದರು.
ಕುಂದಾಪುರ ಶಾಸಕ ಕಿರಣ್ ಕುಮಾರ್ ಕೊಡ್ಗಿ, ಜಿಲ್ಲೆಯಲ್ಲಿ ಅಧಿಕ ಮಳೆಯಾಗುವುದರಿಂದ ರಸ್ತೆಯ ನಿರ್ವಹಣೆಗೆ ಅಗತ್ಯ ಕ್ರಮ ವಹಿಸುವಂತೆ ಹಾಗೂ ಎಂ.ಡಿ.ಆರ್. ಅಪ್‌ಗ್ರೇಡೇಶನ್ ಸಮರ್ಪಕವಾಗಿ ಮಾಡುವಂತೆ ಸಚಿವರ ಗಮನಕ್ಕೆ ತಂದರು.ಶಾಸಕ ಯಶ್‌ಪಾಲ್ ಎ ಸುವರ್ಣ ಮಾತನಾಡಿ, ಬಂಕರಕಟ್ಟೆಯಲ್ಲಿ ನಿರ್ಮಿಸಲಾಗಿರುವ ಸೇತುವೆಯ ಮೇಲೆ ಪ್ರವಾಹದ ನೀರು ಹರಿಯುವುದರಿಂದ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಿಗೆ ತೊಂದರೆ ಉಂಟಾಗುತ್ತಿರುವ ಬಗ್ಗೆ ಕೈಗೊಳ್ಳಲು ಆಗ್ರಹಿಸಿದರು.
ಜಿಲ್ಲಾಧಿಕಾರಿ ಡಾ. ಕೆ ವಿದ್ಯಾಕುಮಾರಿ, ಕಾರ್ಯಪಾಲಕ ಅಭಿಯಂತರ ಕಿರಣ್ ಎಸ್, ಲೋಕೋಪಯೋಗಿ ಇಲಾಖೆಯ ತಾಂತ್ರಿಕ ಸಹಾಯಕಿ ಜೆ.ಜಿ. ಶಾಂತಲಾ, ಗುತ್ತಿಗೆದಾರರು, ವಿವಿಧ ಜಿಲ್ಲಾ ಮಟ್ಟದ ಅಧಿಕಾರಿಗಳು ಇದ್ದರು.