5.14 ಲಕ್ಷ ರು. ನಿವೃತ್ತ ಪೊಲೀಸರ ಆರೋಗ್ಯಕ್ಕೆ ವೆಚ್ಚ

| Published : Apr 03 2024, 01:30 AM IST

ಸಾರಾಂಶ

ಕಳೆದ ಸಾಲಿನಲ್ಲಿ ನಿವೃತ್ತ ಪೊಲೀಸರ ಆರೋಗ್ಯ ಉದ್ದೇಶಗಳಿಗಾಗಿ 5.14 ಲಕ್ಷ ರು. ಹೆಚ್ಚಿನ ವೆಚ್ಚ ಮಾಡಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪದ್ಮಿನಿ ಸಾಹು ಅವರು ತಿಳಿಸಿದರು.

ಕನ್ನಡಪ್ರಭ ವಾರ್ತೆ ಚಾಮರಾಜಗನಗರ

ಕಳೆದ ಸಾಲಿನಲ್ಲಿ ನಿವೃತ್ತ ಪೊಲೀಸರ ಆರೋಗ್ಯ ಉದ್ದೇಶಗಳಿಗಾಗಿ 5.14 ಲಕ್ಷ ರು. ಹೆಚ್ಚಿನ ವೆಚ್ಚ ಮಾಡಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪದ್ಮಿನಿ ಸಾಹು ಅವರು ತಿಳಿಸಿದರು.

ಜಿಲ್ಲಾ ಪೊಲೀಸ್ ಇಲಾಖೆ ವತಿಯಿಂದ ಆಯೋಜಿಸಿದ್ದ ಪೊಲೀಸ್ ಧ್ವಜ ದಿನಾಚರಣೆ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಪೊಲೀಸರ ಸೇವೆಯನ್ನು ಸ್ಮರಿಸುವ ಸಲುವಾಗಿ ಧ್ವಜ ದಿನಾಚರಣೆಯನ್ನು 1996 ರಿಂದ ಪ್ರತಿವರ್ಷ ಆಚರಿಸಲಾಗುತ್ತಿದ್ದು, ಪೊಲೀಸ್ ಧ್ವಜ ದಿನದ ಅಂಗವಾಗಿ 10, 20, 50, 100 ರು. ಮುಖಬೆಲೆಯ ಪೊಲೀಸ್ ಧ್ವಜಗಳನ್ನು ಅಧಿಕಾರಿಗಳು, ನಾಗರಿಕರು ಸೇರಿದಂತೆ ಎಲ್ಲರಿಗೂ ಮಾರಾಟ ಮಾಡಿ ಹಣವನ್ನು ಸಂಗ್ರಹಿಸಿ ಇಲಾಖೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗುವ ಅಧಿಕಾರಿ, ನೌಕರರ ಆರೋಗ್ಯ ಕಲ್ಯಾಣ ಕಾರ್ಯಗಳಿಗಾಗಿ ವಿನಿಯೋಗಿಸಲಾಗುತ್ತಿದ್ದು ಇದೊಂದು ಉತ್ತಮ ಕಾರ್ಯವಾಗಿದೆ ಎಂದರು.

ಪೊಲೀಸರು ಕೌಟುಂಬಿಕ ಒತ್ತಡವನ್ನು ಬದಿಗಿಟ್ಟು, ಪ್ರಾಣದ ಹಂಗು ತೊರೆದು ದಿನದ 24 ಗಂಟೆಯು ಕಾನೂನು ಸುವ್ಯವಸ್ಥೆ ಕಾಪಾಡುವುದಲ್ಲದೆ, ಸಾರ್ವಜನಿಕರ ರಕ್ಷಣೆಗೆ ಮುಂದಾಗಿರುವ ಪೊಲೀಸರ ಸೇವೆಯನ್ನು ಸ್ಮರಿಸಿ ಧ್ವಜ ದಿನಾಚರಣೆಯನ್ನು ಆಚರಿಸಲಾಗುತ್ತಿದೆ ಎಂದರು. ಮುಖ್ಯ ಅತಿಥಿಯಾಗಿ ಧ್ವಜ ವಂದನೆ ಸ್ವೀಕರಿಸಿ ಮಾತನಾಡಿದ ನಿವೃತ್ತ ಪೊಲೀಸ್ ಇನ್ಸ್‌ಪೆಕ್ಟರ್ ಸಿ. ತಿಮ್ಮರಾಜು ಮಾತನಾಡಿದರು. ಪ್ರಧಾನ ದಂಡಾಧಿಕಾರಿ ಲಚ್ಚಪ್ಪ ಚೌಹಾಣ್ ಅವರ ನೇತೃತ್ವದಲ್ಲಿ ಜಿಲ್ಲಾ ಶಸಸ್ತ್ರ ಪೊಲೀಸ್ ಪಡೆ, ಸಿವಿಲ್, ಸಂಚಾರಿ, ಮಹಿಳಾ ತಂಡ, ಕೊಳ್ಳೇಗಾಲ ಉಪ ವಿಭಾಗ ತಂಡಗಳಿಂದ ಪಥಸಂಚಲನ ನಡೆಯಿತು.ಪಥಸಂಚಲನದ ಬಳಿಕ ರಾಷ್ಟ್ರಧ್ವಜ ಹಾಗೂ ಪೊಲೀಸ್ ಧ್ವಜಗಳಿಗೆ ಗೌರವ ವಂದನೆ ಸಲ್ಲಿಸಲಾಯಿತು. ಇದೇ ವೇಳೆ ನುಡಿಸಿದ ರಾಷ್ಟ್ರಗೀತೆಗೆ ಕಾರ್ಯಕ್ರಮದಲ್ಲಿ ಹಾಜರಿದ್ದ ಎಲ್ಲರೂ ಎದ್ದುನಿಂತು ಗೌರವ ಸಲ್ಲಿಸಿದರು. ನಂತರ ವಿವಿಧ ಮುಖಬೆಲೆಯ ಪೊಲೀಸ್ ಧ್ವಜಗಳನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪದ್ಮಿನಿ ಸಾಹು ಅವರು ಬಿಡುಗಡೆಗೊಳಿಸಿದರು.

ಇದೇ ವೇಳೆ ಕಳೆದ ಸಾಲಿನಲ್ಲಿ ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ತಿಮ್ಮರಾಜು, ನಾಗೇಶ್‌, ಚಂದ್ರಶೇಖರ್‌, ಶಿವಕುಮಾರ್‌, ರಾಜನಾಯಕ, ನಾಗಮ್ಮ, ಮಂಜುಳ, ಚಂದ್ರ, ಆಶ್ವಥ್‌ ಸಿದ್ದರಾಜು ಅವರನ್ನು ಗೌರವಿಸಿ ಸನ್ಮಾನಿಸಲಾಯಿತು. ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಟಿ.ಜೆ. ಉದೇಶ, ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಡಿ.ವೈ.ಎಸ್.ಪಿ ಶಂಕರೇಗೌಡ ಇತರರು ಕಾರ್ಯಕ್ರಮದಲ್ಲಿ ಇದ್ದರು.