ರಾಜ್ಯದಲ್ಲಿ ಈಗ 5.37 ಕೋಟಿ ಮತದಾರರು

| Published : Jan 23 2024, 01:51 AM IST / Updated: Jan 23 2024, 01:52 AM IST

ರಾಜ್ಯದಲ್ಲಿ ಈಗ 5.37 ಕೋಟಿ ಮತದಾರರು
Share this Article
  • FB
  • TW
  • Linkdin
  • Email

ಸಾರಾಂಶ

ರಾಜ್ಯದ ಅಂತಿಮ ಮತದಾರರ ಪಟ್ಟಿಯನ್ನು ರಾಜ್ಯ ಮುಖ್ಯ ಚುನಾವಣಾಧಿಕಾರಿ ಕಚೇರಿ ಬಿಡುಗಡೆ ಮಾಡಿದ್ದು, 17,937 ಶತಾಯುಷಿಗಳು ಸೇರಿದಂತೆ ರಾಜ್ಯದಲ್ಲಿ ಒಟ್ಟು 5.37 ಕೋಟಿ ಮತದಾರರಿದ್ದಾರೆ. ಕರಡುಪಟ್ಟಿಗೆ ಹೋಲಿಸಿದರೆ ಅಂತಿಮ ಪಟ್ಟಿಯಲ್ಲಿ ಮತದಾರರ ಸಂಖ್ಯೆ 4.08 ಲಕ್ಷದಷ್ಟು ಹೆಚ್ಚಳವಾಗಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ರಾಜ್ಯದ ಅಂತಿಮ ಮತದಾರರ ಪಟ್ಟಿಯನ್ನು ರಾಜ್ಯ ಮುಖ್ಯ ಚುನಾವಣಾಧಿಕಾರಿ ಕಚೇರಿ ಬಿಡುಗಡೆ ಮಾಡಿದ್ದು, 17,937 ಶತಾಯುಷಿಗಳು ಸೇರಿದಂತೆ ರಾಜ್ಯದಲ್ಲಿ ಒಟ್ಟು 5.37 ಕೋಟಿ ಮತದಾರರಿದ್ದಾರೆ. ಕರಡುಪಟ್ಟಿಗೆ ಹೋಲಿಸಿದರೆ ಅಂತಿಮ ಪಟ್ಟಿಯಲ್ಲಿ ಮತದಾರರ ಸಂಖ್ಯೆ 4.08 ಲಕ್ಷದಷ್ಟು ಹೆಚ್ಚಳವಾಗಿದೆ.ಸೋಮವಾರ ಮುಖ್ಯ ಚುನಾವಣಾಧಿಕಾರಿ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ರಾಜ್ಯ ಮುಖ್ಯ ಚುನಾವಣಾಧಿಕಾರಿ ಮನೋಜ್‌ ಕುಮಾರ್‌ ಮೀನಾ ಅಂತಿಮ ಮತದಾರರ ಪಟ್ಟಿಯನ್ನು ಬಿಡುಗಡೆ ಮಾಡಿದರು.

ಬಳಿಕ ಮಾತನಾಡಿದ ಅವರು, ಕರಡು ಮತದಾರರ ಪಟ್ಟಿ ಪ್ರಕಾರ 5.33 ಕೋಟಿ ಮತದಾರರಿದ್ದರು. ಇದೀಗ 4.08 ಲಕ್ಷ ಮತದಾರರು ಹೆಚ್ಚಳವಾಗಿದ್ದು, ಒಟ್ಟು 5.37 ಕೋಟಿ ಮತದಾರರಿದ್ದಾರೆ. ಈ ಪೈಕಿ 2.69 ಕೋಟಿ ಪುರುಷ ಮತದಾರರು, 2.68 ಕೋಟಿ ಮಹಿಳಾ ಮತದಾರರು ಮತ್ತು 4,920 ಇತರೆ ಮತದಾರರಿದ್ದಾರೆ ಎಂದು ಮಾಹಿತಿ ನೀಡಿದರು. ಮಹಿಳಾ ಮತದಾರರದಲ್ಲಿ ಗಮನಾರ್ಹವಾಗಿ ಹೆಚ್ಚಳವಾಗಿದ್ದು, 2.77 ಲಕ್ಷ ಮತದಾರರು ಅಧಿಕವಾಗಿದ್ದಾರೆ. ಪುರುಷ ಮತದಾರರ ಸಂಖ್ಯೆ 1.30 ಲಕ್ಷ ಮತ್ತು ಇತರೆ ಮತದಾರರ ಸಂಖ್ಯೆ 24 ಹೆಚ್ಚಳವಾಗಿದೆ. 100 ವರ್ಷ ಮೇಲ್ಪಟ್ಟ ವಯಸ್ಸಿನ ಮತದಾರರ ಸಂಖ್ಯೆ 17,937 ಆಗಿದೆ. ಆದರೆ ಕರಡು ಮತದಾರರ ಪಟ್ಟಿಯಲ್ಲಿ 100 ವರ್ಷ ಮೇಲ್ಪಟ್ಟ ವಯಸ್ಸಿನ ಮತದಾರರ ಸಂಖ್ಯೆಯು 23,377 ಇತ್ತು. 80 ವರ್ಷ ಮೇಲ್ಪಟ್ಟ ಮತದಾರರ ಸಂಖ್ಯೆಯಲ್ಲಿಯೂ ಇಳಿಮುಖವಾಗಿದ್ದು, ಕರಡುಪಟ್ಟಿಯಲ್ಲಿ 13.82 ಲಕ್ಷ ಮತದಾರರಿದ್ದರೆ, ಅಂತಿಮ ಮತದಾರರ ಪಟ್ಟಿಯಲ್ಲಿ 12.71 ಲಕ್ಷ ಮತದಾರರಿದ್ದಾರೆ ಎಂದು ವಿವರಿಸಿದರು.

