ಡಿ ಗ್ರುಪ್ ನ ಸಿಬ್ಬಂದಿಗೆ ₹೨೨,೫೮೯ ವೇತನ ನಿಗದಿ ಮಾಡಿದ್ದು, ಪಿಎಫ್, ಇಎಸ್‌ಐ, ಸೇವಾ ಶುಲ್ಕಗಳನ್ನು ಕಡಿತ ಮಾಡಿ, ₹16,807 ಬ್ಯಾಂಕ್ ಖಾತೆಗೆ ಹಾಕಬೇಕು. ಆದರೆ ₹೧೩,೯೪೫ ಮಾತ್ರ ಹಾಕಲಾಗುತ್ತಿದೆ.
ಯಲ್ಲಾಪುರ: ಇಲ್ಲಿನ ತಾಲೂಕು ಆಸ್ಪತ್ರೆಯಲ್ಲಿ ನೇಮಕಗೊಂಡ ಗುತ್ತಿಗೆ ಸಿಬ್ಬಂದಿಗೆ ನೀಡುವ ಸಂಬಳದಲ್ಲಿ ಪ್ರತಿ ತಿಂಗಳು ₹೪-೫ ಸಾವಿರ ಕಡಿತ ಮಾಡಲಾಗುತ್ತಿದೆ.
ತಾಲೂಕು ಆಸ್ಪತ್ರೆಯಲ್ಲಿ ನಾನ್ ಕ್ಲಿನಿಕಲ್ ಹಾಗೂ ಡಿ ಗ್ರುಪ್ ಸಿಬ್ಬಂದಿಯನ್ನು ಹೊರಗುತ್ತಿಗೆ ಆಧಾರದಲ್ಲಿ ಅನೇಕ ವರ್ಷಗಳಿಂದ ತೆಗೆದುಕೊಳ್ಳಲಾಗುತ್ತಿದ್ದು, ಅವರಿಗೆ ಪ್ರತಿವರ್ಷ ಟೆಂಡರ್ ಮೂಲಕ ಗುತ್ತಿಗೆದಾರನನ್ನು ನಿಗದಿಪಡಿಸಿ, ಆತ ಆ ಸಿಬ್ಬಂದಿಗೆ ಪ್ರತಿ ತಿಂಗಳು ನಿಗದಿತ ದಿನಾಂಕಕ್ಕೆ ಸಂಬಳ ನೀಡಬೇಕು.ಸರ್ಕಾರ ನೀಡುವ ಶೇ. ೩ರಷ್ಟು ಸೇವಾ ಶುಲ್ಕ ಬಿಟ್ಟು ಲಕ್ಷಾಂತರ ಹಣವನ್ನು ಗುತ್ತಿಗೆದಾರ ಬೆಳಗಾವಿ ಜಿಲ್ಲೆಯ ಹುಕ್ಕೇರಿಯ ಮಹೇಶ ಲಕ್ಷ್ಮಣ ಗುಮಚಿ ದೋಚುತ್ತಿರುವ ವಿಷಯ ತಾಲೂಕು ವೈದ್ಯಾಧಿಕಾರಿಗಳ ಗಮನಕ್ಕೆ ಬಂದ ತಕ್ಷಣ ಸೆ. 17ರಂದು ಕಾರಣ ಕೇಳಿ ನೋಟಿಸ್ ಜಾರಿ ಮಾಡಿದ್ದಾರೆ. ಈ ಕುರಿತು ಶಾಸಕ ಶಿವರಾಮ ಹೆಬ್ಬಾರ, ಜಿಲ್ಲಾಧಿಕಾರಿಗಳು, ಜಿಪಂ ಸಿಇಒ, ಜಿಲ್ಲಾ ವೈದ್ಯಾಧಿಕಾರಿಗಳಿಗೂ ಮಾಹಿತಿ ನೀಡಿದ್ದರು.
ಸರ್ಕಾರದ ನಿಯಮದಂತೆ ನಾನ್ ಕ್ಲಿನಿಕಲ್ ಸಿಬ್ಬಂದಿಗೆ ತಿಂಗಳಿಗೆ ಒಟ್ಟು ₹೨೭,೨೧೭ರಲ್ಲಿ ಪಿಎಫ್, ಇಎಸ್‌ಐ, ಸೇವಾ ಶುಲ್ಕ ಕಡಿತ ಮಾಡಿ, ₹೧೬,೮೦೭ ಬ್ಯಾಂಕ್ ಖಾತೆಗೆ ಹಾಕಬೇಕು. ಆದರೆ ₹೧೩,೯೪೫ ಮಾತ್ರ ಹಾಕಲಾಗುತ್ತಿದೆ. ಅದರಲ್ಲೂ ಪ್ರತಿ ತಿಂಗಳು ₹೫೦೦ ಮರಳಿ ಪಡೆಯಲಾಗುತ್ತಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಈಗಾಗಲೇ ಪ್ರತಿ ತಿಂಗಳು ೧೦ರ ಒಳಗೆ ಇವರಿಗೆ ಸಂಬಳ ಹಾಕಲಾಗುತ್ತಿದೆ ಎನ್ನುವುದು ತಿಳಿದುಬಂತು.ಡಿ ಗ್ರುಪ್ ನ ಸಿಬ್ಬಂದಿಗೆ ₹೨೨,೫೮೯ ವೇತನ ನಿಗದಿ ಮಾಡಿದ್ದು, ಪಿಎಫ್, ಇಎಸ್‌ಐ, ಸೇವಾ ಶುಲ್ಕಗಳನ್ನು ಕಡಿತ ಮಾಡಿ, ₹16,807 ಬ್ಯಾಂಕ್ ಖಾತೆಗೆ ಹಾಕಬೇಕು. ಆದರೆ ₹೧೩,೯೪೫ ಮಾತ್ರ ಹಾಕಲಾಗುತ್ತಿದೆ. ಅದರಲ್ಲೂ ಪ್ರತಿ ತಿಂಗಳು ₹೫೦೦ ಮರಳಿ ಪಡೆಯಲಾಗುತ್ತಿದೆ. ಯಲ್ಲಾಪುರ ಆಸ್ಪತ್ರೆಯಲ್ಲಿ ನಾನ್ ಕ್ಲಿನಿಕಲ್ ಹಾಗೂ ಡಿ ವರ್ಗ ಸೇರಿ ತಲಾ ೧೦ ಸಿಬ್ಬಂದಿ ಸೇರಿ ೨೦ ಸಿಬ್ಬಂದಿಯನ್ನು ನೇಮಕ ಮಾಡಿಕೊಳ್ಳಲಾಗಿದೆ.
