ಬೆಂಗಳೂರು ದಕ್ಷಿಣ ಜಿಲ್ಲೇಲಿ 44 ಹೊಸ ಕಂದಾಯ ಗ್ರಾಮಗಳು

| Published : Jul 09 2025, 12:18 AM IST

ಸಾರಾಂಶ

ಈ ಹೊಸ 44 ಕಂದಾಯ ಗ್ರಾಮಗಳ ಪೈಕಿ 34 ಗ್ರಾಮಗಳು ಅಂತಿಮ ಅಧಿಸೂಚನೆ ಹೊರ ಬಿದ್ದಿದ್ದರೆ, ಉಳಿದ 10 ಗ್ರಾಮಗಳ ಪ್ರಾಥಮಿಕ ಅಧಿಸೂಚನೆ ಹೊರಡಿಸಲಾಗಿದೆ.

ಎಂ.ಅಫ್ರೋಜ್ ಖಾನ್ಕನ್ನಡಪ್ರಭ ವಾರ್ತೆ ರಾಮನಗರದಾಖಲೆರಹಿತ ಜನವಸತಿ ಪ್ರದೇಶಗಳಲ್ಲಿ ತಮ್ಮ ಬದುಕು ಕಟ್ಟಿಕೊಂಡಿದ್ದ ಹಾಡಿ, ಹಟ್ಟಿ, ತಾಂಡ ಹಾಗೂ ಗೊಲ್ಲರಹಟ್ಟಿಗಳನ್ನು ಕಂದಾಯ ಗ್ರಾಮಗಳನ್ನಾಗಿಸುವ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆ ಯೋಜನೆ ಸಾಕಾರಗೊಳ್ಳುವ ಕಾಲ ಸನ್ನಿಹಿತವಾಗಿದ್ದು, ಜಿಲ್ಲೆಯಲ್ಲಿ 44 ಹೊಸ ಕಂದಾಯ ಗ್ರಾಮಗಳು ಅಸ್ತಿತ್ವಕ್ಕೆ ಬರಲಿವೆ.ಈ ಹೊಸ 44 ಕಂದಾಯ ಗ್ರಾಮಗಳ ಪೈಕಿ 34 ಗ್ರಾಮಗಳು ಅಂತಿಮ ಅಧಿಸೂಚನೆ ಹೊರ ಬಿದ್ದಿದ್ದರೆ, ಉಳಿದ 10 ಗ್ರಾಮಗಳ ಪ್ರಾಥಮಿಕ ಅಧಿಸೂಚನೆ ಹೊರಡಿಸಲಾಗಿದೆ. ಈ ಗ್ರಾಮಗಳು ಅಸ್ತಿತ್ವದಲ್ಲಿದ್ದರೂ ಅವು ಕಂದಾಯ ಗ್ರಾಮಗಳಾಗಿರಲಿಲ್ಲ. ಪಕ್ಕದ ಊರಿನ ದಾಖಲೆಯಲ್ಲೇ ಇದ್ದವು. ಹೀಗಾಗಿ ಗ್ರಾಮದ ಹೆಸರು ಇದ್ದರೂ, ಜಮೀನು, ಮನೆ ಇತ್ಯಾದಿ ದಾಖಲೆಗಳು ಪಕ್ಕದ ಗ್ರಾಮದ ಹೆಸರಿನಲ್ಲೇ ಇದ್ದವು. ಅಂತಹ ಗ್ರಾಮಗಳನ್ನು ಗುರುತಿಸಿ, ಪ್ರತ್ಯೇಕ ಕಂದಾಯ ಗ್ರಾಮಗಳನ್ನಾಗಿ ರಚಿಸುವ ಕಾರ್ಯಕ್ಕೆ ಚಾಲನೆ ನೀಡಲಾಗಿದೆ.ಕಂದಾಯ ವ್ಯಾಪ್ತಿಗೆ ತರುವ ಪ್ರಯತ್ನ: ಮೂಲ ದಾಖಲೆಗಳಲ್ಲಿ ತಮ್ಮೂರಿನ ಹೆಸರಿಲ್ಲದೇ ಪಕ್ಕದ ದೊಡ್ಡ ಗ್ರಾಮದ ದಾಖಲೆಗಳನ್ನು ಹೊಂದಿರುವ ಗ್ರಾಮಗಳು ಜಿಲ್ಲೆಯಲ್ಲಿವೆ. ಆದರೆ, ಇದೀಗ ಆ ಪೈಕಿ ಪ್ರಥಮ ಹಂತದಲ್ಲಿ 44 ಗ್ರಾಮಗಳಿಗೆ ಮೂಲ ಕಂದಾಯ ಗ್ರಾಮಗಳಿಂದ ಪ್ರಸ್ತಾಪಿತ ಹೊಸ ಕಂದಾಯ ಗ್ರಾಮಗಳ ದಾಖಲೆ ಒದಗಿಸಿ, ಆ ಗ್ರಾಮಗಳನ್ನು ಕಂದಾಯ ವ್ಯಾಪ್ತಿಗೆ ತರುವ ಪ್ರಯತ್ನ ಅಂತಿಮ ಘಟ್ಟವನ್ನು ತಲುಪಿದೆ. ಶೀಘ್ರದಲ್ಲಿಯೇ ಹೊಸ ಕಂದಾಯ ಗ್ರಾಮಗಳು ಅಸ್ತಿತ್ವಕ್ಕೆ ಬರಲಿವೆ.ಕಂದಾಯ ಗ್ರಾಮ ಘೋಷಣೆ: ಜನವಸತಿಯಿದ್ದರೂ ಗ್ರಾಮಗಳೆಂಬ ಮಾನ್ಯತೆ ಇಲ್ಲದ ಕಾರಣ, ಹಲವು ಹಳ್ಳಿಗಳಿಗೆ ಸರ್ಕಾರ ವಿವಿಧ ಸೌಕರ್ಯಗಳು ತಲುಪುತ್ತಿರಲಿಲ್ಲ. ಗ್ರಾಮಸ್ಥರಿಗೆ ತಮ್ಮ ವಾಸಸ್ಥಳದ ಹಕ್ಕುಪತ್ರಗಳನ್ನು ಪಡೆಯಲೂ ತೊಡಕಾಗಿತ್ತು. ಹಾಗಾಗಿ ತಮ್ಮ ಪ್ರದೇಶಗಳನ್ನೂ ಕಂದಾಯ ಗ್ರಾಮಗಳೆಂದು ಪರಿಗಣಿಸುವಂತೆ ಹಲವು ವರ್ಷಗಳಿಂದ ಸರ್ಕಾರಕ್ಕೆ ಮನವಿಗಳು ಸಲ್ಲಿಕೆಯಾಗತ್ತಲೇ ಇದ್ದವು.

