ಸಾರಾಂಶ
ಕುಷ್ಟಗಿ:
ರೈಲ್ವೆ ಅಭಿವೃದ್ಧಿಯಾದರೆ ದೇಶದ ಬೆಳವಣಿಗೆಯಾಗುತ್ತದೆ ಎನ್ನುವುದು ಪ್ರಧಾನಿ ನರೇಂದ್ರ ಮೋದಿ ಆಶಯ. ಅಂದು ಅಟಲ್ ಬಿಹಾರಿ ವಾಜಪೇಯಿ ರಾಷ್ಟ್ರೀಯ ಹೆದ್ದಾರಿಗೆ ಅನುದಾನ ಕೊಟ್ಟರೆ, ಇದೀಗ ಮೋದಿ ರೈಲ್ವೆ ಯೋಜನಗಳಿಗೆ ಅನುದಾನ ನೀಡಿದ್ದಾರೆ. ಆಧುನಿಕ ತಂತ್ರಜ್ಞಾನದ ಜತೆಯಲ್ಲಿ ಹಲವಾರು ಯೋಜನೆ ಕೊಟ್ಟಿದ್ದೇವೆ ಮೋದಿ ಅವರ ಸರ್ಕಾರ ಹಲವು ಹಳೆಯ, ನನೆಗುದಿಗೆ ಬಿದ್ದ ರೈಲ್ವೋ ಯೋಜನೆಗಳನ್ನು 7.50 ಲಕ್ಷ ಕೋಟಿ ವೆಚ್ಚದಲ್ಲಿ 44500 ಕಿ.ಮೀ. ರೈಲ್ವೆ ಮಾರ್ಗ ನಿರ್ಮಿಸಿದೆ ಎಂದು ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ಹೇಳಿದರು.ಪಟ್ಟಣದ ರೈಲ್ವೆ ನಿಲ್ದಾಣದಲ್ಲಿ ಕುಷ್ಟಗಿ-ಹುಬ್ಬಳ್ಳಿ ನೂತನ ರೈಲ್ವೆ ಸಂಚಾರಕ್ಕೆ ಗುರುವಾರ ಚಾಲನೆ ನೀಡಿ ಮಾತನಾಡಿದ ಅವರು, ಗದಗ-ವಾಡಿ ರೈಲು ಕಾಮಗಾರಿಗೆ ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರೆಡ್ಡಿ ಅವರ ಶ್ರಮ ಇಂದು ಫಲಕೊಟ್ಟಿದ್ದು ರೈಲು ಸಂಚಾರ ಆರಂಭವಾಗಿದೆ ಎಂದರು.
ರೈಲ್ವೆ ಸೂಕ್ಷ್ಮ ಇಲಾಖೆಯಾಗಿದ್ದು ಕಾನೂನು ಮೀರಿ ಯಾವ ಕೆಲಸಗಳು ನಡೆಯುವುದಿಲ್ಲ. ಅನುದಾನ ಕೇವಲ ಕಾಂಗ್ರೆಸ್‌ನವರು ಕೊಟ್ಟಿಲ್ಲ, ಮೋದಿ ಕೊಟ್ಟಿದ್ದಾರೆ ಎಂದ ಸಚಿವರು, ಯೋಜನೆ ಒಂದು ಪಕ್ಷಕ್ಕೆ ಸೀಮಿತವಾಗಿಲ್ಲ. ಸಾರ್ವತ್ರಿಕವಾಗಿದ್ದು ಸದುಪಯೋಗ ಪಡೆದುಕೊಳ್ಳಬೇಕು. ಈ ಯೋಜನೆ ಎಚ್.ಡಿ. ದೇವೇಗೌಡರು ಪ್ರಧಾನಿಯಾಗಿದ್ದಾಗ ಪ್ರಾರಂಭವಾಗಿದೆ ಎಂದು ತಿಳಿಸಿದರು. ರಾಯರಡ್ಡಿ ಅವರು ಈ ಯೋಜನೆ ಜಾರಿಗೆ ಕೇಂದ್ರ ಸರ್ಕಾರವನ್ನು ಅಭಿನಂದಿಸಬೇಕಾಗಿತ್ತು, ಆದರೆ ಅಭಿನಂದಿಸಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.ಯುಪಿಎ ಸರ್ಕಾರ 10 ವರ್ಷದಲ್ಲಿ ರಾಜ್ಯಕ್ಕೆ ₹ 11500 ಕೋಟಿ ನೀಡಿದೆ. ನಾವು 2024ರಲ್ಲಿ ₹ 74 ಸಾವಿರ ಕೋಟಿ ಬಳಕೆ ಮಾಡಿದ್ದೇವೆ. ಯುಪಿಎ ಇರುವಾಗ ಪ್ರತಿದಿನಕ್ಕೆ 4.2 ಕಿಲೋಮೀಟರ್ ಲೈನ್ ಆಗುತ್ತಿತ್ತು, ನಮ್ಮ ಸರ್ಕಾರ ಬಂದ ಮೇಲೆ ಪ್ರತಿದಿನಕ್ಕೆ 8.5 ಕಿಲೋ ಮೀಟರ್ ಆಗಿದೆ ಎಂದರು.
