ಸಾರಾಂಶ
ಬ್ರೇನ್ ಟ್ಯೂಮರ್ (ಮೆದುಳು ಗಡ್ಡೆ) ಸಮಸ್ಯೆಯಿಂದ ಬಳಲುತ್ತಿದ್ದ 37 ವರ್ಷದ ಮಹಿಳೆಗೆ ಶಸ್ತ್ರಚಿಕಿತ್ಸೆ ನಡೆಸಿ 450 ಗ್ರಾಂ ತೂಕದ ಬೃಹತ್ ಗಾತ್ರದ ಗಡ್ಡೆಯನ್ನು ಹೊರತೆಗೆಯುವಲ್ಲಿ ನಗರದ ಶ್ರೀ ಬಾಲಾಜಿ ಆಸ್ಪತ್ರೆಯ ವೈದ್ಯರು ಯಶಸ್ವಿಯಾಗಿದ್ದಾರೆ.
ಹುಬ್ಬಳ್ಳಿ: ಬ್ರೇನ್ ಟ್ಯೂಮರ್ (ಮೆದುಳು ಗಡ್ಡೆ) ಸಮಸ್ಯೆಯಿಂದ ಬಳಲುತ್ತಿದ್ದ 37 ವರ್ಷದ ಮಹಿಳೆಗೆ ಶಸ್ತ್ರಚಿಕಿತ್ಸೆ ನಡೆಸಿ 450 ಗ್ರಾಂ ತೂಕದ ಬೃಹತ್ ಗಾತ್ರದ ಗಡ್ಡೆಯನ್ನು ಹೊರತೆಗೆಯುವಲ್ಲಿ ನಗರದ ಶ್ರೀ ಬಾಲಾಜಿ ಆಸ್ಪತ್ರೆಯ ವೈದ್ಯರು ಯಶಸ್ವಿಯಾಗಿದ್ದಾರೆ.
ಹಾವೇರಿ ಮೂಲದ ಮಹಿಳೆ ತಲೆನೋವು, ವಾಂತಿ, ಫಿಟ್ಸ್ ಹಾಗೂ ಕಣ್ಣು ಮಂಜಾಗುತ್ತಿದೆ ಎಂದು ಆಸ್ಪತ್ರೆಗೆ ದಾಖಲಾಗಿದ್ದರು. ರೋಗಿಯ ಆರೋಗ್ಯದ ಕುರಿತು ಕೂಲಂಕಷವಾಗಿ ತಪಾಸಣೆ ನಡೆಸಿದ ಆಸ್ಪತ್ರೆ ಚೇರ್‌ಮನ್ ಹಾಗೂ ನರರೋಗ ತಜ್ಞ ಡಾ. ಕ್ರಾಂತಿಕಿರಣ ಅವರು, ಮಹಿಳೆಗೆ ಎಂ.ಆರ್.ಐ. ಸ್ಕ್ಯಾನ್ ಮಾಡಿಸಿ ನೋಡಿದಾಗ ಮೆದುಳಿನಲ್ಲಿ ಬೃಹತ್ ಗಾತ್ರದ ಗಡ್ಡೆ ಇರುವುದು ಕಂಡು ಬಂದಿದೆ. ಕೂಡಲೇ ಕಾರ್ಯಪ್ರವೃತ್ತರಾದ ವೈದ್ಯರ ತಂಡ, ಸತತ 5 ಗಂಟೆಗಳ ಕಾಲ ಶಸ್ತ್ರಚಿಕಿತ್ಸೆ ನಡೆಸಿ 450 ಗ್ರಾಂ ತೂಕದ ಬೃಹತ್ ಗಡ್ಡೆಯನ್ನು ಹೊರ ತೆಗೆಯುವಲ್ಲಿ ಯಶಸ್ವಿಯಾಗಿದ್ದಾರೆ.ಈ ಕುರಿತು ಮಾತನಾಡಿದ ಖ್ಯಾತ ನರರೋಗ ತಜ್ಞ ಡಾ. ಕ್ರಾಂತಿಕಿರಣ, ಪ್ರತಿ ವಯಸ್ಕ ಮನುಷ್ಯನ ಮೆದುಳಿನ ತೂಕ ಸರಾಸರಿ 1200 ಗ್ರಾಂ (1.2 ಕೆ.ಜಿ)ಯಷ್ಟು ಇರುತ್ತದೆ. ಆಸ್ಪತ್ರೆಗೆ ದಾಖಲಾದ ಮಹಿಳೆಯ ಮೆದುಳಿನಲ್ಲಿ 450 ಗ್ರಾಂ ನಷ್ಟು ಬೃಹತ್ ಗಾತ್ರದ ಗಡ್ಡೆ ಬೆಳೆದಿತ್ತು. ಇನ್ನು ಕೆಲ ದಿನ ಬಿಟ್ಟಿದ್ದರೆ ಜೀವಕ್ಕೇ ಆಪತ್ತು ಇತ್ತು. ಸ್ಕ್ಯಾನ್ ವರದಿ ಬಳಿಕ ತಡಮಾಡದೇ ಆಧುನಿಕ ತಂತ್ರಜ್ಞಾನ ಬಳಕೆ ಮತ್ತು ಉನ್ನತ ಕೌಶಲ್ಯಗಳನ್ನು ಅಳವಡಿಸಿಕೊಂಡಿದ್ದರಿಂದ ಅತ್ಯಂತ ಕ್ಲಿಷ್ಟಕರವಾಗಿದ್ದ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ಮಾಡಿ ರೋಗಿಯ ಮೆದುಳಿಗೆ ಹಾನಿಯಾಗದಂತೆ ಗಡ್ಡೆಯನ್ನು ಹೊರ ತೆಗೆಯಲಾಗಿದೆ ಎಂದರು.
ಶಸ್ತ್ರಚಿಕಿತ್ಸಾ ತಂಡದಲ್ಲಿ ಡಾ. ಕ್ರಾಂತಿಕಿರಣ, ಡಾ. ಇತಿ ಸಿಂಗ್ ಪರ್ಮಾರ್, ಡಾ. ಅಖಿಲೇಶ ಜೋಶಿ, ಡಾ. ಭೀಮಾಶಂಕರ್, ಆಸ್ಪತ್ರೆಯ ಇತರೆ ವೈದ್ಯಕೀಯ ಸಿಬ್ಬಂದಿ ಇದ್ದರು.