ಸಾರಾಂಶ
ರಾಮನಗರ: ಪ್ರಯಾಣಿಕರಿಗೆ ಅಗತ್ಯ ಮೂಲ ಸೌಕರ್ಯಗಳ ಕೊರತೆಯ ನಡುವೆಯೂ ಬೆಂಗಳೂರು - ಮೈಸೂರು ಎಕ್ಸ್ ಪ್ರೆಸ್ ವೇ ಟೋಲ್ ಸಂಗ್ರಹ ಆರಂಭವಾದ ಮೊದಲ ವರ್ಷದಲ್ಲಿಯೇ 438.28 ಕೋಟಿ ರು.ಗಳಷ್ಟು ಟೋಲ್ ಶುಲ್ಕ ಸಂಗ್ರಹ ಮಾಡಿದೆ.
ರಾಜ್ಯದಲ್ಲಿರುವ ಬೇರೆ ರಾಷ್ಟ್ರೀಯ ಹೆದ್ದಾರಿಗಳಿಗೆ ಹೋಲಿಕೆ ಮಾಡಿದಲ್ಲಿ ಬೆಂಗಳೂರು - ಮೈಸೂರು ನಡುವಿನ ಎಕ್ಸ್ ಪ್ರೆಸ್ ವೇ ಅತ್ಯಂತ ಕಡಿಮೆ ಅವಧಿಯಲ್ಲಿಯೇ ಕಣ್ಮಿಣಿಕೆ - ಶೇಷಗಿರಿಹಳ್ಳಿ ಟೋಲ್ ನಲ್ಲಿ 278.91 ಕೋಟಿ ಹಾಗೂ ಗಣಂಗೂರು ಟೋಲ್ ಪ್ಲಾಜಾದಲ್ಲಿ 159.37 ಕೋಟಿ ರು. ಸೇರಿ ಒಟ್ಟು 438.28 ಕೋಟಿ ರು. ಸಂಗ್ರಹಿಸುವ ಮೂಲಕ ಟೋಲ್ ಸಂಗ್ರಹಣೆಯಲ್ಲಿಯೂ ಸೂಪರ್ ಫಾಸ್ಟ್ ಎನಿಸಿಕೊಂಡಿದೆ.ಈಗಾಗಲೇ ಎಕ್ಸ್ ಪ್ರೆಸ್ ವೇ ನಿರ್ಮಾಣಕ್ಕಾಗಿ ವೆಚ್ಚ ಮಾಡಿದ ಹಣದಲ್ಲಿ ಶೇ.10ರಷ್ಟನ್ನು ಟೋಲ್ ಶುಲ್ಕದಿಂದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಜಮೆಯಾಗಿರುವ ಸಂಗತಿಯನ್ನು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಖಚಿತ ಪಡಿಸಿದೆ.
ಅಂದರೆ ಬೆಂಗಳೂರು - ಮೈಸೂರು ಎಕ್ಸ್ ಪ್ರೆಸ್ ವೇ 119 ಕಿಮೀ ಉದ್ದವಿದ್ದು, ಇದರ ನಿರ್ಮಾಣಕ್ಕೆ (ಭೂಸ್ವಾಧೀನ ಹೊರತುಪಡಿಸಿ) ಎನ್ಎಚ್ಎಐ 4473 ಕೋಟಿ ರುಪಾಯಿ ಖರ್ಚು ಮಾಡಿದೆ. ರಸ್ತೆ ನಿರ್ಮಾಣಕ್ಕೆ ಮಾಡಿದ ಖರ್ಚಿನ ಶೇ.10 ರಷ್ಟು ಹಣವನ್ನು ಮೊದಲ 18 ತಿಂಗಳಲ್ಲೇ ವಸೂಲಾಗಿದ್ದು, ಕೆಲವೇ ವರ್ಷಗಳಲ್ಲಿ ಹೆದ್ದಾರಿ ನಿಮಾರ್ಣಕ್ಕೆ ಖರ್ಚಾಗಿರುವ ಪೂರ್ಣ ಹಣ ವಾಪಸ್ಸಾಗುವ ಸಾಧ್ಯತೆಗಳಿವೆ.ಟೋಲ್ ಶುಲ್ಕ ಮೂರು ಬಾರಿ ಪರಿಷ್ಕರಣೆ :
ಬೆಂಗಳೂರು ಮೈಸೂರು ಎಕ್ಸ್ ಪ್ರೆಸ್ ವೇ ನಲ್ಲಿ ಟೋಲ್ ಶುಲ್ಕ ವಿಚಾರವಾಗಿ ಸಾಕಷ್ಟು ಅಡೆತಡೆಗಳು ಎದುರಾಗಿದ್ದವು. ಸರ್ವಿಸ್ ರಸ್ತೆ ಪೂರ್ಣಗೊಳದೆ ಟೋಲ್ ವಿಧಿಸಬಾರದೆಂದು ವಿವಿಧ ಸಂಘಟನೆಗಳು ಮಾತ್ರವಲ್ಲದೆ ರಾಜಕೀಯ ಪಕ್ಷಗಳು ಪ್ರತಿಭಟನೆ ನಡೆಸಿದ್ದವು. ಇದರ ನಡುವೆಯೂ ಟೋಲ್ ಶುಲ್ಕ ಸಂಗ್ರಹಣೆ ಆರಂಭವಾದ ಬಳಿಕ ಮೂರು ಬಾರಿ ಪರಿಷ್ಕರಣೆಗೆ ಒಳಪಟ್ಟಿದೆ.2023 ಏ.1ರಂದು ಇದ್ದ ಟೋಲ್ ಶುಲ್ಕವನ್ನು 2023 ಜು.1ರಂದು ಪರಿಷ್ಕರಿಸಲಾಯಿತು. ಮತ್ತೆ ಲೋಕಸಭಾ ಚುನಾವಣೆ ಮುಗಿದ ಬಳಿಕ ಪರಿಷ್ಕರಣೆ ಮಾಡಲಾಗಿದೆ. ಪ್ರಸ್ತುತ ಶೇಷಗಿರಿಹಳ್ಳಿ- ಕಣ್ಮಿಣಕೆ ಟೋಲ್ ಬಳಿ ವಾಹನಗಳ ಗಾತ್ರವನ್ನು ಆಧರಿಸಿ 170 ರು.. ನಿಂದ1100 ರು. ವರೆಗೆ, ಗಣಂಗೂರು ಟೋಲ್ ಪ್ಲಾಜಾದಲ್ಲಿ 160 ರು. ನಿಂದ 1030 ರು. ವರೆಗೆ ಟೋಲ್ ಶುಲ್ಕ ಪಡೆಯಲಾಗುತ್ತಿದೆ.
