ಜಿಲ್ಲೆಗೆ ₹402 ಕೋಟಿ ಕ್ರಿಯಾ ಯೋಜನೆ: ಡಾ.ವೆಂಕಟೇಶ್

| Published : Jan 18 2024, 02:00 AM IST

ಸಾರಾಂಶ

ನಗರದಲ್ಲಿ ನಡೆದ ಎಸ್‌ಸಿಪಿ, ಟಿಎಸ್‌ಪಿ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಜಿಲ್ಲಾಧಿಕಾರಿ ಡಾ.ಎಂ.ವಿ. ವೆಂಕಟೇಶ್ ದಾವಣಗೆರೆ ಜಿಲ್ಲೆಯ ಮೂಲ ಸೌಕರ್ಯಕ್ಕಾಗಿ 402 ಕೋಟಿ ರು. ಕ್ರಿಯಾ ಯೋಜನೆ ಕುರಿತು ಮಾತನಾಡಿದರು.

ಕನ್ನಡ ಪ್ರಭ ವಾರ್ತೆ ದಾವಣಗೆರೆಅನುಸೂಚಿತ ಜಾತಿ ಮತ್ತು ಅನುಸೂಚಿತ ಬುಡಕಟ್ಟು ಉಪ ಯೋಜನೆಯಡಿ 2023-24 ನೇ ಸಾಲಿನಲ್ಲಿ ದಾವಣಗೆರೆ ಜಿಲ್ಲೆಗೆ 402 ಕೋಟಿ ರು. ಕ್ರಿಯಾ ಯೋಜನೆ ಅನುಮೋದಿತವಾಗಿದ್ದು, ಬರುವ ಫೆಬ್ರವರಿ ಅಂತ್ಯಕ್ಕೆ ಶೇ.90 ರಷ್ಟು ಪ್ರಗತಿ ಸಾಧಿಸಬೇಕೆಂದು ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್ ಸೂಚನೆ ನೀಡಿದರು.

ಅವರು ಬುಧವಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಎಸ್‌ಸಿಪಿ, ಟಿಎಸ್‌ಪಿ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಈ ಸಾಲಿನಲ್ಲಿ ಎಸ್‌ಸಿಪಿಯಡಿ ಕೇಂದ್ರ ವಲಯದಡಿ 82.29 ಕೋಟಿ, ರಾಜ್ಯ136.6 ಕೋಟಿ ಹಾಗೂ 30.30 ಕೋಟಿ ರು. ಜಿಲ್ಲಾ ವಲಯ ಸೇರಿ 249.20 ಕೋಟಿಗೆ ಕ್ರಿಯಾ ಯೋಜನೆ ಅನುಮೋದಿಸಲಾಗಿದೆ. ಇದರಲ್ಲಿ ಇಲ್ಲಿಯವರೆಗೆ 134.28 ಕೋಟಿ ರು. ಬಿಡುಗಡೆಯಾಗಿ 99.17 ಕೋಟಿ ರು.ವೆಚ್ಚವಾಗಿದ್ದು ಶೇ.73.86 ರಷ್ಟು ಪ್ರಗತಿಯಾಗಿದೆ. ವೈಯಕ್ತಿಕ ಸೌಲಭ್ಯ, ಮೂಲಭೂತ ಸೌಕರ್ಯ ಸೇರಿದಂತೆ 191136 ಗುರಿಯಲ್ಲಿ 149635 ಸಾಧನೆ ಮಾಡಲಾಗಿದೆ ಎಂದರು.

ಟಿಎಸ್‌ಪಿಯಡಿ ಕೇಂದ್ರ ವಲಯ ರು..62.46 ಕೋಟಿ, ರಾಜ್ಯ 70.49 ಕೋಟಿ ರು. ಹಾಗೂ ಜಿಲ್ಲಾ 19.96 ಕೋಟಿ ರು.ಸೇರಿ 152.93 ಕೋಟಿ ರು.ಮೊತ್ತದ ಕ್ರಿಯಾ ಯೋಜನೆಗೆ ಅನುಮೋದಿಸಲಾಗಿದೆ. ಇದರಲ್ಲಿ 83.46 ಕೋಟಿ ಬಿಡುಗಡೆಯಾಗಿದ್ದು, 66.09 ಕೋಟಿ ರು. ವೆಚ್ಚ ಮಾಡಲಾಗಿ ಶೇ.79.18 ರಷ್ಟು ಪ್ರಗತಿ ಸಾಧಿಸ ಲಾಗಿದೆ. ಈ ಯೋಜನೆಯಡಿ ವೈಯಕ್ತಿಕ ಸೌಲಭ್ಯ ಹಾಗೂ ಮೂಲಭೂತ ಸೌಕರ್ಯದಡಿ 107810 ಗುರಿಯಲ್ಲಿ 74058 ಸಾಧನೆ ಮಾಡಲಾಗಿದೆ ಎಂದು ತಿಳಿಸಿದರು.

ಯಾವ ಇಲಾಖೆಗಳು ಶೇ.75 ಕ್ಕಿಂತ ಕಡಿಮೆ ಪ್ರಗತಿ ಸಾಧಿಸಲಾಗಿದೆ, ಅವರು ಮಾರ್ಚ್ ಅಂತ್ಯದವರೆಗೆ ಕಾಯದೆ ಫೆಬ್ರವರಿಯಲ್ಲಿ ಪ್ರಗತಿ ಸಾಧಿಸಬೇಕು. ಕಾಮಗಾರಿಗಳನ್ನು ಕೈಗೊಳ್ಳುವಾಗ ಜನರಿಗೆ ಅನುಕೂಲವಾಗುವ ಜೊತೆಗೆ ಬಹಳ ದಿನಗಳವರೆಗೆ ಬಾಳಿಕೆ ಬರಬೇಕು, ಈ ನಿಟ್ಟಿನಲ್ಲಿ ಯೋಜನೆಗಳನ್ನು ಅನುಷ್ಟಾನ ಮಾಡಬೇಕೆಂದರು.

