ಸಾರಾಂಶ
ಹೊಸಪೇಟೆ: ಹಂಪಿ ಕನ್ನಡ ವಿಶ್ವವಿದ್ಯಾಲಯ ಆರ್ಥಿಕ ಸಂಕಷ್ಟದಲ್ಲಿ ಇರುವ ಬಗ್ಗೆ ನಾಡಿನ ಎಲ್ಲ ಪತ್ರಿಕೆಗಳು ವರದಿ ಮಾಡಿ ಬೆಳಕು ಚೆಲ್ಲಿವೆ. ಈ ವರದಿಗಳನ್ನು ಗಮನಿಸಿರುವೆ. ತಕ್ಷಣವೇ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಗಮನಕ್ಕೆ ತಂದು ತಿಂಗಳೊಳಗೆ ₹5 ಕೋಟಿ ಅನುದಾನ ವಿವಿಗೆ ಕೊಡಿಸುವೆ ಎಂದು ವಿಜಯನಗರ ಜಿಲ್ಲಾ ಉಸ್ತುವಾರಿ ಜಮೀರ್ ಅಹಮದ್ ಖಾನ್ ಅಭಯ ನೀಡಿದರು.ವಿವಿಯ ಕ್ರಿಯಾಶಕ್ತಿ ಸಭಾಂಗಣದಲ್ಲಿ ಬುಧವಾರ ನಡೆದ ಮಹತ್ವದ ಸಭೆಯಲ್ಲಿ ವಿವಿಯ ಕುಲಪತಿ ಡಾ. ಡಿ.ವಿ. ಪರಮಶಿವಮೂರ್ತಿ ಅವರಿಂದ ಮಾಹಿತಿ ಪಡೆದು ಬಳಿಕ ಭರವಸೆ ನೀಡಿದರು.
ಕನ್ನಡ ವಿವಿ ಭಾಷೆ, ಸಾಹಿತ್ಯ, ಸಂಸ್ಕೃತಿ ಬೆಳವಣಿಗೆಗೆ ತನ್ನದೇ ಆದ ಕೊಡುಗೆ ನೀಡುತ್ತಿದೆ. ಕೋವಿಡ್ ಬಳಿಕ ಈ ವಿಶ್ವವಿದ್ಯಾಲಯಕ್ಕೆ ಸರಿಯಾಗಿ ಅನುದಾನ ಲಭಿಸುತ್ತಿಲ್ಲ ಎಂಬುದು ಸಭೆಯಲ್ಲಿ ಗಮನಕ್ಕೆ ಬಂದಿದೆ. ಇದು ನಮ್ಮ ವಿಶ್ವವಿದ್ಯಾಲಯ. ಹೆಚ್ಚಾಗಿ ಬಡ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣ ಪಡೆಯಲು ಅವಕಾಶ ಮಾಡಿ ಕೊಡುತ್ತಿದೆ. ಈ ವಿವಿಗೆ ನಾನು ಬೆಂಬಲವಾಗಿ ನಿಲ್ಲುವೆ. ಇದು ಹುಸಿ ಭರವಸೆ ಅಲ್ಲ. ಬಜೆಟ್‌ನಲ್ಲಿ ಕೂಡ ವಿವಿಗೆ ಅನುದಾನ ದೊರೆಯುವಂತೆ ಮಾಡುವೆ ಎಂದರು.ಕನ್ನಡ ವಿಶ್ವವಿದ್ಯಾಲಯ ತನ್ನ ಅಧ್ಯಾಪಕರು, ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳಿಗೆ ಫೆಲೊಶಿಪ್ ಸೇರಿದಂತೆ ಆಕಾಡೆಮಿಕ್ ಚಟುವಟಿಕೆ ಸೇರಿ ವಾರ್ಷಿಕ ₹೯ರಿಂದ ₹೧೦ ಕೋಟಿ ಅನುದಾನ ಬೇಕಾಗುತ್ತದೆ. ಪ್ರಸ್ತುತ ₹೨ರಿಂದ ₹೨.