ಸಾರಾಂಶ
ಕನ್ನಡಪ್ರಭ ವಾರ್ತೆ ಸಿಂಧನೂರು
ತುಂಗಭದ್ರಾ ಎಡದಂಡೆ ನಾಲೆ ವ್ಯಾಪ್ತಿಗೊಳಪಡುವ 40ನೇ ವಿತರಣಾ ಕಾಲುವೆಗೆ ನೀರು ಬಿಡುವಂತೆ ಅಖಿಲ ಭಾರತ ಕಿಸಾನ್ ಸಭಾ ನೇತೃತ್ವದಲ್ಲಿ ಮಿನಿವಿಧಾನಸೌಧ ಕಚೇರಿ ಮುಂದೆ ನಡೆದಿರುವ ಧರಣಿ ಸತ್ಯಾಗ್ರಹ ಶನಿವಾರವು ಎರಡನೇ ದಿನಕ್ಕೆ ಮುಂದುವರೆದಿದೆ.ಶಾಸಕ ಹಂಪನಗೌಡ ಬಾದರ್ಲಿ ಅವರು ಧರಣಿ ಸ್ಥಳಕ್ಕೆ ಭೇಟಿ ನೀಡಿ ರೈತರೊಂದಿಗೆ ಸಮಾಲೋಚನೆ ನಡೆಸಿದರು. ಎಡದಂಡೆ ನಾಲೆಗೆ ನೀರು ಬಿಟ್ಟ ದಿನದಿಂದಲೂ 40ನೇ ವಿತರಣಾ ಕಾಲುವೆಗೆ ಹನಿ ನೀರು ಬಂದಿಲ್ಲ. ಹೈಬ್ರೀಡ್ ಜೋಳ ವಡೆ ಕಟ್ಟಿದ್ದು ಬಾಡಿ ನಿಂತಿದೆ. ಜೋಳಕ್ಕೆ ತಕ್ಷಣ ನೀರು ಹರಿಸದಿದ್ದರೆ ಸಹಸ್ರಾರು ಎಕರೆ ಜಮೀನಿನಲ್ಲಿ ಬೆಳೆದ ಬೆಳೆ ಸಂಪೂರ್ಣ ಒಣಗುವುದರಿಂದ ಕೋಟಿಗಟ್ಟಲೇ ಬೆಳೆ ಬಾಳುವ ಬೆಳೆ ಹಾನಿಯಾಗುತ್ತದೆ ಎಂದು ರೈತರು ಶಾಸಕರಿಗೆ ಮನವರಿಕೆ ಮಾಡಿದರು.
ಇಲ್ಲಿಯವರೆಗೆ ನೀರು ಬಿಡದಿರುವ ನೀರಾವರಿ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ರೈತರು, ಎರಡು ದಿನದ ಹಿಂದೆಯೇ ನೀರು ಬಿಡುವುದಾಗಿ ನೀರಾವರಿ ಅಧಿಕಾರಿಗಳು ಮತ್ತು ತಹಸೀಲ್ದಾರರು ಹೇಳಿ ಮಾತು ತಪ್ಪಿದ್ದಾರೆ ಎಂದು ಆರೋಪಿಸಿದರು.ನಿಮ್ಮನ್ನು ಶಾಸಕರನ್ನಾಗಿ ಆಯ್ಕೆ ಮಾಡಿದ್ದೇವೆ. ಅಧಿಕಾರಿಗಳಿಗೆ ಆದೇಶ ನೀಡಿ ನೀರು ಪೂರೈಕೆ ಮಾಡಬೇಕು ಎಂದು ರೈತರು ಶಾಸಕರನ್ನು ಕೆರಳುವಂತೆ ಮಾಡಿದರು. ಕೋಪಗೊಂಡಂತೆ ಕಂಡ ಶಾಸಕರು ಸರ್ಕಲ್ ಇನ್ಸ್‌ಪೆಕ್ಟರ್ ವೀರಾರಡ್ಡಿ ಮತ್ತು ನೀರಾವರಿ ಇಲಾಖೆ ಕಾರ್ಯಪಾಲಕ ಎಂಜನಿಯರ್ ಮತ್ತು ತುರ್ವಿಹಾಳ ಉಪವಿಭಾಗದ ಸಹಾಯಕ ಕಾರ್ಯಪಾಲಕ ಎಂಜನಿಯರ್ ಅವರನ್ನು ಜೊತೆಯಲ್ಲಿ ಕರೆದುಕೊಂಡು ಕಾಲುವೆಗೆ ತೆರಳಿ ನೀರು ಬಿಡಿಸುವದಾಗಿ ಭರವಸೆ ನೀಡಿ ನಿರ್ಗಮಿಸಿದರು.
ಅಖಿಲ ಭಾರತ ಕಿಸಾನ್ ಸಭಾದ ಸಂಚಾಲಕ ವೆಂಕನಗೌಡ ಗದ್ರಟಗಿ, ಸಹಸಂಚಾಲಕ ಬಾಬರ್ ಪಟೇಲ್, ಮನುಜಮತ ಬಳಗ ಅಧ್ಯಕ್ಷ ಡಿ.ಎಚ್.ಕಂಬಳಿ, ಕಿಸಾನ್ ಸಭಾ ಅಧ್ಯಕ್ಷ ಜಾವೇದಪಾಷಾ, ಉಪಾಧ್ಯಕ್ಷ ಹೊಳಿಯಪ್ಪ ಹೆಗ್ಗಾಪೂರ, ಸದಸ್ಯರಾದ ಮೌಲಾಸಾಬ ಕೊಪ್ಪಳ, ಯಲ್ಲಪ್ಪ ಕಲ್ಲೂರು, ಚಾಂದಪಾಷಾ ದೊಡ್ಡಮನಿ, ಪ್ರಧಾನ ಕಾರ್ಯದರ್ಶಿ ಚಾಂದಪಾಷಾ ಪಟೇಲ್, ಸಂಘಟನಾ ಕಾರ್ಯದರ್ಶಿ ಬುಡ್ಡಾಸಾಬ ಸೇರಿದಂತೆ ಅನೇಕ ರೈತರು ಇದ್ದರು.----4ಕೆಪಿಎಸ್ಎನ್ಡಿ3: ಸಿಂಧನೂರಿನ ಅಖಿಲ ಭಾರತ ಕಿಸಾನ್ ಸಭಾ ನೇತೃತ್ವದಲ್ಲಿ ಮಿನಿವಿಧಾನಸೌಧ ಕಚೇರಿ ಮುಂದೆ ಎರಡನೇ ದಿನ ಶನಿವಾರವೂ ಮುಂದುವರೆದಿರುವ ಧರಣಿ ಸ್ಥಳಕ್ಕೆ ಶಾಸಕ ಹಂಪನಗೌಡ ಬಾದರ್ಲಿ ಭೇಟಿ ನೀಡಿ ರೈತರೊಂದಿಗೆ ಚರ್ಚಿಸಿದರು.