ಸರ್ಕಾರದ ಸುತ್ತೋಲೆಯ ಪ್ರಕಾರ, ಕನಿಷ್ಠ 10 ಮನೆಗಳಿರುವ ನಿರ್ದಿಷ್ಟ ಪ್ರದೇಶವನ್ನು ಕಂದಾಯ ಗ್ರಾಮವೆಂದು ಘೋಷಿಸಲು ಅವಕಾಶವಿದೆ. ಅಂತೆಯೇ, ಕನಿಷ್ಠ 50 ಜನಸಂಖ್ಯೆಯಿರುವ ಪ್ರದೇಶವನ್ನೂ ಪರಿಗಣಿಸಬಹುದು. ಈ ರೀತಿ ಪರಿವರ್ತನೆಯಾದ ಗ್ರಾಮಗಳ ನಿವಾಸಿಗಳಿಗೆ ಮುಂದಿನ ದಿನಗಳಲ್ಲಿ ‘ಕಲಂ 94’ ಹಕ್ಕುಪತ್ರಗಳನ್ನು ವಿತರಿಸಲಾಗುತ್ತದೆ. ಇಂತಹ ಅನುಕೂಲಗಳು ಜನತೆಗೆ ಕಂದಾಯ ಗ್ರಾಮ ಘೋಷಣೆಯಿಂದ ದೊರೆಯಲಿದೆ.ಹೊಸ ಕಂದಾಯ ಗ್ರಾಮಗಳನ್ನು ರಚಿಸುವ ಪ್ರಕ್ರಿಯೆಗಳು ಚುರುಕಾಗಿ ನಡೆಯುತ್ತಿದೆ. ಕಂದಾಯ ಗ್ರಾಮಗಳೆಂದು ಘೋಷಿಸಬೇಕಿರುವ ಜನವಸತಿ ಪ್ರದೇಶಗಳ ಸಂಪೂರ್ಣ ಸರ್ವೆ, ಪಹಣಿ ಮುಂತಾದ ದಾಖಲೆಗಳ ಬದಲಾವಣೆ, ಗ್ರಾಮಗಳ ಗಡಿ ಗುರುತು ಮುಂತಾದ ಎಲ್ಲ ಕಾರ್ಯಗಳು ಹಂತ ಹಂತವಾಗಿ ನಡೆಯುತ್ತಿವೆ.ಗ್ರಾಮಗಳ ರಚನೆಯ ಸಂಬಂಧ ಜಿಲ್ಲಾಡಳಿತದಿಂದ ಬೇಕಾಗಿರುವ ಎಲ್ಲ ದಾಖಲೆಗಳನ್ನೂ ಈಗಾಗಲೇ ಸಲ್ಲಿಕೆ ಮಾಡಲಾಗಿದೆ. ಸರ್ಕಾರದ ಸೂಚನೆಯ ಅನುಸಾರ ಪ್ರಕ್ರಿಯೆಗಳು ಮುಂದುವರಿಯುತ್ತಿವೆ ಎಂದು ಕಂದಾಯ ಇಲಾಖೆ ಅಧಿಕಾರಿಯೊಬ್ಬರು ಕನ್ನಡಪ್ರಭಕ್ಕೆ ಪ್ರತಿಕ್ರಿಯೆ ನೀಡಿದರು.

