ಸಾರಾಂಶ
2023- 24ನೇ ಸಾಲಿನ ಗಾಂಧಿ ಗ್ರಾಮ ರಾಜ್ಯ ಪುರಸ್ಕಾರಕ್ಕೆ ರಾಜ್ಯದಲ್ಲೇ ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತಿರುವ ಕೊಡಗು ಜಿಲ್ಲೆಯ 5 ಗ್ರಾ.ಪಂ.ಗಳು ಆಯ್ಕೆಯಾಗಿದೆ.
ಕನ್ನಡಪ್ರಭ ವಾರ್ತೆ ಮಡಿಕೇರಿ
2023-24 ನೇ ಸಾಲಿನ ಗಾಂಧಿ ಗ್ರಾಮ ರಾಜ್ಯ ಪುರಸ್ಕಾರಕ್ಕೆ ರಾಜ್ಯದಲ್ಲೇ ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತಿರುವ ಕೊಡಗು ಜಿಲ್ಲೆಯ 5 ಗ್ರಾ.ಪಂ ಗಳು ಆಯ್ಕೆಯಾಗಿವೆ.ಮಡಿಕೇರಿ ತಾಲೂಕಿನ ಹೊದ್ದೂರು ಗ್ರಾ.ಪಂ, ಸೋಮವಾರಪೇಟೆ ತಾಲೂಕಿನ ದುಂಡಳ್ಳಿ, ವಿರಾಜಪೇಟೆ ತಾಲೂಕಿನ ಹಾಲುಗುಂದ, ಪೊನ್ನಂಪೇಟೆ ತಾಲೂಕಿನ ಮಾಯಮುಡಿ ಹಾಗೂ ಕುಶಾಲನಗರ ತಾಲೂಕಿನ ನಂಜರಾಯಪಟ್ಟಣ ಗ್ರಾ.ಪಂ. ಗಳು ಅತ್ಯುತ್ತಮ ಕಾರ್ಯನಿರ್ವಹಣೆಗಾಗಿ ಗಾಂಧಿ ಗ್ರಾಮ ಪುರಸ್ಕಾರವನ್ನು ಪಡೆದುಕೊಳ್ಳಲಿವೆ.
ಗ್ರಾಮ ಪಂಚಾಯಿತಿಗಳು ಸ್ಥಳೀಯ ಮಟ್ಟದಲ್ಲಿ ಸ್ವಯಂ ಆಡಳಿತ ಸಂಸ್ಥೆಗಳಾಗಿ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಬೇಕೆಂಬ ಸದುದ್ದೇಶದಿಂದ ರಾಜ್ಯದಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಿದ ಗ್ರಾಮ ಪಂಚಾಯಿತಿಗಳನ್ನು ಪ್ರೋತ್ಸಾಹಿಸಲು 2013-14ನೇ ಸಾಲಿನಿಂದ ಪ್ರತಿ ತಾಲೂಕಿಗೆ ಒಂದರಂತೆ ಗ್ರಾಮ ಪಂಚಾಯತಿಯನ್ನು ಗಾಂಧಿ ಗ್ರಾಮ ಪುರಸ್ಕಾರಕ್ಕೆ ಆಯ್ಕೆ ಮಾಡಿ 5 ಲಕ್ಷ ರು. ಗಳ ಪ್ರೋತ್ಸಾಹ ಧನ ನೀಡಿ ಗೌರವಿಸಲಾಗುತ್ತಿದೆ.ಗಾಂಧಿ ಗ್ರಾಮ ಪುರಸ್ಕಾರಕ್ಕೆ ಆಯ್ಕೆಯಾಗಿರುವ ಕುರಿತು ಹೊದ್ದೂರು ಗ್ರಾ.ಪಂ ಅಧ್ಯಕ್ಷ ಹೆಚ್.ಎ.ಹಂಸ, ದುಂಡಳ್ಳಿ ಗ್ರಾ.ಪಂ ಅಧ್ಯಕ್ಷೆ ಸತ್ಯಾವತಿ, ಹಾಲುಗುಂದ ಗ್ರಾ.ಪಂ ಅಧ್ಯಕ್ಷ ಕುಶ ಅಯ್ಯಪ್ಪ, ಮಾಯಮುಡಿ ಗ್ರಾ.ಪಂ ಅಧ್ಯಕ್ಷ ಟಾಟು ಮೊಣ್ಣಪ್ಪ ಹಾಗೂ ನಂಜರಾಯಪಟ್ಟಣ ಗ್ರಾ.ಪಂ ಅಧ್ಯಕ್ಷ ಸಿ.ಎಲ್.ವಿಶ್ವ ಅವರು ಹರ್ಷ ವ್ಯಕ್ತಪಡಿಸಿದ್ದಾರೆ.
ಗ್ರಾಮಗಳ ಅಭಿವೃದ್ಧಿಯಲ್ಲಿ ನಮ್ಮ ಜವಾಬ್ದಾರಿ ಮತ್ತಷ್ಟು ಹೆಚ್ಚಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.