ಸಾರಾಂಶ
ಸಿದ್ದು ಚಿಕ್ಕಬಳ್ಳೇಕೆರೆ
ಕನ್ನಡಪ್ರಭ ವಾರ್ತೆ ಬೆಂಗಳೂರುಶನಿವಾರ ಆಯೋಜಿಸಿದ್ದ ಪ್ರಪ್ರಥಮ ‘ಕೃಷಿ ಸಂತೆ’ಗೆ ಸಿಕ್ಕ ಅಭೂತಪೂರ್ವ ಯಶಸ್ಸಿನಿಂದ ಉತ್ಸಾಹಗೊಂಡಿರುವ ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯವು ಪ್ರತಿ ತಿಂಗಳೂ ನಾಲ್ಕನೇ ಶನಿವಾರ ಹೆಬ್ಬಾಳದ ಜಿಕೆವಿಕೆಯಲ್ಲಿ ‘ಕೃಷಿ ಸಂತೆ’ ನಡೆಸಲು ಚಿಂತನೆ ನಡೆಸಿದೆ.
ಶನಿವಾರ ಬೆಳಗ್ಗೆ 7.30 ರಿಂದ ಮಧ್ಯಾಹ್ನ 12.30 ರವರೆಗೂ ವಿವಿಯ ಇತಿಹಾಸದಲ್ಲೇ ಮೊದಲ ಬಾರಿಗೆ ಆಯೋಜಿಸಿದ್ದ ಸಂತೆಗೆ ರೈತರು, ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಸುಮಾರು 5 ಸಾವಿರ ಜನರು ಆಗಮಿಸಬಹುದು ಎಂದು ಅಂದಾಜಿಸಲಾಗಿತ್ತಾದರೂ 15 ಸಾವಿರಕ್ಕೂ ಅಧಿಕ ಮಂದಿ ಆಗಮಿಸಿದ್ದು ಬಹಳಷ್ಟು ಉತ್ಪನ್ನಗಳು ಮಧ್ಯಾಹ್ನ 11 ಗಂಟೆಗೆಲ್ಲಾ ಖಾಲಿಯಾಗಿದ್ದವು.ಇದನ್ನು ಗಮಿಸಿದ ಕೃಷಿ ಸಚಿವ ಚಲುವರಾಯಸ್ವಾಮಿ ಅವರು ಆಗಾಗ್ಗೆ ಸಂತೆ ಆಯೋಜಿಸುವಂತೆ ವಿವಿ ಕುಲಪತಿ ಡಾ। ಎಸ್.ವಿ.ಸುರೇಶ ಅವರಿಗೆ ಸಲಹೆ ನೀಡಿದ್ದರು. ಇದನ್ನು ಗಂಭಿರವಾಗಿ ಪರಿಗಣಿಸಿದ ಕುಲಪತಿಗಳು ಪ್ರತಿ ತಿಂಗಳು ನಾಲ್ಕನೇ ಶನಿವಾರ ಬೆಳಗ್ಗೆಯಿಂದ ಸಂಜೆ 5 ಗಂಟೆಯವರೆಗೂ ‘ಕೃಷಿ ಸಂತೆ’ ಆಯೋಜಿಸಲು ಮುಂದಾಗಿದ್ದು, ಜು.24ರಂದು ನಡೆಯುವ ಸಭೆಯಲ್ಲಿ ಸ್ಪಷ್ಟ ಚಿತ್ರಣ ಹೊರಬರಲಿದೆ.
