ಶ್ರೀಶೈಲದಲ್ಲಿ 400 ಕೊಠಡಿ ಸಮುಚ್ಚಯ: ಶ್ರೀಗಳು

| Published : Feb 15 2025, 12:34 AM IST

ಸಾರಾಂಶ

ಸರ್ಕಾರ ಹತ್ತು ಎಕರೆ ಭೂಮಿ ನೀಡಿದ್ದು, 5 ಎಕರೆ ಭೂಮಿ ಸ್ವಾಧೀನಕ್ಕೆ ಪಡೆದು ಅದರಲ್ಲಿ ಭಕ್ತರಿಗಾಗಿ ವಸತಿ ಕೊಠಡಿ ಹಾಗೂ ಸುವ್ಯವಸ್ಥಿತ ಆಸ್ಪತ್ರೆಯ ನಿರ್ಮಾಣ ಕಾರ್ಯ ನಡೆದಿದೆ. ಭಕ್ತರು ತರುವ ಕಂಬಿಗಳ ಶೇಖರಣೆಗಾಗಿ ಮಂಟಪದ ಕಾಮಗಾರಿ ಕೈಕೊಳ್ಳಲಾಗಿದೆ.

ಹುಬ್ಬಳ್ಳಿ:

ಪಂಚಪೀಠದಲ್ಲಿ‌ ಒಂದಾದ ಶ್ರೀಶೈಲ ಕ್ಷೇತ್ರದಲ್ಲಿ ಬರುವ ಭಕ್ತರ ಅನುಕೂಲಕ್ಕಾಗಿ 400 ವಸತಿ ಕೊಠಡಿಗಳ ನಿರ್ಮಾಣ ಕಾರ್ಯ ಕೈಕೊಳ್ಳಲಾಗಿದೆ ಎಂದು ಶ್ರೀಶೈಲ ಜಗದ್ಗುರು ಡಾ. ಚನ್ನಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ಉಣಕಲ್ ಸಿದ್ದಪ್ಪಜ್ಜ ಅವರ ನೂತನ ಶಿಲಾ ಮಂಟಪ ಕಾರ್ಯವನ್ನು ಶುಕ್ರವಾರ ಸಂಜೆ ವೀಕ್ಷಿಸಿ, ದೇವಸ್ಥಾನ ಕಮಿಟಿ ನೀಡಿದ ಗೌರವ ಸನ್ಮಾನ ಸ್ವೀಕರಿಸಿ ಮಾತನಾಡಿದರು.

ಸರ್ಕಾರ ಹತ್ತು ಎಕರೆ ಭೂಮಿ ನೀಡಿದ್ದು, 5 ಎಕರೆ ಭೂಮಿ ಸ್ವಾಧೀನಕ್ಕೆ ಪಡೆದು ಅದರಲ್ಲಿ ಭಕ್ತರಿಗಾಗಿ ವಸತಿ ಕೊಠಡಿ ಹಾಗೂ ಸುವ್ಯವಸ್ಥಿತ ಆಸ್ಪತ್ರೆಯ ನಿರ್ಮಾಣ ಕಾರ್ಯ ನಡೆದಿದೆ. ಭಕ್ತರು ತರುವ ಕಂಬಿಗಳ ಶೇಖರಣೆಗಾಗಿ ಮಂಟಪದ ಕಾಮಗಾರಿ ಕೈಕೊಳ್ಳಲಾಗಿದೆ ಎಂದು ಹೇಳಿದರು.

ಉಣಕಲ್ ಸಿದ್ದಪ್ಪಜ್ಜ ದೇವಮಾನವರಾಗಿ ಭಕ್ತರ ಇಷ್ಟಾರ್ಥ ಪೂರೈಸುವ ಸಿದ್ದಿಪುರುಷರು. ದೇವಸ್ಥಾನ ಸಮಿತಿ ನೂತನ ಶಿಲಾಮಂಟಪ ನಿರ್ಮಾಣ ಕಾರ್ಯ ಹಮ್ಮಿಕೊಂಡಿದೆ. ಅದಕ್ಕೆ ಭಕ್ತ ಸಮೂಹ ಕೋಟಿ, ಕೋಟಿ ದೇಣಿಗೆ ನೀಡಿದ್ದು ಸಿದ್ದಪ್ಪಜ್ಜನ ಅಸ್ತಿತ್ವಕ್ಕೆ ಹಿಡಿದ ಕನ್ನಡಿ ಎಂದರು.

ಸಮಿತಿ ಅಧ್ಯಕ್ಷ ಹಾಗೂ ಮಹಾನಗರ ಪಾಲಿಕೆ ಆರೋಗ್ಯ ಸಮಿತಿ ಅಧ್ಯಕ್ಷ ರಾಜಣ್ಣ ಕೊರವಿ ಮಾತನಾಡಿ, ಶಿಲಾ ಮಂಟಪ ನಿರ್ಮಾಣಕ್ಕೆ ₹ 3 ಕೋಟಿ ಅಂದಾಜು ಮಾಡಲಾಗಿದೆ ಎಂದು ಹೇಳಿದರು.ಸಮಿತಿ ಸದಸ್ಯರಾದ ಶಿವಾಜಿ ಕನ್ನಿಕೊಪ್ಪ, ರಾಮಣ್ಣ ಪದ್ಮಣ್ಣವರ, ಗುರುಸಿದ್ದಪ್ಪ ಬೆಂಗೇರಿ, ಗುರುಸಿದ್ದಪ್ಪ ಮೆಣಸಿನಕಾಯಿ, ಶತಾಯು ಚಿಕ್ಕಮಠ ಅಜ್ಜ, ಸಿದ್ದನಗೌಡ ಕಾಮಧೇನು, ಜಯಮ್ಮ ಹಿರೇಮಠ ಸೇರಿದಂತೆ ಹಲವರಿದ್ದರು.