ಕಾಳ ಸಂತೆಯಲ್ಲಿ 421 ಚೀಲ ಪಡಿತರ ಅಕ್ಕಿ ಜಪ್ತಿ

| Published : Mar 25 2024, 12:56 AM IST

ಸಾರಾಂಶ

ಆಹಾರ ಮತ್ತು ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆ ಅಧಿಕಾರಿಗಳು ಮತ್ತು ಪೊಲೀಸರು ದಾಳಿ ನಡೆಸಿ 421 ಚೀಲ ಪಡಿತರ ಅಕ್ಕಿ ಜಪ್ತಿ ಮಾಡಿದ್ದಾರೆ.

ಕನ್ನಡಪ್ರಭ ವಾರ್ತೆ ಕಲಬುರಗಿ

ಮಾಲಗತ್ತಿ ರಸ್ತೆ ಸೋನಿಯಾ ಗಾಂಧಿ ಕಾಲೋನಿ ಮತ್ತು ರಾಜೀವಗಾಂಧಿ ಆಶ್ರಯ ಕಾಲೋನಿ ಸೇವಾಲಾಲ್ ಚೌಕ್ ಹತ್ತಿರದ ಮನೆಯಲ್ಲಿ ಪಡಿತರ ಚೀಟಿದಾರರಿಗೆ ವಿತರಿಸುವ ಹಾಗೂ ಸರ್ಕಾರದ ವಿವಿಧ ಯೋಜನೆಗಳಿಗೆ ಬಿಡುಗಡೆಯಾದ ಅಕ್ಕಿಯನ್ನು ಹೆಚ್ಚಿನ ಬೆಲೆಗೆ ಕಾಳ ಸಂತೆಯಲ್ಲಿ ಮಾರಾಟ ಮಾಡಲು ಸಂಗ್ರಹಿಸಿ ಇಡಲಾಗಿದೆ ಎಂಬ ಮಾಹಿತಿ ಮೇಲೆ ಆಹಾರ ಮತ್ತು ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆ ಅಧಿಕಾರಿಗಳು ಮತ್ತು ಪೊಲೀಸರು ದಾಳಿ ನಡೆಸಿ 421 ಚೀಲ ಪಡಿತರ ಅಕ್ಕಿ ಜಪ್ತಿ ಮಾಡಿದ್ದಾರೆ.

ರಾಜೀವಗಾಂಧಿ ಆಶ್ರಯ ಕಾಲೋನಿ ಸೇವಾಲಾಲ್ ಚೌಕ್ ಹತ್ತಿರದ ಮನೆಯಲ್ಲಿ ಅಕ್ರಮವಾಗಿ ಪಡಿತರ ಅಕ್ಕಿ ಸಂಗ್ರಹಿಸಿ ಇಡಲಾಗಿದೆ ಎಂಬ ಮಾಹಿತಿ ಮೇಲೆ ಆಹಾರ ಮತ್ತು ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಸಹಾಯಕ ನಿರ್ದೇಶಕ ದೌಲತರಾಯ ಪಾಟೀಲ, ಆಹಾರ ನಿರೀಕ್ಷಕಿ ಭಾರತಿ ಪಾಟೀಲ ಹಾಗೂ ಚೌಕ್ ಪೊಲೀಸ್ ಠಾಣೆ ಸಿಬ್ಬಂದಿ ಸುರೇಶ, ರಾಜಕುಮಾರ ಅವರು ದಾಳಿ ನಡೆಸಿ ₹3.33 ಲಕ್ಷ ಮೌಲ್ಯದ 50 ಕೆಜಿ ತೂಕದ 226 ಚೀಲ ಅಂದಾಜು 133 ಕ್ವಿಂಟಲ್ ಅಕ್ಕಿ ಜಪ್ತಿ ಮಾಡಿ ರಾಜೀವ ಗಾಂಧಿ ಆಶ್ರಯ ಕಾಲೋನಿ ಬಾಬುರಾವ ಚವ್ಹಾಣ್ ಹಾಗೂ ಭರತ್ ಕಾಲೋನಿ ಶರಣು ಹಿರೇಮನಿ ವಿರುದ್ಧ ಚೌಕ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಇನ್ನು ಮಾಲಗತ್ತಿ ರಸ್ತೆ ಸೋನಿಯಾಗಾಂಧಿ ಕಾಲೋನಿಯ ಮನೆಯೊಂದರಲ್ಲಿ ಅಕ್ರಮವಾಗಿ ಪಡಿತರ ಅಕ್ಕಿ ಸಂಗ್ರಹಿಸಿ ಇಡಲಾಗಿದೆ ಎಂಬ ಮಾಹಿತಿ ಮೇಲೆ ಆಹಾರ ನಿರೀಕ್ಷಕರಾದ ವಿದ್ಯಾಶ್ರೀ ಪಾಟೀಲ, ಸಿಸಿಬಿ ಘಟಕದ ಪಿಐ ಪುಲ್ಲಯ್ಯ ರಾಠೋಡ್, ಪಿಎಸ್‍ಐ ಶಿವಪ್ಪ, ಸಿಬ್ಬಂದಿ ಸುನೀಲ, ಯಲ್ಲಪ್ಪ, ಅಶೋಕ, ನಾಗರಾಜ, ವಿಶ್ವವಿದ್ಯಾಲಯ ಪೊಲೀಸ್ ಠಾಣೆ ಪಿಎಸ್‍ಐ ಇಬ್ರಾಹಿಂ, ಸಿಬ್ಬಂದಿ ಸುಲ್ತಾನ್ ಅವರು ದಾಳಿ ನಡೆಸಿ ಬಾಬು ಖಾಜಾಮಿಯಾ ಚಿತ್ತಾಪೂರ (56) ಎಂಬಾತನನ್ನು ಬಂಧಿಸಿ ₹3.82 ಲಕ್ಷ ಮೌಲ್ಯದ 50 ಕೆಜಿ ತೂಕದ 155 ಚೀಲ ಪಡಿತರ ಅಕ್ಕಿ ಜಪ್ತಿ ಮಾಡಿದ್ದಾರೆ. ಚೌಕ್ ಮತ್ತು ವಿಶ್ವವಿದ್ಯಾಲಯ ಪೊಲೀಸ್ ಠಾಣೆಗಳಲ್ಲಿ ಪ್ರತ್ಯೇಕ ಪ್ರಕರಣ ದಾಖಲಾಗಿದೆ.