42 ಅಕ್ರಮ ಸಿಮ್‌ ಕಾರ್ಡ್‌ ಖರೀದಿ: ಐವರ ಬಂಧನ

| Published : Feb 05 2024, 01:48 AM IST

ಸಾರಾಂಶ

ಬಂಧಿತರು ವಿವಿಧ ವ್ಯಕ್ತಿಗಳ ಹೆಸರಿನಲ್ಲಿ ಒಟ್ಟು 42 ಸಿಮ್ ಖರೀದಿ ಮಾಡಿಸಿಕೊಂಡು ಬೆಂಗಳೂರಿಗೆ ತೆಗೆದುಕೊಂಡು ಹೋಗುತ್ತಿರುವ ಸಂದರ್ಭದಲ್ಲಿ ಖಚಿತ ಮಾಹಿತಿ ಮೇರೆಗೆ ಬಂಧಿಸಲಾಗಿದೆ.

ಕನ್ನಡಪ್ರಭ ವಾರ್ತೆ ಬೆಳ್ತಂಗಡಿ

ವಿವಿಧ ವ್ಯಕ್ತಿಗಳ ಹೆಸರಿನಲ್ಲಿ ಸಿಮ್ ಕಾರ್ಡ್ ಖರೀದಿಸಿದ ಐವರನ್ನು ಧರ್ಮಸ್ಥಳ ಪೊಲೀಸರು ಬಂಧಿಸಿದ್ದಾರೆ.

