ಸಾರಾಂಶ
ಕನ್ನಡಪ್ರಭ ವಾರ್ತೆ ಬೀದರ್
ಬೀದರ್ ಲೋಕಸಭಾ ಚುನಾವಣೆ ಮತ ಎಣಿಕೆಗೆ 408 ಸಿಬ್ಬಂದಿ ನಿಯೋಜನೆ ಮಾಡಲಾಗಿದೆ. ಎಣಿಕೆ ಒಟ್ಟು 20 ರೌಂಡ್‌ಗಳಲ್ಲಿ ನಡೆಯಲಿದೆ. ಬೀದರ್ ಲೋಕಸಭಾ ಕ್ಷೇತ್ರದ ಒಟ್ಟು 8 ವಿಧಾನಸಭಾ ಕ್ಷೇತ್ರದ ಕೌಂಟರ್ ಹಾಲ್ ತಯಾರಿ ಮಾಡಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿಗಳಾದ ಜಿಲ್ಲಾಧಿಕಾರಿ ಗೋವಿಂದರೆಡ್ಡಿ ತಿಳಿಸಿದರು.ಬೀದರ್ ಲೋಕಸಭಾ ಸಾರ್ವತ್ರಿಕ ಚುನಾವಣೆ ಮತ ಎಣಿಕೆ ಜೂ.4ರಂದು ಬೀದರ್ ನಗರದ ಬಿವಿಬಿ ಕಾಲೇಜಿನಲ್ಲಿ ನಡೆಯಲಿರುವ ಹಿನ್ನೆಲೆ ಅವರು ಸೋಮವಾರ ಅಂತಿಮ ಹಂತದ ಸಿದ್ಧತೆ ಪರಿಶೀಲನೆ ನಡೆಸಿ ಪತ್ರಕರ್ತರಿಗೆ ಮಾತನಾಡಿ, ಅಂಚೆ ಮತ ಪತ್ರ ಹಾಗೂ ಇಟಿಪಿಬಿಎಸ್‌ಗೆ ತಲಾ ಒಂದು ಮತ ಎಣಿಕೆ ಕೊಠಡಿಗಳು ಇರಲಿವೆ. ಪ್ರತಿ ಟೇಬಲ್‌ಗೆ ಈಗಾಗಲೇ ಎಲ್ಲಾ ಸಾಮಗ್ರಿ ನೀಡಲಾಗಿದೆ ಎಂದು ಹೇಳಿದರು.
ಮತ ಎಣಿಕೆ ಸಿಬ್ಬಂದಿಗೆ ಎರಡು ಹಂತಗಳಲ್ಲಿ ತರಬೇತಿ ನೀಡಲಾಗಿದೆ. ಜೂ.4ರಂದು ಬೆಳಗ್ಗೆ 7.15ಕ್ಕೆ ಸ್ಟ್ರಾಂಗ್ ರೂಮ್ ತೆರೆಯಲಾಗುವುದು. ಅಭ್ಯರ್ಥಿ ಹಾಗೂ ಚುನಾವಣಾ ಎಜೆಂಟರುಗಳಿಗೆ ಸಭೆ ಮಾಡಿ ಎಲ್ಲಾ ಮಾಹಿತಿ ನೀಡಲಾಗಿದೆ. ಮಾಧ್ಯಮ ಕೇಂದ್ರದಲ್ಲಿ ಮಾತ್ರ ಮೊಬೈಲ್ ಬಳಸುವಂತೆ ಚುನಾವಣಾ ಆಯೋಗದ ನಿರ್ದೆಶನವಿದ್ದು ಈ ಮಾಹಿತಿಯನ್ನು ಈಗಾಗಲೇ ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಲಾಗಿದೆ ಎಂದರು.ಜೂ.3ರ ಮಧ್ಯರಾತ್ರಿ 12ರಿಂದ ಜೂ.4 ಮಧ್ಯರಾತ್ರಿ 12 ಗಂಟೆಗಳವರೆಗೆ ಬೀದರ್ ಜಿಲ್ಲೆಯಾದ್ಯಂತ ಶುಷ್ಕ ದಿನ ಎಂದು ಘೋಷಿಸಲಾಗಿದೆ ಮತ್ತು ಜೂ.4ರ ಬೆಳಗ್ಗೆ 6 ಗಂಟೆಯಿಂದ ಜೂ.5ರ ಬೆಳಗ್ಗೆ 6ರ ವರೆಗೆ ಭಾರತೀಯ ದಂಡ ಪ್ರಕ್ರಿಯಾ ಸಂಹಿತೆ ಪ್ರಕ್ರಿಯ ಕಲಂ144ರನ್ವಯ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಮತ ಎಣಿಕೆ ಹಿನ್ನೆಲೆ ಬಿ.ವ್ಹಿ ಭೂಮರೆಡ್ಡಿ ಕಾಲೇಜಿನ ಮುಖ್ಯ ದ್ವಾರದ ಎದುರುಗಡೆ ರಸ್ತೆ ಸಂಚಾರ ಬದಲಾವಣೆ ಮಾಡಲಾಗಿದೆ ಎಂದು ಹೇಳಿದರು.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಮತ ಎಣಿಕೆ ಸುಸೂತ್ರವಾಗಿ ನಡೆದಿತ್ತು ಅದರಂತೆ ಈ ಸಲ ಬೀದರ್ ಲೋಕಸಭಾ ಸಾರ್ವತ್ರಿಕ ಚುನಾವಣೆ ಮತ ಎಣಿಕೆ ಯಾವುದೇ ತೊಂದರೆ ಇಲ್ಲದೆ ಶಾಂತ ರೀತಿಯಲ್ಲಿ ನಡೆಯಲಿದೆ. ಮತ ಎಣಿಕೆಗೆ ಆಗಮಿಸುವ ಎಲ್ಲಾ ಅಧಿಕಾರಿ ಮತ್ತು ಸಿಬ್ಬಂದಿ ಹಾಗೂ ಅಭ್ಯರ್ಥಿಗಳು, ಚುನಾವಣಾ ಎಜೆಂಟರು ತಮಗೆ ನೀಡಿದ ಗುರುತಿನ ಚೀಟಿ ಧರಿಸಿಕೊಂಡು ಮತ ಎಣಿಕೆ ಕೇಂದ್ರದೊಳಗೆ ಬರಬೇಕೆಂದು ಹೇಳಿದರು.ಈ ವೇಳೆ ಚುನಾವಣಾ ಸಾಮಾನ್ಯ ವೀಕ್ಷಕರಾದ ದೀಪಂಕರ್ ಮೋಹಪಾತ್ರ, ಬೀದರ್ ಸಹಾಯಕ ಆಯುಕ್ತರಾದ ಲವೀಶ್ ಓರ್ಡಿಯಾ, ಅಪರ ಜಿಲ್ಲಾಧಿಕಾರಿ ಸಿದ್ರಾಮೇಶ್ವರ, ಚುನಾವಣಾ ತಹಸೀಲ್ದಾರ ಅಣ್ಣಾರಾವ್ ಪಾಟೀಲ್, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಮಹೇಶ ಮೆಘಣ್ಣವರ ಸೇರಿ ಮತ ಎಣಿಕೆಗೆ ನಿಯೋಜಿತ ಇತರೆ ಅಧಿಕಾರಿ ಮತ್ತು ಸಿಬ್ಬಂದಿ ಉಪಸ್ಥಿತರಿದ್ದರು.