ಸಾರಾಂಶ
ಕನ್ನಡಪ್ರಭ ವಾರ್ತೆ ಕೋಲಾರಸರ್ಕಾರ ಜಾರಿಗೆ ತರುವ ವಿವಿಧ ಯೋಜನೆ ಮತ್ತು ಅನುದಾನಗಳಲ್ಲಿ ಕಡ್ಡಾಯವಾಗಿ ಎಲ್ಲಾ ಇಲಾಖೆಗಳು ವಿಶೇಷಚೇತನರಿಗಾಗಿ ಶೇ.೫ರಷ್ಟು ಅನುದಾನ ಮೀಸಲಿಡಬೇಕು ಎಂದು ಅಂಗವಿಕಲ ವ್ಯಕ್ತಿಗಳ ಅಧಿನಿಯಮ ಆಯುಕ್ತ ದಾಸ್ ಸೂರ್ಯವಂಶಿ ಅಧಿಕಾರಿಗಳಿಗೆ ಸೂಚನೆ ನೀಡಿದರು.ನಗರದ ಜಿಲ್ಲಾಧಿಕಾರಿ ಸಭಾಂಗಣದಲ್ಲಿ ಜಿಲ್ಲೆಯ ವಿಕಲಚೇತನರ ಕಲ್ಯಾಣ ಇಲಾಖೆ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಸರ್ಕಾರದ ಅನುದಾನದಲ್ಲಿ ಶೇ.೫ರಷ್ಟು ವಿಶೇಷಚೇತನರಿಗಾಗಿ ಮೀಸಲಿಡಬೇಕೆಂದು ಸರ್ಕಾರದ ಆದೇಶವಿದ್ದರೂ ಸಹ ಕೆಲವು ಇಲಾಖೆಗಳಲ್ಲಿ ಆದೇಶ ಪಾಲಿಸುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.ಮಕ್ಕಳಿಗೆ ಸೌಲಭ್ಯ ಕಲ್ಪಿಸಿ
ಜಿಲ್ಲೆಯಲ್ಲಿ ೧೦೨೭ ವಿಶೇಷಚೇತನ ವಿದ್ಯಾರ್ಥಿಗಳು ೧ ರಿಂದ ೧೦ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದು, ಎಲ್ಲಾ ಶಾಲೆಗಳಲ್ಲೂ ವಿಶೇಷಚೇತನ ಮಕ್ಕಳಿಗೆ ಅಗತ್ಯ ಮೂಲಭೂತ ಸೌಕರ್ಯಗಳನ್ನು ಒದಗಿಸುವಂತೆ ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕರಿಗೆ ಸೂಚನೆ ನೀಡಿದರು.ಅಂಧ ಮತ್ತು ವಿಕಲಚೇತನ ಮಕ್ಕಳಿಗಾಗಿ ಎಲ್ಲಾ ಶಾಲೆಗಳಲ್ಲೂ ರ್‍ಯಾಂಪ್ ಹಾಗೂ ಅಡೆ-ತಡೆ ರಹಿತ ಶೌಚಾಲಯಗಳನ್ನು ನಿರ್ಮಿಸಬೇಕು. ವಿಶೇಷಚೇತನ ಮಕ್ಕಳ ತರಗತಿಗಳನ್ನು ಕೆಳಮಹಡಿಯ ಕೊಠಡಿಗಳಲ್ಲಿ ನಡೆಸಬೇಕು. ಜಿಲ್ಲೆಯಲ್ಲಿರುವ ಎಲ್ಲಾ ವಸತಿ ಶಾಲೆಗಳಲ್ಲಿ ಶೇ.೧೦ರಷ್ಟು ವಿಕಲಚೇತನ ಮಕ್ಕಳಿಗೆ ಪ್ರವೇಶಾತಿ ನೀಡಬೇಕು ಎಂದು ನಿರ್ದೇಶನ ನೀಡಿದರು.