ಇಂದಿನಿಂದ ಬೆಂಗಳೂರಲ್ಲಿ ಏಷ್ಯಾದ ಅತಿ ದೊಡ್ಡ ವೈಮಾನಿಕ ಪ್ರದರ್ಶನ 5 ದಿನ ಏರೋ ಇಂಡಿಯಾ - 2025

| N/A | Published : Feb 10 2025, 01:48 AM IST / Updated: Feb 10 2025, 10:48 AM IST

ಇಂದಿನಿಂದ ಬೆಂಗಳೂರಲ್ಲಿ ಏಷ್ಯಾದ ಅತಿ ದೊಡ್ಡ ವೈಮಾನಿಕ ಪ್ರದರ್ಶನ 5 ದಿನ ಏರೋ ಇಂಡಿಯಾ - 2025
Share this Article
  • FB
  • TW
  • Linkdin
  • Email

ಸಾರಾಂಶ

ಯುದ್ಧ ವಿಮಾನಗಳು, ವೈಮಾನಿಕ, ರಕ್ಷಣೆ ಮತ್ತು ಬಾಹ್ಯಾಕಾಶ ಕ್ಷೇತ್ರದಲ್ಲಿನ ಅತ್ಯಾಧುನಿಕ ಉತ್ಪನ್ನಗಳು, ತಂತ್ರಜ್ಞಾನಗಳ ಪ್ರದರ್ಶನದ ವೇದಿಕೆಯಾಗಿರುವ ಏಷ್ಯಾದ ಅತಿ ದೊಡ್ಡ ವೈಮಾನಿಕ ಪ್ರದರ್ಶನ ‘ಏರೋಇಂಡಿಯಾ-2025’ ಸೋಮವಾರ ಯಲಹಂಕ ವಾಯುಪಡೆ ನೆಲೆಯಲ್ಲಿ ವಿದ್ಯುಕ್ತವಾಗಿ ಆರಂಭವಾಗಲಿದೆ.

  ಬೆಂಗಳೂರು :  ಯುದ್ಧ ವಿಮಾನಗಳು, ವೈಮಾನಿಕ, ರಕ್ಷಣೆ ಮತ್ತು ಬಾಹ್ಯಾಕಾಶ ಕ್ಷೇತ್ರದಲ್ಲಿನ ಅತ್ಯಾಧುನಿಕ ಉತ್ಪನ್ನಗಳು, ತಂತ್ರಜ್ಞಾನಗಳ ಪ್ರದರ್ಶನದ ವೇದಿಕೆಯಾಗಿರುವ ಏಷ್ಯಾದ ಅತಿ ದೊಡ್ಡ ವೈಮಾನಿಕ ಪ್ರದರ್ಶನ ‘ಏರೋಇಂಡಿಯಾ-2025’ ಸೋಮವಾರ ಯಲಹಂಕ ವಾಯುಪಡೆ ನೆಲೆಯಲ್ಲಿ ವಿದ್ಯುಕ್ತವಾಗಿ ಆರಂಭವಾಗಲಿದೆ.

5 ದಿನಗಳ ಏರೋ ಇಂಡಿಯಾ ಉದ್ಘಾಟನಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ರಕ್ಷಣಾ ಸಚಿವ ರಾಜನಾಥ ಸಿಂಗ್ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಭಾಗವಹಿಸಲಿದ್ದಾರೆ.

