ಶೀಘ್ರದಲ್ಲಿ 450 ಹಾಸಿಗೆಯ ಆಸ್ಪತ್ರೆ ಉದ್ಘಾಟನೆ: ಶಾಸಕ ರಾಘವೇಂದ್ರ ಹಿಟ್ನಾಳ

| Published : Sep 20 2024, 01:33 AM IST

ಶೀಘ್ರದಲ್ಲಿ 450 ಹಾಸಿಗೆಯ ಆಸ್ಪತ್ರೆ ಉದ್ಘಾಟನೆ: ಶಾಸಕ ರಾಘವೇಂದ್ರ ಹಿಟ್ನಾಳ
Share this Article
  • FB
  • TW
  • Linkdin
  • Email

ಸಾರಾಂಶ

ಕೊಪ್ಪಳದಲ್ಲಿ ಶೀಘ್ರದಲ್ಲಿ 450 ಹಾಸಿಗೆಯ ಆಸ್ಪತ್ರೆ ಲೋಕಾರ್ಪಣೆ ಮಾಡಲಾಗುವುದು.

- ಹಿಟ್ನಾಳ ಜಿಪಂ ಕ್ಷೇತ್ರ ವ್ಯಾಪ್ತಿಯ 7.19 ಕೋಟಿ ವೆಚ್ಚದ ವಿವಿಧ ಕಾಮಗಾರಿಗಳ ಅಡಿಗಲ್ಲು

ಕನ್ನಡಪ್ರಭ ವಾರ್ತೆ ಕೊಪ್ಪಳ

ಕೊಪ್ಪಳದಲ್ಲಿ ಶೀಘ್ರದಲ್ಲಿ 450 ಹಾಸಿಗೆಯ ಆಸ್ಪತ್ರೆ ಲೋಕಾರ್ಪಣೆ ಮಾಡಲಾಗುವುದು ಎಂದು ಶಾಸಕ ರಾಘವೇಂದ್ರ ಹಿಟ್ನಾಳ ಹೇಳಿದ್ದಾರೆ.

ಹಿಟ್ನಾಳ ಜಿಲ್ಲಾ ಪಂಚಾಯಿತಿ ಕ್ಷೇತ್ರ ವ್ಯಾಪ್ತಿಯ ಹಿಟ್ನಾಳ, ಕಂಪಸಾಗರ, ಹುಲಿಗಿ, ಮುನಿರಬಾದ್ ಆರ್.ಎಸ್, ಹಳೇ ಲಿಂಗಾಪುರ, ಹೊಸ ಲಿಂಗಾಪುರ, ಮಟ್ಟಿ ಮುದ್ಲಾಪುರ, ಹೊಳೆ ಮುದ್ಲಾಪುರ, ಮುನಿರಾಬಾದ್ ಡ್ಯಾಮ್ ಹಾಗೂ ಹೊಸಳ್ಳಿ ಗ್ರಾಮಗಳಲ್ಲಿ ಅಂದಾಜು ಮೊತ್ತ ₹7.19 ಕೋಟಿ ಮೊತ್ತದ ವಿವಿಧ ಕಾಮಗಾರಿಗಳ ಅಡಿಗಲ್ಲು ನೆರವೇರಿಸಿ, ಜೊತೆಗೆ ಜನಸಂಪರ್ಕ ಸಭೆಯಲ್ಲಿ ಜನರ ಅಹವಾಲು ಆಲಿಸಿ ಮಾತನಾಡಿದರು.

ಕೊಪ್ಪಳದ ಮೆಡಿಕಲ್ ಕಾಲೇಜ್ ಪಕ್ಕದಲ್ಲಿ ₹193 ಕೋಟಿ ಮೊತ್ತದಲ್ಲಿ ನಿರ್ಮಾಣ ಆಗುತ್ತಿರುವ 450 ಹಾಸಿಗೆ ಆಸ್ಪತ್ರೆಯನ್ನು ಅಕ್ಟೋಬರ್ ಒಂದನೇ ಅಥವಾ ಎರಡನೇ ವಾರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ಉದ್ಘಾಟಿಸಲಾಗುವುದು. ಈ ಆಸ್ಪತ್ರೆಯಿಂದ ನಮ್ಮ ಜಿಲ್ಲೆ ಸೇರಿದಂತೆ ಸುತ್ತುಮುತ್ತಲಿನ ನಾಲ್ಕೈದು ಜಿಲ್ಲೆಗಳಿಗೆ ನೆರವಾಗಲಿದೆ.

ಮೊನ್ನೆ ಕಲಬುರ್ಗಿಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಕೊಪ್ಪಳದ 450 ಹಾಸಿಗೆಯ ಆಸ್ಪತ್ರೆಯ ಪೀಠೋಪಕರಣಗಳ ಖರೀದಿಗೆ ಅನುದಾನ ಮಿಸಲಿಟ್ಟು ಸಚಿವ ಸಂಪುಟದಲ್ಲಿ ಅನುಮೋದನೆ ನೀಡಲಾಗಿದೆ. ಗದಗ, ಚಾಮರಾಜನಗರ ಹಾಗೂ ನಮ್ಮ ಕೊಪ್ಪಳ ಆಸ್ಪತ್ರೆಗೆ ₹149 ಕೋಟಿ ಅನುದಾನ ನೀಡಲು ಸಚಿವ ಸಂಪುಟ ತೀರ್ಮಾನಿಸಿದೆ ಎಂದರು.ಕೊಪ್ಪಳಕ್ಕೆ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ:

ಕೊಪ್ಪಳಕ್ಕೆ ಒಂದು ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯನ್ನು ಮಂಜೂರು ಮಾಡುವಂತೆ ಈಗಾಗಲೇ ಮುಖ್ಯಮಂತ್ರಿಗೆ ಮನವಿ ಮಾಡಿದ್ದೇನೆ, ನಾಡಿದ್ದು ತುಂಗಭದ್ರಾ ಜಲಾಶಯಕ್ಕೆ ಭಾಗಿನ ಅರ್ಪಿಸಲು ಆಗಮಿಸುತ್ತಿರುವ ಮುಖ್ಯಮಂತ್ರಿಗಳಿಗೆ ಮತ್ತೊಮ್ಮೆ ಜಿಲ್ಲೆಯ ಎಲ್ಲಾ ನಾಯಕರುಗಳ ಜೊತೆಗೂಡಿ ಇನ್ನೊಂದು ಸಾರಿ ಮನವಿ ಮಾಡುತ್ತೇವೆ ಎಂದರು.