ಕ್ರಿಯಾಯೋಜನೆ ರೂಪಿಸಿಗ್ರಾಪಂಗಳಲ್ಲಿ ವಿಕಲಚೇತನರ ಶೈಕ್ಷಣಿಕ, ಸಾಮಾಜಿಕ, ಆರ್ಥಿಕ, ವೈದ್ಯಕೀಯ ಹಾಗೂ ಪುನರ್ವಸತಿ ಸೌಲಭ್ಯಗಳಿಗೆ ಅನುದಾನ ಬಳಕೆಯಾಗುವಂತೆ ಕ್ರಿಯಾಯೋಜನೆ ತಯಾರಿಸಬೇಕು. ಗ್ರಾಪಂ ಮಟ್ಟದಲ್ಲಿ ವಿಶೇಷಚೇತನರ ಸಂಜೀವಿನಿ ಸ್ವಸಹಾಯ ಸಂಘಗಳನ್ನು ಸ್ಥಾಪಿಸುವ ಮೂಲಕ ವಿಕಲಚೇತನರನ್ನು ಆರ್ಥಿಕವಾಗಿ ಸಬಲರನ್ನಾಗಿಸಬೇಕು ಎಂದು ತಿಳಿಸಿದರು.ಮೀಸಲು ಪ್ರಮಾಣ ಏರಿಕೆವಿಕಲಚೇತನರ ಮೀಸಲಾತಿ ಪ್ರಮಾಣವನ್ನು ಶೇ.೩ ರಿಂದ ಶೇ.೫ಕ್ಕೆ ಏರಿಕೆ ಮಾಡಲಾಗಿದ್ದು, ಎಲ್ಲಾ ಇಲಾಖೆಗಳಲ್ಲೂ ಮುಂಬರುವ ಯೋಜನೆಗಳಲ್ಲಿ ಈ ಮೀಸಲಾತಿ ಪ್ರಮಾಣವನ್ನು ಅನುಷ್ಠಾನಗೊಳಿಸುವಂತೆ ಈಗಾಗಲೇ ಎಲ್ಲಾ ಇಲಾಖೆಗಳಿಗೂ ಸೂಚಿಸಲಾಗಿದೆ. ಈಗಾಗಲೇ ಜಿಪಂನಲ್ಲಿ ಸಾಕಷ್ಟು ಅಧಿನಿಯಮದ ಅನುಷ್ಠಾನ ತೃಪ್ತಿ ತಂದಿದೆ. ಅಧಿಕಾರಿಗಳು ವ್ಯಾಪಕವಾಗಿ ಈ ಬಗ್ಗೆ ವ್ಯಾಪಕ ಪ್ರಚಾರ ಕೈಗೊಂಡು ವಿಕಲಚೇತನ ಫಲಾನುಭವಿಗಳಿಗೆ ಅನುಕೂಲವಾಗುವಂತೆ ಮಾಡಬೇಕು ಎಂದು ತಿಳಿಸಲಾಗಿದೆ ಎಂದರಲ್ಲದೆ, ಜಿಲ್ಲಾಸ್ಪತ್ರೆಯಲ್ಲಿ ವಿಕಲಚೇತನರ ಚಿಕಿತ್ಸೆಗಾಗಿ ಪ್ರತ್ಯೇಕ ಚಿಕಿತ್ಸಾ ಕೊಠಡಿ ತೆರೆಯಲಾಗಿದೆ ಎಂದು ತಿಳಿಸಿದರು.ಜಿಲ್ಲೆಯ ವಿಕಲಚೇತನರಿಗೆ ಸರ್ಕಾರದ ಸೌಲಭ್ಯಗಳನ್ನು ಸರಿಯಾದ ರೀತಿಯಲ್ಲಿ ಒದಗಿಸಲು ಗ್ರಾಮೀಣ ಪುನರ್ವಸತಿ ಕಾರ್ಯಕರ್ತರನ್ನು ನೇಮಿಸಲಾಗಿದೆ. ವಿಕಲಚೇತನ ಮತ್ತು ಅಶಕ್ತ ವೃದ್ಧರನ್ನು ಆರೈಕೆ ಮಾಡುವವರಿಗೆ ಪ್ರತಿ ತಿಂಗಳು ೧೦೦೦ ಪಿಂಚಣಿ ನೀಡುವ ವಿಶೇಷ ಯೋಜನೆಯನ್ನು ಜಾರಿಯಾಗಿದೆ. ಅಲ್ಲದೆ ಕ್ರೈಸ್ ಅಡಿಯಲ್ಲಿ ಬರುವ ಶಾಲೆಗಳಲ್ಲಿ ಅಂಗ ವಿಕಲರ ದಾಖಲಾತಿ ಹೆಚ್ಚು ಮಾಡಲು ತಿಳಿಸಲಾಗಿದೆ ಎಂದು ತಿಳಿಸಿದರು.
ಅಪರ ಜಿಲ್ಲಾಧಿಕಾರಿ ಮಂಗಳ, ಅಪರ ಪೊಲೀಸ್ ವರಿಷ್ಟಾಧಿಕಾರಿ ಹೆಚ್ ಸಿ ಜಗದೀಶ್,ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕ ನಾರಾಯಣ ಸ್ವಾಮಿ, ಜಿಲ್ಲಾ ವಿಕಲಚೇತನರ ಮತ್ತು ಹಿರಿಯ ನಾಗರಿಕರ ಕಲ್ಯಾಣಾಧಿಕಾರಿ ರಮ್ಯ ಇದ್ದರು.