ಈ ಹಿಂದೆ ರೈಲು ನಿಲ್ದಾಣಗಳು ನಿರ್ವಹಣೆ ಕೊರತೆ ಎದುರಿಸುತ್ತಿದ್ದವು. ನಮ್ಮ ಸರ್ಕಾರ ಬಂದ ಬಳಿಕ 1400 ರೈಲು ನಿಲ್ದಾಣವನ್ನು ₹ 20000 ಕೋಟಿ ಖರ್ಚು ಮಾಡಿ ಅಭಿವೃದ್ಧಿ ಮಾಡಿದ್ದೇವೆ. 50 ವಂದೇ ಭಾರತ್ ಟ್ರೈನ್ ಘೋಷಣೆ ಮಾಡುತ್ತಿದ್ದೇವೆ. ತಾಂತ್ರಿಕವಾಗಿ ಭಾರತ ಮುಂದುವರಿದಿದೆ ಎಂದ ಸೋಮಣ್ಣ, 5 ಲಕ್ಷ ಉದ್ಯೋಗ ಒದಗಿಸಿದ್ದೇವೆ. ರೈಲ್ವೆ ಪರೀಕ್ಷೆಯನ್ನು ಕನ್ನಡದಲ್ಲಿ ಬರೆಯಲು ಅವಕಾಶ, ಮಂಗಳಸೂತ್ರ ತೆಗೆಸದಂತೆ ಆದೇಶಿಸಲಾಗಿದೆ ಎಂದರು.ಸಚಿವ ಶಿವರಾಜ ತಂಗಡಗಿ ಮಾತನಾಡಿ, ಗದಗ, ತಳಕಲ್, ವಾಡಿ ರೈಲ್ವೆ ಯೋಜನೆಯಲ್ಲಿ ಕೇಂದ್ರ ಸರ್ಕಾರದ ಜತೆಗೆ ರಾಜ್ಯ ಸರ್ಕಾರದ ಕೊಡುಗೆಯೂ ಅಪಾರವಾಗಿದೆ. ಈ ಕಾಮಗಾರಿ ಬಹು ವರ್ಷಗಳ ಬೇಡಿಕೆಯಾಗಿದ್ದು ಇದೀಗ ಈಡೇರಿದೆ. ಈ ಯೋಜನೆಯ ಕನಸು ಚಿಗುರೊಡೆಯಲು ಬಸವರಾಜ ರಾಯರೆಡ್ಡಿ ಹಾಗೂ ಸಂಗಣ್ಣ ಕರಡಿ, ವಿರೂಪಾಕ್ಷಪ್ಪ ಸೇರಿದಂತೆ ಅನೇಕರು ಇದ್ದಾರೆ, 2013-14ರಲ್ಲಿ ಅನುಮೋದನೆಗೊಂಡು ಇಷ್ಟು ಬೇಗ ಕಾಮಗಾರಿ ಮುಗಿದಿದೆ. ಈ ಹಿಂದೆ ಸಿದ್ದರಾಮಯ್ಯ ಸರ್ಕಾರ ವಿಶೇಷ ಕಾಳಜಿ ವಹಿಸಿ ₹ 961.7 ಕೋಟಿ ಅನುದಾನ ಕೊಟ್ಟಿದ್ದಾರೆ. ಭೂ ಸ್ವಾಧೀನಕ್ಕಾಗಿ ಅರ್ಧಕ್ಕಿಂತ ಹೆಚ್ಚಿನ ಅನುದಾನ ಕೊಡಲಾಗಿದೆ ಎಂದರು.
ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರೆಡ್ಡಿ ಮಾತನಾಡಿ, ರಾಜ್ಯದಲ್ಲಿ ಅನೇಕ ರೈಲ್ವೆ ಯೋಜನೆಗಳು ಪೂರ್ಣಗೊಳ್ಳಬೇಕಾಗಿದ್ದು ಹೆಚ್ಚು ಅನುದಾನ ನೀಡಬೇಕು. ಇಂದು ತಳಕಲ್-ವಾಡಿ ರೈಲ್ವೆ ಉದ್ಘಾಟನೆ ಆಗುತ್ತಿರುವುದು ಖುಷಿ ತಂದಿದೆ. ರೈಲ್ವೆ ಮಾರ್ಗ ಮಾಡುವುದು ಅಷ್ಟೊಂದು ಸುಲಭದ ಕೆಲಸವಲ್ಲ ಎಂದ ಅವರು, 1996ರಲ್ಲಿ ಸಂಸದ ಇದ್ದಾಗ ಕೊಪ್ಪಳ-ರಾಯಚೂರು-ಹೈದರಾಬಾದ್ ರೈಲು ಮಾರ್ಗಕ್ಕೆ ಅನುಮೋದನೆ ದೊರಕಿತ್ತು. ಅದೇ ವೇಳೆ ಗದಗ-ವಾಡಿ ರೈಲ್ವೆ ಆಗಬೇಕು ಎಂದು ಒತ್ತಾಯಿಸಲಾಗಿತ್ತು. 2009ರಲ್ಲಿ ಮಲ್ಲಿಕಾರ್ಜುನ ಖರ್ಗೆ ರೈಲ್ವೆ ಸಚಿವರಾದಾಗ ಸಿಸಿಎ ಕ್ಲಿಯರ್ ಆದ ನಂತರ ಕಾರ್ಯಾರಂಭವಾಯಿತು ಎಂದರು.ಈ ಯೋಜನೆ 257 ಕಿಲೋ ಮೀಟರ್ 4195 ಎಕರೆ ಜಮೀನು ಬೇಕಾಗಿದೆ. ಅದರಲ್ಲಿ 3867 ಎಕರೆ ಭೂ ಸ್ವಾಧೀನ ಮಾಡಲಾಗಿದೆ. ಈಗ 56 ಕಿಲೋಮೀಟರ್ ಮುಗಿದಿದೆ. ಇನ್ನುಳಿದ ಕಾಮಗಾರಿ ಶೀಘ್ರದಲ್ಲಿ ನಿರ್ಮಿಸಿ ಕೊಡಬೇಕು. ಇದಕ್ಕೆ ಬೇಕಾದ ಶೇ.50 ಅನುದಾನ ಕೊಡಿಸುತ್ತೇವೆ ಎಂದು ರಾಯರಡ್ಡಿ ಸೋಮಣ್ಣ ಅವರಿಗೆ ಹೇಳಿದರು.
ಇದು ಟ್ರಂಕ್ ರೂಟ್ ಆಗಲಿದ್ದು ಭಾರತದ ರೈಲ್ವೆ ನೆಟ್ವರ್ಕ್ ಜಗತ್ತಿನಲ್ಲಿ 4ನೇ ಸ್ಥಾನದಲ್ಲಿದೆ. ದೇಶದ 146 ಕೋಟಿ ಜನಸಂಖ್ಯೆಗೆ ಅನುಗುಣವಾಗಿ ರೈಲ್ವೆ ಮಾರ್ಗ ಆಗಬೇಕಾಗಿದೆ. ಕುಷ್ಟಗಿ-ತಳಕಲ್ ಎಲೆಕ್ಟ್ರಿಕ್ ರೈಲ್ವೆ ಓಡಿಸಬೇಕೆಂದು ಒತ್ತಾಯಿಸಿದ ರಾಯರಡ್ಡಿ, ಈ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಮಲ್ಲಿಕಾರ್ಜುನ ಖರ್ಗೆ ಅವರನ್ನು ಕರೆಸಬೇಕಿತ್ತು. ಆದರೆ, ಅದು ಸಾಧ್ಯವಾಗಲಿಲ್ಲ ಎಂದರು.