ಸಾರಾಂಶ
ಕನ್ನಡಪ್ರಭ ವಾರ್ತೆ ಮಂಡ್ಯ
ನಗರದ ತೋಟಗಾರಿಕೆ ಇಲಾಖೆ ಕಚೇರಿ ಆವರಣದಲ್ಲಿ ಐದು ದಿನಗಳ ಕಾಲ ಆಯೋಜಿಸಿರುವ ಫಲಪುಷ್ಪ ಪ್ರದರ್ಶನಕ್ಕೆ ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಚಾಲನೆ ನೀಡಿದರು.ಜಿಲ್ಲಾಡಳಿತ, ಜಿಪಂ, ತೋಟಗಾರಿಕೆ ಇಲಾಖೆ ಹಾಗೂ ತೋಟಗಾರಿಕೆ ಸಂಘದ ಸಹಯೋಗದಲ್ಲಿ ಈ ಬಾರಿ ಆಯೋಜಿಸಿರುವ ಫಲಪುಷ್ಪ ಪ್ರದರ್ಶನದಲ್ಲಿ ವಿವಿಧ ಕಲಾಕೃತಿಗಳು ಆಕರ್ಷಣೀಯವಾಗಿ ಕಾಣುತ್ತಿವೆ ಎಂದು ಸಚಿವರು ಸಂತಸ ವ್ಯಕ್ತಪಡಿಸಿದರು.
ಫಲಪುಷ್ಪ ಪ್ರದರ್ಶನದಲ್ಲಿದ್ದ ಮಹಾತ್ಮ ಗಾಂಧೀಜಿ, ರಾಮ ಮಂದಿರದ ವಿನ್ಯಾಸ, ರಾಮನಬಂಟ ಹನುಮ, ಚಂದ್ರಯಾನ-3, ಜ್ಞಾನಪೀಠ ಪುರಸ್ಕೃತರ ಚಿತ್ರಗಳು, ಸಿರಿಧಾನ್ಯದಲ್ಲಿ ನಿರ್ಮಿಸಿರುವ ಮಂಡ್ಯ ನಿತ್ಯ ಸಚಿವ ಕೆ.ವಿ ಶಂಕರೇಗೌಡ ಅವರ ಕಲಾಕೃತಿ ಸೇರಿದಂತೆ ವೈವಿಧ್ಯಮಯ ಅಲಂಕಾರಿಕ ಹೂಕುಂಡಗಳನ್ನು ವೀಕ್ಷಿಸಿದರು.ಈ ಬಾರಿ ಅರಣ್ಯ ಇಲಾಖೆಯ ಪಕ್ಷಿಧಾಮ, ಕೃಷಿ ಇಲಾಖೆ ಸುಗ್ಗಿ ಹಬ್ಬ, 20 ಸಾವಿರಕ್ಕೂ ಹೆಚ್ಚು ಹೂ ಬಳಸಿ ನಿರ್ಮಿಸಿರುವ ಕಲಾಕೃತಿಗಳು, ಹೂಕುಂಡುಗಳು ಸಸ್ಯಕಾಶಿ ಮಾದರಿಯಲ್ಲಿ ಸೂರ್ಯನಿಗೆ ಮೈಯೊಡ್ಡಿ ನಿಂತಿವೆ. ನಾಡಿನ ಅನ್ನದಾತನ ಮಾದರಿ, ಎತ್ತಿನಗಾಡಿ, ಹಸು, ರೈತನ ಮಾದರಿಗಳು ಎಲ್ಲರ ಗಮನ ಸೆಳೆಯುತ್ತಿವೆ.
ಜನ ಸಾಮಾನ್ಯರು, ಪರಿಶಿಷ್ಟರ ಜಾತಿ, ವರ್ಗದ ಹಾಗೂ ಹಿಂದುಳಿದ ವರ್ಗಗಳ ಕನಿಷ್ಠ ಅವಶ್ಯಕತೆ ಪೂರೈಸುವ ಸರ್ಕಾರದ ಮಹತ್ವಾಕಾಂಕ್ಷೆ ಯೋಜನೆಯಾದ ಐದು ಗ್ಯಾರಂಟಿಗಳ ಪ್ರಾತ್ಯಕ್ಷಿಕೆ ವಿನೂತನ ಮಾದರಿಯಲ್ಲಿದ್ದು ಜನ ಸಾಮಾನ್ಯರು ಅದರ ಮುಂದೆ ನಿಂತು ಸೆಲ್ಫಿ ಕ್ಲಿಕ್ಕಿಸಿಕೊಳ್ಳುತ್ತಿರುವ ದೃಶ್ಯ ಕಂಡು ಬಂತು.ವಿವಿಧ ಇಲಾಖೆಗಳು ಜನ ಸಮಾನ್ಯರಿಗೆ ನೀಡುವ ಸೌಲಭ್ಯಗಳ ಬಗ್ಗೆ ವಸ್ತುಪ್ರದರ್ಶನ ಮಳಿಗೆಗಳು ಅನಾವರಣಗೊಳಿಸಲಾಗಿತ್ತು.