ನೆರಿಯ ಗ್ರಾಮದ ಗುಂಪಕಲ್ಲು ನಿವಾಸಿ ರಮೀಝ್ (20), ಬಂಟ್ವಾಳ ತಾಲೂಕಿನ ಬಡಗಕಜೆಕರ್ ಗ್ರಾಮದ ಪಾಂಡವರಕಲ್ಲು ನಿವಾಸಿ ಅಕ್ಬರ್ ಆಲಿ (24), ಬೆಳ್ತಂಗಡಿ ಸಂಜಯನಗರ ನಿವಾಸಿ ಮೊಹಮ್ಮದ್ ಮುಸ್ತಫಾ (22), ಪಡಂಗಡಿ ಬದ್ರಿಯಾ ಮನ್ನೀಲ್ ನಿವಾಸಿ ಮಹಮ್ಮದ್ ಸಾದಿಕ್ (27) ಮತ್ತು ಕಲ್ಮಂಜ ಗ್ರಾಮದ ನಿಡಿಗಲ್‌ ನಿವಾಸಿ 17 ವರ್ಷದ ಅಪ್ರಾಪ್ತ ಬಾಲಕನನ್ನು ಬಂಧಿಸಲಾಗಿದೆ.ಬಂಧಿತರು ವಿವಿಧ ವ್ಯಕ್ತಿಗಳ ಹೆಸರಿನಲ್ಲಿ ಒಟ್ಟು 42 ಸಿಮ್ ಖರೀದಿ ಮಾಡಿಸಿಕೊಂಡು ಬೆಂಗಳೂರಿಗೆ ತೆಗೆದುಕೊಂಡು ಹೋಗುತ್ತಿರುವ ಸಂದರ್ಭದಲ್ಲಿ ಖಚಿತ ಮಾಹಿತಿ ಮೇರೆಗೆ ಬಂಧಿಸಲಾಗಿದೆ.ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಐದು ಜನ ಆರೋಪಿಗಳ ವಿರುದ್ಧ ವಂಚನೆ, ಒಳಸಂಚು ಪ್ರಕರಣ ದಾಖಲಾಗಿದೆ. ಪ್ರಕರಣದಲ್ಲಿ ಬಂಧನವಾಗಿರುವ ಐದು ಜನ ಆರೋಪಿಗಳಲ್ಲಿ ನಾಲ್ಕು ಜನರನ್ನು ಫೆ.2ರಂದು ಸಂಜೆ ಧರ್ಮಸ್ಥಳ ಪೊಲೀಸರು ಬೆಳ್ತಂಗಡಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು. ನ್ಯಾಯಾಲಯ ನಾಲ್ಕು ಜನರಿಗೂ ನ್ಯಾಯಾಂಗ ಬಂಧನ ವಿಧಿಸಿದೆ. ಮತ್ತೊಬ್ಬ ಆರೋಪಿ ಅಪ್ರಾಪ್ತ ಬಾಲಕನಾಗಿರುವ ಕಾರಣದಿಂದ ಬಾಲಕನ ತಂದೆಯನ್ನು ಕರೆಸಿ ಬಾಲ ನ್ಯಾಯಾಲಯಕ್ಕೆ ಹಾಜರಾಗಲು ನೋಟಿಸ್‌ ನೀಡಿ ತಂದೆಯ ಜೊತೆ ಮನೆಗೆ ಕಳುಹಿಸಿದ್ದಾರೆ ಎನ್ನಲಾಗಿದೆ.* ಆರೋಪಿಗಳಿಗೆ ಜಾಮೀನುಧರ್ಮಸ್ಥಳ ಪೊಲೀಸರು ಧರ್ಮಸ್ಥಳ ಬಸ್ ಸ್ಟ್ಯಾಂಡ್‌ನಲ್ಲಿ ಐದು ಜನ ಆರೋಪಿಗಳು ಅಕ್ರಮವಾಗಿ 42 ಮೊಬೈಲ್ ಸಿಮ್ ಗಳನ್ನು ಹೊಂದಿದ್ದಾರೆ ಎಂಬ ಆರೋಪದ ಮೇಲೆ ಬಂಧಿಸಿ ಬೆಳ್ತಂಗಡಿ ನ್ಯಾಯಾಲಯಕ್ಕೆ ಆರೋಪಿಗಳನ್ನು ಹಾಜರುಪಡಿಸಲಾಯಿತು. ನ್ಯಾಯಾಲಯದಲ್ಲಿ ಆರೋಪಿಗಳ ಪರ ವಕೀಲರು, ಒಬ್ಬ ವ್ಯಕ್ತಿಯು ಕಾನೂನು ರೀತಿಯಲ್ಲಿ 9 ಸಿಮ್ ಕಾರ್ಡ್‌ಗಳನ್ನು ಹೊಂದಬಹುದು ಎಂಬುದನ್ನು ನ್ಯಾಯಾಲಯಕ್ಕೆ ಮನವರಿಕೆ ಮಾಡಿದ್ದು, ವಾದವನ್ನು ಆಲಿಸಿದ ನ್ಯಾಯಾಲಯ, ಆರೋಪಿಗಳನ್ನು ಜಾಮೀನಿನ ಮೇಲೆ ಬಿಡುಗಡೆಗೊಳಿಸಿ ಆದೇಶಿಸಿದೆ.ಪ್ರಕರಣದಲ್ಲಿ ಆರೋಪಿಯ ಪರವಾಗಿ ಲೆಕ್ಸ್ ವಿಷನ್ ಲಾ ಚೇಂಬರ್ಸ್ (ಬೆಳ್ತಂಗಡಿ ಹಾಗೂ ಬೆಂಗಳೂರು) ನ ನ್ಯಾಯವಾದಿಗಳಾದ ನವಾಜ್ ಶರೀಫ್ ಎ., ಮಮ್ತಾಜ್ ಬೇಗಂ, ಇರ್ಷಾದ್ ಮತ್ತು ಸಪ್ನಾಝ ಇವರನ್ನು ಒಳಗೊಂಡ ವಕೀಲರು ತಂಡ ವಾದಿಸಿತ್ತು.ಕೇಂದ್ರ ಗುಪ್ತಚರ ಇಲಾಖೆ ತನಿಖೆ ಸಾಧ್ಯತೆ: ಅಕ್ರಮ ಸಿಮ್ ಪ್ರಕರಣ ತಿಳಿದುಬಂದ ಬಳಿಕ ಎಚ್ಚೆತ್ತುಕೊಂಡ ಕೇಂದ್ರ ಗುಪ್ತಚರ ಇಲಾಖೆ, ಸ್ಥಳೀಯ ಪೊಲೀಸ್ ಇಲಾಖೆಯಿಂದ ಅಧಿಕಾರಿಗಳು ಇಂಚಿಂಚು ಮಾಹಿತಿ ಪಡೆದಿದ್ದಾರೆ. ಹೀಗಾಗಿ ತಂಡ ಬೆಳ್ತಂಗಡಿಗೆ ಆಗಮಿಸುವ ಸಾಧ್ಯತೆ ಇದೆ.ಆರೋಪಿಯೊಬ್ಬ ದುಬೈನಲ್ಲಿ ಎರಡು ವರ್ಷ ಇದ್ದು, ನಾಲ್ಕು ತಿಂಗಳ ಹಿಂದೆ ಊರಿಗೆ ಬಂದಿದ್ದ. ದುಬೈನಲ್ಲಿ ಇದ್ದುಕೊಂಡೇ ಅಕ್ರಮ ಸಿಮ್ ಖರೀದಿ ಮಾಡಿಸಿದ್ದ. ವಿದೇಶದ ನಂಟು ಇರುವುದರಿಂದ ಪೊಲೀಸರು ಇದರ ಬಗ್ಗೆ ತನಿಖೆಗೆ ಇಳಿದಿದ್ದಾರೆ. ಯುವಕರು ಆನ್‌ಲೈನ್ ವಿದೇಶಿ ಕರೆನ್ಸಿ ವ್ಯವಹಾರಕ್ಕೆ ಟ್ರೇಡಿಂಗ್ ದಂಧೆಗೆ ಸಿಮ್ ಕಾರ್ಡ್ ಬಳಸುತ್ತಿರುವ ಶಂಕೆ ವ್ಯಕ್ತವಾಗಿದೆ. ಒಂದು ಸಿಮ್ ಕಾರ್ಡ್‌ಗೆ 800 ರು.ನಂತೆ ಕಮಿಷನ್ ಕೊಟ್ಟಿದ್ದರು ಮತ್ತು ಹಲವರು ತಮ್ಮ ವಿಳಾಸ ಕೊಟ್ಟು ಸಿಮ್ ಕಾರ್ಡ್ ಖರೀದಿಸಿ ಕೊಟ್ಟಿದ್ದರು ಎನ್ನಲಾಗುತ್ತಿದೆ. ಸಿಮ್ ಅನ್ನು ಮತ್ತೊಬ್ಬ ವ್ಯಕ್ತಿಗೆ ಕಳುಹಿಸಿ ಆನ್‌ಲೈನ್ ಟ್ರೇಡಿಂಗ್ ವ್ಯವಹಾರ ನಡೆಸುತ್ತಿದ್ದರು. ಒಂದು ಸಿಮ್ ಕಾರ್ಡ್ ಬಳಸಿ ಆ್ಯಪ್ ಮೂಲಕ 20 ಬಾರಿಯಷ್ಟೇ ಟ್ರೇಡಿಂಗ್ ಸಾಧ್ಯ. ಹೀಗಾಗಾಗಿ ಹಲವು ಸಿಮ್ ಕಾರ್ಡ್ ಪಡೆದು ಟ್ರೇಡಿಂಗ್ ನಡೆಸಿರೋ ಅನುಮಾನ ವ್ಯಕ್ತವಾಗಿದೆ.