----ಹೊಸ ಕಂದಾಯ ಗ್ರಾಮಗಳ ಯಾವವು ?ಚನ್ನಪಟ್ಟಣ ತಾಲೂಕು: ಕಸಬಾ ಹೋಬಳಿಯ ಲಂಬಾಣಿ ತಾಂಡ್ಯ, ಗೊಲ್ಲರದೊಡ್ಡಿ, ಮಳೂರು ಹೋಬಳಿಯ ಬೈರಾಪಟ್ಟಣ, ಬೇವೂರು ಮಂಡ್ಯ,ವಿರುಪಾಕ್ಷೀಪುರ ಹೋಬಳಿಯ ಬಸವನಪುರ. ಕನಕಪುರ ತಾಲೂಕು: ಕಸಬಾ ಹೋಬಳಿಯ ತುಳಸಿದೊಡ್ಡಿ, ಕೋಡಿಹಳ್ಳಿ ಹೋಬಳಿಯ ಅರಳಗಡಕಲ್ಲು, ಭೀಮಗೊಂಡನಹಳ್ಳಿ, ಗುಳಗನಹಳ್ಳಿ, ಚಿಕ್ಕಕಬ್ಬಳ್ಳಿ, ಚಿಕ್ಕಗೊಂಡನಹಳ್ಳಿ, ಗುಳವಾಡಿದೊಡ್ಡಿ, ಕಾಡು ಶಿವನಹಳ್ಳಿ, ಅಲಗಡಕಲು, ಮಾರಸಂದ್ರ, ಹೊಸದೊಡ್ಡಿ,

ರಾಮನಗರ ತಾಲೂಕು : ಕಸಬಾ ಹೋಬಳಿಯ ಗೊಲ್ಲರದೊಡ್ಡಿ, ಚೌಡೇಶ್ವರಿ ಪುರ, ಕೈಲಾಂಚ ಹೋಬಳಿಯ ಅಚ್ಚಲುದೊಡ್ಡಿ, ಗೊಲ್ಲರದೊಡ್ಡಿ, ಕೂಟಗಲ್ ಹೋಬಳಿಯ ವಡ್ಡರದೊಡ್ಡಿ, ಹನಮಂತಪುರ - ನಾಗರಕಲ್ಲುದೊಡ್ಡಿ, ಹೊಸೂರು.