ಶಾಸಕ ದೊಡ್ಡನಗೌಡ ಪಾಟೀಲ ಮಾತನಾಡಿ, ರೈಲು ಸಂಚರಿಸುವುದು ಹಿರಿಯರ ಕನಸಾಗಿತ್ತು. ಮುಂದಿನ ದಿನಗಳಲ್ಲಿ ಕುಷ್ಟಗಿ-ಘಟಪ್ರಭಾ-ನರಗುಂದ ರೈಲ್ವೆ ಮಾರ್ಗ ಮಾಡಬೇಕು. ಬೆಂಗಳೂರಿಗೆ ತೆರಳು ರೈಲು ಬಿಡಬೇಕು ಎಂದು ಮನವಿ ಮಾಡಿದರು.ಈ ವೇಳೆ ವಿಪ ಸದಸ್ಯೆ ಹೇಮಲತಾ ನಾಯಕ, ಜಿಲ್ಲಾಧಿಕಾರಿ ನಳಿನ್ ಅತುಲ್, ರೈಲ್ವೆ ಅಧಿಕಾರಿಗಳಾದ ಬೇಲಾಮೀನಾ, ಅಜಯ ಶರ್ಮ, ಸತ್ಯಕೃಪಾ ಶಾಸ್ತ್ರೀ, ಮಾಜಿ ಸಚಿವರಾದ ಅಮರೇಗೌಡ ಪಾಟೀಲ ಬಯ್ಯಾಪೂರ, ಹಾಲಪ್ಪ ಆಚಾರ, ಬಸವರಾಜ ದಢೇಸುಗೂರು, ಕೆ. ವಿರೂಪಾಕ್ಷಪ್ಪ, ಕೆ. ಶರಣ್ಣಪ್ಪ, ಮುಖಂಡರಾದ ಡಾ. ಕೆ. ಬಸವರಾಜ ಸೇರಿದಂತೆ ರೈಲ್ವೆ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು. ಹಿಟ್ನಾಳ ಬ್ರದರ್ಸ್ ಗೈರು...ಕುಷ್ಟಗಿ-ಹುಬ್ಬಳ್ಳಿ ನೂತನ ರೈಲು ಸಂಚಾರ ಕಾರ್ಯಕ್ರಮಕ್ಕೆ ಸಂಸದ ರಾಜಶೇಖರ ಹಿಟ್ನಾಳ ಹಾಗೂ ಶಾಸಕ ರಾಘವೇಂದ್ರ ಹಿಟ್ನಾಳ್ ಅವರಿಗೆ ಆಹ್ವಾನವಿದ್ದರೂ ಕಾರ್ಯಕ್ರಮದಿಂದ ದೂರುವುಳಿದರು. ಇದು ಚರ್ಚೆಗೆ ಗ್ರಾಸವಾಯಿತು. ಯಾವ ಕಾರಣಕ್ಕೆ ಸಹೋದರರು ಕಾರ್ಯಕ್ರಮಕ್ಕೆ ಆಗಮಿಸಲಿಲ್ಲ ಎಂಬ ಕುರಿತು ಸಾರ್ವಜನಿಕರು ಮಾತನಾಡಿಕೊಳ್ಳುತ್ತಿದ್ದರು.ಕ್ಷಮೆ ಕೇಳಿದ ಸೋಮಣ್ಣ...ರೈಲು ಅಧಿಕಾರಿಗಳು ಕಾರ್ಯಕ್ರಮಕ್ಕೆ ಸರಿಯಾಗಿ ಆಮಂತ್ರಿಸಿಲ್ಲ ಎಂದು ಸಚಿವ ಶಿವರಾಜ ತಂಗಡಗಿ, ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರೆಡ್ಡಿ ಅಸಮಾಧಾನ ಹೊರಹಾಕಿದರು. ಸೋಮಣ್ಣ ಮಾತನಾಡುವ ವೇಳೆ, ಅಧಿಕಾರಿಗಳು ಮಾಡಿರುವ ತಪ್ಪಿಗೆ ನಾನು ಕ್ಷಮೆ ಕೇಳುತ್ತೇನೆ ಎಂದರು. ಇದೇ ವೇಳೆ ಭಾಷಣದ ಉದ್ದಕ್ಕೂ ರಾಯರಡ್ಡಿ ಕಾರ್ಯ ಕುರಿತು ಗುಣಗಾನ ಮಾಡಿದರು.