2047ರ ವೇಳೆಗೆ ವಿಕಸಿತ ಭಾರತ ನಿರ್ಮಾಣ ಗುರಿಗೆ ವೇಗ ನೀಡಲು ರಕ್ಷಣಾ ಕ್ಷೇತ್ರದಲ್ಲಿ ಹೊಸ ಜಾಗತಿಕ ಸಹಭಾಗಿತ್ವಗಳು, ಅತ್ಯಾಧುನಿಕ ಅನ್ವೇಷಣೆಗಳು ಹಾಗೂ ವೈಮಾನಿಕ ಶಕ್ತಿ ಪ್ರದರ್ಶನಕ್ಕೆ ವಾಯುಪಡೆ ನೆಲೆ ವೇದಿಕೆ ಕಲ್ಪಿಸುತ್ತದೆ. ಏರೋ ಇಂಡಿಯಾದಲ್ಲಿ 90ಕ್ಕೂ ಹೆಚ್ಚು ರಾಷ್ಟ್ರಗಳ 150 ಕಂಪನಿಗಳು, ಉದ್ಯಮಗಳು ಸೇರಿ 900ಕ್ಕೂ ಹೆಚ್ಚು ಕಂಪನಿಗಳು ಭಾಗವಹಿಸುತ್ತಿವೆ. ಆತ್ಮನಿರ್ಭರ ಭಾರತ, ಮೇಕ್ ಇನ್ ಇಂಡಿಯಾ, ಮೇಕ್ ಫಾರ್ ದಿ ವರ್ಲ್ಡ್ ಗುರಿಯೊಂದಿಗೆ ಈವರೆಗಿನ ಅತಿದೊಡ್ಡ ಏರೋ ಇಂಡಿಯಾ ಆಗಲಿದೆ ಎನ್ನಲಾಗಿರುವ ಈ ಪ್ರದರ್ಶನದಲ್ಲಿ ಸುಮಾರು 30 ದೇಶಗಳ ರಕ್ಷಣಾ ಮಂತ್ರಿಗಳು, 100ಕ್ಕೂ ಹೆಚ್ಚು ಪ್ರತಿನಿಧಿಗಳು ಭಾಗವಹಿಸುವ ನಿರೀಕ್ಷೆ ಇದೆ. ದೇಶದ ರಕ್ಷಣಾ ಉತ್ಪನ್ನಗಳ ರಫ್ತು ಪ್ರಮಾಣವನ್ನು ₹30 ಸಾವಿರ ಕೋಟಿಗೆ ಹಿಗ್ಗಿಸಲು ಏರೋ ಇಂಡಿಯಾ ಅತಿಮುಖ್ಯ ಪಾತ್ರ ವಹಿಸುತ್ತದೆ ಎಂದು ಹೇಳಲಾಗಿದೆ.

‘ನೂರು ಕೋಟಿ ಅವಕಾಶಗಳಿಗೆ ರಹದಾರಿ’ ಪರಿಕಲ್ಪನೆಯ ಈ ಪ್ರದರ್ಶನದ ಮೂಲಕ ಜಾಗತಿಕ ಸಹಭಾಗಿತ್ವ, ದೇಶಿಯ ಉತ್ಪಾದನೆಗೆ ವೇಗ ನೀಡುವ ಉದ್ದೇಶವಿದೆ. ಸ್ಟಾರ್ಟ್‌ ಅಪ್‌ಗಳಿಗೆ ಸಹಕಾರ, ಬೆಂಬಲ, ಜಾಗತಿಕ ಸಪ್ಲೈ ಚೈನ್ ವಿಸ್ತರಣೆ ಮತ್ತು ಬಲಪಡಿಸಲು ಅನುಕೂಲ ಕಲ್ಪಿಸಲು 42 ಸಾವಿರ ಚದರ ಮೀಟರ್ ಜಾಗವನ್ನು ಪ್ರದರ್ಶಕರಿಗೆ ಒದಗಿಸಲಾಗಿದೆ.

