ಪಠ್ಯದ ಜತೆಗೆ ಪಠ್ಯೇತರ ಚಟುವಟಿಕೆಯೂ ಮುಖ್ಯ: ಡಾ. ಮೋಹನ್‌ ಆಳ್ವ

| Published : Jan 24 2024, 02:03 AM IST

ಸಾರಾಂಶ

ಭಾರತ ಸ್ಕೌಟ್ಸ್ ಮತ್ತು ಗೈಡ್ಸ್‌ನ ದಕ್ಷಿಣ ಕನ್ನಡ ಜಿಲ್ಲಾ ಸಂಸ್ಥೆ ಹಾಗೂ ಮೂಡುಬಿದಿರೆ ಘಟಕವು ನಗರದ ಸ್ಕೌಟ್ಸ್-ಗೈಡ್ಸ್ ಕನ್ನಡ ಭವನದಲ್ಲಿ ಹಮ್ಮಿಕೊಂಡ ‘೪೩ನೇ ರಾಜ್ಯಮಟ್ಟದ ಕಬ್ಸ್- ಬುಲ್‌ಬುಲ್ಸ್ ಉತ್ಸವ’ಕ್ಕೆ ಮಂಗಳವಾರ ಚಾಲನೆ ನೀಡಲಾಯಿತು.

ಕನ್ನಡಪ್ರಭ ವಾರ್ತೆ ಮೂಡುಬಿದಿರೆ

ಪಠ್ಯದ ಜ್ಞಾನದ ಜೊತೆ ಪಠ್ಯೇತರ ಚಟುವಟಿಕೆ ಮೂಲಕ ಮನಸ್ಸು ಕಟ್ಟಿದಾಗ ಅತ್ಯುತ್ತಮ ನಾಗರಿಕನಾಗಲು ಸಾಧ್ಯ ಎಂದು ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ದಕ್ಷಿಣ ಕನ್ನಡ ಜಿಲ್ಲಾ ಮುಖ್ಯ ಆಯುಕ್ತ ಹಾಗೂ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ. ಮೋಹನ ಆಳ್ವ ಹೇಳಿದರು.

ಭಾರತ ಸ್ಕೌಟ್ಸ್ ಮತ್ತು ಗೈಡ್ಸ್‌ನ ದಕ್ಷಿಣ ಕನ್ನಡ ಜಿಲ್ಲಾ ಸಂಸ್ಥೆ ಹಾಗೂ ಮೂಡುಬಿದಿರೆ ಘಟಕವು ನಗರದ ಸ್ಕೌಟ್ಸ್-ಗೈಡ್ಸ್ ಕನ್ನಡ ಭವನದಲ್ಲಿ ಹಮ್ಮಿಕೊಂಡ ‘೪೩ನೇ ರಾಜ್ಯಮಟ್ಟದ ಕಬ್ಸ್- ಬುಲ್‌ಬುಲ್ಸ್ ಉತ್ಸವ’ದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು. ಕನ್ನಡ, ವಿಜ್ಞಾನ, ಗಣಿತ, ವಾಣಿಜ್ಯ ಸೇರಿದಂತೆ ಯಾವುದೇ ವಿಷಯ ಇರಲಿ, ಅವು ನೀಡುವ ಜ್ಞಾನ ಬುದ್ಧಿಗೆ ಮಾತ್ರ. ಮನುಷ್ಯನಿಗೆ ಜ್ಞಾನ, ಬುದ್ಧಿಯ ಜೊತೆ ಮನಸ್ಸು ಬೇಕು ಎಂದರು.ನಾವು ನಮ್ಮ ಜನ್ಮ ಕೊಟ್ಟ ದೇಶ, ಭಾಷೆ, ಸಂಸ್ಕೃತಿ, ಪರಿಸರ ಎಲ್ಲವನ್ನೂ ಗೌರವಿಸುವ ಗುಣ ಬೆಳೆಸಿಕೊಳ್ಳಬೇಕು. ಪ್ರೀತಿಯಿಂದಲ್ಲದೆ ಸಂಘರ್ಷದಿಂದ ಬದುಕು ಸಾಧ್ಯವಿಲ್ಲ. ಎಷ್ಟೇ ಜಾತಿ-ಮತಗಳಿದ್ದರೂ, ಎಲ್ಲವನ್ನೂ ಸಮಾನವಾಗಿ ಸ್ವೀಕರಿಸಬೇಕು. ದೇಶಪ್ರೇಮವನ್ನು ಬಾಲ್ಯದಿಂದಲೇ ಕಲಿಯಬೇಕು ಎಂದರು.

