5 ದಿನ ಮಾಹೆ ಘಟಿಕೋತ್ಸವ: 8,450 ವಿದ್ಯಾರ್ಥಿಗಳ ಪದವಿ ಪ್ರದಾನ

| Published : Nov 20 2025, 01:30 AM IST

ಸಾರಾಂಶ

ನ.21ರಿಂದ 23ರ ವರೆಗೆ ಮಣಿಪಾಲದಲ್ಲಿ ನಡೆಯುವ ಘಟಿಕೋತ್ಸವದಲ್ಲಿ 6,148 ವಿದ್ಯಾರ್ಥಿಗಳಿಗೆ ಪದವಿಗಳನ್ನು, 160 ಮಂದಿಗೆ ಡಾಕ್ಟರೇಟ್ ಪದವಿಗಳನ್ನು ಮತ್ತು 9 ಸಾಧಕ ವಿದ್ಯಾರ್ಥಿಗಳಿಗೆ ಚಿನ್ನದ ಪದಕಗಳನ್ನು ಪ್ರದಾನ ಮಾಡಲಾಗುತ್ತದೆ.

ನ.21- 23 ಮಣಿಪಾಲ, ನ.29 ಬೆಂಗಳೂರು, ನ.30 ಆನ್‌ಲೈನ್‌ನಲ್ಲಿ ಘಟಿಕೋತ್ಸವಕನ್ನಡಪ್ರಭ ವಾರ್ತೆ ಉಡುಪಿಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (ಮಾಹೆ) ತನ್ನ 33ನೇ ಘಟಿಕೋತ್ಸವಕ್ಕೆ ಸಜ್ಜಾಗಿದ್ದು, ಈ ಬಾರಿ ಮಣಿಪಾಲ ಮತ್ತು ಬೆಂಗಳೂರಿನಲ್ಲಿ ಒಟ್ಟು 5 ದಿನಗಳ ಕಾಲ ಘಟಿಕೋತ್ಸವ ನಡೆಯಲಿದೆ ಎಂದು ಸಹ ಕುಲಾಧಿಪತಿ ಡಾ.ಎಚ್.ಎಸ್. ಬಲ್ಲಾಳ್‌ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ನ.21ರಿಂದ 23ರ ವರೆಗೆ ಮಣಿಪಾಲದಲ್ಲಿ ನಡೆಯುವ ಘಟಿಕೋತ್ಸವದಲ್ಲಿ 6,148 ವಿದ್ಯಾರ್ಥಿಗಳಿಗೆ ಪದವಿಗಳನ್ನು, 160 ಮಂದಿಗೆ ಡಾಕ್ಟರೇಟ್ ಪದವಿಗಳನ್ನು ಮತ್ತು 9 ಸಾಧಕ ವಿದ್ಯಾರ್ಥಿಗಳಿಗೆ ಚಿನ್ನದ ಪದಕಗಳನ್ನು ಪ್ರದಾನ ಮಾಡಲಾಗುತ್ತದೆ.

