ದೊಡ್ಡಬಳ್ಳಾಪುರ: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಆವತಿ ಬೆಟ್ಟ ಅಭಿವೃದ್ಧಿಗೆ ₹5 ಕೋಟಿ ಮೊತ್ತದ ಡಿಪಿಆರ್ ಸಿದ್ಧಪಡಿಸಿ ಸರ್ಕಾರಕ್ಕೆ ಸಲ್ಲಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ ಕೆ.ಎನ್ ಅನುರಾಧ ತಿಳಿಸಿದರು

ದೊಡ್ಡಬಳ್ಳಾಪುರ: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಆವತಿ ಬೆಟ್ಟ ಅಭಿವೃದ್ಧಿಗೆ ₹5 ಕೋಟಿ ಮೊತ್ತದ ಡಿಪಿಆರ್ ಸಿದ್ಧಪಡಿಸಿ ಸರ್ಕಾರಕ್ಕೆ ಸಲ್ಲಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ ಕೆ.ಎನ್ ಅನುರಾಧ ತಿಳಿಸಿದರು.

ಆವತಿ ಬೆಟ್ಟದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಪ್ರವಾಸೋದ್ಯಮ ಇಲಾಖೆ ವತಿಯಿಂದ ಸೋಮವಾರ ಹಮ್ಮಿಕೊಂಡಿದ್ದ ವಿಶ್ವ ಪ್ರವಾಸೋದ್ಯಮ ದಿನಾಚರಣೆಯಲ್ಲಿ ಚಾರಣ, ಸಸಿ ನೆಡುವ ಮತ್ತು ಸ್ವಚ್ಛತಾ ಆಂದೋಲನದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಆವತಿ ಬೆಟ್ಟ ಪ್ರವಾಸಿಗರ ಪ್ರಮುಖ ಆಕರ್ಷಣೆಯ ಸ್ಥಳವಾಗಿ ಮಾರ್ಪಟ್ಟಿದೆ. ದೂರದ ಊರುಗಳಿಂದ ಸಾಕಷ್ಟು ಪ್ರವಾಸಿಗರು ಬಂದು ಹೋಗುವರು. ಆವತಿ ಬೆಟ್ಟ ಸಂಪೂರ್ಣ ಅಭಿವೃದ್ಧಿಗೆ ಸರ್ಕಾರಕ್ಕೆ ಈಗಾಗಲೇ ವರದಿ ಸಲ್ಲಿಸಲಾಗಿದೆ ಎಂದು ಹೇಳಿದರು.

ಸ್ವಚ್ಛತಾ ಹೀ ಸೇವಾ ಆಂದೋಲನ ಜಿಲ್ಲಾದ್ಯಂತ ಆರಂಭವಾಗಿದ್ದು ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಕಸದ ರಾಶಿ(ಬ್ಲಾಕ್ ಸ್ಟಾಪ್) ಸ್ಥಳಗಳನ್ನು ಗುರುತಿಸಿ ಹಂತ ಹಂತವಾಗಿ ಸ್ವಚ್ಛತೆ ಮಾಡಲಾಗುತ್ತಿದೆ. ಪೌರಕಾರ್ಮಿಕರು, ಗ್ರಾಮ ಸ್ವಚ್ಛತಾಗಾರರು ಎಲ್ಲೆಲ್ಲಿ ಸ್ವಚ್ಛತೆ ಮಾಡಿರುತ್ತಾರೆ, ಮತ್ತೆ ಅಲ್ಲಿ ಬಂದು ಸಾರ್ವಜನಿಕರು ಕಸ ಸುರಿಯುತ್ತಿದ್ದಾರೆ. ಈ ರೀತಿ ಮರು ಕಳಿಸದಂತೆ ಸಾರ್ವಜನಿಕರಿಗೆ ಜಾಗೃತಿ ಮೂಡಿಸಬೇಕು. ಸ್ವಚ್ಛತಾ ಹೀ ಸೇವಾ ಆಚರಣೆಯು ಕೇವಲ ಅಧಿಕಾರಿಗಳು, ಸರ್ಕಾರದಿಂದ ಸಾಧ್ಯ ಆಗಲ್ಲ ಸಾರ್ವಜನಿಕರು ಕೈ ಜೋಡಿಸಿ ಸ್ವಚ್ಛತಾ ಕಾರ್ಯದಲ್ಲಿ ತೊಡಗಿಸಿಕೊಳ್ಳಬೇಕು ಎಂದರು.