224 ವಿಧಾನಸಭಾ ಕ್ಷೇತ್ರಗಳ ಪೈಕಿ ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಅತಿ ಹೆಚ್ಚು ಮತದಾರರು ಅಂದರೆ, 7.17 ಲಕ್ಷ ಮಂದಿ ಇದ್ದಾರೆ. ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ವಿಧಾನಸಭಾ ಕ್ಷೇತ್ರದಲ್ಲಿ ಅತಿ ಕಡಿಮೆ ಮತದಾರರಿದ್ದಾರೆ. ಅಲ್ಲಿ ಒಟ್ಟು1.67 ಲಕ್ಷ ಮತದಾರರಿದ್ದಾರೆ ಎಂದು ವಿವರಿಸಿದರು.

17 ಲೋಕಸಭೆ ಕ್ಷೇತ್ರಗಳಲ್ಲಿ ಮಹಿಳೆಯರೇ ನಂ.1

ರಾಜ್ಯದ 28 ಲೋಕಸಭಾ ಕ್ಷೇತ್ರಗಳ ಪೈಕಿ 17 ಕ್ಷೇತ್ರದಲ್ಲಿ ಮಹಿಳಾ ಮತದಾರರು ಪುರುಷರಿಗಿಂತ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ಮನೋಜ್‌ ಕುಮಾರ್‌ ಮೀನಾ ತಿಳಿಸಿದ್ದಾರೆ. ಬೆಂ. ಉತ್ತರ ಅತಿಹೆಚ್ಚು ಮತದಾರರು

ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದಲ್ಲಿ ಅಧಿಕ ಮತದಾರರಿದ್ದು, 31.30 ಲಕ್ಷ ಮಂದಿ ಇದ್ದಾರೆ. ಉಡುಪಿ-ಚಿಕ್ಕಮಗಳೂರು ಕ್ಷೇತ್ರದಲ್ಲಿ ಕಡಿಮೆ ಮತದಾರರಿದ್ದು, 15.65 ಲಕ್ಷ ಮತದಾರರಿದ್ದಾರೆ ಎಂದು ಮೀನಾ ತಿಳಿಸಿದರು.

58,834 ಮತಗಟ್ಟೆಗಳ ಸ್ಥಾಪನೆ: ಅಂತಿಮ ಮತದಾರರ ಪಟ್ಟಿ ಪ್ರಕಾರ ಒಟ್ಟು ಮತಗಟ್ಟೆಗಳ ಸಂಖ್ಯೆ 58,834 ಆಗಿದೆ. ಮತಗಟ್ಟೆಗಳ ತರ್ಕಬದ್ಧಗೊಳಿಸುವಿಕೆ ಸಮಯದಲ್ಲಿ 845 ಮತಗಟ್ಟೆಗಳನ್ನು ಸೇರ್ಪಡೆಗೊಳಿಸಿದ್ದು, 552 ಮತಗಟ್ಟೆಗಳು ಹೆಚ್ಚಳವಾಗಿದೆ. ವಿಧಾನಸಭೆ ಚುನಾವಣೆ ವೇಳೆ 58,545 ಮತಗಟ್ಟೆಗಳನ್ನು ಸ್ಥಾಪಿಸಲಾಗಿತ್ತು ಎಂದು ಮುಖ್ಯಚುನಾವಣಾಧಿಕಾರಿ ಮನೋಜ್‌ ಕುಮಾರ್‌ ತಿಳಿಸಿದ್ದಾರೆ.ಇದೇ ವೇಳೆ ಅಂತಿಮ ಪಟ್ಟಿಯಲ್ಲಿ 11.14 ಲಕ್ಷ ತೆಗೆದುಹಾಕಲಾಗಿದ್ದು, 13.43 ಲಕ್ಷ ಮಾರ್ಪಾಡು ಮಾಡಲಾಗಿದೆ. 35.02 ಲಕ್ಷ ಸೇರ್ಪಡೆ ಮಾಡಲಾಗಿದೆ ಎಂದರು. -ಪಾಯಿಂಟರ್ಸ್‌-*ಒಟ್ಟು ಮತದಾರರು-5,37,85,815

