ಸಾರಾಂಶ
ಇದು ಕಾಂಗ್ರೆಸ್ ಸರ್ಕಾರವು ಜಾರಿಗೆ ತಂದ ಜಾಗತೀಕರಣ ನೀತಿಗಳ ಫಲವಾಗಿವೆ.
ಕನ್ನಡಪ್ರಭ ವಾರ್ತೆ ಮೈಸೂರು
ಪ್ರಸ್ತುತ ದೇಶದಲ್ಲಿ ಕಾಯಂ ಸ್ವರೂಪದ ಉದ್ಯೋಗಗಳೇ ನಾಶವಾಗುತ್ತಿವೆ ಎಂದು ಎಐಯುಟಿಯುಸಿ ರಾಷ್ಟ್ರೀಯ ಅಧ್ಯಕ್ಷ ಕೆ. ರಾಧಾಕೃಷ್ಣ ಆತಂಕ ವ್ಯಕ್ತಪಡಿಸಿದರು.ನಗರದ ಪುರಭವನ ಆವರಣದಲ್ಲಿ ಎಐಯುಟಿಯುಸಿ ಶನಿವಾರ ಆಯೋಜಿಸಿದ್ದ 4ನೇ ರಾಜ್ಯ ಮಟ್ಟದ ಕಾರ್ಮಿಕ ಸಮ್ಮೇಳನದ ಬಹಿರಂಗ ಅಧಿವೇಶನವನ್ನು ಉದ್ಘಾಟಿಸಿ ಮಾತನಾಡಿದ ಅವರು, ಎಲ್ಲಾ ಹುದ್ದೆಗಳಿಗೂ ಗುತ್ತಿಗೆ, ಹೊರ ಗುತ್ತಿಗೆ, ಎಫ್ ಟಿಇ (ಫಿಕ್ಸಡ್ ಟರ್ಮ್ ಎಂಪ್ಲಾಯ್ ಮೆಂಟ್) ಹೆಸರಿನಲ್ಲಿ ನೇಮಕ ಮಾಡಿ, ಅತ್ಯಂತ ಕಡಿಮೆ ಸಂಬಳ ನೀಡಿ ಶೋಷಿಸಲಾಗುತ್ತಿದೆ ಎಂದು ದೂರಿದರು.ಇದು ಕಾಂಗ್ರೆಸ್ ಸರ್ಕಾರವು ಜಾರಿಗೆ ತಂದ ಜಾಗತೀಕರಣ ನೀತಿಗಳ ಫಲವಾಗಿವೆ. ಪ್ರಸಕ್ತ ಬಿಜೆಪಿ ಸರ್ಕಾರ ಇವುಗಳನ್ನೇ ಮುಂದುವರೆಸುತ್ತಾ, ಕಾರ್ಮಿಕರ ಶೋಷಣೆ ಇನ್ನಷ್ಟು ತೀವ್ರಗೊಳಿಸಿದೆ. ಕಾರ್ಮಿಕ ಪರ ಕಾನೂನುಗಳನ್ನು ತಿದ್ದುಪಡಿ ಮಾಡಿ, ಮಾಲೀಕರ ಹಿತಕ್ಕಾಗಿ ಈಗ 4 ಲೇಬರ್ ಕೋಡ್ ಗಳನ್ನು ಕೇಂದ್ರ ಬಿಜೆಪಿ ಸರ್ಕಾರ ಜಾರಿಗೆ ತರುತ್ತಿದೆ ಎಂದು ಅವರು ತಿಳಿಸಿದರು.ಸರ್ಕಾರಗಳೇ ಇಂದು ಅಂಗನವಾಡಿ, ಆಶಾ ಮತ್ತು ಬಿಸಿಯೂಟ ಕಾರ್ಯಕರ್ತೆಯರಿಗೆ ಸ್ಕೀಂ ನೌಕರರ ಎಂಬ ಹೆಸರಿನಲ್ಲಿ ಬಿಡಿಗಾಸನ್ನು ನೀಡಿ, ಬಿಟ್ಟಿ ಚಾಕರಿಯನ್ನು ಮಾಡಿಸಿಕೊಳ್ಳುತ್ತಿದೆ. ಪ್ರಧಾನಿ ಆಶಾ ಕಾಯಕರ್ತೆಯರ ಬಿಟ್ಟಿ ಚಾಕರಿಯನ್ನು ಹಾಡಿ ಹೊಗಳುತ್ತಾರೆ. ಆದರೆ, ಅವರ ದುಡಿಮೆಗೆ ತಕ್ಕಂತೆ ಪ್ರತಿಫಲ ಮಾತ್ರ ನೀಡಲು ಮುಂದಾಗುವುದಿಲ್ಲ ಎಂದು ಅವರು ಕಿಡಿಕಾರಿದರು.