ಕುಪ್ಪಣ್ಣ ಪಾರ್ಕ್‌ನಲ್ಲಿ ಮಾವು, ಹಲಸು ಮೇಳ ಆರಂಭ

| Published : May 23 2025, 11:52 PM IST / Updated: May 23 2025, 11:53 PM IST

ಕುಪ್ಪಣ್ಣ ಪಾರ್ಕ್‌ನಲ್ಲಿ ಮಾವು, ಹಲಸು ಮೇಳ ಆರಂಭ
Share this Article
  • FB
  • TW
  • Linkdin
  • Email

ಸಾರಾಂಶ

ಈ ಮಾವು ಮೇಳದಲ್ಲಿ ಬಾದಾಮಿ, ರಸಪುರಿ, ಮಲ್ಲಿಕಾ, ಸಿಂಧೂರಾ, ತೋತಾಪುರಿ, ಮಲಗೋವ, ಬಾಗನಪಲ್ಲಿ, ಹಿಮಾಪಸಂದ್, ವಾಲಜ, ಕೇಸರ್, ದಶೇರಿ, ದಿಲ್ ಪಸಂದ್ ಸೇರಿದಂತೆ ವಿವಿಧ ತಳಿಗಳ ಪ್ರದರ್ಶನ ಮತ್ತು ಮಾರಾಟ ಮಾಡಲಾಗುತ್ತಿದೆ.

ಕನ್ನಡಪ್ರಭ ವಾರ್ತೆ ಮೈಸೂರು

ನೈಸರ್ಗಿಕವಾಗಿ ಮಾವು ಬೆಳೆಯುವ ರೈತರಿಗೂ ಹಾಗೂ ಮಾವು ಸವಿಯುವ ಗ್ರಾಹಕರ ನಡುವೆ ಸಂಪರ್ಕ ಕಲ್ಪಿಸಿಕೊಡುವ ನಿಟ್ಟಿನಲ್ಲಿ ನಗರದ ಕುಪ್ಪಣ್ಣ ಪಾರ್ಕ್ ಆವರಣದಲ್ಲಿ ತೋಟಗಾರಿಕೆ ಇಲಾಖೆಯು ಆಯೋಜಿಸಿರುವ 3 ದಿನಗಳ ಮಾವು ಮತ್ತು ಹಲಸು ಮೇಳವನ್ನು ಶಾಸಕ ಕೆ. ಹರೀಶ್‌ ಗೌಡ ಶುಕ್ರವಾರ ಉದ್ಘಾಟಿಸಿದರು.

ಈ ಮಾವು ಮೇಳದಲ್ಲಿ ಬಾದಾಮಿ, ರಸಪುರಿ, ಮಲ್ಲಿಕಾ, ಸಿಂಧೂರಾ, ತೋತಾಪುರಿ, ಮಲಗೋವ, ಬಾಗನಪಲ್ಲಿ, ಹಿಮಾಪಸಂದ್, ವಾಲಜ, ಕೇಸರ್, ದಶೇರಿ, ದಿಲ್ ಪಸಂದ್ ಸೇರಿದಂತೆ ವಿವಿಧ ತಳಿಗಳ ಪ್ರದರ್ಶನ ಮತ್ತು ಮಾರಾಟ ಮಾಡಲಾಗುತ್ತಿದೆ. ಮಾವು ಜೊತೆಗೆ ಹಲಸಿನ ಹಣ್ಣಿನ ಘಮಲು ಸಹ ನಾಗರಿಕರನ್ನು ಸೆಳೆಯುತ್ತಿದೆ.

ಮಾವು ಮೇಳದಲ್ಲಿ 47 ಮಳಿಗೆಗಳನ್ನು ವ್ಯವಸ್ಥೆಗೊಳಿಸಲಾಗಿದೆ. ಮೈಸೂರು, ಹಾಸನ, ರಾಮನಗರ, ಮಂಡ್ಯ, ಕೊಪ್ಪಳ ಸೇರಿದಂತೆ 8 ಜಿಲ್ಲೆಯ ರೈತರು ನಾನಾ ತಳಿಯ ಮಾವಿನ ಹಣ್ಣುಗಳನ್ನು ಮಾರಾಟ ಮಾಡುತ್ತಿದ್ದು, ಪ್ರತಿಯೊಂದು ಮಳಿಗೆಗಳ ಮುಂದೆ ದರ ಪಟ್ಟಿ ಹಾಕಲಾಗಿದೆ.