ಈ ವೇಳೆ ಶಾಸಕ ಪಿ.ರವಿಕುಮಾರ, ಜಿಲ್ಲಾಧಿಕಾರಿ ಡಾ. ಕುಮಾರ, ಜಿಪಂ ಸಿಇಒ ಶೇಖ್ ತನ್ವೀರ್ ಆಸೀಫ್, ಅಪರ ಜಿಲ್ಲಾಧಿಕಾರಿ ಡಾ.ಎಚ್.ಎಲ್.ನಾಗರಾಜು, ಎಸಿ ಶಿವಮೂರ್ತಿ, ತಹಸೀಲ್ದಾರ್ ಶಿವಕುಮಾರ್ ಬಿರಾದರ್, ತೋಟಗಾರಿಕೆ ಇಲಾಖೆ ಉಪನಿರ್ದೇಶಕಿ ರೂಪಶ್ರೀ ಹಾಗೂ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.ಸಂವಿಧಾನ ಜಾಗೃತಿ ಜಾಥಾಕ್ಕೆ ಸಚಿವರಿಂದ ಚಾಲನೆಮಂಡ್ಯ: ಸಂವಿಧಾನದ ಮಹತ್ವ ಮತು ಪ್ರಾಮುಖ್ಯತೆಯನ್ನು ಜನಸಾಮಾನ್ಯರಿಗೆ ತಿಳಿಸುವ ಉದ್ದೇಶದಿಂದ ಸರ್ಕಾರ ಹಮ್ಮಿಕೊಂಡಿರುವ ಸಂವಿಧಾನ ಜಾಗೃತಿ ಜಾಥಾಗೆ ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಚಾಲನೆ ನೀಡಿದರು.ನಗರದ ಪೊಲೀಸ್ ಪರೇಡ್ ಮೈದಾನದಲ್ಲಿ ನಡೆದ ಗಣರಾಜ್ಯೋತ್ಸವದ ಸಮಾರಂಭದ ವೇಳೆ ಸಚಿವರು ಸಂವಿಧಾನ ಜಾಗೃತಿ ಜಾಥಾಗೆ ಚಾಲನೆ ನೀಡಿ ಮಾತನಾಡಿ, ಸಂವಿಧಾನ ಮಹತ್ವ ಹಾಗೂ ಮೌಲ್ಯ ಕುರಿತು ಅರಿವು, ದೇಶದ ಜನತೆಗೆ ಸಂವಿಧಾನ ನೀಡಿರುವ ಹಕ್ಕುಗಳು ಕುರಿತಂತೆ ರಾಜ್ಯದ ಮಹಿಳೆಯರು, ಯುವ ಜನತೆ ಹಾಗೂ ಸಾರ್ವಜನಿಕರಿಗೆ ಜಾಥಾ ಅರಿವು ಮೂಡಿಸಲಿದೆ ಎಂದರು.ಗಣರಾಜ್ಯ ದಿನದಂದೇ ರಾಜ್ಯಾದ್ಯಂತ ರಥಕ್ಕೆ ಚಾಲನೆ ನೀಡಲಾಗುತ್ತಿದೆ. ಇಂದಿನಿಂದ ಫೆಬ್ರವರಿ 23 ರವರೆಗೆ ಜಿಲ್ಲೆಯ 233 ಗ್ರಾಪಂಗಳಲ್ಲಿಯೂ ಜಾಗೃತಿ ರಥ ಸಂಚರಿಸಲಿದೆ. ಜಾಥಾದಲ್ಲಿ ಎಲ್ ಇಡಿ ವಾಹನದಲ್ಲಿ ಸಂವಿಧಾನದ ಜಾಗೃತಿ, ಐದು ಗ್ಯಾರಂಟಿ ಯೋಜನೆಯ ವಿಡಿಯೋ ತುಣುಕು ಪ್ರದರ್ಶಿಸಲಾಗುವುದು ಎಂದರು.
ಡೊಳ್ಳು ಕುಣಿತ, ಪೂಜಾ ಕುಣಿತ ಸೇರಿದಂತೆ ವಿವಿಧ ಕಲಾತಂಡಗಳು ಹಾಗೂ ಕಳಸ ಹೊತ್ತ ಮಹಿಳೆಯರು ಭಾಗವಹಿಸಿ ಜಾಥಾಗೆ ವಿಶೇಷ ಮೆರಗು ನೀಡಿದರು.