೫ ಕೋಟಿ ಅನುದಾನ ಸಿಗುತ್ತಿದೆ. ಈಗ ನಾವು ಸರ್ಕಾರದ ಅನುದಾನ ಪಡೆಯಲು ವಿವಿಗೆ ಹೆಗಲಿಗೆ ಹೆಗಲು ಕೊಡಬೇಕಾದ ಸಂದರ್ಭ ಇದೆ. ಈ ಜಿಲ್ಲೆಯ ಉಸ್ತುವಾರಿ ಸಚಿವನಾಗಿ ನನ್ನ ಜವಾಬ್ದಾರಿಯನ್ನು ಪ್ರಾಮಾಣಿಕವಾಗಿ ನಿಭಾಯಿಸುವೆ ಎಂದರು. ಕನ್ನಡ ವಿವಿಗೆ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯಿಂದ ಈ ಹಿಂದೆ ಬರಬೇಕಾಗಿದ್ದ ಬಾಕಿ ₹10 ಕೋಟಿ ಕೊಡಿಸಲು ಪ್ರಯತ್ನಿಸುವೆ. ಕನ್ನಡ ವಿವಿಯ ಕುಡಿಯುವ ನೀರಿನ ಸಮಸ್ಯೆ ನಿವಾರಣೆಗೆ ಟ್ಯಾಂಕ್ ಕಾಮಗಾರಿ ಪೂರ್ಣಗೊಳಿಸಲು ₹೩ ಕೋಟಿ ಅನುದಾನ ಕೊಡಿಸುವೆ. ಜತೆಗೆ ಪ್ರಸಾರಂಗದ ಕಟ್ಟಡ ನಿರ್ಮಾಣ, ಸಿಬ್ಬಂದಿ ಬಾಕಿ ವೇತನ, ವಿದ್ಯಾರ್ಥಿಗಳ ಫೆಲೋಶಿಪ್ ಸೇರಿದಂತೆ ಇತರೆ ಸಮಸ್ಯೆಗಳನ್ನು ಹಂತ, ಹಂತವಾಗಿ ಪರಿಹರಿಸಲು ಕ್ರಮ ವಹಿಸುವೆ ಎಂದರು.
ಕುಲಪತಿ ಡಾ. ಡಿ.ವಿ. ಪರಮಶಿವಮೂರ್ತಿ ಮಾತನಾಡಿ, ಆಡಳಿತ ಸಿಬ್ಬಂದಿಯ ವೇತನ ೭ ತಿಂಗಳಿನಿಂದ ₹೧.೩೨ ಕೋಟಿ ಬಾಕಿ ಇದೆ. ಗೆಸ್ಟ್ ಪ್ಯಾಕಲ್ಟಿಗೆ ನೀಡಬೇಕಾದ ₹೧.೪೮ ಕೋಟಿ ಮಾರ್ಚದಿಂದ ಬಾಕಿ ಇದೆ. ಹೊರಗುತ್ತಿಗೆ ವೇತನ ₹೧.೪೮ ಕೋಟಿ ಬಾಕಿ ಇದೆ. ವಿಶ್ವವಿದ್ಯಾಲಯಕ್ಕೆ ₹೧೦ ಕೋಟಿ ಅನುದಾನ ಬೇಕಿದೆ. ಈ ಬಗ್ಗೆ ಸರ್ಕಾರಕ್ಕೆ ಪ್ರಸ್ತಾವನೆ ನೀಡಿದ್ದೇವೆ ಎಂದರು.ಈ ಹಿಂದೆ ಕೆಕೆಆರ್‌ಡಿಬಿಯಿಂದ ವಿಶ್ವವಿದ್ಯಾಲಯಕ್ಕೆ ನಿಗದಿಪಡಿಸಿದ ₹೨೦ ಕೋಟಿಯಲ್ಲಿ ₹೧೦ ಕೋಟಿ ಅನುದಾನವನ್ನು ವಿದ್ಯಾರ್ಥಿಗಳ ಒತ್ತಾಯದಂತೆ ಮುಖ್ಯಮಂತ್ರಿಗಳ ವಿವೇಚನೆಯಡಿ ಕಟ್ಟಡದ ಬದಲಾಗಿ ಫೆಲೋಶಿಪ್, ಸ್ಕಾಲರ್‌ಶಿಪ್‌ಗೆ ಬಳಸಲಾಗಿದೆ. ಇದರಿಂದಾಗಿ ಕಟ್ಟಡಕ್ಕೆ ಅನುದಾನದ ಅವಶ್ಯಕತೆ ಇದೆ ಎಂದರು.
ಈ ವೇಳೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ನವೀನರಾಜ್ ಸಿಂಗ್, ಜಿಲ್ಲಾಧಿಕಾರಿ ಎಂ.ಎಸ್. ದಿವಾಕರ್, ಜಿಪಂ ಸಿಇಒ ಸದಾಶಿವ ಪ್ರಭು ಬಿ., ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀಹರಿ ಬಾಬು, ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸಲೀಂ ಪಾಷಾ, ಅಧ್ಯಯನಾಂಗದ ನಿರ್ದೇಶಕ ಡಾ. ಅಮರೇಶ ಯತಗಲ್ ಇತರರಿದ್ದರು.