ನ.29ರಂದು ಮಾಹೆ ಬೆಂಗಳೂರು ಕ್ಯಾಂಪಸ್‌ನಲ್ಲಿ ನಡೆಯುವ ಘಟಿಕೋತ್ಸವದಲ್ಲಿ 917 ವಿದ್ಯಾರ್ಥಿಗಳಿಗೆ ಪದವಿ, 12 ಮಂದಿಗೆ ಡಾಕ್ಟರೇಟ್ ಮತ್ತು 1 ಚಿನ್ನದ ಪದಕಗಳನ್ನು ಪ್ರದಾನ ಮಾಡಲಾಗುತ್ತದೆ. ನ.30ರಂದು ಮಾಹೆ ಆನ್‌ಲೈನ್‌ ಕೋರ್ಸ್‌ಗಳ 1,385 ಅಂತಾರಾಷ್ಟ್ರೀಯ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಗುತ್ತದೆ ಎಂದರು.ಮಣಿಪಾಲದಲ್ಲಿ ನಡೆಯುವ ಘಟಿಕೋತ್ಸವದಲ್ಲಿ ದೆಹಲಿ ಶಿವನಾಡರ್‌ ವಿವಿಯ ಕುಲಪತಿ ಪ್ರೊ. ಅನನ್ಯಾ ಮುಖರ್ಜಿ, ದೆಹಲಿಯ ಗೂಗಲ್ ಕ್ಲೌಡ್‌ನ ಏಷ್ಯಾ ಪೆಸಿಫಿಕ್ ಸ್ಟ್ರಾಟಜೀಸ್ ಇನಿಶಿಯೇಟಿವ್ಸ್‌ನ ಉಪಾಧ್ಯಕ್ಷ ಬಿಕ್ರಮ್ ಸಿಂಗ್ ಬೇಡಿ ಮತ್ತು ಗ್ಲಾಸ್ಗೊದ ರಾಯಲ್ ಕಾಲೇಜ್ ಆಫ್ ಫಿಸಿಶಿಯನ್ಸ್ ಅಂಡ್ ಸರ್ಜನ್ಸ್‌ನ ಅಧ್ಯಕ್ಷ ಪ್ರೊ.ಹ್ಯಾನಿ ಎಟೀಬಾ ಅವರು ಮುಖ್ಯ ಅತಿಥಿಗಳಾಗಿರುತ್ತಾರೆ. ಬೆಂಗಳೂರು ಕ್ಯಾಂಪಸ್‌ನಲ್ಲಿ ನಡೆಯಲಿರುವ ಎರಡು ದಿನಗಳ ಸಮಾರಂಭದಲ್ಲಿ ಆಕ್ಸಿಸ್ ಬ್ಯಾಂಕ್‌ನ ಸಮೂಹ ಕಾರ್ಯನಿರ್ವಾಹಕಿ ರಾಜ್‌ಕಮಲ್ ವೆಂಪತಿ ಮತ್ತು ಬೆಂಗಳೂರಿನ ರೆವೊಲ್ಯೂಟ್‌ನ ಸಿಇಒ ಪರೋಮಾ ಚಟರ್ಜಿ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.ಮಾಹೆಯ ಉಪಕುಲಪತಿ ಲೆಜ. ಡಾ. ಎಂ.ಡಿ.ವೆಂಕಟೇಶ್‌ ಮಾತನಾಡಿ, ಪ್ರಸ್ತುತ ಮಾಹೆಯು ಮಣಿಪಾಲ, ಮಂಗಳೂರು, ಬೆಂಗಳೂರು, ಜೆಮ್‌ಶೆಡ್‌ಪುರ ಮತ್ತು ದುಬೈಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದು, ನ.14 ಮತ್ತು 15ರಂದು ದುಬೈ ಕ್ಯಾಂಪಸ್‌ನ ಘಟಿಕೋತ್ಸವದಲ್ಲಿ 720 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು. ಮುಂದಿನ ವರ್ಷ ಜೆಮ್‌ಶೆಡ್‌ಪುರದಲ್ಲಿ ಪ್ರಥಮ ಘಟಿಕೋತ್ಸವ ನಡೆಯಲಿದೆ ಎಂದರು.ಸುದ್ದಿಗೋಷ್ಠಿಯಲ್ಲಿ ಮಾಹೆಯ ಕುಲಸಚಿವ ಡಾ. ಗಿರಿಧರ್ ಕಿಣಿ, ಉಪಕುಲಪತಿಗಳಾದ ಡಾ.ನಾರಾಯಣ ಸಭಾಹಿತ್ ಮತ್ತು ಡಾ. ಶರತ್‌ ಕೆ. ರಾವ್ ಮುಂತಾದವರಿದ್ದರು.------------

ಕೇಂದ್ರ ಸರ್ಕಾರದ ಇ- ಭಾರತಿ ಯೋಜನೆಯಡಿ ಶಿಕ್ಷಣ

ಕೇಂದ್ರ ಸರ್ಕಾರದ ಇ-ಭಾರತಿ ಎಂಬ ಯೋಜನೆಯಡಿ ಆಫ್ರಿಕಾ ಬಡ ದೇಶಗಳ 15,000 ವಿದ್ಯಾರ್ಥಿಗಳಿಗೆ ಭಾರತದ 5 ವಿವಿಗಳಲ್ಲಿ ಆನ್‌ಲೈನ್‌ ಉನ್ನತ ಶಿಕ್ಷಣ ನೀಡಲಾಗುತ್ತಿದೆ. ಅವರಲ್ಲಿ ಮಾಹೆಯಿಂದ ಎಂಬಿಎ, ಎಂಎಸ್ಸಿ, ಬಿಬಿಎಂ ಇತ್ಯಾದಿ 10 ವಿಭಾಗಗಳಲ್ಲಿ ಆನ್‌ಲೈನ್ ಮೂಲಕ ಶಿಕ್ಷಣ ನೀಡಲಾಗುತ್ತಿದೆ. ಅವರಲ್ಲಿ 1,385 ಮಂದಿಗೆ ಈ ಬಾರಿ ಪದವಿ ಪ್ರದಾನ ಮಾಡಲಾಗುತ್ತಿದೆ. ಮಾಹೆಯು ವಿಶ್ವಸ್ತರೀಯ ಗುಣಮಟ್ಟಕ್ಕೆ ಕೇಂದ್ರ ಸರ್ಕಾರ ನೀಡಿದ ಮಾನ್ಯತೆ ಇದಾಗಿದೆ ಎಂದು ಉಪಕುಲಪತಿ ಡಾ. ಎಂ.ಡಿ. ವೆಂಕಟೇಶ್‌ ಸಂತಸ ವ್ಯಕ್ತಪಡಿಸಿದರು.