ಸಾರಾಂಶ
ಕನ್ನಡಪ್ರಭ ವಾರ್ತೆ ಜಗಳೂರು
ರಾಜ್ಯ ಸರ್ಕಾರ ಮೂಲಸೌಕರ್ಯ ಅಭಿವೃದ್ಧಿಗೆ ಆದ್ಯತೆ ನೀಡುವ ಉದ್ದೇಶದಿಂದ 196 ಹಳ್ಳಿಗಳಿಗೆ ಶುದ್ಧ ಕುಡಿಯುವ ನೀರು ಒದಗಿಸಲು ಬಹುಗ್ರಾಮ ಕುಡಿಯುವ ನೀರಿನ ಯೋಜನೆಗೆ ₹482 ಕೋಟಿ ಅನುದಾನ ನೀಡಿದೆ ಎಂದು ಸಂಸದೆ ಡಾ.ಪ್ರಭಾಮಲ್ಲಿಕಾರ್ಜುನ ಹೇಳಿದರು.ಜಗಳೂರಿನ 165, ದಾವಣಗೆರೆ 20 ಮತ್ತು ಹರಿಹರದ 11 ಗ್ರಾಮ ಸೇರಿ ಒಟ್ಟು 196 ಹಳ್ಳಿಗಳಲ್ಲಿ ಈ ಯೋಜನೆ ಕಾಮಗಾರಿಗೆ ತಾಲೂಕಿನ ಮಹಾರಾಜನಹಟ್ಟಿ ಗ್ರಾಮದಲ್ಲಿ ಚಾಲನೆ ನೀಡಿ ಮಾತನಾಡಿದರು.
ಜಗಳೂರು ತಾಲೂಕು ಅತ್ಯಂತ ಹಿಂದುಳಿದ ತಾಲೂಕು ಆಗಿದ್ದು ಚುನಾವಣಾ ಪ್ರಚಾರದ ವೇಳೆ ಈ ಕ್ಷೇತ್ರಕ್ಕೆ ಅಗತ್ಯ ಅಭಿವೃದ್ಧಿ ಕಾರ್ಯಗಳ ಬಗ್ಗೆ ಪಟ್ಟಿಮಾಡಿ ಭರವಸೆ ನೀಡಿದ್ದೆವು. ಅದರಂತೆ ಮಹಿಳಾ ಸಬಲೀಕರಣಕ್ಕೆ ಗಾರ್ಮೆಂಟ್ಸ್ ಸ್ಥಾಪನೆ, ಆರೋಗ್ಯ ಕ್ಷೇತ್ರಕ್ಕೆ ಒತ್ತು, ಶುದ್ಧ ಕುಡಿಯುವ ನೀರಿನ ಸೌಕರ್ಯ ಸೇರಿ ಹಂತ ಹಂತವಾಗಿ ನೆರವೇರಿಸಲು ಬದ್ಧವಾಗಿದ್ದೇನೆ. ಜಗಳೂರು ಕ್ಷೇತ್ರದ ಜನ 9 ಸಾವಿರಕ್ಕೂ ಹೆಚ್ಚು ಲೀಡ್ ಕೊಟ್ಟು ನನ್ನನ್ನು ಗೆಲ್ಲಿಸಿದ್ದಾರೆ. ಪಾರ್ಲಿಮೆಂಟ್ ಅನುಭವವೇ ಅದ್ಭುತವಾಗಿದೆ. ಜನರ ಋಣ ತೀರಿಸಲು ಪ್ರಾಮಾಣಿಕವಾಗಿ ಪ್ರಯತ್ನ ಮಾಡುತ್ತೇನೆ ಎಂದರು.ಶಾಸಕ ಬಿ.ದೇವೇಂದ್ರಪ್ಪ ಮಾತನಾಡಿ, ಕಳೆದ ವರ್ಷ ಸಂಸದೆ ಡಾ.ಪ್ರಭಾಮಲ್ಲಿಕಾರ್ಜುನ ಜಗಳೂರಿಗೆ ಬಂದಾಗ ಮಂತ್ರಿ ಪತ್ನಿಯಾಗಿ ಬಂದಿದ್ದರು. ಪ್ರಸ್ತುತ ವರ್ಷ ಸಂಸದರಾಗಿ ಬಂದಿದ್ದಾರೆ. ₹482 ಕೋಟಿ ವೆಚ್ಚದ ಕಾಮಗಾರಿಯನ್ನು ನೂತನ ಸಂಸದರಿಂದಲೇ ಚಾಲನೆ ನೀಡಬೇಕು ಎಂಬ ಉದ್ದೇಶವಾಗಿತ್ತು. ವರಮಹಾಲಕ್ಷ್ಮಿ ಹಬ್ಬದ ದಿನವೇ ಉದ್ಘಾಟನೆಯಾಗಿದ್ದು ಸಂಕಲ್ಪ ಈಡೇರಿದೆ ಎಂದರು.
ತಾಲೂಕಿಗೆ 57 ಕೆರೆ ತುಂಬಿಸುವ ಯೋಜನೆ, ಭದ್ರಾಮೇಲ್ದಂಡೆ ಯೋಜನೆ, ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಮತ್ತು ಜೆಜೆಎಂ ಯೋಜನೆಗಳು ಕುಡಿಯುವ ನೀರಿನ ಬವಣೆ ನೀಗಿಸಲು ಸಹಕಾರಿಯಾಗಲಿವೆ. ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಸಮಯಕ್ಕೆ ಸರಿಯಾಗಿ ಪೂರ್ಣಗೊಳ್ಳಲಿ. ಅಭಿವೃದ್ಧಿ ವಿಚಾರದಲ್ಲಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಮತ್ತು ಸಂಸದರು ನನ್ನ ಎಡ ಮತ್ತು ಬಲಗೈ ನಂತಿದ್ದಾರೆ ಎಂದರು.ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರ್ ಸ್ವಾಮಿ, ಜಿಪಂ ಸಿಇಒ ಸುರೇಶ್ ಇಟ್ನಾಳ್, ಬ್ರಾಹ್ಮಣ ಸಮುದಾಯ ನಿಗಮದ ಅಧ್ಯಕ್ಷ ಅಸಗೋಡು ಜಯಸಿಂಹ, ಬಂಜಾರ ನಿಗಮದ ಅಧ್ಯಕ್ಷ ಜಯದೇವ ನಾಯ್ಕ್, ಗ್ರಾಮೀಣ ಕುಡಿಯುವ ನೀರಿನ ಯೋಜನೆ ಎಇಇ ಸಾದಿಕ್ವುಲ್ಲ, ಕಾಂಗ್ರೆಸ್ ಮುಖಂಡರಾದ ಕಲ್ಲೇಶ್ರಾಜ್ ಪಟೇಲ್, ಎಂ.ಡಿ.ಕೀರ್ತಿಕುಮಾರ್, ಕೆ.ಪಿ.ಪಾಲಯ್ಯ, ಬಿ.ಮಹೇಶ್ವರಪ್ಪ, ಪಲ್ಲಾಗಟ್ಟೆ ಶೇಖರಪ್ಪ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಂಜುನಾಥ್, ಷಂಷೀರ್ ಅಹಮದ್ ಸೇರಿ ಅನೇಕರು ಇದ್ದರು.