*ಪುರುಷರು-2,69,33,750

*ಮಹಿಳೆಯರು- 2,68,47,145

*ಇತರೆ-4,920

*ಸೇವಾ ಮತದಾರರು-46,501

*ಯುವ ಮತದಾರರು-3,88,527

*ವಿದೇಶದಲ್ಲಿರುವ ಮತದಾರರು-3,164

*80 ವರ್ಷ ದಾಟಿರುವ ಮತದಾರರು-12,71,862

*ಶತಾಯುಷಿ(ನೂರು ವರ್ಷ ತುಂಬಿರುವ)ಮತದಾರರು-17,937

*ವಿಕಲಚೇತನ ಮತದಾರರು-5,62,890

*ಮತದಾನ ಕೇಂದ್ರಗಳು-58,834

18-19 ವರ್ಷ ವಯಸ್ಸಿನ ಯುವ ಮತದಾರರ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ. ಕರಡುಪಟ್ಟಿಯಲ್ಲಿ 6.45 ಲಕ್ಷ ಮತದಾರರಿದ್ದರೆ, ಅಂತಿಮಪಟ್ಟಿಯಲ್ಲಿ 10.34 ಲಕ್ಷ ಮತದಾರರಿದ್ದಾರೆ. ಮತದಾರರ ಸಂಖ್ಯೆ ಒಟ್ಟು 3.88 ಲಕ್ಷದಷ್ಟು ಹೆಚ್ಚಾಗಿದೆ. ಸೇವಾ ಮತದಾರರು ಒಟ್ಟು 46,501ರಷ್ಟು ಇದ್ದಾರೆ. 3,164 ಸಾಗರೋತ್ತರ ಮತದಾರರಿದ್ದಾರೆ. ವಿಕಲಚೇತನ ಮತದಾರರು 5.62 ಲಕ್ಷ ಮಂದಿ ಇದ್ದಾರೆ ಎಂದರು.ಚಾಮರಾಜನಗರ, ಕೊಡಗು ಮತ್ತು ಮೈಸೂರು ಜಿಲ್ಲೆಯಲ್ಲಿನ ಜೇನುಕುರುಬ ಹಾಗೂ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯಲ್ಲಿನ ಕೊರಗ ಸಮುದಾಯದವರನ್ನು ಮತದಾರರ ಪಟ್ಟಿಯಲ್ಲಿ ಸೇಪರ್ಡೆಗೊಳಿಸಲಾಗಿದೆ. ಒಟ್ಟು 51,536 ಜನಸಂಖ್ಯೆ ಇದ್ದು, 38,132 ಮಂದಿ ಮತದಾರರು ಅರ್ಹತೆ ಹೊಂದಿದ್ದು, 37,719 ಮಂದಿ ನೋಂದಣಿಯಾಗಿದ್ದಾರೆ. ಇನ್ನು, 413 ಮಂದಿ ನೋಂದಣಿಯಾಗಬೇಕಿದೆ ಎಂದು ಇದೇ ವೇಳೆ ಮೀನಾ ತಿಳಿಸಿದರು.ಪತ್ರಿಕಾಗೋಷ್ಠಿಯಲ್ಲಿ ಹೆಚ್ಚುವರಿ ಮುಖ್ಯ ಚುನಾವಣಾಧಿಕಾರಿಗಳಾದ ವೆಂಕಟೇಶ್‌, ಕೂರ್ಮರಾವ್‌ ಉಪಸ್ಥಿತರಿದ್ದರು.ಮೈಸೂರು, ರಾಯಚೂರು, ಬಳ್ಳಾರಿ, ಕೊಪ್ಪಳ, ಚಿತ್ರದುರ್ಗ ಸೇರಿದಂತೆ 17 ಕ್ಷೇತ್ರದಲ್ಲಿ ಮಹಿಳಾ ಮತದಾರರು ಅಧಿಕವಾಗಿದ್ದಾರೆ. ಕಳೆದ ಚುನಾವಣೆಯಲ್ಲಿ 958 (ಪ್ರತಿ 1,000 ಪುರುಷರಿಗೆ) ಇದ್ದ ಲಿಂಗ ಅನುಪಾತ ಈ ವರ್ಷ 997ಕ್ಕೆ ಏರಿಕೆಯಾಗಿದೆ ಎಂದು ಹೇಳಿದರು.