180 ಕೆರೆಗಳನ್ನು ತುಂಬಿಸುವ ಕಾಮಗಾರಿಗೆ ₹407 ಕೋಟಿ ಮಂಜೂರು: ಶಾಸಕ ಕೆ.ಎಸ್.ಆನಂದ್

| Published : Jul 31 2025, 12:45 AM IST

180 ಕೆರೆಗಳನ್ನು ತುಂಬಿಸುವ ಕಾಮಗಾರಿಗೆ ₹407 ಕೋಟಿ ಮಂಜೂರು: ಶಾಸಕ ಕೆ.ಎಸ್.ಆನಂದ್
Share this Article
  • FB
  • TW
  • Linkdin
  • Email

ಸಾರಾಂಶ

ಕಡೂರು:ಕ್ಷೇತ್ರ ವ್ಯಾಪ್ತಿಗೆ ಬರುವ 180 ಕೆರೆಗಳನ್ನು ತುಂಬಿಸುವ ಭದ್ರಾ ಉಪ ಕಣಿವೆ ಯೋಜನೆ 3ನೇ ಹಂತದ ಕಾಮಗಾರಿಗೆ ಮುಖ್ಯ ಮಂತ್ರಿ ಸಿದ್ದರಾಮಯ್ಯ ₹407 ಕೋಟಿ ಮಂಜೂರು ಮಾಡಿದ್ದಾರೆ ಎಂದು ಶಾಸಕ ಕೆ.ಎಸ್.ಆನಂದ್ ಪ್ರಕಟಿಸಿದರು.

- ನೂತನ ಗ್ರಾಪಂ ಕಟ್ಟಡ ಉದ್ಘಾಟನೆ ಮತ್ತು ವಿವಿಧ ಕಾಮಗಾರಿಗಳಿಗೆ ಚಾಲನೆ

ಕನ್ನಡಪ್ರಭ ವಾರ್ತೆ, ಕಡೂರು:

ಕ್ಷೇತ್ರ ವ್ಯಾಪ್ತಿಗೆ ಬರುವ 180 ಕೆರೆಗಳನ್ನು ತುಂಬಿಸುವ ಭದ್ರಾ ಉಪ ಕಣಿವೆ ಯೋಜನೆ 3ನೇ ಹಂತದ ಕಾಮಗಾರಿಗೆ ಮುಖ್ಯ ಮಂತ್ರಿ ಸಿದ್ದರಾಮಯ್ಯ ₹407 ಕೋಟಿ ಮಂಜೂರು ಮಾಡಿದ್ದಾರೆ ಎಂದು ಶಾಸಕ ಕೆ.ಎಸ್.ಆನಂದ್ ಪ್ರಕಟಿಸಿದರು.

ಕಡೂರು ಕಸಬಾ ಹೋಬಳಿ ಬಳ್ಳೇಕೆರೆ ಗ್ರಾಮದಲ್ಲಿ ಶ್ರೀ ಆಂಜನೇಯಸ್ವಾಮಿ ದೇಗುಲದ ಸಮೀಪ ನಿರ್ಮಾಣವಾಗಿರುವ ನೂತನ ಗ್ರಾಪಂ ಕಟ್ಟಡ ಉದ್ಘಾಟನೆ ಮತ್ತು ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಿ ಮಾತನಾಡಿದರು.