ನಾವು ಹಣ ಪಡೆದುಕೊಳ್ಳುವುದು ಅಥವಾ ಹಣ ಕಡಿಮೆ ನೀಡುವುದನ್ನು ಯಾರಿಗಾದರೂ ಹೇಳಿದರೆ ನಿಮ್ಮನ್ನು ಕೆಲಸದಿಂದ ತೆಗೆದು ಹಾಕುವುದಾಗಿ ಕೆಲವರು ಭಯ ಒಡ್ಡಿರುವುದು ಬೆಳಕಿಗೆ ಬಂದಿದೆ. ₹೫೦೦ ಪಡೆಯುವುದು ಎಫ್ರಾನ್ ಹಾಗೂ ಐಡಿ ಕಾರ್ಡ್ ನೀಡಲು ಎಂದು ಗುತ್ತಿಗೆದಾರ ತಿಳಿಸಿದ್ದಾರೆ. ಈವರೆಗೆ ಅದನ್ನೂ ನೀಡಿಲ್ಲ. ಅಲ್ಲದೇ ನಿಮಗೆ ₹೫,೫೦೦ ಖಾತೆಗೆ ಹಾಕುತ್ತೇನೆ. ಅದನ್ನು ನೀವು ವಾಪಸ್ ನೀಡಬೇಕು ಎಂದು ಸಿಬ್ಬಂದಿಗೆ ಹೇಳಿರುವ ಮಾಹಿತಿ ಲಭ್ಯವಾಗಿದೆ.ಸರ್ಕಾರದ ನೀತಿಯಂತೆ ವಾರಕ್ಕೊಂದು ರಜೆ ನೀಡಬೇಕು. ವರ್ಷಕ್ಕೆ ೧೦ ದಿನ ವೈದ್ಯಕೀಯ ರಜೆ, ೫೦ ವರ್ಷದೊಳಗಿನ ಮಹಿಳೆಯರಿಗೆ ಮಾಸಿಕ ಋತುಚಕ್ರ ರಜೆ ಹೀಗೆ ಆಕಸ್ಮಿಕ ಅನಾನುಕೂಲತೆಯಿಂದ ರಜೆ ಪಡೆದಾಗ, ವೇತನ ಸಹಿತ ರಜೆ ನೀಡಬೇಕು. ಆದರೆ ಅಂದಿನ ಸಂಬಳವನ್ನು ಕಡಿತ ಮಾಡಿ ಕೊಡುತ್ತಿರುವುದು ಕೂಡಾ ತಿಳಿದು ಬಂದಿದೆ.
ಈ ಕುರಿತು ತಾಲೂಕು ವೈದ್ಯಾಧಿಕಾರಿ ಡಾ. ನರೇಂದ್ರ ಪವಾರ್ ಅವರನ್ನು ಸಂಪರ್ಕಿಸಿದಾಗ, ಎಲ್ಲ ಈ ಸಿಬ್ಬಂದಿಗಳನ್ನು ಮಾಧ್ಯಮದವರ ಸಮ್ಮುಖದಲ್ಲಿ ಕರೆಸಿ ಮಾಹಿತಿ ಪಡೆದರು. ಈ ಸಂದರ್ಭದಲ್ಲಿ ಸಹಾಯಕ ಆಡಳಿತಾಧಿಕಾರಿ ಮಂಜುನಾಥ ದುತ್ತರಗಿ ಉಪಸ್ಥಿತರಿದ್ದರು. ಈ ವಿಷಯ ಗಮನಕ್ಕೆ ಬಂದ ತಕ್ಷಣ ಸಂಬಂಧಿಸಿದ ಗುತ್ತಿಗೆದಾರನಿಗೆ ಶೋಕಾಸ್ ನೋಟಿಸ್ ಜಾರಿ ಮಾಡಿದ್ದೇನೆ. ಈ ಕುರಿತು ಶಾಸಕ ಶಿವರಾಮ ಹೆಬ್ಬಾರ, ಜಿಲ್ಲಾಧಿಕಾರಿಗಳು, ಜಿಪಂ ಸಿಇಒ, ಜಿಲ್ಲಾ ವೈದ್ಯಾಧಿಕಾರಿಗಳಿಗೂ ಮಾಹಿತಿ ನೀಡಿದ್ದೇನೆ ಎಂದು ತಾಲೂಕು ವೈದ್ಯಾಧಿಕಾರಿ ಡಾ. ನರೇಂದ್ರ ಪವಾರ್ ತಿಳಿಸಿದರು.