ಮೋಸದ ಕೃತ್ಯಕ್ಕೆ ಸಿಮ್‌ ಬಳಕೆ: ದ.ಕ. ಎಸ್ಪಿ ಹೇಳಿಕೆ

ಅಪರಿಚಿತ ಮೊಬೈಲ್‌ ಸಿಮ್‌ ಕಾರ್ಡ್‌ನ್ನು ಆನ್‌ಲೈನ್‌ ಮೂಲಕ ವ್ಯವಹಾರಕ್ಕಾಗಿ ಹಾಗೂ ಆನ್‌ಲೈನ್‌ ಮೋಸದ ಕೃತ್ಯ ಎಸಗುವ ಉದ್ದೇಶದಿಂದ ಆರೋಪಿಗಳು ಇರಿಸಿಕೊಂಡಿದ್ದರು ಎಂದು ದ.ಕ.ಜಿಲ್ಲಾ ಎಸ್ಪಿ ರಿಷ್ಯಂತ್‌ ತಿಳಿಸಿದ್ದಾರೆ.

ಈ ಐದು ಮಂದಿ ಯುವಕರನ್ನು ಧರ್ಮಸ್ಥಳ ಕೆಎಸ್‌ಆರ್‌ಟಿಸಿ ನಿಲ್ದಾಣ ಬಳಿ ಗುರುವಾರ ವಶಕ್ಕೆ ಪಡೆಯಲಾಗಿದೆ. ಈ ಬಗ್ಗೆ ಧರ್ಮಸ್ಥಳ ಪೊಲೀಸ್‌ ಠಾಣೆಯಲ್ಲಿ ಕಲಂ 420, 120 ಬಿ ಜತೆಗೆ 34 ಐಪಿಸಿರಂತೆ ಪ್ರಕರಣ ದಾಖಲಿಸಲಾಗಿದೆ. ತನಿಖೆಯ ಪ್ರಗತಿ ಬಗ್ಗೆ ಮುಂದೆ ತಿಳಿಸಲಾಗುವುದು ಎಂದಿದ್ದಾರೆ.