ಭಾರತದಲ್ಲಿ ದೇಶಿಯವಾಗಿ ವಿನ್ಯಾಸಗೊಳಿಸಿ ಅಭಿವೃದ್ಧಿಪಡಿಸಿರುವ ತೇಜಸ್, ಲಘು ಯುದ್ಧ ಹೆಲಿಕಾಪ್ಟರ್ ಪ್ರಚಂಡ್ ಮತ್ತು ದೇಶದ ಉತ್ಪಾದಾ ಕೇಂದ್ರದಲ್ಲಿ ಉತ್ಪಾದಿಸಲಾಗುತ್ತಿರುವ ಸಿ-295 ಸರಕು ಸಾಗಣೆ ವಿಮಾನಗಳು ಜಾಗತಿಕ ಮಾರುಕಟ್ಟೆಗೆ ತೆರೆದುಕೊಳ್ಳುತ್ತಿವೆ. ಇನ್ನು ಅಮೆರಿಕ ಮತ್ತು ರಷ್ಯಾದ ಅತ್ಯಾಧುನಿಕ ಯುದ್ಧ ವಿಮಾನಗಳಾದ ಎಫ್‌-35 ಮತ್ತು ಎಸ್‌ಯು-57 ಏರೋ ಇಂಡಿಯಾದ ಪ್ರಮುಖ ಆಕರ್ಷಣೆಯಾಗಲಿವೆ.

ಜಾಗತಿಕ ಸಹಕಾರ, ಗಡಿಗಳ ರಕ್ಷಣೆ, ಮಿಲಿಟರಿ ಕ್ಷೇತ್ರದಲ್ಲಿ ಪಾಲುದಾರಿಕೆಗಾಗಿ ರಕ್ಷಣಾ ಸಚಿವರ ಸಮ್ಮೇಳನವನ್ನು ಏರ್ಪಡಿಸಲಾಗಿದೆ. ವಿಚಾರ ಸಂಕಿರಣ, ದೇಶ-ವಿದೇಶಗಳ ಕಂಪನಿಗಳ ನಡುವೆ ನೇರ ಸಭೆಗಳು, ಸಿಇಒಗಳ ದುಂಡು ಮೇಜಿನ ಸಮ್ಮೇಳನಗಳು ಕೂಡ ಜರುಗಲಿವೆ.

ಏರೋಇಂಡಿಯಾ-2025 ಪ್ರಮುಖಾಂಶಗಳು

*90ಕ್ಕೂ ಹೆಚ್ಚು ರಾಷ್ಟ್ರಗಳ 150 ಕಂಪನಿಗಳು ಭಾಗಿ

*70ಕ್ಕೂ ಹೆಚ್ಚು ಯುದ್ಧ ವಿಮಾನ, ಸರಕು, ತರಬೇತಿ ವಿಮಾನಗಳ ವೈಮಾನಿಕ ಪ್ರದರ್ಶನ

*30ಕ್ಕೂ ಹೆಚ್ಚು ವಿಮಾನಗಳು, ಹೆಲಿಕಾಪ್ಟರ್‌ಗಳ ಅನಾವರಣ,ಹಾಲ್‌ನಲ್ಲಿ ಪ್ರದರ್ಶನಕ್ಕೆ ಇರಿಸಲಾಗುತ್ತದೆ

*ಭಾರತದ 750ಕ್ಕೂ ಹೆಚ್ಚು ಕಂಪನಿಗಳು ಭಾಗಿ.

*30ರಾಷ್ಟ್ರಗಳ ರಕ್ಷಣಾ ಮಂತ್ರಿಗಳು, 100ಕ್ಕೂ ಹೆಚ್ಚು ರಾಷ್ಟ್ರಗಳ ಪ್ರತಿನಿಧಿಗಳು ಭಾಗಿ

*42000 ಚ.ಮೀ. ಜಾಗದಲ್ಲಿ ವಿಮಾನಗಳು, ರಕ್ಷಣಾ ಉತ್ಪನ್ನಗಳ ಪ್ರದರ್ಶನ

*7 ಲಕ್ಷಕ್ಕೂ ಹೆಚ್ಚು ಜನ ಭಾಗವಹಿಸುವ ನಿರೀಕ್ಷೆ.

*ರಕ್ಷಣಾ ಸಚಿವರ ಸಮ್ಮೇಳನ, ಕಂಪನಿಗಳ ನಡುವೆ ನೇರ ಸಭೆಗಳು, ಸಿಇಒಗಳ ದುಂಡು ಮೇಜಿನ ಸಮ್ಮೇಳನ ಜರುಗಲಿವೆ