ಮಾಗಡಿ ತಾಲೂಕು: ಕಸಬಾ ಹೋಬಳಿಯ ಕದರಯ್ಯನಪಾಳ್ಯ, ಭೈರನಹಳ್ಳಿ, ಬಸವನಗುಡಿಪಾಳ್ಯ, ಮಠದಪಾಳ್ಯ, ಹನುಮಾಪುರ, ಗೊಲ್ಲರಹಟ್ಟಿ - ಬಸವನಪಾಳ್ಯ, ತಿಪ್ಪಸಂದ್ರ ಹೋಬಳಿಯ ಚಿಗಳೂರು, ಜನತಾ ಕಾಲೋನಿ, ಹೊನ್ನಾಪುರಪಾಳ್ಯ, ಚೌಡನಪಾಳ್ಯ, ಸೋಲೂರು ಹೋಬಳಿಯ ಹೊಸೂರು, ಕೆಂಪಚಿಕ್ಕನಹಳ್ಳಿ, ಗೊಲ್ಲಹಳ್ಳಿ, ಶ್ರೀರಾಮಪುರ ಕಾಲೋನಿ, ಮಾಡಬಾಳ್ ಹೋಬಳಿಯ ಹೊಸದೊಡ್ಡಿ, ಸಿದ್ದೇಶ್ವರ ನಗರ, ಚಿಟ್ಟನಹಳ್ಳಿ, ಮಾರೇಗೌಡನದೊಡ್ಡಿ, ವೀರೇಗೌಡನದೊಡ್ಡಿ, ಕುದೂರು ಹೋಬಳಿಯ ಹೂಜೇನಹಳ್ಳಿ, ಗೊಲ್ಲರಹಟ್ಟಿ.

...ಕೋಟ್ ... ಬೆಂಗಳೂರು ದಕ್ಷಿಣ ಜಿಲ್ಲೆಯಲ್ಲಿ 44 ಹೊಸ ಕಂದಾಯ ಗ್ರಾಮಗಳ ಜೊತೆಗೆ 450 ಉಪ ಗ್ರಾಮಗಳನ್ನು ಗುರುತಿಸಲಾಗಿದೆ. ಇದರಲ್ಲಿ 82 ಉಪ ಗ್ರಾಮಗಳನ್ನು ಕಂದಾಯ ಗ್ರಾಮಗಳನ್ನಾಗಿ ಅಧಿಸೂಚನೆ ಹೊರಡಿಸಲು ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ.- ಹನುಮೇಗೌಡ, ಡಿಡಿಎಲ್ ಆರ್, ಬೆಂಗಳೂರು ದಕ್ಷಿಣ ಜಿಲ್ಲೆ.---ಕಂದಾಯ ಗ್ರಾಮ ಘೋಷಣೆಗಳಿರುವ ಮಾನದಂಡಗಳೇನು ?1.ಕುಟುಂಬಗಳ ಸಂಖ್ಯೆ ಸುಮಾರು 50 ಅಥವಾ ಜನಸಂಖ್ಯೆ 150 ಅನ್ನು ಹೊಂದಿರುವ ದಾಖಲೆ ರಹಿತ ಜನವಸತಿ ಪ್ರದೇಶಗಳು2. ಗ್ರಾಮಕ್ಕಿರುವ ಜಮೀನಿನ ವಿಸ್ತೀರ್ಣ ಕನಿಷ್ಠ 100 ಎಕರೆ ಅಥವಾ ಅದಕ್ಕಿಂತ ಮೇಲ್ಪಟ್ಟು3.ಮೂಲ ಗ್ರಾಮ ಠಾಣಾಕ್ಕೆ ಹೊಂದಿಕೊಂಡಿರಬಾರದು.(ಅಂದಾಜು 1 ಕಿ.ಮೀ ಅಂತರ ಸೂಕ್ತ)8ಕೆಆರ್ ಎಂಎನ್ 3.ಜೆಪಿಜಿಬೆಂಗಳೂರು ದಕ್ಷಿಣ ಜಿಲ್ಲಾಧಿಕಾರಿಗಳ ಕಚೇರಿ