ಮಂಜುನಾಥ ಕೆ.ಎಂ.
ಬಳ್ಳಾರಿ: ಗಣಿ ಜಿಲ್ಲೆ ಬಳ್ಳಾರಿಯಲ್ಲಿ ಬೀದಿನಾಯಿಗಳ ಹಾವಳಿ ಮಿತಿ ಮೀರಿದ್ದು, ಮೂರೇ ತಿಂಗಳಲ್ಲಿ 4 ಸಾವಿರಕ್ಕೂ ಅಧಿಕ ಜನರಿಗೆ ನಾಯಿ ಕಚ್ಚಿದೆ. ಚಿಕಿತ್ಸೆ ಫಲಿಸದೇ ಇಬ್ಬರು ಸಾವಿಗೀಡಾಗಿದ್ದಾರೆ.ಜಿಲ್ಲೆಯ ಐದು ತಾಲೂಕುಗಳ ಪೈಕಿ ಬಳ್ಳಾರಿ ನಗರದಲ್ಲಿ ಅತಿ ಹೆಚ್ಚು ನಾಯಿ ಕಡಿತ ಘಟನೆಗಳು ನಡೆದಿವೆ. ಮೂರು ತಿಂಗಳ ಅವಧಿಯಲ್ಲಿ ನಗರದಲ್ಲಿ ಇಬ್ಬರು ನಾಯಿ ಕಚ್ಚಿದ ಬಳಿಕ ಚಿಕಿತ್ಸೆ ಫಲಿಸದೇ ಆಸ್ಪತ್ರೆಯಲ್ಲಿಯೇ ಮೃತಪಟ್ಟಿದ್ದಾರೆ.ಬಳ್ಳಾರಿ ತಾಲೂಕಿನಲ್ಲಿ 30,383 ನಾಯಿಗಳಿವೆ. ಬಳ್ಳಾರಿ ನಗರದಲ್ಲಿಯೇ 17 ಸಾವಿರಕ್ಕೂ ಹೆಚ್ಚು ನಾಯಿಗಳು ಇರಬಹುದು ಎಂದು ಅಂದಾಜಿಸಲಾಗಿದೆ. ಒಂದು ವರ್ಷದ ಹಿಂದಿನ ಗಣತಿ ಪ್ರಕಾರ ಜಿಲ್ಲೆಯಲ್ಲಿ 52,375 ನಾಯಿಗಳಿವೆ. ಕಳೆದ ಜನವರಿಯಿಂದ ಈವರೆಗೆ ಜಿಲ್ಲೆಯಲ್ಲಿ 4,330 ಜನರಿಗೆ ನಾಯಿ ಕಚ್ಚಿದ್ದು ಚಿಕಿತ್ಸೆ ಪಡೆದಿದ್ದಾರೆ. ಮೂರು ತಿಂಗಳಲ್ಲಿ ಇಬ್ಬರು ಸಾವಿಗೀಡಾಗಿದ್ದಾರೆ.
ಬಳ್ಳಾರಿ ನಗರದಲ್ಲಿ ನಿತ್ಯ 250ರಿಂದ 300 ಶ್ವಾನಗಳನ್ನು ಹಿಡಿದು ಸಂತಾನ ಶಸ್ತ್ರಚಿಕಿತ್ಸೆಗೆ ಒಳಪಡಿಸಲಾಗುತ್ತಿದೆ. ಕಳೆದ ವರ್ಷದ ಜೂನ್‌ನಿಂದ ಈವರೆಗೆ ನಗರದ 3800 ಶ್ವಾನಗಳಿಗೆ ಸಂತಾನಹರಣ ಶಸ್ತ್ರಚಿಕಿತ್ಸೆ ಮಾಡಲಾಗಿದೆ. ಮೊದಲ ಆದ್ಯತೆಯಾಗಿ ಆಸ್ಪತ್ರೆಗಳು ಹಾಗೂ ಶಾಲಾ-ಕಾಲೇಜುಗಳ ಬಳಿಯ ಶ್ವಾನಗಳನ್ನು ಮಾತ್ರ ಹಿಡಿದು ಸಂತಾನಹರಣ ಶಸ್ತ್ರಚಿಕಿತ್ಸೆ ಮಾಡಲಾಗುತ್ತಿದೆ ಎಂದು ಪಾಲಿಕೆ ಆಯುಕ್ತ ಪಿ.ಎಸ್.ಮಂಜುನಾಥ ತಿಳಿಸಿದ್ದಾರೆ.ನಾಯಿ ಶೆಲ್ಟರ್‌ಗೆ ಜಾಗದ ಅಭಾವ:
ಶ್ವಾನಗಳನ್ನು ಹಿಡಿದ ಬಳಿಕ ಅವುಗಳನ್ನು ಶೆಲ್ಟರ್ ನಲ್ಲಿ ಹಾಕಬೇಕು. ಸದ್ಯಕ್ಕೆ ಬಳ್ಳಾರಿ ಹೊರ ವಲಯದ ಗುಗ್ಗರಹಟ್ಟಿ ಪ್ರದೇಶದಲ್ಲಿ ಶೆಲ್ಟರ್ ನಿರ್ಮಿಸಲಾಗಿದೆ. ಆದರೆ, ಶೆಲ್ಟರ್‌ನ ಸಾಮರ್ಥ್ಯದಲ್ಲಿ 250ರಿಂದ 300 ನಾಯಿಗಳನ್ನು