ಚನ್ನಮ್ಮನ ಕಿತ್ತೂರು ಉತ್ಸವಕ್ಕೆ ₹5 ಕೋಟಿ ಅನುದಾನ: ಶಾಸಕ ಬಾಬಾಸಾಹೇಬ ಪಾಟೀಲ

| Published : Oct 22 2025, 01:03 AM IST

ಚನ್ನಮ್ಮನ ಕಿತ್ತೂರು ಉತ್ಸವಕ್ಕೆ ₹5 ಕೋಟಿ ಅನುದಾನ: ಶಾಸಕ ಬಾಬಾಸಾಹೇಬ ಪಾಟೀಲ
Share this Article
  • FB
  • TW
  • Linkdin
  • Email

ಸಾರಾಂಶ

ಐತಿಹಾಸಿಕ ಕಿತ್ತೂರು ಸಂಗ್ರಾಮದ ವಿಜಯೋತ್ಸವಕ್ಕೆ ರಾಜ್ಯ ಸರ್ಕಾರ ಸ್ಪಂದಿಸಿದ್ದು 5 ಕೋಟಿ ಮಂಜೂರು ಮಾಡುವ ಮೂಲಕ ತಾಯಿ ಚನ್ನಮ್ಮಾಜಿಗೆ ಗೌರವ ಸಲ್ಲಿಸಿದೆ ಎಂದು ಶಾಸಕ ಬಾಬಾಸಾಹೇಬ ಪಾಟೀಲ ಹೇಳಿದರು.

ಕನ್ನಡಪ್ರಭ ವಾರ್ತೆ ಚನ್ನಮ್ಮನ ಕಿತ್ತೂರು

ಐತಿಹಾಸಿಕ ಕಿತ್ತೂರು ಸಂಗ್ರಾಮದ ವಿಜಯೋತ್ಸವಕ್ಕೆ ರಾಜ್ಯ ಸರ್ಕಾರ ಸ್ಪಂದಿಸಿದ್ದು ₹5 ಕೋಟಿ ಮಂಜೂರು ಮಾಡುವ ಮೂಲಕ ತಾಯಿ ಚನ್ನಮ್ಮಾಜಿಗೆ ಗೌರವ ಸಲ್ಲಿಸಿದೆ ಎಂದು ಶಾಸಕ ಬಾಬಾಸಾಹೇಬ ಪಾಟೀಲ ಹೇಳಿದರು.

ಪಟ್ಟಣದ ಕೋಟೆಯ ಮುಖ್ಯ ವೇದಿಕೆಯಲ್ಲಿ ಮಂಗಳವಾರ 201ನೇ ಕಿತ್ತೂರು ಉತ್ಸವದ ಪ್ರಗತಿ ಪರಿಶೀಲನಾ ಸಭೆ ಹಾಗೂ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ಸಿಎಂ ಸಿದ್ದರಾಮಯ್ಯನವರ ನೇತೃತ್ವದ ರಾಜ್ಯ ಕಾಂಗ್ರೆಸ್ ಸರ್ಕಾರ ಕಿತ್ತೂರು ವಿಜಯೋತ್ಸವದ ಆಚರಣೆ ವಿಜೃಂಭಣೆಯಿಂದ ನಡೆಸುವ ನಿಟ್ಟಿನಲ್ಲಿ ಅನುದಾನ ನೀಡುತ್ತಿರುವುದು ಸಂತಸ ತಂದಿದೆ, ಐತಿಹಾಸಿಕ ರಾಣಿ ಚನ್ನಮ್ಮಾಜಿ ಅರಮನೆಯ ಅಭಿವೃದ್ಧಿಪಡಿಸುವ ಎಲ್ಲಾ ಕಾಮಗಾರಿಗಳು ಈಗಾಗಲೇ ಪ್ರಗತಿಯಲ್ಲಿವೆ. ಕೋಟಿಯಲ್ಲಿ ಥೀಮ್ ಪಾರ್ಕ್ ನಿರ್ಮಿಸಿ, ಹೆಚ್ಚು ಪ್ರವಾಸಿಗರನ್ನು ಸೆಳೆಯುವ ಕೆಲಸ ಬರುವ ದಿನಗಳಲ್ಲಿ ಆಗಲಿದೆ ಎಂದು ವಿಶ್ವಾಸ ವ್ಯಕ್ತ ಪಡಿಸಿದರು. ಈ ಬಾರಿಯೂ ಉತ್ಸವ ಯಾವುದೇ ಕೊರತೆ ಇಲ್ಲದೆ ವಿಜೃಂಭಣೆಯಿಂದ ಆಚರಿಸಲಾಗುವುದು ಹಾಗೂ ಸಮಾರೋಪ ಸಮಾರಂಭಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಪಾಲ್ಗೊಳ್ಳಲಿದ್ದಾರೆ ಹಾಗೂ ಸಚಿವರಾದ ಕೃಷ್ಣ ಬೈರೇಗೌಡ, ಉಸ್ತುವಾರಿ ಸಚಿವರಾದ ಸತೀಶ ಜಾರಕಿಹೊಳಿ, ಸಂತೋಷ ಲಾಡ್ ಸೇರಿದಂತೆ ಎಲ್ಲ ಸಚಿವರಿಗೂ ಆಹ್ವಾನ ನೀಡಲಾಗಿದೆ ಎಂದು ತಿಳಿಸಿದರು.

ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಮಾತನಾಡಿ, ಸರ್ಕಾರದಿಂದ ₹5 ಕೋಟಿ ಅನುದಾನ ಮಂಜೂರಾಗಿದೆ. ಈಗಾಗಲೇ ₹3.50 ಕೋಟಿ ಬಿಡುಗಡೆಯಾಗಿದೆ. ಈ ಬಾರಿಯೂ ಉತ್ಸವ ವಿಜೃಂಭಣೆಯಿಂದ ಆಚರಿಸಲು ಎಲ್ಲಾ ಉಪಸಮಿತಿಗಳು ತಯಾರಿ ನಡೆಸಿವೆ. ಒಟ್ಟು ಮೂರು ವೇದಿಕೆಗಳು ಮಾಡಲಾಗಿದೆ. ಮೂರು ದಿನಗಳು ಸುಂದರ ಕಾರ್ಯಕ್ರಮಗಳು ಈ ಮೂರು ವೇದಿಕೆಗಳಲ್ಲಿ ಮೂಡಿಬರಲಿವೆ ಎಂದರು.

ಅ.23ರಂದು ಸಂಜೆ 7ಕ್ಕೆ ಕೋಟೆ ಆವರಣದ ಕಿತ್ತೂರು ರಾಣಿ ಚನ್ನಮ್ಮ ವೇದಿಕೆಯಲ್ಲಿ ಉದ್ಘಾಟನಾ ಸಮಾರಂಭವು ನಡೆಯಲಿದೆ. ಕಿತ್ತೂರು ರಾಜಗುರು ಸಂಸ್ಥಾನ ಕಲ್ಮಠದ ಮಡಿವಾಳ ರಾಜಯೋಗೀಂದ್ರ ಸ್ವಾಮೀಜಿ ಕಾರ್ಯಕ್ರಮದ ದಿವ್ಯ ಸಾನ್ನಿಧ್ಯ ವಹಿಸುವರು. ನಿಚ್ಚಣಕಿ ಶ್ರೀಗುರು ಮಡಿವಾಳೇಶ್ವರ ಮಠದ ಪಂಚಾಕ್ಷರಿ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಲಿಂಗಾಯತ ಪಂಚಮಸಾಲಿ ಜಗದ್ಗುರುಗಳಾದ ಬಸವ ಜಯ ಮೃತ್ಯುಂಜಯ ಸ್ವಾಮೀಜಿಗಳು ದಿವ್ಯ ಉಪಸ್ಥಿತಿ ವಹಿಸುವರು. 23ರಂದು ಖ್ಯಾತ ಕಲಾವಿದರು ಅನುರಾಧ ಭಟ್ ಅವರಿಂದ ಕಾರ್ಯಕ್ರಮ, 24ರಂದು ಜೀ ಕನ್ನಡದ ಸರಿಗಮಪ ತಂಡ, 25ರಂದು ಬಾಲಿವುಡ್ ಗಾಯಕಿ ನೀತಿ ಮೋಹನ್ ಭಟ್ ತಂಡದಿಂದ ರಸಮಂಜರಿ ಹಾಗೂ ವಿವಿಧ ಕಲಾ ತಂಡಗಳು 3 ದಿನ ಅದ್ಧೂರಿ ಕಾರ್ಯಕ್ರಮಗಳನ್ನು ನೀಡಲಿದ್ದಾರೆ ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ಕಿತ್ತೂರು ಉತ್ಸವದ ಬಿತ್ತಿ ಚಿತ್ರಗಳು ಹಾಗೂ ಆಹ್ವಾನ ಪತ್ರಿಕೆಗಳನ್ನು ಬಿಡುಗಡೆಗೊಳಿಸಿದರು. ಪಪಂ ಅಧ್ಯಕ್ಷ ಜಯಸಿದ್ದರಾಮ ಮಾರಿಹಾಳ, ಸಿಇಒ ರಾಹುಲ್ ಶಿಂಧೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಭೀಮಾಶಂಕರ ಗುಳೇದ, ಎಸಿ ಪ್ರವೀಣ್ ಜೈನ್, ಬೆಳಗಾವಿ ಎಸಿ ಶರಣ ನಾಯ್ಕ್, ತಹಶೀಲ್ದಾರ ಕಲಗೌಡ ಪಾಟೀಲ, ವೀರಯ್ಯ ಹಿರೇಮಠ, ಅಧಿಕಾರಿಗಳಾದ ಎಸ್ ಎಸ್ ಶಬರದ, ವಾರ್ತಾ ಇಲಾಖಾಧಿಕಾರಿ ಗುರುನಾಥ ಕಡಬೂರ ಸೇರಿದಂತೆ ಎಲ್ಲಾ ಇಲಾಖೆಯ ಅಧಿಕಾರಿಗಳು ಹಾಜರಿದ್ದರು.