ಭದ್ರಾ ಉಪಕಣಿವೆಯ 3 ನೇ ಹಂತದ ಯೋಜನೆಗೆ ಕಳೆದ ಬಜೆಟ್ ನಲ್ಲಿ ₹407 ಕೋಟಿ ಮಂಜೂರು ಮಾಡಿದ್ದು, ಟೆಂಡರ್ ಪ್ರಕ್ರಿಯೆ ಸಹ ಮುಗಿದಿದೆ. ಶೀಘ್ರ ಬರದ ನಾಡಿಗೆ ಶಾಶ್ವತ ನೀರಾವರಿ ಯೋಜನೆಗೆ ಚಾಲನೆ ಸಿಗಲಿದೆ. ಕಡೂರು ತಾಲೂಕು ಸತತ ಬರಗಾಲಕ್ಕೆ ಸಿಲುಕಿ ನಲುಗುತ್ತಿದೆ. ಅಯ್ಯನ ಕೆರೆ ಮತ್ತು ಮದಗದಕೆರೆಗಳಿಂದ ಕೆಲವು ರೈತರಿಗೆ ಮಾತ್ರ ಅನುಕೂಲ ವಾಗಿದೆ. ಇನ್ನುಳಿದ ರೈತರ ಜಮೀನುಗಳಿಗೆ ನೀರಿನ ಕೊರತೆ ಎದುರಾಗುವ ಕಾರಣ ಇದಕ್ಕೆ ಶಾಶ್ವತ ಮುಕ್ತಿ ದೊರಕಿಸುವ ಸಲುವಾಗಿ ಭದ್ರಾ ಮೇಲ್ದಂಡೆ ಮತ್ತು ಭದ್ರಾ ಉಪ ಕಣಿವೆ ಯೋಜನೆ ನಮ್ಮ ಸರ್ಕಾರದ ವರದಾನ ಎಂದರು. ಕಡೂರು ಕ್ಷೇತ್ರದಲ್ಲಿ ಯಾವ ಗ್ರಾಮಕ್ಕೆ ಹೋದರೂ ಕೂಡ ಇ- ಸ್ವತ್ತು ಸಮಸ್ಯೆ ಇದ್ದು ಸುಮಾರು 15 ಸಾವಿರ ಜನರಿಗೆ ಸ್ವತ್ತು ಇಲ್ಲ. ತಾಲೂಕಿನ 498 ಗ್ರಾಮಗಳ ಪೈಕಿ 321 ಗ್ರಾಮಗಳು ಮಾತ್ರ ಕಂದಾಯ ಗ್ರಾಮಗಳು. ಇವುಗಳಿಗೆ ಮಾತ್ರ ಇ-ಸ್ವತು ನೀಡಲು ಸಾಧ್ಯವಾಗಿತ್ತು. ತಮ್ಮ ಅವಧಿಯ 2 ವರ್ಷದಲ್ಲಿ ಉಳಿದ 131 ಹೊಸ ಕಂದಾಯ ಗ್ರಾಮಗಳ ಪೈಕಿ 71 ಗ್ರಾಮ ಗಳನ್ನು ಸರ್ಕಾರದ ಗಮನಕ್ಕೆ ತಂದು ಕಂದಾಯ ಗ್ರಾಮಗಳಾಗಿ ಘೋಷಣಿಸಿದ್ದು ಇದೀಗ 60 ಗ್ರಾಮಗಳು ಮಾತ್ರ ಬಾಕಿ ಇವೆ. ಅವುಗಳ ಸಮಸ್ಯೆ ಶೀಘ್ರ ಪರಿಹರಿಸಲಾಗುವುದು ಎಂದರು. ಕಡೂರು ಕ್ಷೇತ್ರ ವ್ಯಾಪ್ತಿಯಲ್ಲಿ 49 ಗ್ರಾಪಂಗಳಿವೆ. ಅದರಲ್ಲಿ19 ನೂತನ ಗ್ರಾಪಂ ಕಟ್ಟಡಗಳ ನಿರ್ಮಾಣಕ್ಕೆ ಈಗಾಗಲೇ ಭೂಮಿ ಪೂಜೆ ನೇರವೇರಿಸಲಾಗಿದೆ ಎಂದರು.ಬಳ್ಳೇಕೆರೆ ಪಂಚಾಯ್ತಿ ಕಟ್ಟಡ ವಿನೂತನ ಮತ್ತು ವಿಶಿಷ್ಠವಾಗಿ ಎಲ್ಲ ಸೌಕರ್ಯ ಕಲ್ಪಿಸಿ ನೂತನ ಕಟ್ಟಡ ಕಾಮಗಾರಿ ಮಾಡಿದ್ದು ಅಧ್ಯಕ್ಷರು ಮತ್ತು ಸದಸ್ಯರು ಸಾರ್ವಜನಿಕರ ಸಮಸ್ಯೆಗಳ ಪರ ಧ್ವನಿ ಎತ್ತಲು ಸಹಕಾರಿಯಾಗಿದೆ. ಇದಕ್ಕೆ ಶ್ರಮಿಸಿದ ಸರ್ವ ಸದಸ್ಯರು ಮತ್ತು ಗ್ರಾಮಸ್ಥರಿಗೆ ಅಭಿನಂದನೆ ತಿಳಿಸಿದ ಆನಂದ್, ನನ್ನ ಅವಧಿಯಲ್ಲಿ ಕ್ಷೇತ್ರದ ಜನರ ಋಣ ತೀರಿಸುವ ಜೊತೆಗೆ ಕಾಮಗಾರಿ ಸಾಧನೆಯ ಸಾಕ್ಷಿಗಳಾಗಿ ಪ್ರತಿ ಗ್ರಾಮಗಳಲ್ಲಿ ಇರುವಂತೆ ಮಾಡುವುದು ನನ್ನ ದ್ಯೇಯ ಎಂದರು. ಊರಿನ ಗೌಡರಾದ ಬಿ.ಎಂ.ಕೆಂಚೇಗೌಡ ಮಾತನಾಡಿ, ಇಂದಿರಾಗಾಂಧಿಯವರು ಈ ಊರಿಗೆ ಭೇಟಿ ನೀಡಿದ ಸಲುವಾಗಿ ಅಂದಿನ ಬಿ.ಎಂ. ಕರಿಯಪ್ಪ ಮತ್ತಿತರ ನೇತೃತ್ವದಲ್ಲಿ ಅನೇಕರ ಶ್ರಮದ ಕಾರಣ ಬಳ್ಳೇಕೆರೆಗೆ ಗ್ರಾಪಂ ತರಲು ಸಾಧ್ಯವಾಯಿತು. ಜೊತೆಗೆ ಇಂದಿರಾಗಾಂಧಿಯವರ ನೆನಪಿಗೆ ಅವರು ಭಾಷಣ ಮಾಡಿದ ಜಾಗದಲ್ಲೇ ಕಟ್ಟಡ ನಿರ್ಮಿಸಲಾಗಿತ್ತು. ಗ್ರಾಮದ ಸುತ್ತಮುತ್ತಲ ಜನರ ಒಳಿತಿಗೆ ದೇವಾಲಯದ 3 ಎಕರೆ ಜಾಗವನ್ನು ಸರ್ಕಾರಕ್ಕೆ ನೀಡಿ, ಅದರಲ್ಲಿ ಆಸ್ಪತ್ರೆ ಮತ್ತು ನೂತನ ಗ್ರಾಪಂ ಕಟ್ಟಡ ನಿರ್ಮಾಣಕ್ಕೆ ಊರಿನ ಜನರ ಸಹಕಾರ ನೀಡಿದ್ದರ ಫಲ ಈ ನೂತನ ಕಟ್ಟಡ ಎಂದರು.