ಕಳೆದ ವರ್ಷ 270 ಕೋಟಿ ವಸೂಲಿ :ಬೆಂಗಳೂರು ಮೈಸೂರು ಎಕ್ಸ್ಪ್ರೆಸ್ ವೇನಲ್ಲಿ 2023 ಜು.1 ರಿಂದ ಪೂರ್ಣ ಪ್ರಮಾಣದ ಟೋಲ್ ಸಂಗ್ರಹಣೆ ಆರಂಭವಾಯಿತು. 2023-24ನೇ ಸಾಲಿನಲ್ಲಿ ಒಟ್ಟು 270.96 ಕೋಟಿ ರು. ಟೋಲ್ ಶುಲ್ಕ ಸಂಗ್ರಹವಾದರೆ, 2024-25ನೇ ಸಾಲಿನಲ್ಲಿ167.32 ಕೋಟಿ ರು. ಟೋಲ್ ಶುಲ್ಕ ವಸೂಲಿಯಾಗಿತ್ತು. ಪ್ರಸಕ್ತ ಹಣಕಾಸಿನ ವರ್ಷ ಪೂರ್ಣಗೊಳ್ಳಲು ಇನ್ನೂ 4 ತಿಂಗಳು ಇದ್ದು, ಟೋಲ್ ಸಂಗ್ರಹಣೆ ಇನ್ನಷ್ಟು ಹೆಚ್ಚಾಗುವ ಸಾಧ್ಯತೆಗಳಿವೆ.
ಬಾಕ್ಸ್ ...............ಭರ್ಜರಿ ಸಂಗ್ರಹಣೆ
ಬೆಂಗಳೂರು ಮೈಸೂರು ಎಕ್ಸ್ಪ್ರೆಸ್ ವೇ ಮೊದಲ ಹಂತದ ಕಾಮಗಾರಿ( ಬೆಂಗಳೂರಿನಿಂದ- ನಿಡಘಟ್ಟವರೆಗೆ) 2022ರ ಡಿಸೆಂಬರ್ ನಲ್ಲಿ ಪೂರ್ಣಗೊಂಡಿತು. 2023ರ ಮಾ.12ರಂದು ಪ್ರಧಾನಿ ನರೇಂದ್ರ ಮೋದಿ ಮೊದಲ ಹಂತದ ರಸ್ತೆಯನ್ನು ಲೋಕಾರ್ಪಣೆಗೊಳಿಸಿದರು. 2023 ಏ.1ರಿಂದ ಬೆಂಗಳೂರಿನಿಂದ ಮೈಸೂರು ಕಡೆಗೆ ಪ್ರಾಣಿಸುವವರಿಗೆ ಕಣ್ಮಿಣಿಕೆ ಬಳಿ, ಮೈಸೂರಿನಿಂದ ಬೆಂಗಳೂರಿನ ಕಡೆಗೆ ಪ್ರಯಾಣಿಸುವವರಿಗೆ ಶೇಷಗಿರಿಹಳ್ಳಿ ಬಳಿ ಇರುವ ಟೋಲ್ ಪ್ಲಾಜಾ ಬಳಿಯಿಂದ ಟೋಲ್ ಶುಲ್ಕ ಸಂಗ್ರಹಣೆ ಪ್ರಾರಂಭಿಸಲಾಯಿತು. 2023ರ ಜು.1ರಿಂದ 2ನೇ ಹಂತದ ರಸ್ತೆ( ನಿಡಘಟ್ಟದಿಂದ ಮೈಸೂರು)ಗೆ ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲೂಕಿನ ಗಣಂಗೂರು ಟೋಲ್ ಪ್ಲಾಜಾ ಬಳಿ ಟೋಲ್ ಸಂಗ್ರಹಣೆ ಆರಂಭಿಸಲಾಯಿತು. ಇದೀಗ ಈ ಎರಡೂ ಬದಿಯ ಟೋಲ್ ಪ್ಲಾಜಾದಿಂದ ಭರ್ಜರಿ ಸಂಗ್ರಹಣೆ ನಡೆಯುತ್ತಿದೆ.4ಕೆಆರ್ ಎಂಎನ್ 8.ಜೆಪಿಜಿ
ಬೆಂಗಳೂರು - ಮೈಸೂರು ಎಕ್ಸ್ ಪ್ರೆಸ್ ವೇ.