ಸಾರಾಂಶ
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ನೇತೃತ್ವದಲ್ಲಿ ಚಿನ್ನ, ಬೆಳ್ಳಿ, ವಾಹನ ಸೇರಿ ಇತರೆ ವಸ್ತುಗಳ ವಿತರಣೆ
ಕನ್ನಡಪ್ರಭ ವಾರ್ತೆ ದಾವಣಗೆರೆಕಳೆದೊಂದು ವರ್ಷದಲ್ಲಿ ಜಿಲ್ಲೆಯ ವಿವಿಧ ಪ್ರಕರಣಗಳಿಗೆ ಸಂಬಂಧಿಸಿ ಒಟ್ಟು ₹5.18 ಕೋಟಿ ಮೌಲ್ಯದ ಚಿನ್ನ-ಬೆಳ್ಳಿ ಆಭರಣಗಳು, ವಸ್ತುಗಳು, ನಾಲ್ಕು ಚಕ್ರದ ವಾಹನಗಳ ವಶಪಡಿಸಿಕೊಂಡು, ಅವುಗಳ ವಾರಸುದಾರರಿಗೆ ಮರಳಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ತಿಳಿಸಿದರು.
ನಗರದ ಪಿಜೆ ಬಡಾವಣೆಯ ಜಿಲ್ಲಾ ಸಶಸ್ತ್ರ ಮೀಸಲು ಪೊಲೀಸ್ ಪಡೆಯ ಕಚೇರಿ ಆವರಣದಲ್ಲಿ ಗುರುವಾರ ಇಲಾಖೆ ಹಮ್ಮಿಕೊಂಡಿದ್ದ ಪ್ರಾಪರ್ಟಿ ರಿಟರ್ನ್ ಪರೇಡ್‌ನಲ್ಲಿ ವಿವಿಧ ಪ್ರಕರಣದಲ್ಲಿ ವಶಪಡಿಸಿಕೊಂಡ ಸ್ವತ್ತುಗಳ ವಾರಸುದಾರರಿಗೆ ಹಸ್ತಾಂತರಿಸಿ ಮಾತನಾಡಿ ಕಳೆದೊಂದು ವರ್ಷದಲ್ಲಿ 4,493 ಗ್ರಾಂ ಚಿನ್ನ ಜಪ್ತಿ ಮಾಡಿದ್ದು, ಇದರ ಮೌಲ್ಯ ಸುಮಾರು ₹2.24 ಕೋಟಿ, 50 ಕೆಜಿ 800 ಗ್ರಾಂ ಬೆಳ್ಳಿ ಸ್ವತ್ತುಗಳ ಜಪ್ತಿ ಮಾಡಿದ್ದು, ಇದರ ಮೌಲ್ಯ ಸುಮಾರು 35.56 ಲಕ್ಷ ರು.ಗಳಾಗಿದೆ. 175 ದ್ವಿ ಚಕ್ರವಾಹನಗಳ ಕಳವು ಪ್ರಕರಣಗಳ ತನಿಖೆಯಲ್ಲಿ ಒಟ್ಟು 356 ದ್ವಿಚಕ್ರ ವಾಹನಗಳ ಪತ್ತೆ ಮಾಡಲಾಗಿದೆ. ಈ ವಾಹನಗಳ ಮೊತ್ತ ₹84.78 ಲಕ್ಷ ರು. ನಾಲ್ಕು ಚಕ್ರದ ಕಳವು ಪ್ರಕರಣದಲ್ಲಿ ₹65.35 ಲಕ್ಷ ಮೌಲ್ಯದ 21 ವಾಹನ ಜಪ್ತಿ ಮಾಡಲಾಗಿದೆ ಎಂದು ಹೇಳಿದರು.ಪ್ರಸಕ್ತ ಸಾಲಿನಲ್ಲಿ ಜಿಲ್ಲೆಯಲ್ಲಿ ಒಟ್ಟು 1032 ಪ್ರಕರಣ ವರದಿಯಾಗಿದ್ದು, 13.48 ಕೋಟಿ ರು.ಗೂ ಅಧಿಕ ಮೌಲ್ಯದ ಸ್ವತ್ತು ಕಳವಾಗಿವೆ. ಈ ಪೈಕಿ ಪತ್ತೆಯಾದ 319 ಪ್ರಕರಣದಲ್ಲಿ 5.18 ಕೋಟಿ ರು. ಮೌಲ್ಯದ ಸ್ವತ್ತು ಪತ್ತೆ ಮಾಡಲಾಗಿದೆ. ಈ ಪೈಕಿ ದಾವಣಗೆರೆ ನಗರ ಉಪ ವಿಭಾಗದ 425 ಪ್ರಕರಣದಲ್ಲಿ 166 ಪತ್ತೆಯಾದರೆ, ದಾವಣಗೆರೆ ಗ್ರಾಮಾಂತರ ಉಪ ವಿಭಾಗದ 352 ಪ್ರಕರಣದಲ್ಲಿ 95 ಪ್ರಕರಣ ಪತ್ತೆಯಾಗಿವೆ. ಚನ್ನಗಿರಿ ಉಪ ವಿಭಾಗದಲ್ಲಿ 255 ಪ್ರಕರಣ ವರದಿಯಾಗಿದ್ದು, 58 ಕೇಸ್ ಪತ್ತೆಯಾಗಿವೆ ಎಂದು ಎಸ್ಪಿ ಉಮಾ ಪ್ರಶಾಂತ್ ತಿಳಿಸಿದರು.
