ಸಾರಾಂಶ
ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಮಾನವ ಕಳ್ಳ ಸಾಗಣೆ, ಪೋಕ್ಸೋ, ಸಂಚಾರ ನಿಯಮಗಳ ಕುರಿತು ಜಾಗೃತಿಗಾಗಿ ಪೊಲೀಸ್ ಸಿಬ್ಬಂದಿಯೊಬ್ಬರು ವಿಭಿನ್ನ ಪ್ರಯತ್ನಕ್ಕೆ ಮುಂದಾಗಿದ್ದು. ಸ್ವಂತ ಖರ್ಚಿನಲ್ಲಿ ದೇಶ ಪರ್ಯಟನೆ ಆರಂಭಿಸಿದ್ದಾರೆ.ಕಾನೂನು ರಕ್ಷಣೆಗಾಗಿ ಲಾಠಿ ಹಿಡಿಯುವುದು, ದಂಡ ವಿಧಿಸುವುದಷ್ಟೇ ಪೊಲೀಸರ ಕರ್ತವ್ಯವಲ್ಲ. ಅಪರಾಧ ತಡೆಗೆ ಜನರಲ್ಲಿ ಕಾನೂನು ಅರಿವು ಮೂಡಿಸುವುದು ಕೂಡ ಖಾಕಿ ತೊಟ್ಟವರ ಪ್ರಮುಖ ಉದ್ದೇಶ ಎಂಬುದನ್ನು ಸಾರಲು ಹೊರಟಿರುವ ಶಿವಮೊಗ್ಗದ ಮಹಿಳಾ ಠಾಣೆ ಸಿಬ್ಬಂದಿ ಸತೀಶ್ ಕುಬಟೂರು ಅವರು, 15 ದಿನ 10 ರಾಜ್ಯಗಳಿಗೆ ಭೇಟಿ ನೀಡಲಿದ್ದು, ಶಿವಮೊಗ್ಗದಿಂದ ಸುಮಾರು 4000 ಕಿ.ಮೀ. ಬೈಕ್ ಯಾತ್ರೆ ಆರಂಭಿಸಿದ್ದಾರೆ.
ಸತೀಶ್ ಅವರ ಈ ಸಾಹಸಕ್ಕೆ ಗುರುವಾರ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ.ಮಿಥುನ್ ಕುಮಾರ್ ಅವರು ಚಾಲನೆ ನೀಡಿದರು.ಸತೀಶ್ ಕುಬಟೂರು ಅವರು ಶಿವಮೊಗ್ಗದಿಂದ ಮಹಾರಾಷ್ಟ್ರದ ಮೂಲಕ ದೆಹಲಿವರೆಗೆ ತಲುಪಲಿದ್ದಾರೆ. ಇನ್ನೂ, ದಾರಿ ಉದ್ದಕ್ಕೂ ಸಾರ್ವಜನಿಕರು ಮತ್ತು ಶಾಲೆಗಳಿಗೆ ಭೇಟಿ ನೀಡಲಿದ್ದಾರೆ. ಈ ಬೈಕ್ ಯಾತ್ರೆ ಮೂಲಕ ನಾಗರಿಕ ಹಕ್ಕು ಮತ್ತು ಕರ್ತವ್ಯಗಳ ಕುರಿತು ಜನರು, ವಿದ್ಯಾರ್ಥಿಗಳಿಗೆ ತಿಳಿವಳಿಕೆ ಮೂಡಿಸಲಾಗುತ್ತದೆ. ಅದಕ್ಕಾಗಿ ಕರಪತ್ರಗಳನ್ನು ಕೂಡ ಮುದ್ರಿಸಿಕೊಂಡಿದ್ದೇನೆ. ರಾಜ್ಯ ವ್ಯಾಪ್ತಿಯಲ್ಲಿ ಕನ್ನಡದಲ್ಲಿಯೇ ಕರಪತ್ರ ಹಂಚುತ್ತೇನೆ. ಉಳಿದ ರಾಜ್ಯಗಳಲ್ಲಿ ಇಂಗ್ಲೀಷ್ ಕರಪತ್ರಗಳನ್ನು ಹಂಚಲಿದ್ದೇನೆ ಎಂದು ಸತೀಶ್ ಕುಬಟೂರು ತಿಳಿಸಿದರು.