ಕೃಷ್ಣಮಠದಲ್ಲಿ 48 ದಿನಗಳ ಕೃಷ್ಣ ಜನ್ಮಾಷ್ಟಮಿ ಮಂಡಲೋತ್ಸವ

| Published : Jul 15 2025, 11:45 PM IST

ಸಾರಾಂಶ

ಉಡುಪಿ ಕೃಷ್ಣ ಮಠದಲ್ಲಿ ಆ.1ರಿಂದ ಪ್ರಾರಂಭಗೊಂಡು 48 ದಿನಗಳ ಪರ್ಯಂತ ಶ್ರೀ ಕೃಷ್ಣ ಜನ್ಮಾಷ್ಟಮಿ ಮಂಡಲೋತ್ಸವವನ್ನು ವಿಶೇಷ ರೀತಿಯಲ್ಲಿ ಭಕ್ತರ ಸಹಕಾರದೊಂದಿಗೆ ವಿಜೃಂಭಣೆಯಿಂದ ನಡೆಸಲು ಇತ್ತೀಚೆಗೆ ನಡೆದ ಪೂರ್ವಭಾವಿ ಸಭೆಯಲ್ಲಿ ನಿರ್ಧರಿಸಲಾಗಿದೆ.

ಕನ್ನಡಪ್ರಭ ವಾರ್ತೆ ಉಡುಪಿಈ ಬಾರಿ ಕೃಷ್ಣಮಠದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ಮಂಡಲೋತ್ಸವವನ್ನು ನಡೆಸುವ ಬಗ್ಗೆ ವಿಶೇಷ ಸಭೆಯು ಕನಕ ಮಂಟಪದಲ್ಲಿ ಪರ್ಯಾಯ ಶ್ರೀ ಪುತ್ತಿಗೆ ಶ್ರೀಪಾದರ ಅಧ್ಯಕ್ಷತೆಯಲ್ಲಿ ಜರುಗಿತು.

ಆ.1ರಿಂದ ಪ್ರಾರಂಭಗೊಂಡು 48 ದಿನಗಳ ಪರ್ಯಂತ ನಡೆಯುವ ಶ್ರೀ ಕೃಷ್ಣ ಜನ್ಮಾಷ್ಟಮಿ ಮಂಡಲೋತ್ಸವವನ್ನು ವಿಶೇಷ ರೀತಿಯಲ್ಲಿ ಭಕ್ತರ ಸಹಕಾರದೊಂದಿಗೆ ವಿಜೃಂಭಣೆಯಿಂದ ನಡೆಸುವುದಾಗಿ ಶ್ರೀಪಾದರು ತಿಳಿಸಿದರು.

ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ಶಾಸಕ ಯಶ್ಪಾಲ್ ಸುವರ್ಣ ಮಾತನಾಡಿ, ತಮ್ಮ ಸಂಪೂರ್ಣ ಸಹಕಾರ ನೀಡುವುದರೊಂದಿಗೆ ನಗರ ಸಭೆಯಿಂದಲೂ ವಿಶೇಷ ಸಹಕಾರ ನೀಡುವುದಾಗಿ ತಿಳಿಸಿದರು.ನಂತರ ಶಾಸಕ ಯಶ್ಪಾಲ್ ಸುವರ್ಣರ ಗೌರವಾಧ್ಯಕ್ಷತೆಯಲ್ಲಿ ಮಂಡಲೋತ್ಸವ ಸಮಿತಿಯನ್ನು ರಚಿಸಲಾಯಿತು.ಸುಮಾರು 9ಕ್ಕೂ ಮಿಕ್ಕಿ ಸಂಘ ಸಂಸ್ಥೆ ಸಮಿತಿಗಳ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಮತ್ತು ಊರ ಗಣ್ಯರು ಈ ಸಭೆಯಲ್ಲಿ ಉಪಸ್ಥಿತರಿದ್ದು, ಸಲಹೆ ಸೂಚನೆಗಳನ್ನು ನೀಡಿದರು. ಮಠದ ದಿವಾನರಾದ ನಾಗರಾಜ ಆಚಾರ್ಯರು ಕಾರ್ಯಕ್ರಮಗಳ ಸ್ವರೂಪದ ರೂಪುರೇಷೆಗಳನ್ನು ನೀಡಿದರು.ಸಭೆಯಲ್ಲಿ ಮಠದ ಅಂತಾರಾಷ್ಟ್ರೀಯ ಕಾರ್ಯದರ್ಶಿಯಾದ ಪ್ರಸನ್ನಾಚಾರ್ಯರು, ಜಯರಾಮ ಆಚಾರ್ಯರು, ರಾಮಚಂದ್ರ ಉಪಾಧ್ಯ, ಶ್ರೀನಿವಾಸ ಯು.ಬಿ., ನಗರ ಸಭಾ ಸದಸ್ಯ ಕೃಷ್ಣರಾವ್ ಕೊಡಂಚ ಮತ್ತಿತರ ಗಣ್ಯರು ಉಪಸ್ಥಿತರಿದ್ದರು. ರಮೇಶ್ ಭಟ್ ಸ್ವಾಗತಿಸಿದರು. ರವೀಂದ್ರ ಆಚಾರ್ಯರು ವಂದಿಸಿದರು.