ಈ ಬಾರಿ ವಿಶೇಷವಾಗಿ ಮೇಳದಲ್ಲಿ ಉತ್ತರ ಕರ್ನಾಟಕದ ಮಾವಿನ ತಳಿಯಾದ ಕೇಸರ್ ಮಾವಿನ ಹಣ್ಣು ಪ್ರಮುಖ ಆಕರ್ಷಣೆಯಾಗಿದೆ. ಮೇಳದಲ್ಲಿ ಯಾವುದೇ ರೀತಿಯ ಕೃತಕವಾಗಿ ಮಾಗಿದ ಹಣ್ಣಿನ ಮಾರಾಟಕ್ಕೆ ಅವಕಾಶವಿಲ್ಲ. ಹೀಗಾಗಿ ಮೊದಲ ದಿನವೇ ಮಾವು ಮೇಳದಲ್ಲಿ ನೈಸರ್ಗಿಕವಾಗಿ ಬೆಳೆದ ಮಾವಿನ ಹಣ್ಣು ಖರೀದಿಗೆ ಸಾರ್ವಜನಿಕರು ಮುಗಿಬಿದ್ದರು.

ತೋಟಗಾರಿಕೆ ಇಲಾಖೆಯ ಜಂಟಿ ನಿರ್ದೇಶಕ ಎಚ್.ಎಂ. ನಾಗರಾಜ್, ಉಪ ನಿರ್ದೇಶಕ ಮಂಜುನಾಥ್ ಅಂಗಡಿ, ಹಿರಿಯ ಸಹಾಯಕ ನಿರ್ದೇಶಕಿ ಮಮತಾ, ಸಹಾಯಕ ನಿರ್ದೇಶಕರಾದ ಇಂಧೂದರ್, ಅಶ್ವಿನಿ ಮೊದಲಾದವರು ಇದ್ದರು.

ಬಾಕ್ಸ್‌ ಸಸ್ಯ ಸಂತೆತೋಟಗಾರಿಕೆ ಬೆಳೆಗಳಿಗೆ ಪ್ರೋತ್ಸಾಹಿಸಲು ರೂಪಿಸಿರುವ ಕಾರ್ಯಕ್ರಮಗಳ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಲು ನರ್ಸರಿಗಳ ಸಸ್ಯಸಂತೆ ಸಹ ಆಯೋಜಿಸಲಾಗಿದೆ. ತೆಂಗು, ಸಪೋಟ, ಪಪ್ಪಾಯಿ, ಅಡಕೆ, ಮಾವು, ನುಗ್ಗೆ, ಸೀಬೆ, ನೇರಳೆ, ನಿಂಬೆ, ಕರಿಬೇವು, ಹಿರಳಿ, ಹುಣಸೆ, ಸೀತಾಫಲ, ಚಕ್ರಮುನಿ, ವೀಳ್ಯದೆಲೆ, ಬೆಟ್ಟದ ನೆಲ್ಲಿ, ಬೆಣ್ಣೆಹಣ್ಣು, ಹಲಸು ಸಸ್ಯಗಳನ್ನು ಪ್ರದರ್ಶಿಸಲಾಗಿದೆ. ಸಸ್ಯಗಳ ಪ್ರದರ್ಶನದ ಜೊತೆಗೆ ಮಾರಾಟ ಮಾಡಲಾಗುತ್ತಿದೆ. ನರೇಗಾ, ತೋಟಗಾರಿಕೆ ಇಲಾಖೆ ವತಿಯಿಂದ ಸಿಗುವ ಪ್ರೋತ್ಸಾಹ ಧನದ ಬಗ್ಗೆಯೂ ಮಾಹಿತಿ ಫಲಕವನ್ನು ಹಾಕಲಾಗಿದೆ.

-----

ಬಾಕ್ಸ್...

ಮಾವಿನ ಹಣ್ಣಿನ ದರ

ಬಾದಾಮಿ 130

ರಸಪುರಿ 90

ಮಲ್ಲಿಕಾ 145

ಸಿಂಧೂರಾ 55

ತೋತಾಪುರಿ 30

ಮಲಗೋವ 230

ಬಾಗನಪಲ್ಲಿ 70

ಹಿಮಾಪಸಂದ್ 220

ವಾಲಜ 120

ಕೇಸರ್ 180

ದಶೇರಿ 150

ದಿಲ್ ಪಸಂದ್ 120