ಮಾಜಿ ಸಚಿವ ಅಭಯ ಚಂದ್ರ ಜೈನ್ ಮಾತನಾಡಿ, ಎಳವೆಯಲ್ಲಿಯೇ ಬದುಕು ಕಟ್ಟುವ ಧೈರ್ಯ ನೀಡುವ ಚಿಂತನೆಯನ್ನು ಈ ಶಿಬಿರ ಹೊಂದಿದೆ. ಮೂಡುಬಿದಿರೆಗೆ ಬಂದ ನೀವು ಖಂಡಿತಾ ಒಳ್ಳೆಯ ಅನುಭವ ಪಡೆಯುತ್ತೀರಿ ಎಂದರು.ಸ್ಕೌಟ್ಸ್ ಮತ್ತು ಗೈಡ್ಸ್ ಬಂಟ್ವಾಳ ಜಿಲ್ಲಾ ನೋಡೆಲ್ ಅಧಿಕಾರಿ ಶ್ರೀನಿವಾಸ ಅಡಿಗ, ಮೂಡುಬಿದಿರೆ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ವಿರೂಪಾಕ್ಷಪ್ಪ ಎಚ್.ಎಸ್., ಸ್ಕೌಟ್ಸ್ ಮತ್ತು ಗೈಡ್ಸ್ ಕರ್ನಾಟಕ ರಾಜ್ಯ ಕಾರ್ಯದರ್ಶಿ ಕೆ. ಗಂಗಪ್ಪ ಗೌಡ ಮಾತನಾಡಿದರು.ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಕರ್ನಾಟಕ ರಾಜ್ಯ ಜಂಟಿ ಕಾರ್ಯದರ್ಶಿ ಕೃಪಾ ವಿಜಯ್, ಸಂಘಟನಾ ಆಯುಕ್ತ ಪ್ರಭಾಕರ್ ಭಟ್, ಸಂಘಟನಾ ಆಯುಕ್ತೆ ಮಂಜುಳಾ, ಸಹಾಯಕ ಸಂಘಟನಾ ಆಯುಕ್ತ ಭರತ್ ರಾಜ್ ಕೆ., ಪರೀಕ್ಷಾ ಮೇಲ್ವಿಚಾರಕಿ ಹೊನ್ನಮ್ಮ, ಜಿಲ್ಲಾ ಉಪಾಧ್ಯಕ್ಷರಾದ ವಿಮಲ ರಂಗಯ್ಯ, ಕೋಶಾಧಿಕಾರಿ ಅನಿಲ್ ಕುಮಾರ್, ಜಿಲ್ಲಾ ತರಬೇತಿ ಆಯುಕ್ತ ಪ್ರತೀಮ್ ಕುಮಾರ್, ಬಂಟ್ವಾಳ ಸ್ಥಳೀಯ ಸಂಸ್ಥೆಯ ಅಧ್ಯಕ್ಷ ಬಿ.ಎಂ. ತುಂಬೆ, ಮೂಡುಬಿದಿರೆ ಸ್ಥಳೀಯ ಸಂಸ್ಥೆಯ ಕಾರ್ಯದರ್ಶಿ ಭಾರತಿ, ಕಬ್ಸ್ ಶಿಬಿರ ನಾಯಕ ರಾಮರಾವ್, ನಾಯಕಿ ಸಿಸಿರಾ ಲೊರಿನಾ ಇದ್ದರು. ಮೂಡುಬಿದಿರೆ ಸ್ಥಳೀಯ ಸಂಸ್ಥೆಯ ಕೋಶಾಧಿಕಾರಿ ನವೀನ್‌ಚಂದ್ರ ಅಂಬೂರಿ ಕಾರ್ಯಕ್ರಮ ನಿರೂಪಿಸಿದರು. ಜಿಲ್ಲಾ ಸಂಸ್ಥೆಯ ಪದಾಧಿಕಾರಿ ಮಹಮ್ಮದ್ ತುಂಬೆ ಸ್ವಾಗತಿಸಿದರು. ಜಿಲ್ಲಾ ಜಂಟಿ ಕಾರ್ಯದರ್ಶಿ ಜಯವಂತಿ ಸೋನ್ಸ್ ವಂದಿಸಿದರು. ಕಾರ್ಯಕ್ರಮದಲ್ಲಿ ಮೂಡುಬಿದಿರೆ ಸರ್ಕಾರಿ ಪ್ರೌಢ ಶಾಲೆಯ ೧೨೦ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ೫ ದಿನಗಳ ಕಾಲ ನಡೆಯಲಿರುವ ಕಬ್ ಮತ್ತು ಬುಲ್ ಬುಲ್ ಶಿಬಿರದಲ್ಲಿ ಸಾಹಸ ಚಟುವಟಿಕೆ, ಕರಕೌಶಲ, ಮೋಜಿನ ಚಟುವಟಿಕೆ, ಸಾಂಪ್ರದಾಯಿಕ ಉಡುಗೆ ತೊಡುಗೆ, ವಸ್ತು ಪ್ರದರ್ಶನ, ಪ್ರತಿಭಾ ಪ್ರದರ್ಶನ, ಕಲಾ ವೈಭವ, ಸಾಂಸ್ಕೃತಿಕ ವೈಭವ, ಮೂಡುಬಿದಿರೆ ಪರಿಸರ ವೀಕ್ಷಣೆ ಸೇರಿದಂತೆ ಹಲವು ಚಟುವಟಿಕೆಗಳಿವೆ ಎಂದು ಸಂಘಟಕರು ತಿಳಿಸಿದರು.