ಜಲ ಸಂಪನ್ಮೂಲ ಇಲಾಖೆಯಿಂದ ಎಸ್‌ಸಿಪಿಯಡಿ ರೂ.34 ಕೋಟಿ ಮತ್ತು ಟಿಎಸ್‌ಪಿಯಡಿ 17 ಕೋಟಿ ಇದ್ದು ಶೂನ್ಯ ಸಾಧನೆ ಮಾಡಲಾಗಿದೆ. ಸಿಸಿ ರಸ್ತೆ, ಸಮುದಾಯ ಭವನ, ಚೆಕ್ ಡ್ಯಾಂ ಕಾಮಗಾರಿ ತೆಗೆದುಕೊಳ್ಳಲಾಗಿದೆ ಎಂದು ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದರು. ಈ ವೇಳೆ ಜಿಲ್ಲಾಧಿಕಾರಿಯವರು ಜಲಸಂಪನ್ಮೂಲ ಇಲಾಖೆಯಿಂದ ನೀರಾವರಿ ಅಚ್ಚುಕಟ್ಟು ಪ್ರದೇಶದ ಕೊನೆ ಭಾಗದ ರೈತರಿಗೆ ಅನುಕೂಲವಾಗುವಂತೆ ಯೋಜನೆ ರೂಪಿಸಲು ತಿಳಿಸಿದರು.

ರೇಷ್ಮೆ ಬೆಳೆಗೆ ಆದ್ಯತೆ ನೀಡಿ: ಜಿಲ್ಲೆಯಲ್ಲಿ 610 ರೇಷ್ಮೆ ಬೆಳೆಯುವ ರೈತರಿದ್ದು, ಇಲಾಖೆಯಿಂದ ಇನ್ನೂ ಹೆಚ್ಚಿನ ರೈತರು ರೇಷ್ಮೆ ಬೆಳೆಯುವಂತೆ ಕ್ಷೇತ್ರ ಭೇಟಿಯ ಮೂಲಕ ಪ್ರೋತ್ಸಾಹಿಸುವ ಕೆಲಸ ಮಾಡಬೇಕು. ರೇಷ್ಮೆ ರೀಲಿಂಗ್ ಮಷಿನ್ ತರಿಸುವ ಮೂಲಕ ಮಾರುಕಟ್ಟೆ ಒದಗಿಸುವ ಜೊತೆಗೆ ರೇಷ್ಮೆ ಬೆಳೆ ಬೆಳೆಯಲು ಖಾತರಿಯಡಿ ಅವರಿಗೆ ಬೇಕಾದ ಸೌಕರ್ಯ ಕಲ್ಪಿಸಲು ಮುಂದಾಗಬೇಕು. ಕೋಲಾರ ಮತ್ತು ರಾಮನಗರದಲ್ಲಿ ರೇಷ್ಮೆ ಬೆಳೆದವರು ಕೋಟ್ಯಾಧಿಪತಿಗಳಾಗಿದ್ದಾರೆ. ಇಲ್ಲಿನ ರೈತರು ಇತರೆ ಕೃಷಿಯೊಂದಿಗೆ ರೇಷ್ಮೆ ಕೃಷಿಗೆ ಮುಂದಾದಲ್ಲಿ ಅವರ ಆರ್ಥಿಕ ಮಟ್ಟ ಇನ್ನೂ ಸುಧಾರಿಸಲಿದೆ ಎಂದರು. ಎಸ್.ಸಿ.ಪಿ., ಟಿಎಸ್‌ಪಿಯಡಿ ಟಿ.ಸಿ: ಬೆಸ್ಕಾಂ ನಿಂದ ಎಸ್‌ಸಿಪಿ ಮತ್ತು ಟಿಎಸ್‌ಪಿ ಯಡಿ ರೈತರು ಸ್ವಂತವಾಗಿ ಕೊಳವೆ ಬಾವಿ ಕೊರೆಯಿಸಿದಾಗ ಅಕ್ರಮವಾಗಿ ವಿದ್ಯುತ್ ಸಂಪರ್ಕ ಪಡೆದವರಿಗೆ ಟಿಸಿಯನ್ನು ಅಳವಡಿಸಿ ಕೊಡಲಾಗುತ್ತದೆ. ಪ್ರತಿ ಘಟಕಕ್ಕೆ ರೂ.1.5 ಲಕ್ಷ ಪ್ರತಿ ರೈತರಿಗೆ ವೆಚ್ಚ ಮಾಡಲಾಗುತ್ತದೆ. ಈ ವರ್ಷ ಜಿಲ್ಲೆಯಲ್ಲಿ 15 ಎಸ್‌ಸಿಪಿ, 6 ಟಿಎಸ್‌ಪಿ ಗುರಿ ನೀಡಲಾಗಿರುತ್ತದೆ ಎಂದು ಬೆಸ್ಕಾಂ ಇಂಜಿನಿಯರ್ ಸಭೆಗೆ ಮಾಹಿತಿ ನೀಡಿದರು. ಈ ವೇಳೆ ಜಿಲ್ಲಾಧಿಕಾರಿಯವರು ಮಾತನಾಡಿ ಯೋಜನೆ ಬಗ್ಗೆ ರೈತರಿಗೆ ಮನವರಿಕೆ ಮಾಡಿಕೊಡಬೇಕೆಂದರು. ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಕೃಷ್ಣನಾಯ್ಕ, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ನಾಗರಾಜ ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.