ನಶಾ ಮುಕ್ತ ಭಾರತ ನಿರ್ಮಾಣ ನಮ್ಮ ಗುರಿಯನ್ನಾಗಿಸಿ ನಶಾ ಮುಕ್ತ ದಿನಾಚರಣೆಯನ್ನು ಆಚರಿಸಲಾಗುತ್ತಿದೆ. ಈ ಹಿಂದೆ ಆವತಿ ಬೆಟ್ಟಕ್ಕೆ ಬರುವ ಪ್ರವಾಸಿಗರು ಡ್ರಗ್ಸ್ ಸೇವನೆ ಮಾಡುವರು ಎಂದು ದೂರುಗಳು ಬಂದಿತ್ತು. ಅದನ್ನು ಎಸ್ಪಿ ಅವರ ಗಮನಕ್ಕೆ ತರಲಾಗಿತ್ತು. ತದನಂತರ ಕಾರ್ಯಾಚರಣೆ ನಡೆಸಿ ಡ್ರಗ್ಸ್ ವಶಪಡಿಸಿಕೊಂಡು, ಅವರ ಮೇಲೆ ಕ್ರಮ ಜರುಗಿಸಲಾಗಿದೆ. ಸಾರ್ವಜನಿಕರು, ಪ್ರವಾಸಿಗರು ಕೂಡ ಡ್ರಗ್ಸ್‌ ಸೇವನೆ, ದಂಧೆಗಳು ಕಣ್ಣಿಗೆ ಬಿದ್ದಲ್ಲಿ ಕೂಡಲೇ ಪೊಲೀಸರ ಗಮನಕ್ಕೆ ತರಬೇಕು. ಯಾವುದೇ ಅಕ್ರಮ, ಅಪರಾಧಗಳನ್ನು ತಡೆಯುವುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯ ಎಂದು ಹೇಳಿದರು.

ಇದೇ ವೇಳೆ ನಶಾ ಮುಕ್ತ ಭಾರತ ಪ್ರತಿಜ್ಞಾ ವಿಧಿ ಬೋಧನೆ, ಪೌರಕಾರ್ಮಿಕರಿಗೆ ಸ್ವಚ್ಛತಾ ಪರಿಕರಗಳನ್ನು ವಿತರಿಸಿ, ಆರೋಗ್ಯ ತಪಾಸಣೆ ನಡೆಸಲಾಯಿತು.

ಕಾರ್ಯಕ್ರಮದಲ್ಲಿ ಅಪರ ಜಿಲ್ಲಾಧಿಕಾರಿ ಸೈಯಿದಾ ಆಯಿಷಾ, ಸಾಮಾಜಿಕ ಅರಣ್ಯ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಸರಿತಾ, ಡಿವೈಎಸ್ಪಿ ಪಾಂಡುರಂಗ, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ರಮೇಶ್, ಪ್ರವಾಸೋದ್ಯಮ ಇಲಾಖೆ ಸಹಾಯಕ ನಿರ್ದೇಶಕಿ ಪ್ರೀತಿ, ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು, ವಿವಿಧ ಸಂಘ ಸಂಸ್ಥೆಗಳು, ಪ್ರವಾಸಿಗರು ಉಪಸ್ಥಿತರಿದ್ದರು.

28ಕೆಡಿಬಿಪಿ2-

ಬೆಂಗಳೂರು ಗ್ರಾಮಾಂತ್ರ ಜಿಲ್ಲಾಡಳಿತದಿಂದ ದೊಡ್ಡಬಳ್ಳಾಪುರ ತಾಲೂಕಿನ ಆವತಿ ಬೆಟ್ಟದಲ್ಲಿ ಸೋಮವಾರ ಜಿಲ್ಲಾಧಿಕಾರಿ ಡಾ. ಅನುರಾಧ ಅವರ ನೇತೃತ್ವದಲ್ಲಿ ವಿಶ್ವ ಪ್ರವಾಸೋದ್ಯಮ ದಿನಾಚರಣೆ ನಡೆಯಿತು.