ಕನ್ನಡಪ್ರಭ ವಾರ್ತೆ ಅಥಣಿ

ಅಥಣಿ ಡಿವೈಎಸ್ಪಿ ವಲಯದ 6 ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಕಳೆದ ಒಂದು ವರ್ಷದಲ್ಲಿ 916 ಮೊಬೈಲ್ ಕಳ್ಳತನ ಪ್ರಕರಣಗಳು ದಾಖಲಾಗಿವೆ. ಅವುಗಳಲ್ಲಿ ಈಗಾಗಲೇ ಪೊಲೀಸ್‌ ಇಲಾಖೆಯ ಅತ್ಯಾಧುನಿಕ ಸಿಇಐಆರ್ ಪೋರ್ಟಲ್ ತಂತ್ರಜ್ಞಾನ ಬಳಸಿಕೊಂಡು ಕಳೆದುಹೋದ 460 ಮೊಬೈಲ್‌ಗಳನ್ನು ಪತ್ತೆಹಚ್ಚುವಲ್ಲಿ ಪೊಲೀಸ್ ಸಿಬ್ಬಂದಿ ಯಶಸ್ವಿಯಾಗಿದ್ದಾರೆ.ಪೊಲೀಸ್‌ ವರಿಷ್ಠಾಧಿಕಾರಿ ಕೆ.ರಾಮರಾಜನ್, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಆರ್.ಬಿ.ಬಸರಗಿ ಹಾಗೂ ಅಥಣಿ ಡಿವೈಎಸ್‌ಪಿ ಪ್ರಶಾಂತ್ ಮುನ್ನೊಳ್ಳಿ ಅವರ ಮಾರ್ಗದರ್ಶನದಲ್ಲಿ ರಚಿಸಲಾಗಿದ್ದ ವಿಶೇಷ ತಂಡಗಳು ನಿರಂತರ ಕಾರ್ಯಾಚರಣೆ ನಡೆಸಿ ಮೊಬೈಲಗಳನ್ನು ಪತ್ತೆ ಹಚ್ಚಿದ್ದಾರೆ. ಅಥಣಿ ಪೊಲೀಸ್ ಠಾಣೆ-37, ಐಗಳಿ ಪೊಲೀಸ್ ಠಾಣೆ-20, ಕಾಗವಾಡ ಪೊಲೀಸ್ ಠಾಣೆ-20, ರಾಯಬಾಗ ಪೊಲೀಸ್ ಠಾಣೆ-13, ಹಾರೂಗೇರಿ ಪೊಲೀಸ್ ಠಾಣೆ-10, ಕುಡಚಿ ಪೊಲೀಸ್ ಠಾಣೆ-10 ಸೇರಿದಂತೆ ಒಟ್ಟು 110 ಮೊಬೈಲ್‌ಗಳನ್ನು ಶುಕ್ರವಾರ ಅಥಣಿ ಪೊಲೀಸ್ ಸಮುದಾಯ ಭವನದಲ್ಲಿ ಡಿವೈಎಸ್ಪಿ ಪ್ರಶಾಂತ್ ಮುನ್ನೊಳ್ಳಿ ಮೊಬೈಲ್ ವಾರಸುದಾರರಿಗೆ ಹಸ್ತಾಂತರಿಸಿದರು. ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಡಿವೈಎಸ್ಪಿ ಪ್ರಶಾಂತ್ ಮುನ್ನೊಳ್ಳಿ, ಸಾರ್ವಜನಿಕರ ಆಸ್ತಿ ರಕ್ಷಿಸುವ ನಿಟ್ಟಿನಲ್ಲಿ ಪೊಲೀಸ್ ಇಲಾಖೆ ಕಾರ್ಯಪ್ರವೃತ್ತವಾಗಿದ್ದು, ವಿಶೇಷವಾಗಿ ಜಾತ್ರೆಗಳಲ್ಲಿ, ಸಂತೆ ಪ್ರದೇಶಗಳಲ್ಲಿ, ವಿವಿಧ ಉತ್ಸವ ಮತ್ತು ಮೆರವಣಿಗೆಗಳಲ್ಲಿ ಪ್ರತಿ ಪೊಲೀಸ್ ಠಾಣಾ ಮಟ್ಟದಲ್ಲಿ ಮೊಬೈಲ್ ಫೋನ್‌ಗಳು ಕಳ್ಳತನವಾಗುತ್ತಿವೆ. ಕಳುವಾದ ಮೊಬೈಲ್‌ಗಳನ್ನು ಪತ್ತೆಹಚ್ಚಲು ಒಬ್ಬ ನುರಿತ ಸಿಬ್ಬಂದಿಯನ್ನು ಪ್ರತ್ಯೇಕವಾಗಿ ನಿಯೋಜಿಸಲಾಗಿದೆ. ಹೊಸ ತಂತ್ರಜ್ಞಾನ ಬಳಸಿ ಈಗ 460 ಮೊಬೈಲ್ ಗಳನ್ನು ಪತ್ತೆ ಹಚ್ಚಲಾಗಿದೆ. ಉಳಿದ ಮೊಬೈಲ್‌ಗಳನ್ನು ಪತ್ತೆ ಹಚ್ಚುವ ಪ್ರಕ್ರಿಯೆ ತೀವ್ರಗತಿಯಲ್ಲಿ ಮುಂದುವರಿದಿದೆ. ಮೊಬೈಲ್ ಕಳ್ಳತನದ ಆರೋಪಿಗಳನ್ನು ಪತ್ತೆ ಹಚ್ಚಲು ಸಾಧ್ಯವಾಗಿಲ್ಲ, ಕಾರಣ, ಮೊಬೈಲ್ ಕಳ್ಳತನ ಮಾಡುವವರು ಅತ್ಯಂತ ಕಡಿಮೆ ದರದಲ್ಲಿ ಬೇರೆಯವರಿಗೆ ಮಾರಾಟ ಮಾಡಿ ಹೋಗುತ್ತಿದ್ದಾರೆ. ಈ ರೀತಿ ಕಳ್ಳತನವಾದ ವಸ್ತುಗಳನ್ನು ಖರೀದಿಸುವುದು ಅಪರಾಧವಾಗಿದ್ದು, ಆದ್ದರಿಂದ ಸಾರ್ವಜನಿಕರು ಎಚ್ಚರಿಕೆ ವಹಿಸಬೇಕು. ಆರೋಪಿಗಳ ಪತ್ತೆಗೆ ಸಾರ್ವಜನಿಕರು ಸಹಕರಿಸಬೇಕು. ಜನದಟ್ಟಣಿ ಇರುವ ಸಂದರ್ಭದಲ್ಲಿ ತಮ್ಮ ಮೊಬೈಲ್ ಮತ್ತು ಬೆಲೆಬಾಳುವ ವಸ್ತುಗಳ ಬಗ್ಗೆ ಜಾಗೃತಿ ವಹಿಸಬೇಕು. ಮೊಬೈಲ್‌ ಕಳೆದುಕೊಂಡಿದ್ದ ಸಾರ್ವಜನಿಕರು ಇಂದು ತಮ್ಮ ಫೋನ್‌ಗಳನ್ನು ಮರಳಿ ನೀಡಿದ ಪೊಲೀಸರ ಕಾರ್ಯಕ್ಷಮತೆಗೆ ಮೆಚ್ಚುಗೆ ವ್ಯಕ್ತಪಡಿಸಿ ಅಭಿನಂದಿಸಿದ್ದಾರೆ ಎಂದರು.ಈ ವೇಳೆ ಸಿಪಿಐ ಸಂತೋಷ ಹಳ್ಳೂರ, ಸಿಪಿಐ.ಮಲ್ಲಿಕಾರ್ಜುನ ಡಪ್ಪಿನ, ಪಿಎಸ್ಐ ಗಿರಮಲಪ್ಪ ಉಪ್ಪಾರ, ಐಗಳಿ ಪಿಎಸ್ಐ ಚಂದ್ರಶೇಖರ ಸಾಗನೂರ, ಪಿಎಸ್ಐ ಮಲ್ಲಿಕಾರ್ಜುನ ತಳವಾರ, ರಾಘವೇಂದ್ರ ಖೋತ, ರಮೇಶ ತೆಲಸಂಗ, ಎಂ.ಎ.ಆಳಂದ, ಸಿಬ್ಬಂದಿಗಳಾದ ಜಮೀರ್ ಡಾಂಗೆ, ಎಸ್.ಶೇಕ್, ಅಣ್ಣಪ್ಪ ಹಡಪದ, ಧರ್ಮೇಂದ್ರ ಶ್ಯಾನವಾಡ, ಸುಧಾಕರ ಸನದಿ, ಧರೆಪ್ಪ ಧರಿಗೌಡರ ಸೇರಿದಂತೆ ಹಲವರು ಉಪಸ್ಥಿತರಿದ್ದರು.