ಮಾತ್ರ ಇರಿಸಬಹುದು. ಬಳ್ಳಾರಿಯಲ್ಲಿರುವ ಸುಮಾರು 15ರಿಂದ 17 ಸಾವಿರ ನಾಯಿಗಳನ್ನು ಶೆಲ್ಟರ್‌ನಲ್ಲಿರಿಸಲು ದೊಡ್ಡ ಜಾಗವೇ ಬೇಕು. ಬಳ್ಳಾರಿ ಹೊರ ವಲಯದ ಆಲ್ದಳ್ಳಿ ಬಳಿ 10 ಎಕರೆ ಸರ್ಕಾರಿ ಜಮೀನಿದೆ. ಇಲ್ಲಿಯೇ ಶೆಲ್ಟರ್ ನಿರ್ಮಿಸಲು ಯೋಚಿಸಲಾಗಿತ್ತು. ಆದರೆ, ಜಾಗದ ದಾಖಲೆಯ ತಾಂತ್ರಿಕ ಕಾರಣಗಳಿಂದ ಜಾಗ ಪಾಲಿಕೆಗೆ ಸುಪರ್ದಿಗೆ ಬಂದಿಲ್ಲ. ಹೀಗಾಗಿ ಶೆಲ್ಟರ್ ನಿರ್ಮಿಸಲು ಸಾಧ್ಯವಾಗುತ್ತಿಲ್ಲ ಎನ್ನುತ್ತಾರೆ ಪಾಲಿಕೆ ಅಧಿಕಾರಿಗಳು.
ನಾಯಿಗಳ ಕಡಿತಕ್ಕೆ ಜಿಲ್ಲೆಯ ಎಲ್ಲ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಎಆರ್‌ವಿ ಇಂಜೆಕ್ಷನ್ ಲಭ್ಯವಿದೆ. ಎಲ್ಲೂ ಕೊರತೆಯಿಲ್ಲ. ಒಂದು ವೇಳೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಲಭ್ಯವಿಲ್ಲದಿದ್ದರೆ ಕೂಡಲೇ ತಾಲೂಕು ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆಯಬಹುದು ಎಂದು ಜಿಲ್ಲಾ ಆರೋಗ್ಯ ಅಧಿಕಾರಿ ಡಾ.ವೈ.ರಮೇಶ್ ಬಾಬು ಕನ್ನಡಪ್ರಭಕ್ಕೆ ತಿಳಿಸಿದರು.
ಹೊಸಪೇಟೆಯಲ್ಲಿ 2 ತಿಂಗಳಲ್ಲಿ 733 ಜನರಿಗೆ ನಾಯಿ ಕಡಿತ:ವಿಜಯನಗರ ಜಿಲ್ಲೆಯಲ್ಲಿ ಕಳೆದ ಜನವರಿ, ಫೆಬ್ರವರಿಯಲ್ಲಿ 1751 ಜನರಿಗೆ ನಾಯಿಗಳು ಕಚ್ಚಿದ್ದು, ಈ ಪೈಕಿ ಹೊಸಪೇಟೆ ನಗರದಲ್ಲಿಯೇ 733 ಜನರಿಗೆ ನಾಯಿ ಕಚ್ಚಿರುವ ಪ್ರಕರಣಗಳಿವೆ. ಕೂಡ್ಲಿಗಿ, ಕೊಟ್ಟೂರಿನಲ್ಲಿ ಅತಿ ಕಡಿಮೆ ನಾಯಿ ದಾಳಿ ಪ್ರಕರಣಗಳಿವೆ.
ನಾಯಿಗಳಿಗೆ ಶೆಲ್ಟರ್ ನಿರ್ಮಿಸುವ ಸಂಬಂಧ ಸರ್ಕಾರಕ್ಕೆ ₹4 ಕೋಟಿ ಕೇಳಲಾಗಿತ್ತು. ಮೊದಲ ಹಂತದಲ್ಲಿ ₹1.05 ಕೋಟಿ ಬಿಡುಗಡೆ ಮಾಡಿದ್ದಾರೆ. ಆದರೆ, ಶೆಲ್ಟರ್ ನಿರ್ಮಿಸಲು ಜಾಗವಿಲ್ಲ. ಆಲ್ದಳಿ ಬಳಿಯ 10 ಎಕರೆ ಜಾಗ ಪಾಲಿಕೆ ಸುಪರ್ದಿಗೆ ಪಡೆಯಲು ಕ್ರಮ ವಹಿಸಲಾಗುತ್ತಿದೆ ಎನ್ನುತ್ತಾರೆ ಬಳ್ಳಾರಿ ಮಹಾನಗರ ಪಾಲಿಕೆ ಆಯುಕ್ತ ಪಿ.ಎಸ್.ಮಂಜುನಾಥ.