ಬೈಕ್ ಕಳೆದುಕೊಂಡ ಮತ್ತೆ ಪೊಲೀಸರಿಂದ ಅವು ಕೈಸೇರಿದ ಖುಷಿಯಲ್ಲಿ ಮಾತನಾಡಿದ ಹಿರಿಯ ನಾಗರಿಕ ವೀರಣ್ಣ, ಬಸವ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ತಮ್ಮ ಬೈಕ್ ಕಳವು ಆಗಿತ್ತು. ಈ ಬಗ್ಗೆ ಪೊಲೀಸ್ ಠಾಣೆಗೆ ದೂರು ನೀಡಿದ್ದೆ. ಬೈಕ್ ಕಳವಾದ ಕೇವಲ 4 ಗಂಟೆಯಲ್ಲೇ ಬೈಕ್ ಪತ್ತೆ ಮಾಡಿ, ಪೊಲೀಸರು ತಮ್ಮ ಮೇಲಿನ ಅಭಿಮಾನ ಮತ್ತಷ್ಟು ಹೆಚ್ಚಲು ಕಾರಣವಾಗಿದ್ದಾರೆ ಎಂದರು.ಮತ್ತೊಬ್ಬ ಹಿರಿಯ ನಾಗರಿಕರು ಮಾತನಾಡಿ, ತಮ್ಮ ಕಳವಾದ ಬೈಕನ್ನು ಕೇವಲ 2 ದಿನದಲ್ಲೇ ಪೊಲೀಸ್ ಇಲಾಖೆ ಪತ್ತೆ ಮಾಡಿತ್ತು. ಇದು ಇಲಾಖೆ ಬಗ್ಗೆನಮಗೆ ಮತ್ತಷ್ಟು ಗೌರವ, ಅಭಿಮಾನ ಹೆಚ್ಚಿಸಿದೆ ಎಂದು ಹರ್ಷ ವ್ಯಕ್ತಪಡಿಸಿದರು.
ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ವಿಜಯಕುಮಾರ ಸಂತೋಷ, ಮಂಜುನಾಥ, ಡಿವೈಎಸ್ಪಿಗಳಾದ ಮಲ್ಲೇಶ ದೊಡ್ಮನಿ, ಬಿ.ಎಸ್.ಬಸವರಾಜ, ಪ್ರಶಾಂತಕುಮಾರ ಮನೋಳಿ, ವೃತ್ತ ನಿರೀಕ್ಷಕರಾದ ಗುರು ಬಸವರಾಜ, ಪಿ.ಬಿ.ಪ್ರಕಾಶ ಸೇರಿ ಅಧಿಕಾರಿ, ಸಿಬ್ಬಂದಿ, ಸ್ವತ್ತು ಹಾಗೂ ವಾಹನಗಳ ಮಾಲೀಕರು, ಕುಟುಂಬ ವರ್ಗದವರಿದ್ದರು.ಸಿಬ್ಬಂದಿಗೂ ಬಹುಮಾನ
ಪೊಲೀಸ್ ಇಲಾಖೆಯಿಂದ ಪ್ರತಿ ವರ್ಷ ಡಿಸೆಂಬರ್ ನಲ್ಲಿ ಅಪರಾಧ ತಡೆ ಮಾಸಾಚರಣೆ ಆಯೋಜಿಸಲಾಗುತ್ತದೆ. ಈ ಅವಧಿಯಲ್ಲಿ ಕಳ್ಳತನ ಪ್ರಕರಣಗಳಲ್ಲಿ ವಶಪಡಿಸಿಕೊಂಡ ಸ್ವತ್ತುಗಳ ಅವುಗಳ ಮಾಲೀಕರು, ವಾರಸುದಾರರಿಗೆ ವಾಪಸ್ ನೀಡುವ ಪ್ರಕ್ರಿಯೆ ಇದಾಗಿದೆ. ಬಂಧಿತರಾದ ಆರೋಪಿಗಳ ವಿರುದ್ಧ ತನಿಖೆ ಕೈಗೊಂಡು, ಕಳವು ಮಾಡಿದ್ದ ಸ್ವತ್ತು ಜಪ್ತಿ ಮಾಡಿದ ಅಧಿಕಾರಿ, ಸಿಬ್ಬಂದಿಗೂ ಪ್ರಶಸ್ತಿ ಪತ್ರದ ಜೊತೆ ನಗದು ಬಹುಮಾನ ನೀಡಿ, ಪ್ರೋತ್ಸಾಹಿಸಲಾಗುತ್ತಿದೆ.ಉಮಾ ಪ್ರಶಾಂತ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