ಉಪಾಧ್ಯಕ್ಷ ಬಿ.ಎಸ್.ಬಸವರಾಜ್ , ತಾಪಂ ಇಒ ಸಿ.ಆರ್.ಪ್ರವೀಣ್, ಗ್ರಾಪಂ ಮಾಜಿ ಅಧ್ಯಕ್ಷ ಕಂಸಾಗರ ಸೋಮಶೇಖರ್, ಬಳ್ಳೇಕೆರೆ ವಿಶ್ವನಾಥ್, ಶಶಿಧರ್, ವಿಜಯಕುಮಾರ್ ಮಾತನಾಡಿದರು.

- ಬಾಕ್ಸ್ -

₹ 25 ಲಕ್ಷ ವೆಚ್ಚದಲ್ಲಿ10 ಕೊಠಡಿ ನಿರ್ಮಾಣ

ಶ್ರೀ ಆಂಜನೇಯ ದೇವಾಲಯದ ಪಕ್ಕದ ಕಲ್ಯಾಣ ಮಂಟಪಕ್ಕೆ ಮದುವೆಗೆ ಆಗಮಿಸುವ ಜನರಿಗೆ ಉಳಿದು ಕೊಳ್ಳಲು ಸ್ಥಳವಿಲ್ಲ. ಹಾಗಾಗಿ ಹೆಚ್ಚುವರಿ 10 ಕೊಠಡಿ ಮಾಡಿಕೊಡಿ ಎಂಬ ಗ್ರಾಮಸ್ಥರ ಮನವಿಗೆ ಉತ್ತರಿಸಿದ ಶಾಸಕ ಆನಂದ್, ತಮ್ಮ ಅನುದಾನ ದಲ್ಲಿ ₹25 ಲಕ್ಷ ನೀಡುವುದಾಗಿ ಭರವಸೆ ನೀಡಿದರು.

ಗ್ರಾಪಂ ಅಧ್ಯಕ್ಷೆ ಕಲ್ಪನಾ ರೇಣುಕಪ್ಪ, ಸದಸ್ಯರಾದ ಬಂಜೇನಹಳ್ಳಿ ಬಿ.ಆರ್.ರಾಜಣ್ಣ,ಪೂರ್ಣಿಮಾ, ಸಿ.ಸೋಮಶೇಖರ್, ಶೇಖರಪ್ಪ, ಚಂದ್ರಮ್ಮ, ಸತ್ಯ.ಡಿ, ಗೌಡರಾದ ಅಪ್ಪೇಗೌಡ್ರು, ಪಿಡಿಒ ದಯಾನಂದ್, ಓಂಕಾರ ಮೂರ್ತಿ, ಇಂಜಿನಿಯರ್ ಹರಿರಾಂ, ಭೋಜರಾಜ್, ಪುಟ್ಟಸ್ವಾಮಿ ಸೇರಿದಂತೆ ಮತ್ತಿತರರಿದ್ದರು.

30 ಕೆಕೆಡಿಯು1. ಕಡೂರು ತಾಲೂಕಿನ ಬಳ್ಳೇಕೆರೆ ಗ್ರಾಮದಲ್ಲಿ ನೂತನವಾಗಿ ನಿರ್ಮಾಣವಾಗಿದ್ದ ಗ್ರಾಪಂ ಕಟ್ಟಡವನ್ನು ಶಾಸಕ ಕೆ.ಎಸ್. ಆನಂದ್ ಲೋಕಾರ್ಪಣೆಗೊಳಿಸಿದರು.