ರೈತರು, ಎಫ್‌ಪಿಓಗೂ ಅವಕಾಶ:ಕೃಷಿ ವಿವಿಯ ವ್ಯಾಪ್ತಿಗೊಳಪಡುವ ವಿವಿಧ ಕೃಷಿ ಸಂಶೋಧನಾ, ವಿಸ್ತರಣೆ ಹಾಗೂ ಕೃಷಿ ಮಹಾವಿದ್ಯಾನಿಲಯಗಳಲ್ಲಿ ಉತ್ಪಾದಿಸಲಾದ ಕೃಷಿ ಉತ್ಪನ್ನ, ತಂತ್ರಜ್ಞಾನಗಳನ್ನಷ್ಟೇ ಶನಿವಾರ ಪ್ರದರ್ಶಿಸಿ ಮಾರಾಟಕ್ಕಿಡಲಾಗಿತ್ತು. ಆದರೆ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದರಿಂದ ರೈತರು ಮತ್ತು ರೈತ ಉತ್ಪಾದಕ ಸಂಸ್ಥೆ(ಎಫ್‌ಪಿಓ)ಗಳೂ ತಮ್ಮ ಉತ್ಪನ್ನಗಳನ್ನು ತೆಗೆದುಕೊಂಡು ಬಂದು ವ್ಯಾಪಾರ ನಡೆಸಲು ಮುಕ್ತ ಅವಕಾಶ ನೀಡುವ ಬಗ್ಗೆಯೂ ಸಭೆಯಲ್ಲಿ ಚರ್ಚೆ ನಡೆಯಲಿದೆ ಎಂದು ತಿಳಿದು ಬಂದಿದೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕೃಷಿ ವಿವಿ ಕುಲಪತಿ ಡಾ। ಎಸ್.ವಿ.ಸುರೇಶ್ ಅವರು, ‘ಜಿಕೆವಿಕೆಯ ಸುತ್ತಮುತ್ತಲ ಪ್ರದೇಶಗಳ ಜನರು ಮಾತ್ರ ಸಂತೆಗೆ ಆಗಮಿಸಬಹುದು ಎಂದು ನಾವು ಅಂದಾಜಿಸಿದ್ದೆವು. ಆದರೆ ದೂರದ ಪ್ರದೇಶಗಳಿಂದಲೂ ಆಗಮಿಸಿದ್ದಾರೆ. ನಾವು ಊಹಿಸಿದ್ದಕ್ಕಿಂತ ಮೂರು ಪಟ್ಟು ಅಧಿಕ ಜನರು ಆಗಮಿಸಿರುವುದು ಪ್ರತಿ ತಿಂಗಳೂ ಸಂತೆ ಆಯೋಜಿಸಲು ಉತ್ತೇಜನ ನೀಡಿದಂತಾಗಿದೆ’ ಎಂದು ಸ್ಪಷ್ಟಪಡಿಸಿದರು.‘ಕಡಿಮೆ ಜನರು ಆಗಮಿಸಬಹುದು ಎಂದು ನಾವು ಗಣಪತಿ ದೇವಸ್ಥಾನದ ಹತ್ತಿರ ಸಂತೆ ಆಯೋಜಿಸಿದ್ದೆವು. ಆದರೆ ಜನತೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವುದರಿಂದ ಕೃಷಿ ಮೇಳ ಆಯೋಜನೆಯಾಗುವ ವಿಶಾಲವಾದ ಸ್ಥಳದಲ್ಲಿ ಸಂತೆಗೆ ವ್ಯವಸ್ಥೆ ಮಾಡಲಾಗುವುದು. ಕೃಷಿ ಸಚಿವ ಚಲುವರಾಯಸ್ವಾಮಿ ಅವರೂ ಈ ಬಗ್ಗೆ ಸೂಚನೆ ನೀಡಿದ್ದಾರೆ. ಜು.24ರಂದು ಸಭೆ ನಡೆಸಿ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು’ ಎಂದು ಸುರೇಶ್ ತಿಳಿಸಿದರು.ಪ್ರತಿ ತಿಂಗಳೂ ‘ಕೃಷಿ ಸಂತೆ’ ಆಯೋಜಿಸಬೇಕು. ರೈತರು, ರೈತ ಉತ್ಪಾದಕ ಸಂಸ್ಥೆಗಳಿಗೂ ಅವಕಾಶ ನೀಡಬೇಕು. ಇದರಿಂದ ರೈತರು ಮತ್ತು ಗ್ರಾಹಕರಿಗೂ ಅನುಕೂಲವಾಗಲಿದೆ ಎಂದು ಕೃಷಿ ವಿವಿ ಕುಲಪತಿಗಳಿಗೆ ಸೂಚನೆ ನೀಡಲಾಗಿದೆ.
-ಎನ್.ಚಲುವರಾಯಸ್ವಾಮಿ, ಕೃಷಿ ಸಚಿವ