ಪ್ರಧಾನಿ ಮೋದಿ ನೇತೃತ್ವದ ಬಿಜೆಪಿ ಸರ್ಕಾರವು ವಿಫಲವಾಗಿದೆ. ಯುವಕರು ಉದ್ಯೋಗಗಳನ್ನು ಅರಸಿ ಯುದ್ಧಪೀಡಿತ ದೇಶಗಳಿಗೆ ವಲಸೆ ಹೋಗುವ ಪರಿಸ್ಥಿತಿ ಇದೆ. ಇಂತಹ ಪರಿಸ್ಥಿತಿಯಲ್ಲಿ ಹೋರಾಟಗಳನ್ನು ದಿಕ್ಕು ತಪ್ಪಿಸುವ ಸಲುವಾಗಿ ಜಾತಿ, ಮತ, ಭೇದಗಳನ್ನು ಮುಂದೆ ಮಾಡಿ, ಕೋಮುವಾದಿ ಅಜೆಂಡಾದ ಮೂಲಕ ಶ್ರಮಿಕ ವರ್ಗವನ್ನು ಒಡೆದಾಳುವ ಪ್ರಯತ್ನ ಮಾಡಲಾಗುತ್ತಿದೆ. ಕಾರ್ಮಿಕರು ಇದನ್ನು ಮೀರಿ ಒಗ್ಗಟ್ಟಾಗಿ, ಬಂಡವಾಳಿಶಾಹಿ ವ್ಯವಸ್ಥೆಗೆ ಕೊನೆ ಹಾಕಿ, ಕಾರ್ಮಿಕರರಾಜ್ಯ ಸ್ಥಾಪನೆಗಾಗಿ ಬಲಿಷ್ಠವಾದ ಹೋರಾಟವನ್ನು ಬೆಳೆಸಬೇಕು ಎಂದು ಅವರು ಕರೆ ನೀಡಿದರು.ಎಐಯುಟಿಯುಸಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಶಂಕರ್ ದಾಸ್ ಗುಪ್ತ ಮಾತನಾಡಿ, ದೇಶದ ಅಭಿವೃದ್ಧಿ ಎಂದರೆ ಬಂಡವಾಳಶಾಹಿಗಳ ಅಭಿವೃದ್ದಿಯಲ್ಲ. ಆದರೆ ಇಂದು ದೇಶದಲ್ಲಿ ಶೇ.60 ಸಂಪತ್ತು ಕೇವಲ ಶೇ.1 ಜನತೆಯ ಕೈಯಲ್ಲಿ ಶೇಖರಣೆಯಾಗಿದೆ. ಶ್ರೀಮಂತರ ಬಡವರ ನಡುವಿನ ಅಂತರ ಹೆಚ್ಚಳವಾಗುತ್ತಿದೆ. ಇಂತಹ ಸಂದರ್ಭದಲ್ಲಿ ಇಡೀ ದೇಶದಲ್ಲಿ ಹೋರಾಟಗಳನ್ನು ಸರಿಯಾದ ವೈಚಾರಿಕತೆಯ ಆಧಾರದಲ್ಲಿ ಕಟ್ಟಬೇಕಿದೆ ಎಂದರು.ಎಐಯುಟಿಯುಸಿ ರಾಜ್ಯಾಧ್ಯಕ್ಷ ಕೆ. ಸೋಮಶೇಖರ್ ಮಾತನಾಡಿ, ಬಂಡವಾಳಶಾಹಿ ವ್ಯವಸ್ಥೆಯು ತನ್ನ ಶೋಷಣೆಯನ್ನು ತೀವ್ರಗೊಳಿಸುವ ಸಲುವಾಗಿ ತರುತ್ತಿರುವ ಹೊಸ ಹೊಸ ನೀತಿಗಳನ್ನು ಮೈಸೂರಿನಲ್ಲಿ ಪ್ರಯೋಗ ಮಾಡುತ್ತಿದೆ. ಇದೇ ಪರ್ಯಾಯವಾಗಿ ಕಾರ್ಮಿಕರು ಸಹ ಎಐಯುಟಿಯುಸಿ ನೇತೃತ್ವದಲ್ಲಿ ರಾಜಿ ರಹಿತವಾದ ಹೋರಾಟವನ್ನು ಕಟ್ಟುತ್ತಿದ್ದಾರೆ. ಕಾರ್ಮಿಕರ ಬದುಕು ದುಸ್ತರವಾಗುತ್ತಿರುವ ಸಂದರ್ಭದಲ್ಲಿ ಸರ್ಕಾರ ಕಾರ್ಮಿಕರ ಹಿತವನ್ನು ಕಾಯಬೇಕು ಎಂದು ಒತ್ತಾಯಿಸಿದರು.