ಕೊಪ್ಪಳ ವಿಧಾನಸಭ ಕ್ಷೇತ್ರದಲ್ಲಿ ಈಗಾಗಲೇ ಹದಗೆಟ್ಟಿರುವ ರಸ್ತೆಗಳ ಅಭಿವೃದ್ಧಿಗೆ ಅನುದಾನ ಮಿಸಲಿಟ್ಟು ಒಂದೊಂದೇ ರಸ್ತೆಯನ್ನು ಕೈಗೆತ್ತಿಕೊಂಡು ಅಭಿವೃದ್ಧಿ ಮಾಡುವ ಕೆಲಸ ಮಾಡುತ್ತಿದ್ದೇವೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಲ್ಲಿ ನಮ್ಮ ಕ್ಷೇತ್ರದಲ್ಲಿನ ರಸ್ತೆಗಳ ಅಭಿವೃದ್ಧಿಗೆ ಇನ್ನೂ ₹50 ಕೋಟಿ ಮಂಜೂರು ಮಾಡುವಂತೆ ಮನವಿ ಮಾಡಿದ್ದೇನೆ, ಇದಕ್ಕೆ ಮುಖ್ಯಮಂತ್ರಿಗಳು ಸಕರಾತ್ಮಕವಾಗಿ ಸ್ಪಂದಿಸಿದ್ದು ಮಂಜೂರು ಮಾಡುವ ಭರವಸೆ ನೀಡಿದ್ದಾರೆ ಎಂದರು.

ಹುಲಿಗಿಗೆ ಪ್ಲೈ ಓವರ್ ನ್ನು ಹಿಂದಿನ ಸಂಸದ ಸಂಗಣ್ಣ ಕರಡಿ ರಾಜ್ಯ ಸರ್ಕಾರದ ಸಹಭಾಗಿತ್ವದಲ್ಲಿ ಮಂಜೂರು ಮಾಡಿಸಿದ್ದರು, ಅದನ್ನು ಅಚ್ಚುಕಟ್ಟಾಗಿ ನಿರ್ಮಾಣ ಮಾಡಿ, ಸಂಚರಿಸಲು ಸಾರ್ವಜನಿಕರಿಗೆ ಅವಕಾಶ ಮಾಡಿ ಕೊಡುತ್ತೇವೆ. ಇದರಿಂದ ಟ್ರಾಫಿಕ್ ಸಮಸ್ಯೆ ನಿವಾರಣೆ ಆಗಲಿದೆ ಎಂದರು.

ಈ ಸಂದರ್ಭ ಮಾಜಿ ಸಂಸದ ಸಂಗಣ್ಣ ಕರಡಿ, ಜಿಪಂ ಮಾಜಿ ಅಧ್ಯಕ್ಷ ಜನಾರ್ದನ್ ಹುಲಿಗಿ, ಗ್ರಾಮೀಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣರಡ್ಡಿ, ಎಸ್ಸಿ ಘಟಕದ ಜಿಲ್ಲಾಧ್ಯಕ್ಷ ಗಾಳೆಪ್ಪ ದದೇಗಲ್, ರಾಮಣ್ಣ ಚೌಡ್ಕಿ, ಗ್ಯಾರಂಟಿ ಸಮಿತಿ ತಾಲೂಕು ಅಧ್ಯಕ್ಷ ಬಾಲಚಂದ್ರ ಮುನಿರಾಬಾದ್, ಪಾಲಾಕ್ಷಪ್ಪ ಗುಂಗಾಡಿ, ಈರಣ್ಣ ಹುಲಿಗಿ, ಯಂಕಪ್ಪ ಹೊಸಳ್ಳಿ, ಪ್ರಶಾಂತ್ ಗೌಡ್ರು, ಖಜಾವಾಲಿ ಜವಳಿ, ಜಿಯಾಸಾಬ್, ರಾಮಮೂರ್ತಿ, ಶರಣಪ್ಪ ಉಪ್ಪಾರ, ಬಸಣ್ಣ ಬೇವೂರು ಹೊಸಳ್ಳಿ, ನಿಂಗಜ್ಜ ಶಹಪುರ್, ಗಿರೀಶ್ ಶಹಾಪುರ, ಹನಮಂತಪ್ಪ ಹ್ಯಾಟಿ, ಉಪ ವಿಭಾಗಾಧಿಕಾರಿ ಮಹೇಶ್ ಮಾಲಗಿತ್ತಿ, ತಹಶಿಲ್ದಾರ್ ವಿಠ್ಠಲ್ ಚೌಗಲೇ, ತಾಪಂ ಇಒ ದುಂಡೇಶ್ ತುರಾದಿ, ಅಶೋಕ ಹಿಟ್ನಾಳ, ನಾಗರಾಜ್ ಪಠವಾರಿ, ರಾಜು ಬಂಡಿಹಾಳ ಸೇರಿದಂತೆ ಇತರರಿದ್ದರು.