ಬಹಿರಂಗ ಅಧಿವೇಶನಕ್ಕೂ ಮೊದಲು ಬೃಹತ್ ಮೆರವಣಿಗೆಯನ್ನು ಆಯೋಜಿಸಲಾಗಿತ್ತು. ನಂಜರಾಜ ಬಹದ್ದೂರ್ ಛತ್ರದಿಂದ ಆರಂಭವಾದ ಮೆರವಣಿಗೆಯು ಅಶೋಕ ರಸ್ತೆಯ ಮೂಲಕ ಪುರಭವನಕ್ಕೆ ತಲುಪಿತು. ಇದೇ ವೇಳೆ ಸೂಕ್ತಿ ಹಾಗೂ ಛಾಯಾಚಿತ್ರ ಪ್ರದರ್ಶನವನ್ನು ಸ್ವಾಗತ ಸಮಿತಿಯ ಗೌರವಾಧ್ಯಕ್ಷ ಪ್ರೊ. ಕಾಳಚನ್ನೇಗೌಡ ಉದ್ಘಾಟಿಸಿದರು.ಎಸ್.ಯು.ಸಿ.ಐ.ಸಿ ರಾಜ್ಯ ಕಾರ್ಯದರ್ಶಿ ಕೆ. ಉಮಾ, ಸ್ವಾಗತ ಸಮಿತಿಯ ಅಧ್ಯಕ್ಷ ಉಗ್ರ ನರಸಿಂಹೇಗೌಡ, ಎಐಯುಟಿಯುಸಿ ತಮಿಳುನಾಡು ರಾಜ್ಯ ಕಾರ್ಯದರ್ಶಿ ಶಿವಕುಮಾರ್, ರಾಜ್ಯ ಉಪಾಧ್ಯಕ್ಷರಾದ ಕೆ.ವಿ. ಭಟ್, ಡಿ. ನಾಗಲಕ್ಷ್ಮಿ, ಎ. ದೇವದಾಸ್, ರಾಜ್ಯ ಸೆಕ್ರೆಟರಿಯೇಟ್ ಸದಸ್ಯರಾದ ಚಂದ್ರಶೇಖರ ಮೇಟಿ, ಎಂ. ಉಮಾದೇವಿ, ಎನ್.ಎಸ್. ವೀರೇಶ್, ರಮಾ, ಮುಖಂಡರಾದ ಸವಿತಾ ಪ. ಮಲ್ಲೇಶ್, ಬಸವನಗೌಡ ಪಾಟೀಲ್, ಬೊಕ್ಕಳ್ಳಿ ನಂಜುಂಡಸ್ವಾಮಿ, ಬಿ. ರವಿ, ಪಿ.ಎಸ್. ಸಂಧ್ಯಾ, ಮುದ್ದುಕೃಷ್ಣ, ಚಂದ್ರಕಲಾ, ಸುಮಾ ಮೊದಲಾದವರು ಇದ್ದರು.----ಕೋಟ್...ದೇಶದಲ್ಲಿ ಶತಕೋಟ್ಯಾಧಿಪತಿಗಳ ಸಂಖ್ಯೆ ಗಣನೀಯವಾಗಿ ಹೆಚ್ಚಳವಾಗುತ್ತಿದೆ. ಆದರೆ, ಅವರ ಕಾರ್ಖಾನೆಗಳಲ್ಲಿ ದುಡಿಯುವ ಕಾರ್ಮಿಕರ ಬದುಕು ಮಾತ್ರ ಶೋಚನೀಯವಾಗುತ್ತಿದೆ. ಅಂಬಾನಿಯ ಗಳಿಕೆ ದಿನಕ್ಕೆ 190 ಕೋಟಿಯಾದರೆ, ಕಾರ್ಮಿಕರ ತಿಂಗಳ ಸರಾಸರಿ ಸಂಪಾದನೆ 5 ಸಾವಿರ ಮಾತ್ರ. ಇದು ನಿಜವಾದ ಭಾರತದ ಸ್ಥಿತಿ. ಇದಕ್ಕೆ ಕಾಂಗ್ರೆಸ್, ಬಿಜೆಪಿ ಎರಡೂ ಕೂಡಾ ಕಾರಣ.- ಕೆ. ರಾಧಾಕೃಷ್ಣ, ರಾಷ್ಟ್ರೀಯ ಅಧ್ಯಕ್ಷ, ಎಐಯುಟಿಯುಸಿ